Updated at Mon,27th Mar, 2017 2:10AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಾಲಕಿಗೆ ಮಣಿದ ಕಂಪೆನಿ: ಜ್ಯೂಸ್‌ ಪ್ಯಾಕೇಜ್‌ ಶೈಲಿ ಬದಲಿಸಲು ನಿರ್ಧಾರ

ಹೊಸದಿಲ್ಲಿ : "ನೈಜ ಹಣ್ಣಿನ ರಸವನ್ನು ಹುಡುಗರು ಮಾತ್ರ ಸೇವಿಸಬಹುದೇ ? ಹುಡುಗಿಯರು ಸೇವಿಸಬಾರದೇ ? ಇಲ್ನೋಡಿ; ಈ ಪಾನೀಯದ ಪ್ಯಾಕೇಜ್‌ ಮೇಲೆ ಶಾಲಾ ಸಮವಸ್ತ್ರದಲ್ಲಿರುವ ಹುಡುಗನ ಚಿತ್ರ ಇದೆ ಮತ್ತು ಅದರ ಜತೆಗಿರುವ ಬರಹ ಹೇಳುತ್ತದೆ : "ನಿಮ್ಮ ಮಗುವಿಗೆ ಉತ್ತಮವಾಗಿರುವ ಇದು ಆತನನ್ನು ಮಂದಸ್ಮಿತನಾಗಿ ಕೂಡ ಮಾಡಬಲ್ಲುದು'. ಆತ ಅಂದ್ರೆ ಇಲ್ಲಿ ಹುಡುಗ ಅಲ್ವಾ ? ಹಾಗಿರುವಾಗ ನಾನು ಹುಡುಗಿ ಈ ಪಾನೀಯವನ್ನು ಹೇಗೆ ಸೇವಿಸಲಿ ?"

9 ವರ್ಷ ಪ್ರಾಯದ ಗುವಾಹಟಿಯ ಹುಡುಗಿ ಮೃಗಾಂಕಾ ಕೆ ಮುಜುಮ್‌ದಾರ್‌ ತನ್ನ ತಂದೆಗೆ ಕೇಳಿದ ವಿಲಕ್ಷಣವಾದ ಪ್ರಶ್ನೆ ಇದು. ಮೃಗಾಂಕಾ ತನ್ನ ಕೈಯಲ್ಲಿದ್ದ ಡಾಬರ್‌ ಉತ್ಪಾದನೆಯ ಫ್ರುಟ್‌ ಜ್ಯೂಸ್‌ ಪ್ಯಾಕ್‌ ಅನ್ನು ತನ್ನ ತಂದೆಗೆ ತೋರಿಸಿದಳು. ಅದರ ಮೇಲೆ ಶಾಲಾ ಸಮವಸ್ತ್ರಧಾರಿ ಹುಡುಗನ ಚಿತ್ರ ಇತ್ತು. ಅದರ ಕೆಳಗಿನ ಬರಹ ಓದಿದ ಮೃಗಾಂಕಾ ಗೆ ಈ ಪ್ಯಾಕೇಜ್‌ ಶೈಲಿ ಲಿಂಗ ತಾರತಮ್ಯ ಮಾಡುತ್ತಿರುವಂತೆ ಭಾಸವಾಯಿತು. 

ಮೃಗಾಂಕಾಳ ಪ್ರಶ್ನೆಗೆ ಯಾವ ರೀತಿಯ ಉತ್ತರ ಕೊಡಬೇಕೆಂದೇ ತಂದೆ ಮುಜುಮ್‌ದಾರ್‌ಗೆ ಗೊತ್ತಾಗಲಿಲ್ಲ.  ಆದರೆ ಒಡನೆಯೇ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರಿಗೆ ಪತ್ರ ಬರೆದು ಡಾಬರ್‌ ಉತ್ಪನ್ನದ ಈ ಪ್ಯಾಕೇಜ್‌ ಮೇಲಿನ ಚಿತ್ರ-ಬರಹ ಲಿಂಗ ತಾರತಮ್ಯ ಮಾಡುವಂತಿದೆ ಎಂಬ ತಮ್ಮ ಮಗಳ ದೂರನ್ನು ಉಲ್ಲೇಖೀಸಿದರು. ಒಡನೆಯೇ ಮೇನಕಾ ಗಾಂಧಿ ಅವರು ಡಾಬರ್‌ ಕಂಪೆನಿಗೆ ಈ ದೂರನ್ನು ಉಲ್ಲೇಖೀಸಿ ಪತ್ರ ಬರೆದರು.

