ಸಾವಿನ ಸಮ್ಮುಖದಲ್ಲಿ ಬದುಕು ಕಳೆಯುವ ಸೈನಿಕರಿಗೆ ಸಂಪ್ರದಾಯಗಳೇ ಆಸರೆ

Team Udayavani, Oct 15, 2019, 5:15 AM IST

ಮಹಾರ್‌ ರೆಜಿಮೆಂಟಿನಲ್ಲಿ ನಡೆಯುವ ಹೋಮದಲ್ಲಿ ಮುಸಲ್ಮಾನ ಬಟಾಲಿಯನ್‌ ಕಮಾಂಡರ್‌ ಪೂರ್ಣಾಹುತಿ ನೀಡುವ, ಸಿಖ್‌ ರೆಜಿಮೆಂಟಿನಲ್ಲಿ ನಡೆಯುವ ಗುರುದ್ವಾರಾ ಸಾಹಿಬ್‌ನಲ್ಲಿ ಕ್ರಿಶ್ಚಿಯನ್‌ ಬಟಾಲಿಯನ್‌ ಕಮಾಂಡರ್‌ ನೇತೃತ್ವವನ್ನು ವಹಿಸುವ ಭವ್ಯ ಪರಂಪರೆ ಇದೆ.

ರಫೆಲ್‌ ಯುದ್ಧ ವಿಮಾನ ಹಸ್ತಾಂತರಿಸುವ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನಡೆಸಿದ ಆಯುಧ ಪೂಜೆಯ ಔಚಿತ್ಯವನ್ನು ಕೆಲವು ರಾಜಕಾರಣಿಗಳು ಮತ್ತು ಪ್ರಗತಿಪರರು ಮೂಢನಂಬಿಕೆಯೆಂದು ಗೇಲಿ ಮಾಡಿದ್ದಾರೆ. ನವರಾತ್ರಿಯಲ್ಲಿ ಕಾರ್ಖಾನೆಗಳಲ್ಲಿ, ಪತ್ರಿಕಾ ಕಾರ್ಯಾಲಯಗಳಲ್ಲಿ, ಸರಕಾರಿ ಆಸ್ಪತ್ರೆ-ಕಚೇರಿಗಳಲ್ಲಿ ಆಯುಧ ಪೂಜೆ ನಡೆಸುವ ಪರಿಪಾಠ ಇದೆ. ಅಣುರೇಣು ತೃಣ ಕಾಷ್ಟದಲ್ಲಿ ಭಗವಂತನನ್ನು ಕಾಣುವ ನಮ್ಮ ಜೀವನ ಪದ್ಧತಿಯಲ್ಲಿ ಸಹಸ್ರಾರು ವರ್ಷಗಳಿಂದ ಪ್ರಕೃತಿ, ಸೂರ್ಯ, ಚಂದ್ರ, ವೃಕ್ಷ, ನದಿ, ಯಂತ್ರಗಳನ್ನು ಪೂಜಿಸುವ ಸಂಪ್ರದಾಯ ಇದೆ. ಅವರವರ ಭಾವಕ್ಕೆ ಅವರವರ ಭಕುತಿಗೆ… ಎನ್ನುವಂತೆ ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಜೀವ ಉಳಿಸುವ ನಿಪುಣ ವೈದ್ಯರೂ ಎಲ್ಲವೂ ಮೇಲಿನವನ ಕೃಪೆ ಎನ್ನುತ್ತಾರೆ. ವಿಜ್ಞಾನಕ್ಕೂ ನಿಲುಕದ ಅಗೋಚರ ಶಕ್ತಿಯ ಇರುವಿಕೆಯನ್ನು ವಿಜ್ಞಾನಿಗಳೂ ಒಪ್ಪುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಜನರ ನಂಬಿಕೆಗೆ ಸಂಬಂಧಿಸಿದ ಭೂಮಿ ಪೂಜೆ, ಶಸ್ತ್ರ ಪೂಜೆಗಳನ್ನು ಸಾರ್ವಜನಿಕವಾಗಿ ಟೀಕಿಸುವವರೂ ಖಾಸಗಿಯಾಗಿ ಅನುಸರಿ ಸುತ್ತಾರೆ. ಹಾಗಿದ್ದ ಮೇಲೆ ಇದರ ವಿರೋಧ ಆಷಾಡ ಭೂತಿತನವಲ್ಲವೇ?

