ನನಗೆ ಮೊದಲಿನಂತೆ ನಗೆ ಚಟಾಕಿ ಹಾರಿಸಲು ಭಯ

Team Udayavani, Apr 25, 2019, 6:00 AM IST

ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ಗೆ ಪ್ರಧಾನಿ ಮೋದಿ ನೀಡಿರುವ ಸಂದರ್ಶನ ವೈರಲ್‌ ಆಗಿದೆ. ಈ ರಾಜಕೀಯೇತರ, ಲೋಕಾಭಿರಾಮ ಮಾತುಕತೆಯಲ್ಲಿ ಮೋದಿಯವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ…

ಅಕ್ಷಯ್‌ ಕುಮಾರ್‌: ನಾನು ಇವತ್ತು ನಿಮಗೆ ರಾಜಕೀಯ ಪ್ರಶ್ನೆಗಳನ್ನು ಕೇಳುವುದಿಲ್ಲ. ಒಬ್ಬ ವ್ಯಕ್ತಿಯಾಗಿ ನರೇಂದ್ರ ಮೋದಿ ಹೇಗಿದ್ದಾರೆ, ಅವರಿಗೆ ಯಾವ ತಿಂಡಿ ಇಷ್ಟ, ರಾಜಕೀಯವನ್ನು ಹೊರತುಪಡಿಸಿದ ಅವರ ದಿನಚರಿ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಸರ್‌, ಮೊದಲನೆಯದಾಗಿ ನಮ್ಮೊಂದಿಗೆ ಮಾತನಾಡಲು ಒಪ್ಪಿಕೊಂಡದ್ದಕ್ಕೇ ಧನ್ಯವಾದ

ಮೋದಿ: ಇಪ್ಪತ್ತು ನಾಲ್ಕುಗಂಟೆಯೂ ನಾವು ರಾಜನೀತಿಯಲ್ಲೇ ಸಿಕ್ಕಿಬಿದ್ದಿರುತ್ತೇವೆ. ನೀವು ಅದೆಲ್ಲ ವನ್ನೂ ಬಿಟ್ಟು ರಾಜಕೀಯೇತರ ವಿಷಯಗಳನ್ನು ಮಾತನಾಡೋಣ ಎಂದಿದ್ದೀರಿ, ಖಂಡಿತ ನಾನು ಮನಸ್ಸು ಬಿಚ್ಚಿ ಮಾತನಾಡಲು ಇಷ್ಟಪಡುತ್ತೇನೆ.

ಅಕ್ಷಯ್‌ ಕುಮಾರ್‌: ಮುಂದೆ ಜೀವನದಲ್ಲಿ ಪ್ರಧಾನಿಯಾಗುತ್ತೇನೆ ಎಂದು ಊಹಿಸಿದ್ದಿರಾ?
ಮೋದಿ: ನಾನು ಯಾವತ್ತೂ ಯೋಚಿಸಿರಲಿಲ್ಲ, ನನ್ನ ಫ್ಯಾಮಿಲಿ ಬ್ಯಾಕ್‌ಗ್ರೌಂಡ್‌ ನೋಡಿದಾಗ, ಅಲ್ಲಿ ನನಗೆ ಚಿಕ್ಕ ನೌಕರಿ ಸಿಕ್ಕಿದ್ದರೂ ಬಹುಶಃ ನನ್ನ ಅಮ್ಮ ಸುತ್ತಮುತ್ತಲಿನವರಿಗೆಲ್ಲ “ನನ್ನ ಮಗನಿಗೆ ನೌಕರಿ ಸಿಕ್ಕಿದೆ’ ಅಂತ ಬೆಲ್ಲ ತಿನ್ನಿಸಿಬರುತ್ತಿದ್ದಳೇನೋ. ಏಕೆಂ ದರೆ, ಅದನ್ನೂ ಮೀರಿ ನಾವು ಏನನ್ನೂ ಯೋಚಿಸಿರ ಲಿಲ್ಲ, ಹಳ್ಳಿಯನ್ನು ಬಿಟ್ಟು ಬೇರೇನೂ ನೋಡಿರಲಿಲ್ಲ..ಅದ್ಹೇಗೋ ಬದುಕಿನ ಯಾತ್ರೆ ಆರಂಭವಾಗಿಬಿಟ್ಟಿತು, ದೇಶ ನನ್ನನ್ನು ಹೊತ್ತು ಮುನ್ನಡೆದುಬಿಟ್ಟಿತು…

