ಶಾಂತಂ ತಾಪಂ

ಬೇಸಿಗೆಯಲ್ಲಿ ಮೈಮೇಲೆ ಗುಳ್ಳೆಗಳು!

Team Udayavani, May 8, 2019, 6:00 AM IST

ಬೇಸಿಗೆ ಕಾಲದಲ್ಲಿ ಚರ್ಮ ರೋಗಗಳು, ಅದರಲ್ಲಿಯೂ “ಉಷ್ಣ ಗುಳ್ಳೆಗಳು’ ಅಥವಾ “ಕುರು’ ಸಾಮಾನ್ಯವಾಗಿ ಕಂಡುಬರುತ್ತವೆ. ಇದು ಬ್ಯಾಕ್ಟೀರಿಯಾ ಸೋಂಕಾಗಿದ್ದು, ಚರ್ಮದ ಮೇಲೆ ಅಥವಾ ಒಳಗಡೆ ಆಗುವ ಬಾವು/ಕೀವು ತುಂಬಿಕೊಳ್ಳುವ ಸಮಸ್ಯೆಯಾಗಿದೆ. ದೇಹದ ನಿರ್ಜಲೀಕರಣ, ಚರ್ಮದ ಬಿರುಕು ಹಾಗೂ ತುರಿಕೆ, ಸೀಳುವಿಕೆ ಅಥವಾ ಗಾಯಗಳು, ಬೆವರು ಗ್ರಂಥಿಗಳ ಕಾರ್ಯದಲ್ಲಾಗುವ ಅಡಚಣೆ ಇದಕ್ಕೆ ಕಾರಣ.

ಸ್ತ್ರೀಯರು ಪುರುಷರಿಗಿಂತ ಹೆಚ್ಚು ಬೆವರುತ್ತಾರೆ. ದೇಹದಲ್ಲಿನ ತಾಪ ಮಟ್ಟವನ್ನು ಕಡಿಮೆ ಮಾಡಲು ಬೆವರಿನ ರೂಪದಲ್ಲಿ ಚರ್ಮವು ನೀರಿನ ಅಂಶವನ್ನು ಹೊರಹಾಕುತ್ತದೆ. ಈ ಸಮಯದಲ್ಲಿ ಬ್ಯಾಕ್ಟೀರಿಯಾಗಳು ಬೆವರಿನ ಜೊತೆ ಸೇರಿ ರಾಸಾಯನಿಕ ಚಟುವಟಿಕೆಗಳನ್ನು ನಡೆಸಿದಾಗ ಬೆವರಿನ ವಾಸನೆ ಅಧಿಕವಾಗುವುದಲ್ಲದೆ, ಸೋಂಕು ತಗುಲುವ ಸಂಭವಗಳೂ ಹೆಚ್ಚು. ಇವು ದೇಹದ ಯಾವುದೇ ಭಾಗದಲ್ಲಿ ಕಂಡು ಬರಬಹುದಾದರೂ, ಹೆಚ್ಚಾಗಿ ಕಂಕುಳ ಭಾಗ, ತೊಡೆಗಳ ಸಂಧಿ, ಕಾಲು, ಸೊಂಟದ ಭಾಗಗಳಲ್ಲಿ ಉಂಟಾಗುತ್ತವೆ. ಉಷ್ಣ ಗುಳ್ಳೆಗಳು ಚರ್ಮದ ಮೇಲೆ ಅಥವಾ ಒಳಗೆ ಆಗುತ್ತವೆ.

ಚರ್ಮದ ಮೇಲೆ ಕುರು ಆದಾಗ ಆ ಜಾಗದಲ್ಲಿ ತೀವ್ರ ನೋವು ಹಾಗೂ ಚರ್ಮ ಬಿಸಿಯಾಗಿ ಕೀವು ತುಂಬಿಕೊಂಡಿರುತ್ತದೆ. ಸೆಳೆತದಿಂದಾಗಿ 2-3 ದಿನ ಜ್ವರ ಕಾಣಿಸಿಕೊಳ್ಳಲೂಬಹುದು. ಚರ್ಮದ ಒಳಗೆ ಕುರು ಆದಲ್ಲಿ ಹೊಟ್ಟೆ ನೋವು ಅಥವಾ ಹಸಿವಿಲ್ಲದಿರುವುದು, ಸುಸ್ತು, ಜ್ವರ, ತೂಕದಲ್ಲಿ ವ್ಯತ್ಯಾಸ ಕಂಡುಬರಬಹುದು.