ಬದುಕಿನ ಏರಿಳಿತ, ಕಷ್ಟ, ಸುಖ,ಸಾವು ನೋವುಗಳ ಕಠಿನ ಪಯಣದಲ್ಲಿ ಇಂತಹ ಧಾರ್ಮಿಕ ವಿಧಿ ವಿಧಾನಗಳು ಒಂದಷ್ಟು ಆತ್ಮ ಬಲ, ನೆಮ್ಮದಿ ನೀಡುತ್ತದಾದರೆ ಅದರಿಂದ ಇತರರಿಗೆ ಏನಾದರೂ ತೊಂದರೆ ಇದೆಯೇ? ಇಂತಹ ರೀತಿರಿವಾಜು, ಸಂಪ್ರದಾಯಗಳಿಂದ ಇತರರ ಹಕ್ಕು ಅಥವಾ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆಯೇ? ಇಲ್ಲ ತಾನೆ? ಸೇನೆಯಲ್ಲಿ ನೂರಾರು ವರ್ಷಗಳಿಂದ ನಡೆದು ಬಂದಿರುವ ರಿವಾಜನ್ನು ಅನುಸರಿಸಿದ ರಕ್ಷಣಾ ಮಂತ್ರಿ ಇದುವರೆಗೆ ಯಾರೂ ಮಾಡದಿದ್ದನ್ನು ಏನೂ ಮಾಡಲಿಲ್ಲ ಎನ್ನುವುದು ಪ್ರಾಯಶಃ ಟೀಕಾಕಾರರಿಗೆ ಗೊತ್ತಿರಲಿಕ್ಕಿಲ್ಲ. ಭಾರತೀಯ ಸಂಸ್ಕೃತಿಯನ್ನು ವಿರೋಧಿಸುವುದೇ ಕೆಲವರಿಗೆ ಫ್ಯಾಶನ್‌ ಎನ್ನುವಂತಾಗಿರುವುದು ಖೇದಕರ.

1962ರ ಯುದ್ಧದಲ್ಲಿ ನಾಥೂಲ್ಲಾ ಗಡಿಯಲ್ಲಿ ಚೀನಿ ಸೇನೆಗೆ ಭಾರಿ ಜೀವ ಹಾನಿ ಮಾಡಿ ಹುತಾತ್ಮನಾದ ಸೈನಿಕ ಬಾಬಾ ಹರಭಜನ್‌ ಸಿಂಗ್‌ ಇಂದಿಗೂ ರಾತ್ರಿ ವೇಳೆ ಕುದುರೆ ಏರಿ ಗಡಿಯನ್ನು ಕಾಯುತ್ತಾನೆ ಎನ್ನುವ ನಂಬಿಕೆ ಕೇವಲ ಭಾರತೀಯ ಸೈನಿಕರಲ್ಲಷ್ಟೆ ಅಲ್ಲದೇ ಗಡಿ ಭಾಗದ ಚೀನಿ ಸೈನಿಕರಲ್ಲೂ ಇದೆ. ಆ ನಂಬಿಕೆಯ ಕಾರಣವಾಗಿಯೇ ಭಾರತ-ಚೀನಾ ನಡುವೆ ನಡೆಯುವ ಫ್ಲಾಗ್‌-ಮೀಟಿಂಗ್‌ಗಳಲ್ಲೂ ಬಾಬಾನಿಗಾಗಿ ಒಂದು ಖಾಲಿ ಕುರ್ಚಿ ಇರಿಸಲಾಗುತ್ತದೆ. ರಕ್ತ ಹೆಪ್ಪುಗಟ್ಟಿಸುವ ಹವಾಮಾನದಲ್ಲಿ ಭಯಾನಕ ಗಿರಿ ಶಿಖರ ಕಣಿವೆಯಲ್ಲಿ ಸೇವೆ ಸಲ್ಲಿಸುವ ಜವಾನರಿಗೆ ಬಾಬಾನ ಆತ್ಮ ಇಂದಿಗೂ ಸ್ಫೂರ್ತಿಯ ಸೆಲೆಯಾಗಿದೆ. ಕ್ಯಾಪ್ಟನ್‌ ಹರಭಜನ್‌ ಬಾಬಾನ ಗೌರವಾರ್ಥವಾಗಿ ನಿರ್ಮಿಸಿರುವ ಸಮಾಧಿಯಲ್ಲಿ ಪ್ರತಿನಿತ್ಯ ಇರಿಸುವ ಸೇನಾ ಸಮವಸ್ತ್ರ ಮರುದಿನ ಬಳಸಿದಂತೆಯೂ, ಪಾಲಿಷ್‌ ಮಾಡಿದ ಬೂಟು ಕೊಳೆಯಾದ ಸ್ಥಿತಿಯಲ್ಲಿ ಇರುತ್ತದೆ ಎನ್ನಲಾಗುತ್ತದೆ. ಬಾಬಾನ ಸಮಾಧಿಗೆ ವಾಯು ಮಾರ್ಗದಲ್ಲಿ ತೆರಳುವ ಹಿರಿಯ ಅಧಿಕಾರಿಗಳೂ ಸೆಲ್ಯೂಟ್‌ ನೀಡುತ್ತಾರೆ.

