ಪದವೀಧರರಿಗೆ ನಿರುದ್ಯೋಗ ಸಮಸ್ಯೆ ಹೆಚ್ಚು ಕಾಡುವುದೇಕೇ?


Team Udayavani, Mar 3, 2020, 7:15 AM IST

Degree-Student

ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಎಲ್ಲಾ ಹಂತಗಳಲ್ಲಿ ಏರುತ್ತಿರುವುದನ್ನು ಆ ಬಗೆಗಿನ ಅಂಕಿಅಂಶಗಳು ಸಾರುತ್ತಾ ಇವೆ. ಅದರಲ್ಲಿಯೂ ಶಿಕ್ಷಣ ಮಟ್ಟ ಹೆಚ್ಚಿರುವುದಕ್ಕೂ ನಿರುದ್ಯೋಗಕ್ಕೂ ನಿಕಟ ಸಂಬಂಧವಿರುವುದಂತೂ ಸತ್ಯ. ಎಲ್ಲರಿಗೂ ತಾವು ಕಲಿತ ವಿದ್ಯೆಗೆ ತಕ್ಕಂತೆ ಉದ್ಯೋಗ ದೊರಕಿಸಿಕೊಳ್ಳಬೇಕೆನ್ನುವ ಆಶೆ. ಪಡೆದ ಶಿಕ್ಷಣಕ್ಕೆ ತಕ್ಕಂತಹ ಉದ್ಯೋಗದ ಹುಡುಕಾಟದಲ್ಲಿ ದೊಡ್ಡ ನಗರಗಳಿಗೆ ತೆರಳಬೇಕಾಗುತ್ತದೆ. ಆದರೆ ಕ್ಯಾಂಪಸ್‌ ಸೆಲೆಕ್ಷನ್‌ ಮತ್ತಿತರ ರೀತಿಯಲ್ಲಿ ಅಲ್ಲಿಯ ಉದ್ಯೋಗಗಳಿಗೆ ತಲಾಶೆ ಮೊದಲೇ ಆಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಉದ್ಯೋಗ ದೊರೆಯದೆ ಅಲೆಯುವ ಉನ್ನತ ಶಿಕ್ಷಣ ಪಡೆದವರ ಪಾಡು ದೇವರಿಗೇ ಪ್ರೀತಿ.

ಬ್ಯೂರೋ ಆಫ್ ಲೇಬರ್‌ ಸ್ಟಾಟಿಸ್ಟಿಕ್ಸ್‌ ಪ್ರಕಾರ ನಿರುದ್ಯೋಗಿಗಳೆಂದರೆ ಸ್ವ-ಉದ್ಯೋಗ ನಡೆಸದಿರುವವರು ಮತ್ತು ನಿರ್ದಿಷ್ಟ ಪ್ರಾಯದ ಪರಿಮಿತಿಯಲ್ಲಿ ಗತಿಸಿದ ನಾಲ್ಕು ವಾರಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ ಬಳಿಕವೂ ಯಾವುದೇ ಉದ್ಯೋಗಕ್ಕೆ ಲಭ್ಯವುಳ್ಳವರು ಆಗಿರುತ್ತಾರೆ. ಈ ಅವಧಿಯಲ್ಲಿ ಉದ್ಯೋಗಕ್ಕೆ ಪ್ರಯತ್ನಿಸದವರು ನಿರುದ್ಯೋಗಿಗಳ ಸಂಖ್ಯೆಗೆ ಸೇರ್ಪಡೆಗೊಂಡಿರು