ಹೊಸ ಶಿಕ್ಷಣ ನೀತಿ ನವಭಾರತ ಕಲ್ಪನೆ ಸಾಕಾರಗೊಳಿಸಲು ಪೂರಕವಾಗಬಲ್ಲದೇ?

ಬೈಂದೂರು ಚಂದ್ರಶೇಖರ ನಾವಡ, Jun 8, 2019, 6:00 AM IST

ಸಮಿತಿ ಪ್ರಾಚೀನ ನಲಂದಾ ಮತ್ತು ತಕ್ಷಶಿಲಾ ಶಿಕ್ಷಣ ವ್ಯವಸ್ಥೆಯ ವೈಭವವನ್ನು ಮರಳಿ ಸ್ಥಾಪಿಸಲು ನಿಯಮಗಳನ್ನು ಉದಾರಗೊಳಿಸಲು ಶಿಫಾರಸು ಮಾಡಿದೆ. ಉಚ್ಚ ಶಿಕ್ಷಣವನ್ನು ವಿಶ್ವದರ್ಜೆಯ ಹಾಗೂ ಭಾರತೀಯ ಕಲೆ-ಕುಶಲತೆಗೆ ಒತ್ತು ನೀಡುವ ಶಿಕ್ಷಣ ವ್ಯವಸ್ಥೆಯನ್ನಾಗಿಸಲು ಸಲಹೆ ನೀಡಲಾಗಿದೆ. ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ವ್ಯವಸ್ಥೆಗೆ ಸಮಿತಿ ಒಲವು ತೋರಿದೆ.

ಶಿಕ್ಷಣ ಕ್ಷೇತ್ರದಲ್ಲಿ ಅವಶ್ಯಕ ಸುಧಾರಣೆ ಕುರಿತು ವರದಿ ನೀಡಲು ನೇಮಿಸಿದ್ದ ಡಾ| ಕಸ್ತೂರಿರಂಗನ್‌ ನೇತೃತ್ವದ ಸಮಿತಿ ತನ್ನ ಶಿಫಾರಸನ್ನು ಇದೀಗ ತಾನೇ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖರಿಯಾಲ್ ನಿಶಾಂಕ್‌ ಅವರಿಗೆ ಸಲ್ಲಿಸಿದೆ. ಮೋದಿ ಸರಕಾರದ ಕಾರ್ಯಕಾಲದಲ್ಲಿ ನಿರುದ್ಯೋಗ ಹೆಚ್ಚಿದೆ ಎನ್ನುವ ವಿರೋಧ ಪಕ್ಷಗಳ ಆರೋಪದ ನಡುವೆ ಹೊಸ ಸರಕಾರ ಈಗಾಗಲೇ ಚಾಲ್ತಿಯಲ್ಲಿರುವ ಕೌಶಲ್ಯಾಭಿವೃದ್ಧಿಗೆ ಮತ್ತಷ್ಟು ಒತ್ತು ನೀಡುವ ಹಾಗೂ ಅದಕ್ಕೆ ಪೂರಕವಾಗಬಲ್ಲ ಶಿಕ್ಷಣ ವ್ಯವಸ್ಥೆ ಸ್ಥಾಪಿಸುವ ಕುರಿತು ಗಂಭೀರವಾಗಿ ಚಿಂತಿಸುತ್ತಿದೆ ಎನ್ನಲಾಗಿದೆ. ಯುವ ಮತದಾರರ ಭಾರೀ ಒಲವನ್ನು ಗಳಿಸಿ ಚುನಾವಣಾ ವಿಜಯ ಸಾಧಿಸಿದ ಹೊಸ ಸರಕಾರದಲ್ಲಿ ಆರ್ಥಿಕತೆಗೆ ವೇಗ ನೀಡಬೇಕಾದ ವಿತ್ತ ಮಂತ್ರಿಯಷ್ಟೇ ಮಹತ್ವದ ಜವಾಬ್ದಾರಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಯ ಮೇಲೂ ಇದೆ.

