Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಾಳೆ ನಿರ್ಧಾರ; ಕೊನೆಗೂ ಕನ್ನಡಿಗರಲ್ಲಿ ವಿಷಾದ ವ್ಯಕ್ತಪಡಿಸಿದ ಕಟ್ಟಪ್ಪ

ಬೆಂಗಳೂರು: ಬಾಹುಬಲಿ 2 ಪಾತ್ರಧಾರಿ ಕಟ್ಟಪ್ಪ (ಸತ್ಯರಾಜ್) ಕ್ಷಮೆ ಕೇಳುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂಬ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಮಣಿದಿರುವ ಸತ್ಯರಾಜ್ ಕೊನೆಗೂ ಕನ್ನಡಿಗರಲ್ಲಿ ವಿಷಾದ ವ್ಯಕ್ತಪಡಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಸುಮಾರು 9 ವರ್ಷಗಳ ಹಿಂದೆ ಕಾವೇರಿ ವಿವಾದದ ಸಂದರ್ಭದಲ್ಲಿ ನಟ ಸತ್ಯರಾಜ್ ಕನ್ನಡಿಗರನ್ನು ಅವಹೇಳನ ಮಾಡಿರುವ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯರಾಜ್ ಕನ್ನಡಿಗರ ಕ್ಷಮೆಯಾಚಿಸಬೇಕು, ಇಲ್ಲದಿದ್ದಲ್ಲಿ ಏಪ್ರಿಲ್ 28ರಂದು ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬಿಡುಗಡೆಗೆ ಅವಕಾಶ ಕೊಡೋದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದವು.

ಏತನ್ಮಧ್ಯೆ ಬಾಹುಬಲಿ 2 ಚಿತ್ರದ ನಿರ್ದೇಶಕ ರಾಜಮೌಳಿ ಗುರುವಾರ ಸ್ವತಃ ಕನ್ನಡಿಗರಲ್ಲಿ ಮನವಿ ಮಾಡಿ, ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಿ. ಸತ್ಯರಾಜ್ ಹೇಳಿಕೆಗೂ ಚಿತ್ರಕ್ಕೂ ಸಂಬಂಧ ಇಲ್ಲ. ಸತ್ಯರಾಜ್ ಚಿತ್ರದ ನಿರ್ದೇಶಕರೂ ಅಲ್ಲ, ನಿರ್ಮಾಪಕರೂ ಅಲ್ಲ. ಅವರೊಬ್ಬ ನಟ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಕನ್ನಡಪರ ಸಂಘಟನೆಯ ವಾಟಾಳ್ ನಾಗರಾಜ್, ಪ್ರವೀಣ್ ಕುಮಾರ್ ಶೆಟ್ಟಿ, ಯಾವುದೇ ಕಾರಣಕ್ಕೂ ಕ್ಷಮೆ ಕೇಳದೆ ಚಿತ್ರ ಬಿಡುಗಡೆಗೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದಿದ್ದರು.

ಕನ್ನಡಿಗರೇ ಬಾಹುಬಲಿ ಬಿಡುಗಡೆಗೆ ಅವಕಾಶ ಮಾಡಿಕೊಡಿ:

ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಸತ್ಯರಾಜ್ ಫೇಸ್ ಬುಕ್, ಟ್ವೀಟರ್ ನಲ್ಲಿ ಕ್ಷಮೆ ಕೇಳಿರುವ ವಿಡಿಯೋ ಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಕಾವೇರಿ ಗಲಾಟೆಯ ಆವೇಶದಲ್ಲಿ ಆ ರೀತಿ ಹೇಳಿಕೆ ಕೊಟ್ಟಿದ್ದೇನೆ. ಇದು ನಾನು 9 ವರ್ಷಗಳ ಹಿಂದೆ ನೀಡಿರುವ  ವಿಚಾರವನ್ನು ದೊಡ್ಡದು ಮಾಡಬೇಡಿ. ನಾನು ಕನ್ನಡ ವಿರೋಧಿಯಲ್ಲ. ದಯವಿಟ್ಟು ಬಾಹುಬಲಿ ಚಿತ್ರದ ಬಿಡುಗಡೆಗೆ ಕನ್ನಡಿಗರು ಅವಕಾಶ ಮಾಡಿಕೊಡಬೇಕು ಎಂದು ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಮನವಿ ಮಾಡಿಕೊಂಡಿದ್ದಾರೆ.

ಕಾವೇರಿ ವಿಚಾರದಲ್ಲಿ ನಾನು ಎಂದೆಂದಿಗೂ ತಮಿಳುನಾಡಿನ ರೈತರ ಪರವಾಗಿಯೇ ಇರುತ್ತೇನೆ. ನಾನು ನಟನಾಗಿ ಸಾಯುವುದಕ್ಕಿಂತ, ಒಬ್ಬ ತಮಿಳನಾಗಿ ಸಾಯಲು ಇಷ್ಟಪಡುತ್ತೇನೆ ಎಂದು ಸತ್ಯರಾಜ್ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಾಹುಬಲಿ 2 ಭವಿಷ್ಯ ಶನಿವಾರ ನಿರ್ಧಾರ: ವಾಟಾಳ್
ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರನ್ನು ಅವಹೇಳನ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಬಾಹುಬಲಿ 2 ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಶನಿವಾರ ಬೆಳಗ್ಗೆ ಘೋಷಿಸುವುದಾಗಿ ಕನ್ನಡಪರ ಸಂಘಟನೆಯ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಸತ್ಯರಾಜ್ ವಿಡಿಯೋ ಹೇಳಿಕೆಯಲ್ಲಿ ಏನಿದೆ, ಏನು ಹೇಳಿದ್ದಾರೆ ಎಂಬುದನ್ನು ಪರಿಶೀಲಿಸಿ ಬಳಿಕ ಬಾಹುಬಲಿ 2 ಬಿಡುಗಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.


More News of your Interest

Trending videos

Back to Top