ವುದಿಲ್ಲ. ನಿರುದ್ಯೋಗಿಗಳ ಸಂಖ್ಯೆಯನ್ನು ಕರಾರುವಕ್ಕಾಗಿ ಪಡೆಯಲಾಗುವುದಿಲ್ಲ. ನ್ಯಾಶನಲ್‌ ಸ್ಯಾಂಪಲ್‌ ಸರ್ವೆ ಕಾರ್ಯಾಲಯದ ಮೂಲಕ 5 ವರ್ಷಗಳಿಗೊಮ್ಮೆ ವರದಿ ತಯಾರಿಸಲಾಗುತ್ತದೆ. ಇತ್ತೀಚೆಗಿನ ಇದರ (ಪ್ರಕಟಣೆಗೆ ಮೊದಲೇ ಸೋರಿಕೆಯಾಗಿದ್ದೆಂದು ಹೇಳಲಾದ) ವರದಿಯಂತೆ 2017-18ರ ದೇಶದ ನಿರುದ್ಯೋಗ ಪ್ರಮಾಣ ಶೇ. 6.1 ಆಗಿದ್ದು ಇದು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಧಿಕವಾಗಿದೆ. ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಇಕಾನಮಿ (ಸಿಎಂಐಇ) ವರದಿಯಂತೆ 2018ರ ಸಪ್ಟೆಂಬರ್‌ ಡಿಸೆಂಬರ್‌ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೇ. 7.9 ಇತ್ತೆನ್ನಲಾಗಿದೆ. 2019ರ ಅಕ್ಟೋಬರದಲ್ಲಿ ಅದು ಶೇ. 8.5ಕ್ಕೆ ಜಿಗಿದು ಸಾರ್ವಕಾಲಿಕ ಅಧಿಕ ಅನಿಸಿತು. ಅದೇ ವೇಳೆ ಪದವೀಧ‌ರರ ನಿರುದ್ಯೋಗದ ಪ್ರಮಾಣ ಶೇ. 13.2 ಆಗಿತ್ತು. ಸ್ಟೇಟ್‌ ಆಫ್ ಇಂಡಿಯಾ ಎನ್ವೆ„ರನ್‌ಮೆಂಟ್‌ 2019ರ ಅಂಕಿಅಂಶಗಳ ಪ್ರಕಾರ ಮೇ 2017ರಿಂದ ಎಪ್ರಿಲ್‌ 2019ರೊಳಗೆ ನಿರುದ್ಯೋಗ ಸಮಸ್ಯೆ ಶೇ.4ರಿಂದ ಶೇ. 7.6ಕ್ಕೆ ಜಿಗಿಯಿತು. ಅಂದರೆ ಸರಿಸುಮಾರು ದ್ವಿಗುಣ. ಎಪ್ರಿಲ್‌ 2019ರ ನಿರುದ್ಯೋಗ ಪ್ರಮಾಣ ನಗರ ಮತ್ತು
ಗ್ರಾಮೀಣ ಪ್ರದೇಶಗಳಲ್ಲಿಯೂ ಅತ್ಯಧಿಕವಾಗಿತ್ತು. ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯೊಂದಿಗೂ ನಿರುದ್ಯೋಗಿಗಳ ಪ್ರಮಾಣ ದೊರೆಯುತ್ತದೆ.