ಕಾಶ್ಮೀರ ಕಣಿವೆಯ ಖೂನೀನಾಳಾ ಎನ್ನುವಲ್ಲಿ ಕರ್ತವ್ಯ ನಿರತನಾಗಿದ್ದಾಗ ಮೃತನಾದ ಸೈನಿಕನೋರ್ವನ ಆತ್ಮ ಇಂದಿಗೂ ಡ್ನೂಟಿಯಲ್ಲಿದ್ದ ಸೈನಿಕ ನಿದ್ದೆ ಹೋದರೆ ಆತನ ಕೆನ್ನೆಗೆ ಹೊಡೆಯುತ್ತದೆ ಎನ್ನುವ ನಂಬಿಕೆ ಇದೆ. ಇಂತಹ ಹಲವಾರು ನಂಬಿಕೆಗಳು ಸೈನಿಕರಲ್ಲಿ ತಮ್ಮ ಕಾರ್ಯವನ್ನು ದಕ್ಷವಾಗಿ ಮಾಡುವ ಹಾಗೂ ಶತ್ರುಗಳನ್ನು ಹೆಡೆಮುರಿಕಟ್ಟಲು ಧೈರ್ಯದಿಂದ ಮುನ್ನುಗ್ಗಲು ಪ್ರೇರಣೆ ನೀಡುತ್ತದಾದರೆ ಅದರಿಂದ ಪ್ರಾಯಶಃ ಯಾರಿಗೂ ತೊಂದರೆಯಾಗದು. ಸೈನಿಕರೂ ಕೂಡಾ ಮನುಷ್ಯರೇ ಆಗಿರುವುದರಿಂದ ಅವರನ್ನು ಸಂವೇದನಾಹೀನರಾಗಿಸುವುದು ಸಾಧ್ಯವಿಲ್ಲ. ಧರ್ಮವನ್ನು ಅಫೀಮು ಎಂದು ಕರೆದ ಚೀನಾದಂತಹ ಕಮ್ಯುನಿಸ್ಟ್‌ ರಾಷ್ಟ್ರಗಳಲ್ಲೂ ಧರ್ಮವಿರೋಧಿ ಸರಕಾರಕ್ಕೆ ಜನರ ಧಾರ್ಮಿಕ ನಂಬಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಲಿಲ್ಲ ಎನ್ನುವುದು ವಾಸ್ತವ.

