ಯಾಣದ ಕಡೆಗೆ ಯಾನ

Team Udayavani, May 17, 2019, 6:00 AM IST

ಅದು ವಿದ್ಯಾರ್ಥಿ ಜೀವನದ ಅಂತಿಮ ಘಟ್ಟ. ಸ್ನಾತಕೋತ್ತರ ಪದವಿಯ ಕೊನೆಯ ದಿನಗಳು. ವಿದ್ಯಾರ್ಥಿ ಎಂಬ ಹಣೆಪಟ್ಟಿ ಕಳಚಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಒಂದು ಕಡೆ ಇನ್ನು ಮುಂದೆ ಓದು, ಪರೀಕ್ಷೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ಖುಷಿಯಾದರೆ, ಇನ್ನೊಂದು ಕಡೆ ಸ್ನೇಹಿತರು, ಸಹಪಾಠಿಗಳು, ತರಗತಿ, ಮೋಜು-ಮಸ್ತಿ, ಕಿತಾಪತಿ, ತಮಾಷೆಗಳು ದೂರವಾಗುತ್ತಿದೆ ಎನ್ನುವ ಬೇಸರದ ಭಾವನೆ. ಇವೆಲ್ಲದರ ನಡುವೆ ಸ್ನೇಹಿತರೊಂದಿಗೆ ಸಮಯ ಕಳೆಯಲು ಸಿಕ್ಕ ಒಂದು ಅದ್ಭುತ ಅವಕಾಶವೇ ಪ್ರವಾಸ.

ಹೌದು, ಅದಾಗಲೇ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಪ್ರವಾಸವನ್ನು ಮುಗಿಸಿ ಬಂದಿದ್ದರು. ಇತರ ವಿಭಾಗದ ವಿದ್ಯಾರ್ಥಿಗಳ ಪ್ರವಾಸದ ಅನುಭವಗಳು, ಅವರ ಮೋಜು-ಮಸ್ತಿ, ವಾಟ್ಸಾಪ್‌ ಸ್ಟೇಟಸ್‌ಗಳನ್ನು ನೋಡಿ ನಾವೂ ಪ್ರವಾಸಕ್ಕೆ ಹೋಗಬೇಕೆಂದು ಕಾತರರಾಗಿ ಕಾಯುತ್ತಿದ್ದೆವು. ಅಷ್ಟರಲ್ಲೇ ನಮ್ಮ ಉಪನ್ಯಾಸಕರು ಬಂದು ಪ್ರವಾಸದ ಸ್ಥಳ ಹಾಗೂ ಹೋಗುವ ದಿನವನ್ನು ನಿಗದಿ ಮಾಡಿ ಹೇಳಿದರು.

ಪ್ರವಾಸದ ಕುರಿತು ವಾಟ್ಸಾಪ್‌ ಗ್ರೂಪ್‌ಗ್ಳಲ್ಲಿ ಚರ್ಚೆಯ ಮಹಾಪೂರವೇ ನಡೆಯಿತು. ಯಾವ ಡ್ರೆಸ್‌ ಹಾಕೋದು, ಯಾವ ಕಲರ್‌ ಡ್ರೆಸ್‌, ಏನೇನು ತರಬೇಕು, ಎಷ್ಟು ಗಂಟೆಗೆ ಬರಬೇಕು, ಪ್ರವಾಸದಲ್ಲಿ ಏನೇನೂ ಮಾಡಬೇಕು, ಯಾವ ತರ ಫೊಟೋಸ್‌ ತೆಗಿಸಬೇಕು- ಹೀಗೆ ಒಂದು ದೀರ್ಘ‌ವಾದ ಚರ್ಚೆಯೇ ನಡೆಯಿತು. ಇಷ್ಟೆಲ್ಲ ಮುಗಿಯುವಷ್ಟರಲ್ಲೇ ನಾವು ಪ್ರವಾಸಕ್ಕೆ ಹೊರಡುವ ಸಮಯ ಬಂದೇ ಬಿಟ್ಟಿತು. ಎಪ್ರಿಲ್‌ 27ರ ಸಂಜೆ 5 ಗಂಟೆಯ ಸುಮಾರಿಗೆ ಕಾಲೇಜ್‌ ಕ್ಯಾಂಪಸ್‌ನಿಂದ ನಮ್ಮ ಪಯಣ ಆರಂಭವಾಯಿತು. ಆರಂಭದಲ್ಲಿ ಎಲ್ಲರೂ ಫ‌ುಲ್‌ ಜೋಶ್‌ನಿಂದ ಹಾಡು-ತಮಾಷೆ ಮಾಡುತ್ತಾ ಮುಂದೆ ಸಾಗುತ್ತಿದ್ದೆವು. ಕೊನೆಗೆ ರಾತ್ರಿ 11 ಗಂಟೆಯ ಸುಮಾರಿಗೆ ನಾವು ತಂಗಬೇಕಿದ್ದ ಸ್ಥಳಕ್ಕೆ ತಲುಪಿದೆವು. ಸುಮಾರು 6 ಗಂಟೆಯ ಪ್ರಯಾಣದಿಂದ ಎಲ್ಲರೂ ದಣಿದಿದ್ದರಿಂದ ಹಾಗೂ ಮರುದಿನ ಬೇಗ ಎದ್ದು ನಾವು ಹೋಗಬೇಕಾದ ತಾಣಕ್ಕೆ ಹೊರಡಬೇಕಾಗಿದ್ದರಿಂದ ಎಲ್ಲರೂ ಬೇಗನೆ ನಿದ್ರೆಗೆ ಜಾರಿದೆವು.