2019ರ ಜುಲೈಯಲ್ಲಿ ಸರಕಾರದ ಹೇಳಿಕೆ ಪ್ರಕಾರ ಪದವಿ ಮತ್ತು ಮೇಲ್ಪಟ್ಟ ಶಿಕ್ಷಣ ಪಡೆದಿರುವ ನಿರುದ್ಯೋಗಿಗಳ ಪ್ರಮಾಣ ಶೇ. 11.4. ದೇಶದ ಸರಾಸರಿ ನಿರುದ್ಯೋಗ ಪ್ರಮಾಣ (ಶೇ.6.1)ಕ್ಕಿಂತ ಇದು ಅಧಿಕ. ಉನ್ನತ ಶಿಕ್ಷಣ ಪಡೆದವರಲ್ಲಿ ನಿರುದ್ಯೋಗ ಪ್ರಮಾಣ ರಾಷ್ಟ್ರೀಯ ಪ್ರಮಾಣಕ್ಕಿಂತ ಮೂರು ಪಾಲಿನಷ್ಟು ಅಧಿಕ ಎಂದು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಉದ್ಯೋಗ ಕೇಂದ್ರದ ವರದಿಯೊಂದು ತಿಳಿಸುತ್ತದೆ. ಮತ್ತಷ್ಟು ಸರ್ವೇ ಮತ್ತು ವರದಿಗಳ ಪ್ರಕಾರವೂ ಪದವಿ ಮತ್ತು ಮೇಲ್ಪಟ್ಟ ಶಿಕ್ಷಣ ಪಡೆದ ಯುವಜನರೊಳಗಿನ ನಿರುದ್ಯೋಗ ಪ್ರಮಾಣ ಅಧಿಕವಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣ ನಗರಗಳಿಗಿಂತ ಕಡಿಮೆ. ಆರ್ಥಿಕ ಕುಸಿತದ ಕಾರಣ ಉದ್ಯೋಗಾವಕಾಶಗಳಲ್ಲಿ ನಷ್ಟವಾಗಿ ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣ ಬಹಳಷ್ಟು ಏರಿಕೆಯಾಗಿದೆ.

ಸುಶಿಕ್ಷಿತ ಯುವಜನರಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಉದ್ಯೋಗಾವ ಕಾಶಗಳ ಕೊರತೆ ಬಹುದೊಡ್ಡ ಕಾರಣವೇನೋ ಸರಿ. ಜತೆಗೆ, ಸೌಕರ್ಯವಂಚಿತ ಶಾಲಾ ಕಾಲೇಜುಗಳು, ಉದ್ಯೋಗಾವಕಾಶಗಳಿಗೆ ತಕ್ಕುದಲ್ಲದ ಪಠ್ಯಕ್ರಮಗಳಂತಹ ವಿಚಾರಗಳೂ ಕಾರಣವಾಗುತ್ತವೆ. ಇವುಗಳಿಂದಾಗಿ ವಿದ್ಯಾರ್ಥಿಗಳು ಪದವಿ ಪಡೆದರೂ ಉದ್ಯೋಗ ಮಾರುಕಟ್ಟೆಗೆ ಬೇಕಾದ ಬುದ್ಧಿಮತ್ತೆ, ನೈಪುಣ್ಯ ಪಡೆದಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಎಳವೆಯಿಂದಲೇ ಇರುವ ಆಸಕ್ತಿ, ಉತ್ತಮ ಮತ್ತು ಸಮಯೋಚಿತ ಶಿಕ್ಷಣದಿಂದ ವಿಕಸನವಾದಾಗ ಆ ವ್ಯಕ್ತಿಯ ಬುದ್ಧಿಮತ್ತೆ ಬೆಳೆದು ವ್ಯಕ್ತಿ ನಿಜವಾದ ಜ್ಞಾನ ಪಡೆಯುತ್ತಾನೆ. ಇದೇ ಉದ್ಯೋಗ ಮಾರುಕಟ್ಟೆಯಲ್ಲಿ ಅತಿ ಶೀಘ್ರ ಉದ್ಯೋಗ ಪಡೆಯುವಲ್ಲಿ ನೆರವಿಗೆ ಬರುತ್ತದೆ. ಆ ಕಾರಣ ಅತ್ಯುತ್ತಮ ಪಠ್ಯಕ್ರಮವುಳ್ಳ ಉತ್ತಮ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದವರಿಗೆ ನಿರುದ್ಯೋಗ ಸಮಸ್ಯೆ ಅಷ್ಟೊಂದು ಭಾದಿಸುವುದಿಲ್ಲ.

