“ಸಿಟ್ಟಿನ’ ಸಿಪಾಯಿ

ಅಬ್ಟಾ, ಎಂಥ ಸಿಟ್ಟು ಈ ಯಮ್ಮಂಗೆ!

Team Udayavani, May 8, 2019, 6:00 AM IST

ಹುಡುಗನೊಬ್ಬ ಸಿಟ್ಟಿಗೆದ್ದು ಕೂಗಾಡಿದರೆ ಆತ ಹೀರೋ, ಆ್ಯಂಗ್ರಿ ಯಂಗ್‌ ಮ್ಯಾನ್‌! ಆದರೆ ಹುಡುಗಿಯೊಬ್ಬಳು ತನಗನ್ನಿಸಿದ್ದನ್ನು ಹೇಳಿದರೆ ಅವಳಿಗೆ ಬಜಾರಿ, ಸಿಟ್ಟಿನ ಮಾರಿ, ರಾಕ್ಷಸಿ ಮುಂತಾದ ಹಣೆಪಟ್ಟಿ ಕಟ್ಟಿಟ್ಟ ಬುತ್ತಿ…

ಸಿನಿಮಾ ನೋಡಲು ಸಿಕ್ಕಾಪಟ್ಟೆ ರಶ್‌. ಹನುಮಂತನ ಬಾಲದಂತೆ ಕ್ಯೂ ಉದ್ದವಿತ್ತು. ತನ್ನ ಪುಟ್ಟ ಮಕ್ಕಳೊಂದಿಗೆ ಆಕೆಯೂ ಬಿಸಿಲನ್ನು ಲೆಕ್ಕಿಸದೆ ಕಾಯುತ್ತಿದ್ದಳು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಕಾಲೇಜು ಹುಡುಗ-ಹುಡುಗಿಯರ ಗುಂಪು ಕ್ಯೂ ಮಧ್ಯ ಸೇರಿತು. ಉಳಿದವರೆಲ್ಲಾ ಮುಖ ಮುಖ ನೋಡಿಕೊಂಡರೂ ಸುಮ್ಮನಿದ್ದರು. ಕಾದು ಸುಸ್ತಾಗಿದ್ದ ಆ ಮಹಿಳೆ ಮಾತ್ರ “ಏನ್ರೀ… ನಾವಿಲ್ಲಿ ನಿಂತಿರೋದು ಕಾಣ್ತಾ ಇಲ್ವಾ ?’ ಎಂದು ಸಿಟ್ಟು ಕಾರಿಕೊಂಡಳು. ಸುತ್ತಲಿದ್ದವರ ನೋಟವೆಲ್ಲಾ ಆ ಮಹಿಳೆ ಮೇಲೆ ಬಿತ್ತು! ಅಲ್ಲಿದ್ದವರೆಲ್ಲರೂ ಅಬ್ಟಾ ಎಂಥ ಸಿಟ್ಟು ಈ ಯಮ್ಮಂಗೆ! ಎಂಬ ಲುಕ್ಕು ಕೊಡುತ್ತಿದ್ದರು.

ಬೆಳಗ್ಗೆಯಿಂದ ಸಂಜೆ ತನಕ ಆಫೀಸಿನಲ್ಲಿ ದುಡಿದು ಸುಸ್ತು. ಸೊಂಟ ನೋವು ಬೇರೆ. ಮಕ್ಕಳ ಪರೀಕ್ಷೆ ಸಮಯ. ಸಂಜೆ ಬೇಗ ಊಟ ಮುಗಿಸಿ ಮಲಗಿದ್ದಷ್ಟೇ. ರಾತ್ರಿ ಊಟಕ್ಕೆ ಅನಿರೀಕ್ಷಿತವಾಗಿ ನೆಂಟರ ಆಗಮನ. ಕಷ್ಟಪಟ್ಟು ಮಾಡಿದ ಅಡುಗೆಯನ್ನು ಕಂಠಪೂರ್ತಿ ತಿಂದು ನಂತರ ಅವರ ಕೊಂಕು ಮಾತು ಕೇಳಬೇಕು! ಮನಸ್ಸು ಕುದಿವ ಅಗ್ನಿಪರ್ವತವಾಗಿದ್ದರೂ ಯಾರಿಗೇನು ಹೇಳುವುದು? ಮಾತು ತುಟಿ ಮೀರಬಾರದು. ಬಾಲ್ಯದಿಂದ ಅರೆದು ಕುಡಿಸಿದ ಪಾಠವದು. ಕಡೆಗೆ ಅಮ್ಮನ ಸಿಟ್ಟಿನ ಲಾವಾ ಸಿಡಿದಿದ್ದು ಪುಟ್ಟ ಮಕ್ಕಳ ಮೇಲೆ!