ಅದು ಎಪ್ರಿಲ್‌ 28, ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ದಿನ ಅಂದರೆ ತಪ್ಪಾಗಲಾರದು. ಎಲ್ಲರೂ ಬೇಗ ಬೇಗ ಎದ್ದು ತಯಾರಾಗಿ ನಮ್ಮ ಪ್ರವಾಸದ ಮೊದಲ ಹಾಗೂ ಮುಖ್ಯವಾದ ತಾಣಕ್ಕೆ ಹೊರಡಲು ತುದಿಗಾಲಲ್ಲಿ ನಿಂತಿದ್ದೆವು. ಕೊನೆಗೂ ನಮ್ಮ ಪಯಣ ಆರಂಭವಾಯಿತು. ಸುಮಾರು ಒಂದೂವರೆ ಗಂಟೆ ಕಳೆಯುವಷ್ಟರಲ್ಲಿ ನಮ್ಮ ತಾಣದ ಪ್ರವೇಶ ದ್ವಾರದೆಡೆಗೆ ನಾವು ಬಂದಿದ್ದೆವು. ಬಸ್‌ನಿಂದ ಇಳಿದು ಒಂದರಿಂದ ಒಂದೂವರೆ ಕಿ.ಮೀ.ಗಳಷ್ಟು ಕಾಲ್ನಡಿಗೆಯಲ್ಲಿ ಸಾಗಬೇಕಿತ್ತು.

ಎಲ್ಲರೂ ತಮ್ಮ ಕಾಲ್ನಡಿಗೆಯ ಯಾನವನ್ನು ಆರಂಭಿ
ಸಿದರು. ಅರ್ಧ ದಾರಿ ಕ್ರಮಿಸುವಷ್ಟರಲ್ಲಿ ನಮ್ಮಲ್ಲಿದ್ದ ಜೋಶ್‌, ಶಕ್ತಿ-ಸಾಮರ್ಥ್ಯ ಕುಂದಿಹೋಗಿತ್ತು. ಆಯಾಸದಿಂದಲೇ ಹಾಗೋ ಹೀಗೋ ಒಂದೊಂದೇ ಹೆಜ್ಜೆಯನ್ನು ಹಾಕುತ್ತ ಮುಂದೆ ಸಾಗಿದೆವು. ಸ್ವಲ್ಪ ದೂರ ಸಾಗಿದಾಗ ಮರಗಿಡಗಳ ನಡುವೆ ಬೃಹದಾಕಾರದ ಬಂಡೆಕಲ್ಲೊಂದು ಇಣುಕುತ್ತಿದ್ದಂತಿತ್ತು. ಹಾಗೇ ಮುಂದೆ ಸಾಗಿದಾಗ ಆ ಬಂಡೆಕಲ್ಲು ಸ್ಪಷ್ಟವಾಗಿ ಗೋಚರಿಸಿತು. ಅದನ್ನು ನೋಡಿದ್ದೇ ತಡ ನಮ್ಮ ಆಯಾಸವೆಲ್ಲ ಮಾಯವಾಗಿ ಆದಷ್ಟು ಬೇಗ ಆ ಸ್ಥಳವನ್ನು ತಲುಪಬೇಕೆಂದು ಬೇಗ ಬೇಗ ಹೆಜ್ಜೆ ಹಾಕಿದೆವು. ಅರೇ… ಆ ಬಂಡೆಕಲ್ಲಲ್ಲಿ ಏನಿದೆ ವಿಶೇಷ ಅಂತ ನೀವು ಅಂದುಕೊಳ್ಳಬಹುದು. ಹೌದು ಬಂಡೆಕಲ್ಲುಗಳು ವಿಶೇಷವೇನಲ್ಲ, ಆದರೆ, ಆ ಸ್ಥಳ ಮಾತ್ರ ಖಂಡಿತವಾಗಿಯೂ ವಿಶೇಷವೇ ಸರಿ.