ಕೇಂದ್ರ ಸರಕಾರ ಪೂರ್ಣ ಪ್ರಮಾಣದಲ್ಲಿ ನಡೆಸುವ ಕೆಲವು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಅತ್ಯುತ್ತಮ ಶಿಕ್ಷಣ ನೀಡುತ್ತವೆ. ಇಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳಿಗೆ ಬೇಡಿಕೆಯೂ ಇದೆ. ಹೆಚ್ಚಿನ ರಾಜ್ಯ ಸರಕಾರಗಳು ತಮ್ಮ ನಿಯಂ ತ್ರಣದ ಮೂಲಕ ನಡೆಸುವ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸಿರುವ ಶಿಕ್ಷಣ ಅದರಲ್ಲಿಯೂ ತಾಂತ್ರಿಕ ಶಿಕ್ಷಣ ಪದ್ಧತಿ ಕೈಗಾರಿಕೆಗಳಿಗೆ ಅತ್ಯುತ್ತಮ ಉದ್ಯೋಗಿಗಳನ್ನು ಪೂರೈಸುವಲ್ಲಿ ಸಹಕಾರಿಯಲ್ಲ ಎಂದು ವಾಣಿಜ್ಯೋದ್ಯಮ ಮಂಡಳಿಗಳು ಆಗಾಗ ಸರಕಾರಕ್ಕೆ ಮನವರಿಕೆ ಮಾಡಿಕೊಡುತ್ತಾ ಇವೆ. ದಿನಕಳೆದಂತೆ ತಾಂತ್ರಿಕತೆ ಸುಧಾರಿಸುತ್ತಾ – ಬದಲಾಗುತ್ತಾ ಹೋಗುತ್ತದೆ. ಅದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ಸಿಲೆಬಸ್‌ ಕೂಡಾ ಬದಲಾಗಬೇಕು. ಖಾಸಗಿ ವಿವಿಗಳು / ಸಂಸ್ಥೆಗಳು ಈ ದಿಶೆಯಲ್ಲಿ ಮುಂದಿವೆ. ಕೆಲವೊಂದನ್ನು ಹೊರತುಪಡಿಸಿದರೆ ಸರಕಾರದ ಅಧೀನ ವಿವಿಗಳು ಈ ಬಗ್ಗೆ ಗಮನ ಹರಿಸುವುದು ಕಡಿಮೆಯೆಂದೇ ಹೇಳಬೇಕು.

ಕರ್ನಾಟಕವನ್ನೇ ಗಣನೆಗೆ ತೆಗೆದುಕೊಳ್ಳುವುದಾದರೆ ಸುಮಾರು ನಲ್ವತ್ತು ವರ್ಷಗಳ ಹಿಂದಿನವರೆಗೆ ವಿದ್ಯಾಭ್ಯಾಸದ ಎಲ್ಲಾ ಸ್ತರಗಳಲ್ಲಿ ಎಲ್ಲಾ ಸವಲತ್ತುಗಳಿಂದ ಕೂಡಿದ ಕೆಲವೇ ಸಂಸ್ಥೆಗಳಿದ್ದವು. ಕಾಲೇಜು, ವೃತ್ತಿಪರ ಸಂಸ್ಥೆಗಳಂತೂ ಕಡಿಮೆ ಸಂಖ್ಯೆಯಲ್ಲಿದ್ದು ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒಳಗೊಂಡಿದ್ದವು. ಅಂತಹ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಪಡೆದ ಕಟ್ಟಕಡೆಯ ವಿದ್ಯಾರ್ಥಿಗಳೂ ಜ್ಞಾನವಂತರಾಗಿ ಉದ್ಯೋಗ ಮಾರುಕಟ್ಟೆ ಪ್ರವೇಶಿಸಲು ಕಷ್ಟಪಡುತ್ತಿರಲಿಲ್ಲ. ಅಂತಹ ಅನೇಕ ಸಂಸ್ಥೆಗಳು ಇಂದಿಗೂ ತಮ್ಮ ಹಿರಿಮೆಯನ್ನು ಉಳಿಸಿಕೊಂಡಿವೆ. ಬರಬರುತ್ತಾ ಎಲ್ಲರಿಗೂ ಉನ್ನತ ಶಿಕ್ಷಣ ನೀಡಬೇಕೆಂಬ ಕಾಳಜಿಯಿಂದ ಹೆಚ್ಚೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.