ಈ ಬದುಕು ಎಲ್ಲಾ ಸಮಯದಲ್ಲೂ ನಮಗೆ ಬೇಕಾದಂತೆ ಇರುವುದಿಲ್ಲ. ವಿವಿಧ ಪರಿಸ್ಥಿತಿಗಳು, ವಿವಿಧ ವ್ಯಕ್ತಿಗಳು ಪಯಣದ ದಿಕ್ಕನ್ನು ಪ್ರಭಾವಿಸುತ್ತಿರುತ್ತಾರೆ. ಏಳು-ಬೀಳಿನ ಈ ಸುದೀರ್ಘ‌ ಪಯಣದಲ್ಲಿ ಅಸೂಯೆ, ಆತಂಕ, ಹೆದರಿಕೆ, ನಾಚಿಕೆ, ದುಃಖ, ಖುಷಿ, ಹೆಮ್ಮೆ, ಬೇಸರ, ನೋವು ಇವೆಲ್ಲಾ ಮಾನವ ಸಹಜ ಭಾವನೆಗಳು ಎದುರಾಗುತ್ತವೆ. ಅದರೊಂದಿಗೆ ಸಿಟ್ಟು ಕೂಡಾ ಒಂದು ಸಹಜ, ಆರೋಗ್ಯಪೂರ್ಣ ಭಾವನೆ. ಕೋಪವನ್ನು ಅರ್ಥ ಮಾಡಿಕೊಂಡು ಅದನ್ನು ಸರಿಯಾಗಿ ನಿಭಾಯಿಸುವ ಉಪಾಯವನ್ನು ಕಲಿತಾಗ ಮಾತ್ರ ಸಿಟ್ಟು ಸಕಾರಾತ್ಮಕವಾಗಬಲ್ಲದು. ನಿಯಂತ್ರಣವಿಲ್ಲದ ಸಿಟ್ಟು ಕೆಟ್ಟದ್ದೇ. ಅದೇ ರೀತಿ ಸಿಟ್ಟನ್ನು ಒಳಗೊಳಗೇ ಅದುಮಿಡುವುದು ಕೂಡಾ ಕೆಟ್ಟದ್ದು. ನಗುವಿನ ಮುಖವಾಡ ತೊಟ್ಟು ಒಳಗೊಳಗೇ ಉಬ್ಬೆ ಹಾಕಿದಲ್ಲಿ ಏರಿದ ರಕ್ತದೊತ್ತಡ, ಆತಂಕ, ಒತ್ತಡ, ಖನ್ನತೆ, ಹೃದಯ ಸಂಬಂಧಿ ರೋಗಗಳು, ಉದರ ಸಮಸ್ಯೆ ಬಾಯಿಹುಣ್ಣು ಮತ್ತು ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಗಳು ವರದಿ ಮಾಡಿವೆ.

ಹುಡುಗಿಯೊಬ್ಬಳು ತನಗನ್ನಿಸಿದ್ದನ್ನು ಹೇಳಿದರೆ ಅವಳಿಗೆ ಬಜಾರಿ, ಸಿಟ್ಟಿನ ಮಾರಿ, ರಾಕ್ಷಸಿ ಮುಂತಾದ ಹಣೆಪಟ್ಟಿ ಕಟ್ಟಿಟ್ಟ ಬುತ್ತಿ. ಅದರೆ, ಹುಡುಗನೊಬ್ಬ ಸಿಟ್ಟಿಗೆದ್ದು ಕೂಗಾಡಿದರೆ ಆತ ಹೀರೋ! ಅಂದರೆ ಆ್ಯಂಗ್ರಿ ಯಂಗ್‌ ಮ್ಯಾನ್‌! ಬಾಲ್ಯದಿಂದಲೂ ಹುಡುಗಿಯರಿಗೆ ಸಿಟ್ಟು ಒಳ್ಳೆಯದಲ್ಲ, ಸಹನೆಯೇ ಮೂಲಮಂತ್ರ ಎಂಬ ಪಾಠವನ್ನು ಮಾಡಲಾಗುತ್ತದೆ. ಸಿಟ್ಟು ಕೆಟ್ಟದ್ದೆಂದು ಒಂದೇ ಏಟಿಗೆ ಸಾಗಹಾಕಿ ಸಿಟ್ಟನ್ನು ತಡೆಹಿಡಿಯುವುದಕ್ಕೆ ಬದಲಾಗಿ ನಿಯಂತ್ರಿಸುವುದನ್ನು ಕಲಿಸಿದರೆ ಅವರ ವ್ಯಕ್ತಿತ್ವ ಸಕಾರಾತ್ಮಕವಾಗಿ ಅರಳುತ್ತದೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಸಿಟ್ಟು ಬಂದಾಗ…
– ಒಂದೆರಡು ನಿಮಿಷ ಮೌನವಾಗಿ ಉದ್ವೇಗ ನಿಯಂತ್ರಿಸಿ.
– ವೈಯಕ್ತಿಕ ದೋಷಾರೋಪ ಬೇಡ.
– ಶಕ್ತಿಪ್ರದರ್ಶನ, ಅವಾಚ್ಯ ಬೈಗುಳದಿಂದ ದೂರವಿರಿ.
– ಅಸಹನೆಯನ್ನು ಆತ್ಮೀಯರ ಹತ್ತಿರ ಹೇಳಿಕೊಂಡು ಹಗುರಾಗಿ.
– ವ್ಯಾಯಾಮ, ತೋಟಗಾರಿಕೆ, ನೃತ್ಯ- ಹೀಗೆ ದೈಹಿಕ ಚಟುವಟಿಕೆ ಬೇಡುವ ಕೆಲಸಗಳಲ್ಲಿ ತೊಡಗಿ.