ಕಠಿಣ ನಿರ್ಣಯಗಳನ್ನು ತಳೆಯುವಲ್ಲಿ ಹಿಂಜರಿಯದ ಮೋದಿಯವರ ಸರಕಾರಕ್ಕೆ ಈಗ ಭಾರೀ ಬಹುಮತ ಸಿಕ್ಕಿರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತರುವ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸುವಂತಹ ಕೌಶಲ್ಯಾಧರಿತ ಶಿಕ್ಷಣ ವ್ಯವಸ್ಥೆಗೆ ಕ್ರಮಕೈಗೊಳ್ಳುವರೆನ್ನುವ ಅಪಾರ ನಿರೀಕ್ಷೆ ದೇಶದ ಜನತೆಗೆ ಇದೆ. ಯುಪಿಎ ಅವಧಿಯಲ್ಲಿ 4-14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕಾಗಿಸಿ, ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲೂ ಶೇ.25 ಸೀಟುಗಳನ್ನು ಬಡ ವರ್ಗದ ಮಕ್ಕಳಿಗೆ ಮೀಸಲಿಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಮಗುವಿನ ಭವಿಷ್ಯವನ್ನು ಉಜ್ವಲವಾಗಿಸಬಲ್ಲ ಶಿಕ್ಷಣದ ಕುರಿತು ಇತ್ತೀಚಿನ ವರ್ಷಗಳಲ್ಲಿ ಪೋಷಕರಲ್ಲಿ ಜಾಗರೂಕತೆ ಹೆಚ್ಚಿದೆ.

ಶಿಕ್ಷಣದಿಂದ ವಂಚಿತರಾದರೆ ಮಕ್ಕಳ ಬದುಕು ಅತಂತ್ರವಾಗಬಹುದು ಎನ್ನುವ ಆತಂಕ ಅನಕ್ಷರಸ್ಥ ಪೋಷಕರನ್ನೂ ಕಾಡುತ್ತದೆ. ತಾವು ಕಷ್ಟ ಪಟ್ಟಿದ್ದು ಸಾಕು. ತಮ್ಮ ಮಕ್ಕಳು ಸುಖವಾಗಿರಬೇಕಾದರೆ ಅವರಿಗೆ ಉತ್ತಮ ಶಿಕ್ಷಣ ಕೊಡಬೇಕು ಎನ್ನುವ ಹಂಬಲ ಎಲ್ಲಾ ಪೋಷಕರಲ್ಲೂ ಕಾಣಬಹುದು. ಗ್ರಾಮೀಣ ಪೋಷಕರಂತೂ ಹೊಟ್ಟೆಬಟ್ಟೆ ಕಟ್ಟಿಯಾದರೂ ಸರಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಹಂಬಲಿಸುತ್ತಾರೆ. ಉತ್ತಮ ಬದುಕಿಗೆ ಭದ್ರ ಬುನಾದಿ ಹಾಕಬಲ್ಲ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಸುಧಾರಣೆಗಳು ಅಗತ್ಯ. ಈ ನಿಟ್ಟಿನಲ್ಲಿ ಡಾ| ರಮೇಶ್‌ ಪೋಖರಿಯಾಲ್ರಿಂದ ಶಿಕ್ಷಣ ಕ್ಷೇತ್ರದ ನಿರೀಕ್ಷೆ ಬೆಟ್ಟದಷ್ಟಿದೆ. ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಕುರಿತು ಶಿಕ್ಷಣ ತಜ್ಞರಷ್ಟೇ ಅಲ್ಲದೇ ಇಂದಿನ ಜಾಗರೂಕ ಪೋಷಕರು ಸಹಾ ಕುತೂಹಲ ದೃಷ್ಟಿ ನೆಟ್ಟಿದ್ದಾರೆ. ಸಕಾರಾತ್ಮಕ ಬದಲಾವಣೆಯಿಂದ ಸರಕಾರದ ವಿಶ್ವಸನೀಯತೆಯೂ ಹೆಚ್ಚುವುದರಲ್ಲಿ ಸಂದೇಹವಿಲ್ಲ.