ಪದವಿ, ಸ್ನಾತಕೋತ್ತರ ಶಿಕ್ಷಣ ಎಲ್ಲರ ಆವಶ್ಯಕತೆ ಎಂಬಂತೆ ಬಿಂಬಿಸಲಾಯಿತು. ವಿದ್ಯಾರ್ಥಿಯ ಆಸಕ್ತಿ, ಬುದ್ಧಿಮತ್ತೆ ಮತ್ತಿತರ ಯಾವುದೇ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಶಿಕ್ಷಣ ನೀಡಲಾಗುತ್ತದೆ. ಹಾಜರಾತಿ, ಪರೀಕ್ಷೆ ಮತ್ತು ಪೇಪರ್‌ ಕರೆಕ್ಷನ್‌ಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಉದಾರ ಧೋರಣೆಯನ್ನು ಅನುಸರಿಸಲಾಗುತ್ತದೆ. ಇದರ ಫ‌ಲವಾಗಿ ಪ್ರೌಢಶಾಲೆಯ ಇಂಗ್ಲಿಷನ್ನೂ ಚೆನ್ನಾಗಿ ಅರಗಿಸಿಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಯೊಬ್ಬ ವಾಣಿಜ್ಯ ಸ್ನಾತಕೋತ್ತರ ಪದವಿಯನ್ನೂ ಆಂಗ್ಲ ಭಾಷೆಯಲ್ಲೇ ಕಲಿತು ಪಡೆಯಬಲ್ಲ. ಆದರೆ ಅಲ್ಲಿ ಎಕೌಂಟೆನ್ಸಿಗಳಂತಹ ವಾಣಿಜ್ಯಕ್ಕೆ ತುಂಬಾ ಸಹಕಾರಿಯಾಗುವ ವಿಷಯಗಳ ಬದಲಿಗೆ ಇನ್ನಾವುದೋ ವಿಷಯವಿರುತ್ತದೆ. ಅತನಿಗೇನೋ ತಾನು ಎಂಕಾಂ ಪದವಿ ಪಡೆದಿರುವ ಹೆಮ್ಮೆ. ಆ ಪದವಿಗೆ ತಕ್ಕುದಾದ ಉದ್ಯೋಗ ಪಡೆಯಬೇಕೆಂಬ ಆಶೆ. ಆದರೆ ಉದ್ಯೋಗ ಸಂದರ್ಶನ ಪಡೆಯುವವರು ಅನುಭವದಲ್ಲೇನು ಕಡಿಮೆಯೇ? ಬರಹ ಮೂಲಕ ಪರೀಕ್ಷೆ ಇರುವಲ್ಲಿ ಅಭ್ಯರ್ಥಿಗಳ ಜಾತಕ ಅಲ್ಲಿಯೇ ಬಯಲಾಗುತ್ತದೆ. ಅಲ್ಲಿಂದ ಸಂದರ್ಶನಕ್ಕೆ ಅವಕಾಶ ಪಡೆದರಂತೂ ಅಭ್ಯರ್ಥಿಯ ನಿಜವಾದ ಬುದ್ಧಿಮತ್ತೆಯ ದರ್ಶನವಾಗುತ್ತದೆ. ಹೀಗಿರುವಾಗ ಹೇಗೇಗೋ ಉನ್ನತ ಶಿಕ್ಷಣ ಪಡೆದವರ ನಿರುದ್ಯೋಗ ಪ್ರಮಾಣ ಹೆಚ್ಚದೆ ಇದ್ದೀತೆ? ಇಂತಹ ಅಭ್ಯರ್ಥಿಗಳು ತಮ್ಮ ಆಸಕ್ತಿಯ ವಿಷಯದಲ್ಲಿ ಅದೂ ತನ್ನ ಪರಿಮಿತಿಗೊಳಪಟ್ಟು ಶಿಕ್ಷಣ ಪಡೆದಿದ್ದರೆ ಎಲ್ಲಿಯಾದರೂ ಉದ್ಯೋಗವೊಂದು ಖಾತರಿಯಾಗಿರುತ್ತಿತ್ತು. ಉನ್ನತ ಶಿಕ್ಷಣದ ತುಡಿತವಿದ್ದಿದ್ದರೆ ಜೀವನದಲ್ಲಿ ಮತ್ತೆಯೂ ಅವಕಾಶಗಳಿರುತ್ತವಲ್ಲಾ?

