Updated at Wed,24th May, 2017 11:37AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ; ಯೋಧನಿಂದ ವಿಡಿಯೋ ರಿಲೀಸ್



ನವದೆಹಲಿ: ದೇಶ ರಕ್ಷಣೆಗಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಚಳಿ, ಬಿಸಿಲು, ಮಳೆ ಎನ್ನದೇ ಕಾವಲು ಕಾಯುವ ಯೋಧರಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸಿಲ್ಲ ಎಂಬ ಆರೋಪ ಹಳೆಯದ್ದು. ಆದರೆ ಕೊರೆಯುವ ಚಳಿಯಲ್ಲೂ, ಸುರಿಯುವ ಮಳೆಯಲ್ಲೂ ನಿತ್ಯ 11 ತಾಸು ಕೆಲಸ ಮಾಡುವ ಸೈನಿಕರಿಗೆ ಉತ್ತಮ ಆಹಾರವನ್ನು ನಿರಾಕರಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತ ಸ್ವತಃ ಬಿಎಸ್‌ಎಫ್ ಯೋಧ ಯಾದವ್‌ ಎಂಬುವವರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಎಸ್‌ಎಫ್ನ ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ. ಅದು ಆನ್‌ಲೈನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಈ ನಡುವೆ ಯೋಧರ ವಿಡಿಯೋ ಬಗ್ಗೆ ಬಿಎಸ್‌ಎಫ್ ತನಿಖೆಗೆ ಆದೇಶಿಸಿದೆ. ಆದರೆ ತಕ್ಷಣಕ್ಕೆ ಯಾದವ್‌ ಮಾಡಿರುವ ಆರೋಪ ತಳ್ಳಿಹಾಕಿರುವ ಬಿಎಸ್‌ಎಫ್, ಗಡಿ ನಿಯಂತ್ರಣ ರೇಖೆಗೆ ನಿಯೋಜಿಸಿದ್ದಕ್ಕೆ ಆಕ್ರೋಶಗೊಂಡು
ಆತ ಈ ರೀತಿಯ ವಿಡಿಯೋ ಪೋಸ್ಟ್‌ ಮಾಡಿದ್ದಾನೆ. ಅಶಿಸ್ತಿನ ಕಾರಣಕ್ಕಾಗಿ ಈ ಹಿಂದೆ ಕೂಡಾ ಆತ ಹಲವು ಬಾರಿ ಶಿಕ್ಷೆಗೆ ಗುರಿಯಾಗಿದ್ದ ಎಂದು ಹೇಳಿದೆ. ಮತ್ತೂಂದೆಡೆ ಕೇಂದ್ರ ಸರ್ಕಾರ ಈ ಕುರಿತು ತನಿಖೆಗೆ ಸೂಚಿಸಿದೆ.

„ಕಳಪೆ ಆಹಾರ: ಪಾಕಿಸ್ತಾನ ಗಡಿ ಮುಂಚೂಣಿ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಎಸ್‌ಎಫ್ ಯೋಧ ಟಿ.ಬಿ.ಯಾದವ್‌ ಎಂಬುವವರು 2 ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.

4 ನಿಮಿಷಗಳ ಈ ವಿಡಿಯೋದಲ್ಲಿ, ಸಮವಸ್ತ್ರ ಧರಿಸಿ, ಬಂದೂಕು ಹಿಡಿದುಕೊಂಡಿರುವ ಯಾದವ್‌ ಅವರು ತಮಗೆ ನೀಡುವ ಆಹಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. "ಸರ್ಕಾರ ಉತ್ತಮ ಆಹಾರವನ್ನು ಕೊಡುತ್ತಿದ್ದರೂ, ಹಿರಿಯ ಅಧಿಕಾರಿಗಳು ಅದನ್ನು ಅಕ್ರಮವಾಗಿ ಮಾರಾಟ ಮಾಡಿ ಕಳಪೆ ಆಹಾರ ಪೂರೈಸುವಂತೆ ಮಾಡುತ್ತಾರೆ' ಎಂದು ಆರೋಪಿಸಿದ್ದಾರೆ. ಈ ವಿಡಿಯೋದ ಹಿನ್ನೆಲೆ ದೃಶ್ಯಗಳು ನೋಡಲು ಸುಂದರವಾಗಿರಬಹುದು. ಆದರೆ ನಮ್ಮ ಪರಿಸ್ಥಿತಿ ಅಷ್ಟು ಸುಂದರವಾಗಿಲ್ಲ. 11 ಗಂಟೆ ನಾವು ನಿಂತೇ ಕೆಲಸ ಮಾಡುತ್ತೇವೆ. ಬೆಳಗ್ಗೆ ನಮಗೆ ಚಹಾ ಮತ್ತು ಪರೋಟ ಕೊಡುತ್ತಾರೆ. ಆದರೆ ಇದಕ್ಕೆ ತರಕಾರಿ, ಉಪ್ಪಿನಕಾಯಿ ಏನೂ ಕೊಡುವುದಿಲ್ಲ. ಮಧ್ಯಾಹ್ನ ಊಟಕ್ಕೆ ರೊಟ್ಟಿ, ದಾಲ್‌ ಕೊಟ್ಟರೂ ಅದರಲ್ಲಿ ಅರಶಿಣ, ಉಪ್ಪು ಮಾತ್ರ ಇರುತ್ತದೆ. ನಮ್ಮ ಸ್ಥಿತಿ ಬಗ್ಗೆ ಯಾರೂ ತೋರಿಸುವುದಿಲ್ಲ.
ಈ ಬಗ್ಗೆ ಪ್ರಧಾನಿ ಅವರು ತನಿಖೆ ನಡೆಸಬೇಕು' ಎಂದು ಕೋರಿದ್ದಾರೆ.

"ನಮ್ಮ ಈ ನೋವಿಗೆ ಸರ್ಕಾರ ಕಾರಣವಲ್ಲ. ನಮಗೆ ಏನು ಬೇಕೋ ಅದನ್ನು ಸರ್ಕಾರ ಕೊಟ್ಟಿದೆ.  ಆದರೆ ಉನ್ನತ
ಸ್ಥಾನದಲ್ಲಿರುವ ಅಧಿಕಾರಿಗಳು ಭ್ರಷ್ಟಾಚಾರ  ನಡೆಸುವ ಮೂಲಕ ನಮ್ಮನ್ನು ಕೀಳಾಗಿ ನೋಡಿಕೊಳ್ಳುತ್ತಿದ್ದಾರೆ.
ಇಂಥದ್ದೊಂದು ವಿಡಿಯೋ ಪೋಸ್ಟ್‌ ಮಾಡಿದ ಬಳಿಕ ನಾನು ಬದುಕಿರುತ್ತೀನೋ ಇಲ್ಲವೋ ಗೊತ್ತಿಲ್ಲ. ಜೊತೆಗೆ ಶಿಸ್ತು ಕ್ರಮದ ಭೀತಿಯೂ ಇದ್ದೇ ಇದೆ' ಎಂದು ಯಾದವ್‌ ತನ್ನ ನೋವು ತೋಡಿಕೊಂಡಿದ್ದಾರೆ. ವಿಡಿಯೋ ಹೊರ ಬರುತ್ತಿದ್ದಂತೆ ಬಿಎಸ್‌ಎಫ್ ಮತ್ತು ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ.


More News of your Interest

Trending videos

Back to Top