ಅಕ್ಷಯ್‌ ಕುಮಾರ್‌: ಅಂದರೆ ಎಲ್ಲವೂ ಸ್ವಾಭಾವಿಕವಾಗಿ ಆಯಿತು ಅಂತೀರಿ…
ಮೋದಿ: ವ್ಯಕ್ತಿಗತ ದೃಷ್ಟಿಯಿಂದ ನೋಡಿದರೆ ನನಗೆ ಇದೆಲ್ಲ ಅಸ್ವಾಭಾವಿಕ ಎಂದೇ ಅನಿಸುತ್ತದೆ. ಏಕೆಂದರೆ ನನ್ನಂಥ ಹಿನ್ನೆಲೆ ಮತ್ತು ನಾನು ಬಂದಂಥ ಜಗತ್ತಿಗೆ ಈ ಕಾಲದ ರಾಜಕೀಯದಲ್ಲಿ ಜಾಗವೇ ಸಿಗುವುದಿಲ್ಲ. ದೇಶವೇಕೆ ನನ್ನನ್ನು ಇಷ್ಟೊಂದು ಪ್ರೀತಿಸುತ್ತಿದೆ, ಏಕೆ ಇಷ್ಟೆಲ್ಲವನ್ನೂ ಕೊಡುತ್ತಿದೆ ಎಂದು ನನಗೆ ಈಗಲೂ ಆಶ್ಚರ್ಯವಾಗುತ್ತದೆ.

ಅಕ್ಷಯ್‌ ಕುಮಾರ್‌: ಪ್ರತಿಯೊಬ್ಬ ವ್ಯಕ್ತಿಗೂ ಸಿಟ್ಟು ಬರುತ್ತದೆ. ನಿಮಗೆ ಸಿಟ್ಟು ಬಂದಾಗ ಏನು ಮಾಡುತ್ತೀರಿ, ಯಾರ ಮೇಲಾದರೂ ಅದನ್ನು ಹೊರಹಾಕುತ್ತೀರಾ?
ಮೋದಿ: ನಾನು ಅನೇಕ ವರ್ಷಗಳವರೆಗೆ ಮುಖ್ಯಮಂತ್ರಿ ಆಗಿದ್ದವನು, ಪ್ರಧಾನಿಯಾದವನು … ಒಂದು ಮಾತನ್ನಂತೂ ಹೇಳಬಲ್ಲೆ, ಕಾರಕೂನನಿಂದ ಹಿಡಿದು ಮುಖ್ಯ ಕಾರ್ಯದರ್ಶಿ ಯವರೆಗೆ..ಯಾರೊಬ್ಬರ ಮೇಲೂ ನನಗೆ ಸಿಟ್ಟು ತೋರಿಸಿಕೊಳ್ಳುವ ಸಂದರ್ಭ ಬಂದಿಲ್ಲ.
ಸಿಟ್ಟು, ಸೆಡವು, ಅಸಮಾಧಾನ ಎನ್ನುವುದೆಲ್ಲ ಮನುಷ್ಯನ ಸಹಜ ಸ್ವಭಾವಗಳು. ಇವು ಎಲ್ಲರಲ್ಲೂ ಇರುವ ಗುಣಗಳೇ. ಆದರೆ, ನನ್ನ ಬದುಕಿನ ಮೊದಲ ಹದಿನೆಂಟು-19 ವರ್ಷಗಳ ಜೀವನವಿದೆ ಯಲ್ಲ (ಮನೆ ತೊರೆದು ಯಾತ್ರೆ ಕೈಗೊಂಡದ್ದು- ಕಾರ್ಯಕರ್ತನಾಗಿ ದುಡಿದದ್ದು), ಅಲ್ಲಿ ನಾನು ಕಲಿತದ್ದೇನೆಂದರೆ, ಜೀವನವು ನಮಗೆ ಎಲ್ಲವನ್ನೂ ಸಮನಾಗಿ ಕೊಟ್ಟಿರುತ್ತದೆ. ಅದರಲ್ಲಿ ನಾವು ಒಳ್ಳೆಯ ಸಂಗತಿಗಳಿಗೆ ಬಲ ತುಂಬುತ್ತಾ, ಬೆಳೆಸುತ್ತಾ ಹೋಗಬೇಕು. ಆಗ ಮಾತ್ರ ನೆಗೆಟಿವ್‌ ಸಂಗತಿಗಳು ಚಿಕ್ಕದಾಗುತ್ತಾ ಸಾಗುತ್ತವೆ.