ಇದಕ್ಕೆ ಕೂಡಲೇ ಸ್ಪಂದಿಸಿದ ಡಾಬರ್‌ ಕಂಪೆನಿಯಿಂದ ಮುಜುಮ್‌ದಾರ್‌ ಅವರಿಗೆ ಉತ್ತರ ಬಂತು : "ಪ್ಯಾಕೇಜ್‌ ಮೇಲೆ ಬಳಸಿರುವ "ಆತ' ಎಂಬ ಪದವು ಲಿಂಗ ನಿರ್ದಿಷ್ಟವಾಗಿ ಬಳಸಲ್ಪಟ್ಟಿಲ್ಲ. ಎಲ್ಲ ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಬಳಸಲಾಗಿದೆ. ಭವಿಷ್ಯದಲ್ಲಿ ಈ ರೀತಿಯ ತಪ್ಪು ತಿಳಿವಳಿಕೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ.  ಹಾಗಿದ್ದರೂ ರಿಯಲ್‌ ಫ್ರುಟ್‌ ಜ್ಯೂಸ್‌ ಪ್ಯಾಕೇಜ್‌ನ ಇನ್ನೊಂದು ಭಾಗದಲ್ಲಿ ಸಂತೃಪ್ತ ಕುಟುಂಬದ ಚಿತ್ರವಿದ್ದು ಅದರಲ್ಲಿ ಹುಡುಗ - ಹುಡುಗಿ - ಅಪ್ಪ - ಅಮ್ಮ ಇದ್ದಾರೆ; ನೀವದನ್ನು ನೋಡಿರಬಹುದು'.

ಆದರೆ ಮುಜುಮ್‌ದಾರ್‌ ಅವರು ಡಾಬರ್‌ ಕಂಪೆನಿಯ ಈ ಸಮರ್ಥನೆಯನ್ನು ತಿರಸ್ಕರಿಸಿದರು. "ಪ್ಯಾಕೇಜ್‌ನಲ್ಲಿ ಹುಡುಗಿಯ ಚಿತ್ರವೂ ಇದೆ ಎಂಬ ನಿಮ್ಮ ಉತ್ತರ ಸರಿಯಲ್ಲ; 200 ಎಂಎಲ್‌ ಪ್ಯಾಕ್‌ ಮೇಲೆ ಶಾಲಾ ಸಮವಸ್ತ್ರ ಧಾರಿ ಹುಡುಗನ ಚಿತ್ರ ಮಾತ್ರವೇ ಇದೆ. ಹಾಗಿದ್ದರೂ 1 ಲೀಟರ್‌ ಪ್ಯಾಕ್‌ ಮೇಲೆ ಹುಡುಗಿಯ ಚಿತ್ರವಿದೆ' ಎಂದು ಮುಜುಮ್‌ದಾರ್‌ ಹೇಳಿದರು. 

ಆದರೂ ಡಾಬರ್‌ ಕಂಪೆನಿಯವರು ತಮ್ಮ ಮುಂದಿನ ಪ್ಯಾಕೇಜ್‌ಗಳಲ್ಲಿ  ಸೂಕ್ತ ಬದಲಾವಣೆ ಮಾಡಲು ನಿರ್ಧರಿಸಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಮುಜುಮ್‌ದಾರ್‌ ಹೇಳಿದರು. 


More News of your Interest

Trending videos

Back to Top