ಈ ದೇಶವನ್ನು ನೂರಾರು ವರ್ಷ ಮುಸ್ಲಿಮರು ಹಾಗೂ ಅನಂತರ ಆಂಗ್ಲರು ಆಳಿದರೂ ಸೇನೆಯ ಬಟಾಲಿಯನ್‌ಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳ ರೀತಿ-ರಿವಾಜುಗಳು, ಸಂಪ್ರದಾಯಗಳು ಅಡೆತಡೆಯಿಲ್ಲದೆ ನಡೆದು ಬಂದಿದೆ. ಫಿಸಿಕಲ್‌ ಟ್ರೈನಿಂಗ್‌ ಪರೇಡ್‌, ಡ್ರಿಲ್‌ ಪರೇಡ್‌, ವೆಪನ್‌ ಟ್ರೈನಿಂಗ್‌ ಪರೇಡ್‌ ಇದ್ದಂತೆ ಸೇನೆಯಲ್ಲಿ ಸಾಪ್ತಾಹಿಕ ಹಾಗೂ ವಿಶೇಷ ಸಂದರ್ಭಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ, ಪೂಜೆಗೆ ಇಂದಿಗೂ ಮಂದಿರ್‌ ಪರೇಡ್‌ ಎನ್ನಲಾಗುತ್ತದೆ. ಕಾರಣವಿಲ್ಲದೇ ಸೈನಿಕರು ಮಂದಿರ್‌ ಪರೇಡ್‌ನಿಂದ ಗೈರಾಗುವಂತಿಲ್ಲ. ಮಂದಿರ್‌ ಪರೇಡ್‌ನ‌ಲ್ಲಿ ಎಷ್ಟು ಸೈನಿಕರು ಭಾಗವಹಿಸುತ್ತಿದ್ದಾರೆ, ಮಿಕ್ಕವರು ಎಲ್ಲೆಲ್ಲಿ ಇದ್ದಾರೆ ಎನ್ನುವ ಕುರಿತು ಪರೇಡ್‌ ಸ್ಟೇಟ್‌ ತಯಾರಿಸಿ ಸಂಬಂಧಿತ ಮೇಲಧಿಕಾರಿಗೆ ಸಲ್ಲಿಸಲಾಗುತ್ತದೆ.

ಇಂದಿಗೂ ಸೇನೆಯಲ್ಲಿ ಕಾರ್ಯಾಚರಣೆ, ಯುದ್ಧಾಭ್ಯಾಸಗಳಿಗೆ ತೆರಳುವ ಮೊದಲು ಅಲ್ಲಾ, ವಾಹೆ ಗುರೂ, ಭಗವಂತನನ್ನು ಸ್ಮರಿಸುವ, ಮಂದಿರ , ಮಸೀದಿ, ಗುರುದ್ವಾರಾ ಪರೇಡ್‌ ಏರ್ಪಡಿಸುವ ರಿವಾಜಿದೆ. ಆಯುಧ ಪೂಜೆ, ಹೋಮ-ಹವನಗಳಲ್ಲಿ ಬಟಾಲಿಯನ್‌ ಕಮಾಂಡರ್‌ ಹಿಂದೂಯೇತರರಾಗಿದ್ದರೂ ಒಂದಷ್ಟೂ ಚ್ಯುತಿ ಬಾರದಂತೆ ನಡೆಸಲಾಗುತ್ತದೆ. ಸೈನಿಕರು ಪರಸ್ಪರರನ್ನು, ಹಿರಿಯ ಅಧಿಕಾರಿಗಳನ್ನು ಜೈ ಹಿಂದ್‌ ಎಂದು ಸೆಲ್ಯೂಟ್‌ ನೀಡಿ ಗೌರವಿಸುವುದರ ಜತೆಯಲ್ಲೇ ಹಲವು ಬಟಾಲಿಯನ್‌ ಗಳಲ್ಲಿ ರಾಮ್‌ ರಾಮ…, ಜೈ ದುರ್ಗೆ ಎಂದು ಹೇಳುವ ಸಂಪ್ರದಾಯವೂ ಇದೆ. ಮಹಾರ್‌ ರೆಜಿಮೆಂಟಿನಲ್ಲಿ ನಡೆಯುವ ಹೋಮದಲ್ಲಿ ಮುಸಲ್ಮಾನ ಬಟಾಲಿಯನ್‌ ಕಮಾಂಡರ್‌ ಪೂರ್ಣಾಹುತಿ ನೀಡುವ, ಸಿಖ್‌ ರೆಜಿಮೆಂಟಿನಲ್ಲಿ ನಡೆಯುವ ಗುರುದ್ವಾರಾ ಸಾಹಿಬ್‌ನಲ್ಲಿ ಕ್ರಿಶ್ಚಿಯನ್‌ ಬಟಾಲಿಯನ್‌ ಕಮಾಂಡರ್‌ ನೇತೃತ್ವವನ್ನು ವಹಿಸುವ ಭವ್ಯ ಪರಂಪರೆ ಇದೆ. ಧಾರ್ಮಿಕ ರೀತಿ ರಿವಾಜುಗಳು ಸೇನೆಯ ದಿನಚರಿಯ ಅವಿಭಾಜ್ಯ ಅಂಗವಾಗಿವೆ.