ಅಕ್ಷಯ್‌ ಕುಮಾರ್‌: ಆದರೆ, ಹೊರಗಿನ ಜನ ನಿಮ್ಮನ್ನು ಬಹಳ ಶಿಸ್ತು-ಕಟ್ಟುನಿಟ್ಟಿನ ಆಡಳಿತಗಾರ ಎಂದೇ ನೋಡುತ್ತಾರೆ..
ಮೋದಿ: ನೋಡಿ ನಾನು ಶಿಸ್ತಿನ ವ್ಯಕ್ತಿಯೇನೋ ಹೌದು, ಆದರೆ ಹಾಗೆಂದು ಇನ್ನೊಬ್ಬರನ್ನು ಕೀಳುಗೈದು ಕೆಲಸ ಮಾಡಿಸಿಕೊಳ್ಳುವುದಿಲ್ಲ. ಅದರ ಬದಲು ಅವರಿಗೆ ಪ್ರೇರಣೆ ನೀಡುತ್ತೇನೆ. ಕೆಲವೊಮ್ಮೆ ನಾನೇ ಅವರ ಸಹಾಯಕ್ಕೆ ನಿಂತುಬಿಡುತ್ತೇನೆ. ಒಬ್ಬ ವ್ಯಕ್ತಿ ನಮ್ಮೆದುರು ಒಂದು ಫೈಲು ತಂದಿಡುತ್ತಾನೆ ಎಂದುಕೊಳ್ಳಿ, ಅದರಲ್ಲಿ ತಪ್ಪುಗಳಿದ್ದರೆ ಎರಡು ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಕೆಲವರು “ಏ..ಇದೇನು ಬರೆದು ತಂದಿದೀಯಾ’ ಅಂತ ಫೈಲನ್ನು ಎಸೆಯುತ್ತಾರೆ. ನಾನು ಹಾಗೆ ಮಾಡುವುದಿಲ್ಲ, ಆ ತಪ್ಪುಗಳನ್ನು ತೋರಿಸಿ “ಇದನ್ನು ಈ ರೀತಿ ಬರೆದರೆ ಚೆನ್ನಾಗಿರುತ್ತದೆ ಅಲ್ಲವೇ, ನಿನಗೇನನ್ನಿಸುತ್ತದೇ?’ ಎಂದು ತಿದ್ದುತ್ತೇನೆ. ಒಂದು ಹತ್ತು ನಿಮಿಷ ಅವನೊಂದಿಗೆ ಸಮಯ ವ್ಯಯಿಸುತ್ತೇನೆ. ಇದರಿಂದ ಏನಾಗುತ್ತದೆಂದರೆ, ನನಗೆ ಏನು ಬೇಕು ಎನ್ನುವುದು ಅವನಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮುಂದಿನ ಬಾರಿ ಅವನು ಎಲ್ಲವನ್ನೂ ತಿದ್ದಿಕೊಂಡೇ ಫೈಲು ತಂದಿಡುತ್ತಾನೆ. ಅದರ ಬಗ್ಗೆ ತಲೆಕೆಡಿಸಿಕೊ ಳ್ಳುವ ಅಗತ್ಯವೇ ನನಗೆ ಎದುರಾಗುವುದಿಲ್ಲ. ನಾನು ಎಲ್ಲೇ ಹೋದರೂ ಇದೇ ರೀತಿಯೇ ಒಂದು ಟೀಂ ರೆಡಿ ಮಾಡುತ್ತೇನೆ..ಇದರಿಂದಾಗಿ ನನ್ನ ಮೇಲಿನ ಒತ್ತಡ ತಗ್ಗುತ್ತಾ ಹೋಗುತ್ತದೆ. ಸಿಟ್ಟು ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.