ಏನ್‌ ಪರಿಹಾರ?
– ಕುರು ಆದ ಜಾಗದ ಸುತ್ತ ತೆಂಗಿನೆಣ್ಣೆ ಅಥವಾ ಬೇವಿನ ಎಣ್ಣೆಯನ್ನು ಸವರಿ, ಒಂದು ಗಂಟೆಯ ನಂತರ ಸ್ನಾನ ಮಾಡಿ.
– ಅಲೋವೆರಾ ಜೆಲ… ಮತ್ತು ಅರಿಶಿನ ಮಿಕ್ಸ್ ಮಾಡಿ ಹಚ್ಚುವುದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ.
– ಕುರು ಆದ ಜಾಗದಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಅದರ ಪೇಸ್ಟ್ ಅನ್ನು ಇಟ್ಟು ಒಂದು ತೆಳು ಬಟ್ಟೆಯಿಂದ ಕಟ್ಟಿಕೊಂಡರೆ ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ.
– ಲಿಂಬೆ ರಸವನ್ನು ನೇರವಾಗಿ ಕುರುವಿನ ಸುತ್ತ ಹಚ್ಚಿ 5 -10 ನಿಮಿಷದ ಬಳಿಕ ತೊಳೆದರೆ ಉರಿ, ನೋವು ಕಡಿಮೆಯಾಗುವುದು.
– ಕಹಿಬೇವಿನ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ಹಚ್ಚುವುದರಿಂದ ಅಥವಾ ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಕುರು ಮಾಯವಾಗುತ್ತದೆ.

ಹೀಗೆ ಮಾಡಿ…
– ದೇಹವನ್ನು ತಂಪುಗೊಳಿಸುವುದರ ಮೂಲಕ ಆಂತರಿಕ ಹಾಗೂ ಬಾಹ್ಯ ಆರೋಗ್ಯವನ್ನು ಕಾಪಾಡಿಕೊಳ್ಳಿ.
– ಸಾಕಷ್ಟು ನೀರು ಕುಡಿಯಿರಿ.
– ಜಂಕ್‌ ಆಹಾರ ಪದಾರ್ಥಗಳ ಸೇವನೆಯನ್ನು ನಿಲ್ಲಿಸಿ.
– ಹಣ್ಣು, ತರಕಾರಿ, ಸೊಪ್ಪು, ಧಾನ್ಯಗಳನ್ನು ಹೆಚ್ಚೆಚ್ಚು ಸೇವಿಸಿ.
– ಮೆಂತೆ, ಗಸಗಸೆ, ಜೀರಿಗೆ, ಮಜ್ಜಿಗೆಯಂಥ ತಂಪು ಪದಾರ್ಥಗಳು ದೇಹಕ್ಕೆ ಹಿತಕಾರಿ.

– ಡಾ. ಶ್ರೀಲತಾ ಪದ್ಯಾಣ, ಪ್ರಕೃತಿ ಚಿಕಿತ್ಸಾತಜ್ಞೆ


ಈ ವಿಭಾಗದಿಂದ ಇನ್ನಷ್ಟು

  • ಮನೆಗೆ ಬೀಗ ಹಾಕ್ಕೊಂಡು ಎಲ್ಲರೂ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೂಂದಿಷ್ಟು ಹೆಚ್ಚಿನ ಜವಾಬ್ದಾರಿ. ಎಲ್ಲರ ಬಟ್ಟೆ, ಸಾಮಾನುಗಳನ್ನು ಸರಿಯಾಗಿ ಪ್ಯಾಕ್‌ ಮಾಡೋದು...

  • ಮಾವಿನ ಮರ ಹೂ ಬಿಟ್ಟಾಗಲೇ, ಈ ವರ್ಷ ಮಾವಿನ ಹಣ್ಣು ಮತ್ತು ಕಾಯಿಯಿಂದ ಯಾವೆಲ್ಲಾ ಅಡುಗೆ ಮಾಡಬಹುದು ಅಂತ ಗೃಹಿಣಿಯರು ಲೆಕ್ಕ ಹಾಕುತ್ತಾರೆ. ಮಾವಿನ ಹಣ್ಣನ್ನು ಹಾಗೇ...

  • ನಿರ್ಜಲೀಕರಣ, ಸನ್‌ಬರ್ನ್, ತುರಿಕೆ, ಬೆವರುಸಾಲೆ, ಕಜ್ಜಿ, ಬಾಯಿಹುಣ್ಣು, ಉರಿಮೂತ್ರ ಸಮಸ್ಯೆ, ನಿದ್ರಾಹೀನತೆ... ಬೇಸಿಗೆಯಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳು ಒಂದೇ,...

  • "ಕಾಡು ಕುದುರೆ ಓಡಿ ಬಂದಿತ್ತಾ...' ಗೀತೆಯ ಮೂಲಕ ರಾಷ್ಟ್ರಪ್ರಶಸ್ತಿಗೆ ಪಾತ್ರರಾದವರು ಶಿವಮೊಗ್ಗ ಸುಬ್ಬಣ್ಣ. ಅವರ ಸಿರಿಕಂಠವನ್ನು ಪ್ರಧಾನಿ ನೆಹರು ಅವರೂ ಮೆಚ್ಚಿಕೊಂಡಿದ್ದರು....

  • ಲಾಭ ಮಾಡುವುದೇ ವ್ಯಾಪಾರದ ಮೂಲ ಉದ್ದೇಶ ಎಂಬ ಮಾತಿದೆ. ಆದ್ರೆ, ಕೆಲವರಿಗೆ ವ್ಯಾಪಾರವೇ ಬದುಕಿನ ಮೂಲಾಧಾರ. ಸಂಸಾರದ ತಕ್ಕಡಿ ತೂಗಿಸಲು, ತಕ್ಕಡಿ ಹಿಡಿಯಲೇಬೇಕಾದ ಅನಿವಾರ್ಯಕ್ಕೆ...

ಹೊಸ ಸೇರ್ಪಡೆ