ಭಾರತದಲ್ಲಿ ಬ್ರಿಟಿಷರ ಆಗಮನಕ್ಕಿಂತ ಮೊದಲೇ ಗುರುಕುಲ ಪದ್ಧತಿಯ ಉತ್ತಮ ಶಿಕ್ಷಣ ಅಸ್ತಿತ್ವದಲ್ಲಿತ್ತು ಎನ್ನಲಾಗುತ್ತದೆಯಾದರೂ ಅದು ಸಮಾಜದ ವಿಶೇಷ ವರ್ಗಕ್ಕೆ ಸೀಮಿತವಾಗಿತ್ತು ಎನ್ನುವುದೂ ಅಷ್ಟೇ ನಿಜ. ಉಚ್ಚವರ್ಗಕ್ಕೆ ಸೀಮಿತವಾಗಿದ್ದ ಶಿಕ್ಷಣ ವ್ಯವಸ್ಥೆಯಿಂದ ಸಾಮಾನ್ಯ ಜನತೆ ಹೊರಗುಳಿದಿದ್ದರು. ಆ ಕಾರಣದಿಂದಾಗಿಯೇ ತೀರಾ ಇತ್ತೀಚಿನವರೆಗೂ ಮಕ್ಕಳ ಶಿಕ್ಷಣದ ಕುರಿತು ಗ್ರಾಮೀಣ ಪಾಲಕರು ನಿರಾಸಕ್ತರೇ ಆಗಿದ್ದರು. ನಾಲ್ಕೈದು ದಶಕಗಳ ಹಿಂದೆ ಮಕ್ಕಳು ಸ್ವತಃ ಶಾಲೆಗೆ ಹೋಗಲು ಬಯಸಿದರೂ ಪೋಷಕರು ಅವರನ್ನು ಹೊಲಗದ್ದೆಗಳಲ್ಲೋ ದುಡಿಯಲೋ, ದನ-ಕುರಿ ಕಾಯಲೋ ಅಥವಾ ತಮ್ಮ ಕುಲ ಕಸಬುಗಳಲ್ಲೋ ತೊಡಗಿಸಿ ಕೊಳ್ಳಲು ಒತ್ತಾಯಿಸುತ್ತಿದ್ದರು. ಶಾಲೆಗೆ ಹೋಗಲು ನೀನೇನು ದೊರೆ ಮಗನೋ ಎಂದೋ ಅಥವಾ ಶಾಲೆಗೆ ಹೋಗಿ ನೀನೇನು ತಹಸೀಲ್ದಾರನಾಗಬೇಕಾ ಎಂದು ಹಂಗಿಸುವುದು ಮಾಮೂ ಲಾಗಿತ್ತು. ಈಗ ಆ ದಿನಗಳು ಹೊರಟು ಹೋಗಿವೆ. ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ಜೀವನಾಧಾರದ ಹೊಲಗದ್ದೆಗಳನ್ನು ಮಾರಲು, ವಿತ್ತೀಯ ಸಂಸ್ಥೆಗಳ ನೆರವನ್ನು ಪಡೆಯಲೂ ಈಗ ಪೋಷಕರು ಹಿಂಜರಿಯುವುದಿಲ್ಲ. ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿನ ಗುಣ- ದೋಷಗಳ ಕುರಿತು ಜನಸಾಮಾನ್ಯರಲ್ಲಿ ಸಾಕಷ್ಟು ಅಸಮಾಧಾನ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ಮೂಲಕ ಅದರ ಭಾರತೀಕರಣವಾಗಬೇಕಿದೆ.