ಅಕ್ಷಯ್‌ ಕುಮಾರ್‌: ಅಂದರೆ ನಿಮಗೆ ಸಿಟ್ಟು ಬರುವುದಿಲ್ಲ ಎಂದಾಯಿತು?
ಮೋದಿ: ಒಳಗೆ ಸಿಟ್ಟು ಇದ್ದರೂ, ಅದನ್ನು ವ್ಯಕ್ತಪಡಿಸುವುದಕ್ಕೆ ನನಗೆ ಆಗುವುದಿಲ್ಲ. ಒಂದು ಮೀಟಿಂಗ್‌ ನಡೆಯುತ್ತಿರುತ್ತದೆ ಎಂದುಕೊಳ್ಳಿ, ನಾನು ಸಿಟ್ಟಿನಿಂದ ಕೂಗಾಡಿಬಿಟ್ಟರೆ, ಮೀಟಿಂಗ್‌ನ ಉದ್ದೇಶವೇ ಹಾಳಾಗಿಬಿಡುತ್ತದೆ. ಎಲ್ಲರೂ ನಾನು ಬೈದದ್ದರ ಬಗ್ಗೆಯೇ ತಲೆಕೆಡಿಸಿಕೊಂಡುಬಿಡುತ್ತಾರೆ.

ಅಕ್ಷಯ್‌ ಕುಮಾರ್‌: ನನಗಿನ್ನೂ ನೆನಪಿದೆ. ನೀವು ಮುಖ್ಯಮಂತ್ರಿಯಾಗಿದ್ದಾಗ ನಾನು ಗುಜರಾತ್‌ಗೆ ಬಂದಿದ್ದೆ, ಆಗ ನಿಮಗೆ ಒಂದೆರಡು ಜೋಕು ಹೇಳಿದ್ದೆ…ನೀವು ತುಂಬಾ ಹಾಸ್ಯ ಪ್ರವೃತ್ತಿಯವರು..ಆದರೆ ಈಗ ಪ್ರಧಾನಿಯಾದ ಮೇಲೆ ನಿಮ್ಮ ಬಗ್ಗೆ ಅಭಿಪ್ರಾಯ ಬದಲಾಗಿದೆ. ನಿಮ್ಮ ಸುತ್ತಲಿರುವವರನ್ನು ಮಾತನಾಡಿಸಿದಾಗ, ಅವರೆಲ್ಲ ನೀವು ತುಂಬಾ ಸೀರಿಯಸ್‌ ವ್ಯಕ್ತಿ, ಒಳ್ಳೇ ಸ್ಟ್ರಿಕ್ಟ್ ಹೆಡ್‌ಮಾಸ್ಟರ್‌ ಥರ ಬರೀ ಕೆಲಸ ಮಾಡಿಸುತ್ತೀರಿ ಎಂದೇ ಹೇಳಿದರು. ಪ್ರಧಾನಿಯಾದ ಮೇಲೆ ನಿಮ್ಮಲ್ಲಿ ಆ ಹಾಸ್ಯಪ್ರವೃತ್ತಿ ಮಾಯವಾಗಿದೆಯೇ?

ಮೋದಿ: ನನಗೊಂದು ಸ್ವಭಾವವಿದೆ. ಮನೆಯ ಲ್ಲಿದ್ದಾಗ ನನ್ನ ಅಪ್ಪ ಸ್ವಲ್ಪ ದುಸುಮುಸು ಮಾಡುತ್ತಿ ದ್ದರು ಎಂದರೆ ಅರ್ಧ ನಿಮಿಷದಲ್ಲಿ ಎಲ್ಲರನ್ನೂ ನಕ್ಕುನಗಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿಬಿಡುತ್ತಿದ್ದೆ. ಈಗಲೂ ನಾನು ಹಾಗೆಯೇ ಇದ್ದೇನೆ. ಆದರೆ ಈಗೆಲ್ಲ ಏನಾಗಿದೆಯೆಂದರೆ, ಪ್ರತಿಯೊಂದು ಮಾತಿಗೂ ಅನೇಕ ಅರ್ಥಗಳನ್ನು ಕಲ್ಪಿಸಲಾಗುತ್ತದೆೆ. ನಾನು ತಮಾಷೆಯಿಂದ ಹೇಳಿದ ವಿಷಯವನ್ನು ಅರ್ಧ ಎತ್ತಿಕೊಂಡು ಏನೋ ವಿವಾದ ಮಾಡಲಾಗುತ್ತದೆ, ಅದಕ್ಕೇ ಇನ್ನೇನೋ ಅರ್ಥ ಕಲ್ಪಿಸಲಾಗುತ್ತದೆ. ಅದಕ್ಕೇ ಈಗ ಮೊದಲಿನಂತಿರಲು ನಗೆಚಟಾಕಿ ಮಾಡುತ್ತಾ ಇರಲು ಭಯವಾಗುತ್ತದೆ. ಮಾತು-ಸಂವಾದ ಎಂದ ಮೇಲೆ ಅಲ್ಲಿ ತಮಾಷೆ ಮಾಡುವುದು, ಕೀಟಲೆ ಎಲ್ಲವೂ ಇರಬೇಕು…