1980ರ ದಶಕದ ಬಳಿಕ ದೇಶದಲ್ಲಿ ಹಲವಾರು ಎಂಜಿನಿಯರಿಂಗ್‌ ಕಾಲೇಜುಗಳು ಸ್ಥಾಪನೆಗೊಂಡವು. ಈ ಶಿಕ್ಷಣಕ್ಕೆ ಗಣಿತ, ವಿಜ್ಞಾನ ವಿಷಯಗಳು ಬಹುಮುಖ್ಯವಾಗಿದ್ದು ಪಿಯುಸಿ ಮಟ್ಟದಲ್ಲಿ ಹೇಗಾದರೂ ಅಂಕ ಪಡೆದ ಹೆಚ್ಚಿನವರು ಎಂಜಿನಿಯರ್‌ ಆಗ ಬಯಸಿದರು. ದುಡ್ಡು ನೀಡಿದಾಗ ಸೀಟುಗಳೂ ಲಭಿಸಿದವು. ಬಿಇ ಎದುರು ಬಿಎಸ್ಸಿ, ಬಿಕಾಂ, ಬಿಎ ಕ್ಷುಲ್ಲಕ ಎನಿಸಿದವು. ಖಾಸಗಿಯವರು ಎಂಜಿನಿಯರಿಂಗ್‌ ಕಾಲೇಜುಗಳನ್ನೇನೋ ಸ್ಪರ್ಧೆಗೆ ಬಿದ್ದವರಂತೆ ಆರಂಭಿಸಿದರು. ಆದರೆ ಅವುಗಳಿಂದ ಹೊರಬರುವ ಪದವೀಧರರ ಪ್ರಮಾಣಕ್ಕೆ ತಕ್ಕಂತೆ ಅವರಿಗೆ ತಕ್ಕುದಾದ ಉದ್ಯೋಗಗಳು ಮಾತ್ರ ಸೃಷ್ಟಿಯಾಗಲೇ ಇಲ್ಲ. ಹೀಗಿರುವಲ್ಲಿ ಇರುವ ಉದ್ಯೋಗಗಳು ಪ್ರತಿಭಾವಂತ ಮತ್ತು ಉತ್ತಮ ಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡಿದ ಎಂಜಿನಿಯರಿಂಗ್‌ ಪದವೀಧರರ‌ ಪಾಲಾಗುತ್ತಿವೆ. ಬೆಂಗಳೂರುಗಳಂತಹ ನಗರಗಳಲ್ಲಿ ಎಂಜಿನಿಯರಿಂಗ್‌ ಪದವೀಧರರಿಗೆ ಠೇವಣಿ ಇಟ್ಟು ದುಡಿಯುವಂತಹ ಶರ್ತಗಳ ನ್ನೊಡ್ಡುವ ಸಾಧಾರಣ ಕೈಗಾರಿಕೆಗಳೂ ಇವೆ. ಕೆಲ ತಿಂಗಳ / ವರ್ಷದ ಬಳಿಕ ರೆಗ್ಯುಲರ್‌ ಉದ್ಯೋಗವಂತೆ ! (ಅಂತಹ ಕೈಗಾರಿಕೆ ಉಳಿದರೆ ಮತ್ತು ಉದ್ಯೋಗಿಯ ಮನಸ್ಥಿತಿ ಬದಲಾಗದಿದ್ದರೆ). ಸಾಧಾರಣ ಮತ್ತು ಹೇಗಾದರೂ ಪಾಸ್‌ ಮಾಡಿಕೊಂಡ ಎಂಜಿನಿಯರಿಂಗ್‌ ಪದವೀಧರರು ಹೆಚ್ಚಿದ ನಿರುದ್ಯೋಗ ಪ್ರಮಾಣಕ್ಕೆ ಸದ್ಯ ತಮ್ಮ ಕಾಣಿಕೆಯನ್ನಷ್ಟೇ ನೀಡುತ್ತಿದ್ದಾರೆ. ಪ್ರತ್ಯೇಕ ಅಥವಾ ಎಂಜಿನಿಯರಿಂಗ್‌ ಕಾಲೇಜುಗಳೊಂದಿಗೆ ಮೆನೆಜ್‌ಮೆಂಟ್‌ ಕಾಲೇಜ್‌ಗಳೂ ಉದಯಿಸಿದವು. ಇಲ್ಲಿಯ ಪದವೀಧರರ ಪಾಡೂ ಎಂಜಿನಿಯರ್‌ ಪದವೀಧರರಿಗಿಂತ ಭಿನ್ನವಾಗಿಲ್ಲ. ಇತ್ತೀಚೆಗಿನ ವರ್ಷಗಳಲ್ಲಾದ ಇಂತಹ ಬೆಳವಣಿಗೆಗಳಿಂದಾಗಿ ಮತ್ತು ಮಕ್ಕಳ ಹಾಗೂ ಕಾಲೇಜುಗಳ ಸಂಖ್ಯೆಯ ಅನುಪಾತದಲ್ಲಿ ಹೆಚ್ಚಳವಾದ ಕಾರಣ ಎಂಜಿನಿಯರಿಂಗ್‌ ಕಾಲೇಜುಗಳಿಗೆ ವಿದ್ಯಾರ್ಥಿಗಳು ದೊರೆಯದ ಫ‌ಲವಾಗಿ ಹಿಂದಿನ 4 ವರ್ಷಗಳಲ್ಲಿ ದೇಶದಲ್ಲಿ 518 ಎಂಜಿನಿಯರಿಂಗ್‌ ಕಾಲೇಜುಗಳು ಬಂದ್‌ ಆಗಿವೆ.

2019-20ನೇ ಸಾಲಿನಲ್ಲಿ ದೇಶದಲ್ಲಿರುವ 14 ಲಕ್ಷ ಎಂಜಿನಿಯರಿಂಗ್‌ ಪದವಿ, 11 ಲಕ್ಷ ಡಿಪ್ಲೊಮಾ ಮತ್ತು 1.8 ಲಕ್ಷ ಎಂಜಿನಿಯರಿಂಗ್‌ ಸ್ನಾತಕೋತ್ತರ ಸೀಟುಗಳ (ಒಟ್ಟು 26,80,000) ಪೈಕಿ ಭರ್ತಿಯಾದದ್ದು ಕೇವಲ 13 ಲಕ್ಷ ಸೀಟುಗಳು. ಅಂದರೆ ಅರ್ಧದಷ್ಟೂ ಇಲ್ಲ. ಈಗ ಸರಕಾರಕ್ಕೆ ಬುದ್ಧಿಬಂದು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮುಂದಿನೆರಡು ವರ್ಷ ಹೊಸ ಕಾಲೇಜುಗಳ ಆರಂಭಕ್ಕೆ ಬ್ರೇಕ್‌ ಹಾಕಿ ನಿಲ್ಲಿಸಿದೆ. ಮೆನೇಜ್‌ಮೆಂಟ್‌ ಕಾಲೇಜ್‌ಗಳ ಸ್ಥಾಪನೆ ಈ ಮೊದಲೇ ನಿಂತಿದೆ.