ಕಸ್ತೂರಿ ರಂಗನ್‌ ಸಮಿತಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಈಗ ಇರುವ ನಿಯಂತ್ರಕ ವ್ಯವಸ್ಥೆ (Regulatory regime) ಹಾಗೂ ಮೌಲ್ಯಮಾಪನ ಪದ್ಧತಿಯನ್ನೂ ಪುನರಚಿಸುವ ಕುರಿತು ಸಲಹೆ ನೀಡಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ 10+2+3 ಬದಲಾಗಿ 5+3+3+3+4 ಶಿಕ್ಷಣ ವ್ಯವಸ್ಥೆಗೆ ಸಮಿತಿ ಒಲವು ತೋರಿದೆ. ಇದರಲ್ಲಿ ಪೂರ್ವ ಪ್ರಾಥಮಿಕ ಮತ್ತು ಒಂದು ಎರಡನೇ ತರಗತಿಯನ್ನೊಳಗೊಂಡ ಮೊದಲ ಐದು ವರ್ಷದ ಫೌಂಡೇಶನಲ್ ಸ್ಟೇಜ್‌, ನಂತರ ಮೂರು ಮೂರು ವರ್ಷದ ಪ್ರಿಪರೇಟರಿ ಹಾಗೂ ಮಿಡ್ಲ್ಸ್ಕೂಲ್ ಹಂತ, ಆ ನಂತರ ನಾಲ್ಕು ವರ್ಷದ ಸೆಕೆಂಡರಿ ಹಂತ ಎಂದು ವಿಂಗಡಿಸಲಾಗಿದೆ. ಸಮಿತಿ ಪ್ರಾಚೀನ ನಲಂದಾ ಮತ್ತು ತಕ್ಷಶಿಲಾ ಶಿಕ್ಷಣ ವ್ಯವಸ್ಥೆಯ ವೈಭವವನ್ನು ಮರಳಿ ಸ್ಥಾಪಿಸಲು ಶಿಕ್ಷಣ ವ್ಯವಸ್ಥೆಯಲ್ಲಿನ ನಿಯಮಗಳನ್ನು ಉದಾರಗೊಳಿಸಲು ಶಿಫಾರಸು ಮಾಡಿದೆ. ಉಚ್ಚ ಶಿಕ್ಷಣವನ್ನು ವಿಶ್ವದರ್ಜೆಯ ಹಾಗೂ ಭಾರತೀಯ ಕಲೆ-ಕುಶಲತೆಗೆ ಒತ್ತು ನೀಡುವ ಶಿಕ್ಷಣ ವ್ಯವಸ್ಥೆಯನ್ನಾಗಿಸಲು ಸಲಹೆ ನೀಡಲಾಗಿದೆ. ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ವ್ಯವಸ್ಥೆಗೆ ಸಮಿತಿ ಒಲವು ತೋರಿದೆ. ಸಂವಿಧಾನದ ಮೌಲ್ಯಗಳ ಅರಿವನ್ನು ಹೆಚ್ಚಿಸುವ, ಸೇವಾ ಭಾವನೆ ಮೂಡಿಸುವ ಶಿಕ್ಷಣ ಖಂಡಿತಾ ಮೋದಿ ಮಹತ್ವಾಕಾಂಕ್ಷೆಯ ನವಭಾರತದ ರಚನೆಗೆ ಸಹಾಯಕವಾಗಬಲ್ಲದು.

ನಮ್ಮ ಶಿಕ್ಷಣ ವ್ಯವಸ್ಥೆಯನ್ನು ವಿಶಾಲ ತಳಹದಿಯ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗೆ ತಕ್ಕಂತೆ ಭವಿಷ್ಯ ಕಂಡು ಕೊಳ್ಳುವಂತಹ ಮಾದರಿ ಶಿಕ್ಷಣ ವ್ಯವಸ್ಥೆಯಾಗಿಸುವ ಯತ್ನ ಸರ್ಕಾರದ ಕಡೆಯಿಂದ ನಡೆಯಬೇಕಿದೆ. ಹಿಂದಿ ಹೇರಲಾಗುತ್ತಿದೆ ಎಂದು ಈಗಾಗಲೇ ತಮಿಳುನಾಡಿನಲ್ಲಿ ಹೊಸ ಶಿಕ್ಷಣ ನೀತಿಗೆ ವಿರೋಧ ವ್ಯಕ್ತವಾಗುತ್ತಿದೆ. ಕಸ್ತೂರಿರಂಗನ್‌ ವರದಿಯಲ್ಲಿ ಸಂಸ್ಕೃತಕ್ಕೆ ನೀಡಿದ ಪ್ರಾಮುಖ್ಯತೆ ಅನೇಕರಿಗೆ ಪಥ್ಯವಾಗಲಿಕ್ಕಿಲ್ಲ. ಭಾಷೆಯ ಮತ್ತು ಸೆಕ್ಯುಲರ್‌ ಹೆಸರಿನಲ್ಲಿ ರಾಜಕಾರಣ ಮಾಡುವವರು ಬೀದಿ ರಂಪಾಟ ಮಾಡುವುದಂತೂ ನಿಶ್ಚಿತ. ಸುಧಾರಣಾ ವಿರೋಧಿಗಳನ್ನು ಎದುರಿಸಬೇಕಾದ ಸವಾಲು ಸರಕಾರದ ಮುಂದಿದೆ. ಶಾಲಾ ಶಿಕ್ಷಣ ಮತ್ತು ಬದುಕಿಗೆ ಆಧಾರವಾಗಬಲ್ಲ ವೃತ್ತಿ ಒಂದಕ್ಕೊಂದು ಪೂರಕವಾಗಿರಬೇಕೆನ್ನುವುದು ಶಿಕ್ಷಣ ತಜ್ಞನಲ್ಲದ ಸಾಮಾನ್ಯ ಪೋಷಕರ ಅಭಿಪ್ರಾಯಕ್ಕೆ ಅನುಗುಣವಾದ ಸರಕಾರದ ನಿರ್ಣಯ ರಾಜಕೀಯದ ವಿರೋಧದ ನಡುವೆಯೂ ಜನಮನ್ನಣೆ ಗಳಿಸುವುದರಲ್ಲಿ ಸಂದೇಹವಿಲ್ಲ. ನೋಟ್ಬ್ಯಾನ್‌, GST ವಿಷಯದಲ್ಲಾದಂತೆ ಜನಹಿತದ ಕಠಿಣ ನಿರ್ಧಾರಗಳನ್ನು ಕೇವಲ ವಿರೋಧಕ್ಕಾಗಿ ವಿರೋಧ ಮಾಡುವ ಬೀದಿ ರಂಪಾಟಗಳು ಜನತಾ ನ್ಯಾಯಾಲಯದಲ್ಲಿ ಬಿದ್ದುಹೋಗುವುದು ನಿಶ್ಚಿತ. ಈ ಕುರಿತು ಪ್ರಸ್ತುತ ಸರಕಾರ ತನ್ನ ಹಿಂದಿನ ಕಾರ್ಯಕಾಲದ ಅನುಭವದ ಮೇಲೆ ನವಭಾರತದ ನಿರ್ಮಾಣಕ್ಕಾಗಿ ಸುದೀರ್ಘ‌ ಕಾಲದಿಂದ ನನೆಗುದಿಗೆ ಬಿದ್ದಿರುವ ಶಿಕ್ಷಣ ಕ್ಷೇತ್ರ ಕಾಯಕಲ್ಪದ ವಿಷಯದಲ್ಲಿ ಮಹತ್ವದ್ದನ್ನು ಸಾಧಿಸುತ್ತದೆನ್ನುವ ಅಪಾರ ನಿರೀಕ್ಷೆ ಜನತೆಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