ಗಾದೆ ಇದ್ದರೆ ತಗಾದೆಯಿಲ್ಲ !

Team Udayavani, May 17, 2019, 6:00 AM IST

ಗಾದೆಗಳು ವೇದಗಳಿಗೆ ಸಮಾನ. ಹಿಂದಿನ ಕಾಲದ ಜನರ ಬದುಕಿನ ಸಂಕ್ಷಿಪ್ತ ರೂಪವೇ ಗಾದೆಗಳು. “ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಮಾತೇ ಗಾದೆಯ ಮಹತ್ವವನ್ನು ತಿಳಿಸುತ್ತದೆ. ಹೀಗೆ ಗಾದೆಮಾತಿನ ಬಗ್ಗೆ ಇರುವ ವಿವರಣೆಯಂತು ಹೆಚ್ಚಿನವರಿಗೆ ಗೊತ್ತೇ ಇದೆ.

ವಿದ್ಯಾರ್ಥಿಗಳಾದ ನಮಗಂತೂ ಗಾದೆಗಳ ಬಗ್ಗೆ ಗೊತ್ತಿರಲೇಬೇಕು. ಯಾಕೆಂದರೆ, ಪರೀಕ್ಷೆಯ ಸಂದರ್ಭ ಪ್ರಶ್ನೆಪತ್ರಿಕೆಯ ವ್ಯಾಕರಣ ಭಾಗದಲ್ಲಿ ಗಾದೆ ಮಾತಿನ ಬಗ್ಗೆ ವಿವರಿಸಲು ಕೇಳಲಾಗುತ್ತಿತ್ತು. ಹೀಗೆ ಕೇಳುವ ಗಾದೆಮಾತಿನ ವಿವರಣೆಗೆ ವಿದ್ಯಾರ್ಥಿಗಳು ಬರೆಯುವ ಉತ್ತರದಲ್ಲಿ ಎಲ್ಲರದ್ದೂ ಒಂದೇ ರೀತಿಯ ವಿಶ್ಲೇಷಣೆ ಇರದಿದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಗಾದೆಗಳ ಬಗ್ಗೆ ಬರೆಯುತ್ತಿದ್ದೆವು. ಎಲ್ಲ ಗಾದೆಗಳಲ್ಲದಿದ್ದರೂ ಕನಿಷ್ಟ ಒಂದೆರಡಾದರೂ ಗಾದೆಮಾತಿನ ಬಗ್ಗೆ ನಮಗೆ ತಿಳಿದಿರುತ್ತದೆ. ಗಾದೆಗಳು ನಮ್ಮ ವಿದ್ಯಾಭ್ಯಾಸದ ಜೀವನಕ್ಕೆ ಪೂರಕವಾಗದೆ ಮುಂದಿನ ಜೀವನದಲ್ಲೂ ಬರುವ ಸವಾಲುಗಳನ್ನು ಎದುರಿಸಲು ಸಹಾಯಕವಾಗಬಲ್ಲದು.

ಏನಪ್ಪಾ ! ಬರೀ ಒಂದು ಸಾಲಿನಲ್ಲಿ ಮೂಡುವ ವಾಕ್ಯವನ್ನು ಇಷ್ಟೆಲ್ಲ ವರ್ಣಿಸುತ್ತಿದ್ದಾಳಲ್ಲ ಅಂದುಕೊಂಡಿರಾ. ಗಾದೆಗಳು ಒಂದು ಗೆರೆಯಷ್ಟಿದ್ದರೂ ಸಹ ಅವು ನಮಗೆ ಮಾಡುವ ಸಹಾಯ ಅನೇಕ ಪುಟಗಳ ಪುಸ್ತಕದಂತೆ. ಅಂತಹ ಗಾದೆಗಳಲ್ಲಿ “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎಂಬ ಗಾದೆಮಾತು ಸಹ ಒಂದು.