ಉನ್ನತ ಶಿಕ್ಷಣ ಪಡೆದು ನಿರುದ್ಯೋಗಿಗಳಾಗಿರುವ ಯುವಜನರ ನೆರವಿಗೆ ಸರಕಾರಗಳು ಈ ಕೂಡಲೇ ಮುಂದಡಿಯಿಡಬೇಕು. ದೇಶಾದ್ಯಂತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಹ ಯೋಜನೆಗಳನ್ನು ಕೈಗೊಳ್ಳಬೇಕು. ಕರ್ನಾಟಕದಲ್ಲಿ ಬೆಂಗಳೂರನ್ನು ಮಾತ್ರ ಬೆಳೆಸುವುದಲ್ಲ. ಎಲ್ಲೆಡೆ, ಅದರಲ್ಲಿಯೂ ಉತ್ತಮ ಸವಲತ್ತುಗಳಿರುವಲ್ಲಿ ಉದ್ಯೋಗ ನೀಡುವಂತಹ ಕೈಗಾರಿಕೆಗಳನ್ನು, ವ್ಯಾಪಾರೋದ್ಯಮವನ್ನು ಬೆಳೆಸಬೇಕು. ಉದ್ಯೋಗ ನೀಡಬಲ್ಲ ಖಾಸಗಿ ಸಂಸ್ಥೆಗಳಿಗೆ / ಉದ್ಯಮಿಗಳಿಗೆ ಬೇಕಾದಂತಹ ಸವಲತ್ತುಗಳನ್ನು, ಮೂಲಸೌಕರ್ಯಗಳನ್ನು ಒದಗಸಿಕೊಡಬೇಕು.

ಜತೆಗೆ, ವಿಶ್ವವಿದ್ಯಾಲಯಗಳ, ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮ ಬದಲಾದ ಕಾಲಕ್ಕೆ ತಕ್ಕಂತೆ ರೂಪಿಸುವಂತಾಗಬೇಕು. ವಿದ್ಯಾರ್ಥಿಗಳ ಆಸಕ್ತಿಯನ್ನು ಪ್ರಾಥಮಿಕ, ಪ್ರೌಢ ಶಾಲಾ ಹಂತದಿಂದಲೇ ಗುರುತಿಸಿ ಅವರಿಗೆ ಮುಂದೆ ಕೈಗೊಳ್ಳಬೇಕಾದ ವಿದ್ಯಾಭ್ಯಾಸದ / ವೃತ್ತಿಯ ಬಗ್ಗೆ ಮಾರ್ಗದರ್ಶನ ನೀಡುವಂತಾದರೆ ಒಳಿತು. ಇದರಲ್ಲಿ ಪಾಲಕರ ಸಹಕಾರವೂ ಅಗತ್ಯ. ತಮ್ಮ ಮಗ / ಮಗಳು ಡಾಕ್ಟರ್‌ / ಎಂಜಿನಿಯರೇ ಆಗಬೇಕೆಂದು ಹಂಬಲಿಸುವ ಬದಲು ಅವರ ಆಸಕ್ತಿಯನ್ನು ತಿಳಿದುಕೊಂಡು ಆ ಪ್ರಕಾರ ಮುಂದಡಿ ಇಡಬೇಕು. ಆಸಕ್ತಿಗೆ ತಕ್ಕಂತೆ ಮುಂದುವರಿದರೆ ಶಿಕ್ಷಣವೂ ಸುಲಭ, ಉದ್ಯೋಗ ಪಡೆಯಲೂ ಸಹಾಯಕಾರಿ.

– ಎಚ್‌. ಆರ್‌. ಆಳ್ವ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.