ರೈತ, ಕೈ ಬಾಯಿ ಸಂಘರ್ಷದ ದಯನೀಯ ಸ್ಥಿತಿಯಲ್ಲಿರುವ ಕಾರ್ಮಿಕ ವರ್ಗ, ಸಣ್ಣ ವ್ಯಾಪಾರಿ, ಸೈನಿಕರು ಅನಿಶ್ಚಿತ ಬದುಕಿನ ಬವಣೆಯ ನಡುವೆ ತಮ್ಮ ಆತ್ಮಸಂತೋಷದ ಆಸರೆಯಾಗಿ ಅನುಸರಿಸುವ ಆಚರಣೆಗಳಿಂದ ಯಾರಿಗೇನೂ ತೊಂದರೆಯಾಗದೆಂದ ಮೇಲೆ ಅವುಗಳನ್ನು ಲೇವಡಿ ಮಾಡುವ ಅಗತ್ಯವಿಲ್ಲ. ಹವಾಮಾನದ ವೈಪರೀತ್ಯದಿಂದ ಬೆಳೆನಾಶ, ಪೃಕೃತಿ ವಿಕೋಪದಂತಹ ವಿಪತ್ತುಗಳಿಂದ ಕಂಗೆಟ್ಟಿರುವ ರೈತ ನೆಮ್ಮದಿಗಾಗಿ ಪೃಕೃತಿ ಪೂಜೆಗೆ ಶರಣಾಗುತ್ತಾನೆ. ಸಾವಿನ ದವಡೆಗೆ ಕೈ ಹಾಕಲು ಹೊರಟಿರುವ ಸೈನಿಕ ತನ್ನ ಆತ್ಮಸ್ಥೆರ್ಯವನ್ನು ಉಚ್ಚಸ್ಥಿತಿಯಲ್ಲಿಟ್ಟುಕೊಳ್ಳಲು ಪ್ರಾರ್ಥನೆ, ಪೂಜೆಯ ಮೊರೆ ಹೋದರೆ ಅದು ಮೂಢ ನಂಬಿಕೆ ಎನ್ನಲಾಗದು. ನಮ್ಮದೆಲ್ಲವನ್ನೂ ತೆಗಳುವ, ಜೀವನಕ್ಕೆ ಅರ್ಥ ನೀಡಬಲ್ಲ ಆಸರೆಯಾಗಬಲ್ಲ ರೀತಿ ರಿವಾಜುಗಳನ್ನು ವಿರೋಧಿಸಿ ಬರಡಾಗಿಸುವ ಬೊಗಳೆ ವಿಚಾರವಾದಿಗಳನ್ನು ಅಲಕ್ಷಿಸುವುದೇ ಸರಿಯಾದ ಕ್ರಮ.

– ಬೈಂದೂರು ಚಂದ್ರಶೇಖರ ನಾವಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