ಹಿಂದೆ ಸಿನೆಮಾಗಳಲ್ಲಿ ಆ ತಾಣವನ್ನು ನೋಡಿದ್ದೆ. ಪ್ರತೀ ಸಲ ಆ ಸ್ಥಳವನ್ನು ಸಿನೆಮಾದಲ್ಲಿ ನೋಡುವಾಗ ಆ ತಾಣಕ್ಕೆ ಒಮ್ಮೆಯಾದರೂ ಹೋಗಬೇಕು ಎನ್ನುವ ಹಂಬಲ ಹೆಚ್ಚುತ್ತಲೇ ಇತ್ತು. ಅಲ್ಲದೇ ಯಶ್‌-ರಾಧಿಕಾ ಪಂಡಿತ್‌ರ ಮೊದಲ ಚಿತ್ರ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಈ ಸ್ಥಳವನ್ನು ನೋಡಿದ್ದೆ. ನಾನು ಅವರ ಅಭಿಮಾನಿಯಾದುದರಿಂದ ಆ ಚಿತ್ರದಲ್ಲಿ ಆ ಸ್ಥಳವನ್ನು ನೋಡಿ ಅಲ್ಲಿಗೆ ಹೋಗಲೇಬೇಕೆಂಬ ಆಸೆ ಇನ್ನೂ ಹೆಚ್ಚಾಗಿತ್ತು.

ಇದೆಲ್ಲಾ ಸರಿ, ನಾವು ಭೇಟಿ ನೀಡಿದ ಆ ಜನಪ್ರಿಯ ತಾಣ ಯಾವುದೂ ಅಂತಿರಾ? ಹಾಗಾದರೆ ಕೇಳಿ. ನಮ್ಮ ಯಾನ ಸಾಗಿದ್ದ ತಾಣ ಯಾಣ. ಹೌದು, ಅದು ಬಂಡೆಕಲ್ಲಿಂದಲೇ ಪ್ರಸಿದ್ಧವಾದ ಸ್ಥಳ. ಅದೆಷ್ಟೋ ಸಿನಿಮಾಗಳ ಚಿತ್ರೀಕರಣವು ಅಲ್ಲಿ ನಡೆದಿದೆ. ಅದೆಷ್ಟೋ ಜನರ ಟ್ರೆಕ್ಕಿಂಗ್‌ ಆಸೆಯನ್ನು ಅದು ಪೂರೈಸಿದೆ. ಅದೆಷ್ಟೋ ಭಕ್ತರು ಇಲ್ಲಿ ದೇವರ ದರ್ಶನವನ್ನು ಪಡೆದಿದ್ದಾರೆ. ಅಲ್ಲಿನ ದೇವಾಲಯವು ಗುಹೆಯ ಒಳಗೆ ನಿರ್ಮಾಣವಾಗಿರುವುದೇ ಅಲ್ಲಿನ ವಿಶೇಷ. ಯಾಣದ ಪ್ರವೇಶ ದ್ವಾರದಿಂದ ಸುಮಾರು ದೂರ ಬಿಸಿಲಿನಲ್ಲಿ ನಡೆದು ದಣಿದಿದ್ದ ಜೀವಗಳು ಒಮ್ಮೆ ಆ ಗುಹೆಯೊಳಗೆ ಹೊಕ್ಕರೆ ಸಾಕು ಮೈಮನವೆಲ್ಲವೂ ತಂಪಾಗುವುದರಲ್ಲಿ ಬೇರೆ ಮಾತಿಲ್ಲ. ಶಾಂತಿಯನ್ನು ಬಯಸುವವರಿಗೆ ಪ್ರಶಾಂತತೆಯ ತಾಣವಿದು.