ಈ ಗಾದೆಯು ವೇಗದ ಪ್ರಪಂಚದಲ್ಲಿ ಸಾಗುತ್ತಿರುವ ನಮ್ಮ ಜೀವನಕ್ಕೆ ಬಹಳ ಒಪ್ಪುವಂತಹದ್ದು. ಬದಲಾಗುತ್ತಿರುವ ನಮ್ಮ ಜೀವನ ಶೈಲಿ ಯಾವುದೇ ವಿಷಯವನ್ನಾದರೂ ಪ್ರಮಾಣಿಸಿ ನೋಡುವಷ್ಟು ತಾಳ್ಮೆಯನ್ನು ನಮ್ಮಿಂದ ಕಸಿದುಕೊಂಡಿದೆ. ನಮ್ಮ ಕಣ್ಣಿಗೆ ಕಂಡದ್ದು, ಕಿವಿಗೆ ಕೇಳಿದ್ದೇ ಸತ್ಯ ಎಂದು ನಂಬಿಬಿಡುತ್ತೇವೆ. ಇನ್ನು ಮನೆ, ಕುಟುಂಬ, ಸ್ನೇಹಿತರಲ್ಲೂ ಇಂತಹ ಗುಣದಿಂದ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆಯಿಲ್ಲದಂತಹ ಪರಿಸ್ಥಿತಿ ಉಂಟಾಗುತ್ತಿದೆ. ಯಾರೋ ಬೇರೆಯವರ ಮಾತನ್ನು ಕೇಳಿ ನಮ್ಮವರ ಮೇಲೆ ಅನುಮಾನಪಟ್ಟು , ಅವರನ್ನೇ ತಪ್ಪಿತಸ್ಥರನ್ನಾಗಿಸುವುದು ಎಷ್ಟು ಸರಿ. ಕೋಪದಲ್ಲಿ ಕೊಯ್ದ ಮೂಗು ಬೇಕೆಂದರೆ ಮತ್ತೆ ಬರಲಾರದು ಎಂಬ ಮಾತಿನಂತೆ ಮುರಿದು ಬಿದ್ದ ಸಂಬಂಧಗಳು ಮತ್ತೆ ಸುಲಭದಲ್ಲಿ ಚಿಗುರದು.

ನಮಗೆಲ್ಲರಿಗೂ ತಿಳಿದಿರುವ ಹಾವು-ಮುಂಗುಸಿಯ ಕತೆಯು ಈ ಗಾದೆಯನ್ನು ಪ್ರತಿಬಿಂಬಿಸುತ್ತದೆ. “ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು…’ ಎಂಬ ಹಾಡು ಎಷ್ಟು ಅರ್ಥಪೂರ್ಣವಲ್ಲವೇ? ಕೇಳಿದಾಕ್ಷಣ ಕಣ್ಣಂಚಲ್ಲಿ ಕಣ್ಣೀರು ತುಂಬುತ್ತದೆ. ನಮ್ಮ ಅಲ್ಪಾವಧಿಯ ಯೋಚನೆಯಿಂದ ಸಂಭವಿಸುವ ಅನಾಹುತಗಳಿಗೆ ಮುಂದೊಮ್ಮೆ ನಾವೇ ಪಶ್ಚಾತ್ತಾಪ ಪಡಬೇಕಾದ ಸ್ಥಿತಿ ಬಂದೊದಗುತ್ತದೆ. ಆದ್ದರಿಂದ ಜೀವನದಲ್ಲಿ ತಾಳ್ಮೆ, ಪ್ರೀತಿ, ಸಹನೆ ಇತ್ಯಾದಿ ಪ್ರಮುಖ ಅಸ್ತ್ರಗಳನ್ನು ಅಳವಡಿಸಿಕೊಂಡು ಜನನ-ಮರಣ ಎಂಬ ಮೂರಕ್ಷರದ ನಡುವೆ ಇರುವ ಜೀವನ ಎಂಬ ಮೂರಕ್ಷರವನ್ನು ಅರ್ಥಪೂರ್ಣವಾಗಿ ರೂಪಿಸೋಣ.

– ಯಶಸ್ವಿ ಕೆ.
ದ್ವಿತೀಯ ಪಿಯುಸಿ
ಕಪಿತಾನಿಯೋ ಪದವಿಪೂರ್ವ ಕಾಲೇಜು, ಮಂಗಳೂರು


ಈ ವಿಭಾಗದಿಂದ ಇನ್ನಷ್ಟು

  • ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು...

  • ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ...

  • ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ....

  • ಮಳೆ ಒಂದೇ ಸಮನೆ ಸುರಿಯುತ್ತಿತ್ತು. ನಾನು ನನ್ನ ಗೆಳತಿಯರೊಂದಿಗೆ ಬ್ಯಾಗ್‌ ಅನ್ನು ಎದೆಗವಚಿಕೊಂಡು ಒಂದು ಕೊಡೆಯಲ್ಲಿ ಇಬ್ಬರು ಎಂಬಂತೆ ನಾಲ್ಕು ಜನ ಬರುತ್ತಿದ್ದೆವು....

  • ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು...

ಹೊಸ ಸೇರ್ಪಡೆ