– ಡಾ. ಕೆ.ಎಸ್‌. ಚೈತ್ರಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅದೆಷ್ಟೋ ಬಂಧನಗಳು, ಬೇಡಿಗಳು ಹೆಣ್ಣಿನ ಬಾಳನ್ನು ಕಟ್ಟಿ ಹಾಕಿವೆ. ಅದನ್ನು ಮಾಡ್ಬೇಡ, ಇದನ್ನು ಮಾಡು, ಈ ಥರ ಇರಬೇಡ, ಹೀಗೇ ಬಾಳು ಎಂದೆಲ್ಲ ಹೇಳುತ್ತ, ಹಾರುವ ಹಕ್ಕಿಯನ್ನು...

  • ತೊಟ್ಟ ಶರವ ಮರಳಿ ತೊಡೆ ಅಂತ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಶಪಥ ಮಾಡಿದ್ದನಂತೆ. ಇವಳು ಕೂಡ ಒಮ್ಮೆ ಉಟ್ಟಿದ್ದು ಮರಳಿ ಉಡಲಾರೆ ಅನ್ನುತ್ತಾಳಲ್ಲ! ಲಲಿತೆ ಸೀರೆಗಳನ್ನೆಲ್ಲ...

  • ಇರುವುದು ಆರು ಅಡಿ ಅಗಲ, ಹತ್ತು ಅಡಿ ಉದ್ದದ ಪುಟ್ಟ ಅಂಗಡಿ. ಸುತ್ತಲೂ ಗೋಡೆಗೆ ಆವರಿಸಿದ ಥರಹೇವಾರಿ ಸಂಗೀತ ವಾದ್ಯಗಳನ್ನು ನೋಡಿದರೆ ಇಡೀ ಸಂಗೀತ ಲೋಕವೇ ಇಲ್ಲಿದೆಯೇನೋ...

  • ವ್ಯಾಯಾಮ, ಜಿಮ್‌, ಯೋಗ ಆಟೋಟಗಳಂಥ ಚಟುವಟಿಕೆಗಳಿಗೆ ಅಂತಲೇ ವಿಶೇಷ ಉಡುಗೆ ತೊಡುಗೆಗಳಿವೆ. ಯಾಕಂದ್ರೆ, ಮಾಮೂಲಿ ಬಟ್ಟೆ ತೊಟ್ಟು, ಅವುಗಳನ್ನೆಲ್ಲ ಸಲೀಸಾಗಿ ಮಾಡಲು...

  • ಸಂಸಾರ ನೌಕೆಯು ಸುಲಭವಾಗಿ ದಡ ಸೇರಲು ಗಂಡ- ಹೆಂಡತಿ ಇಬ್ಬರ ಪಾತ್ರವೂ ಅತಿ ಮುಖ್ಯ. ಗಂಡ ಹೆಂಡತಿಯ, ಹೆಂಡತಿ ಗಂಡನ ಮನಸ್ಸನ್ನು ಪರಸ್ಪರ ಅರಿತು, ಸಾಮರಸ್ಯದಿಂದ ಬಾಳಿದರೆ...

ಹೊಸ ಸೇರ್ಪಡೆ