ಹೌದು, ದಿನನಿತ್ಯದ ಜಂಜಾಟದಿಂದ ಬಳಲಿದ್ದ ನಮಗೆ ಯಾಣದ ಯಾನವು ಒಂದು ಅದ್ಭುತವಾದ ವಿರಾಮವನ್ನು ನೀಡಿತ್ತು. ಸ್ನೇಹಿತರೊಂದಿಗಿನ ಅಲ್ಲಿನ ಪಯಣವು ಒಂದು ಸುಂದರವಾದ ಅನುಭವವನ್ನು ನೀಡಿತ್ತು. ಅಲ್ಲಿ ಕಳೆದ ಅದೆಷ್ಟೋ ಕ್ಷಣಗಳನ್ನು ನಾವು ಮನದಲ್ಲಿ ಮಾತ್ರವಲ್ಲದೇ ಮೊಬೈಲ್‌ಗ‌ಳಲ್ಲೂ ಸೆರೆಹಿಡಿದು ದಾಖಲಿಸಿಕೊಂಡೆವು. ಕೊನೆಗೆ ಸಾಕಷ್ಟು ಅನುಭವ-ಒಳ್ಳೆಯ ಕ್ಷಣಗಳನ್ನು ನೀಡಿದ ಯಾಣಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸಿ ಇಷ್ಟವಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು.

-ಭಾವನಾ ಕೆರ್ವಾಶೆ
ಸ್ನಾತಕೋತ್ತರ ವಿದ್ಯಾರ್ಥಿನಿ
ಆಳ್ವಾಸ್‌ ಕಾಲೇಜು, ಮೂಡಬಿದ್ರಿ


ಈ ವಿಭಾಗದಿಂದ ಇನ್ನಷ್ಟು

  • ಏನ್ರೀ ನೀವು! ಮತ ಕೇಳ್ಳೋಕೆ ಬರುವಾಗ ಇದ್ದ ನಿಮ್ಮ ನಿಯತ್ತು ಈಗಿಲ್ಲ . ಚುನಾವಣಾ ಮುನ್ನ ನಿಮ್ಮ ಪ್ರಣಾಳಿಕೆಗಳಲ್ಲಿ ನೀವು ಘೋಷಿಸಿ ಕೊಂಡ ಯಾವ ಕೆಲಸಗಳೂ ಒಂದೂ ಸರಿಯಾಗಿ...

  • ನಮ್ಮ ಮನೆಯ ಅಂಗಳಕ್ಕೆ ಒಂದು ಬಿಳಿ ಪಾರಿವಾಳ ಬಂದಿತ್ತು. ಅದರ ರೆಕ್ಕೆಗೆ ಸ್ವಲ್ಪ ಪೆಟ್ಟು ಆಗಿ ಹೆಚ್ಚು ಹಾರಾಟ ಮಾಡಲು ಆಗುತ್ತಿರಲಿಲ್ಲ. ಅದನ್ನು ನಾನು ನೋಡಿ ಮೆಲ್ಲನೆ...

  • ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಬಾಲ್ಯ, ಪ್ರೌಢ, ಯೌವ್ವನ, ಮತ್ತು ಮುಪ್ಪು ಎಂಬ ನಾಲ್ಕಂತಸ್ತಿನ ಮಹಡಿಯನ್ನು ಹತ್ತಿಳಿಯಲೇ ಬೇಕು. ಆದರೆ, ಬಾಲ್ಯದ ನೆನಪು...

  • ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಬಹಳ ಪ್ರಾಮುಖ್ಯ ಇದೆ. ಸಂಬಂಧಗಳಿಲ್ಲದಿದ್ದರೆ ಬಹುಶಃ ನಮಗೆ ಪ್ರೀತಿ ಎಂದರೆ ಏನು, ಭಾವನೆಗಳೆಂದರೇನು, ನಂಬಿಕೆ ಎಂದರೆ ಏನು ಎನ್ನುವುದು...

  • ಕಾಲೇಜ್‌ ಎಂಬ ಸಾಮ್ರಾಜ್ಯದ ಗೋಡೆಯ ಮೇಲೆ ಅಲ್ಲಲ್ಲಿ ಹೃದಯದ ಗುರುತಿನ ಕೆತ್ತನೆಗಳು, ಡೆಸ್ಕ್ಗಳ ಮೇಲೆ ಪ್ರೀತಿಯ ಕವನಗಳು, ಪ್ರತಿ ಕ್ಲಾಸ್‌ನಿಂದ ಒಂದಾದರೂ ಲವ್‌...

ಹೊಸ ಸೇರ್ಪಡೆ