ಅಕ್ಷಯ್‌ ಕುಮಾರ್‌: ಒಂದು ವೇಳೆ ನಿಮಗೆ ಅಲಾದ್ದೀನನ ಮಾಯಾವಿ ದೀಪ ಸಿಕ್ಕು, ಅದರಿಂದ ಮಾಂತ್ರಿಕನೊಬ್ಬ ಹೊರಬಂದು, ನಿಮಗೆ ಮೂರು ವರ ಕೊಡಲು ಸಿದ್ಧನಾದನೆಂದರೆ, ಏನು ವರ ಕೇಳುತ್ತೀರಿ?
ಮೋದಿ: ನೋಡಿ ಅಂಥ ಶಕ್ತಿ ಆತನಿಗೆ ಇತ್ತು ಅಂದರೆ ನಾನವನಿಗೆ ಒಂದೇ ಮಾತು ಹೇಳುತ್ತೇನೆ. ನೀನು ನೇರವಾಗಿ ನಮ್ಮ ಶಿಕ್ಷಣತಜ್ಞರ ಬಳಿ ಹೋಗಿ, “ಇನ್ಮುಂದೆ ಮುಂದಿನ ಪೀಳಿಗೆಗೆ ಅಲ್ಲಾದ್ದೀನನ ಮಾಯಾವಿ ಕಥೆ ಹೇಳ್ಳೋದನ್ನ ನಿಲ್ಲಿಸಿ’ ಎಂದು ಅವರಿಗೆ ಆಜ್ಞಾಪಿಸು ಅಂತ. ಯಾರೋ ಮಾಯಾವಿ ಬರುತ್ತಾನೆ, ನಮ್ಮ ಬದುಕು ಬದಲಿಸುತ್ತಾನೆ ಎಂದು ನಾವು ಮಕ್ಕಳಿಗೆ ಕಲಿಸುವುದನ್ನು ನಿಲ್ಲಿಸಬೇಕು, ಪರಿಶ್ರಮವೇ ಯಶಸ್ಸಿನ ದಾರಿ ಎನ್ನುವುದನ್ನು ಕಲಿಸಿಕೊಡಬೇಕು.

ಅಕ್ಷಯ್‌ ಕುಮಾರ್‌: ಆರೋಗ್ಯ ಹೇಗೆ ಕಾಪಾಡಿಕೊಳ್ಳುತ್ತೀರಿ? ನೀವು ಆಯುರ್ವೇದವನ್ನು ಪಾಲಿಸುತ್ತೀರಿ ಎಂದು ಕೇಳಿದ್ದೇನೆ..ನೆಗಡಿಯಾದರೆ ಏನು ಮಾಡ್ತೀರಿ?
ಮೋದಿ: ಮೊದಲನೆಯದಾಗಿ, ಬರೀ ಬಿಸಿನೀರು ಕುಡಿಯುತ್ತೇನೆ, ಇಲ್ಲವೇ 24ರಿಂದ 48 ಗಂಟೆ ಉಪವಾಸ ಮಾಡುತ್ತೇನೆ. ನಾನು ಆಗಲೇ ಹೇಳಿದಂತೆ ಕಷ್ಟದಲ್ಲಿ ಬೆಳೆದವನು. ಆಗೆಲ್ಲ ನಮಗೆ ವೈದ್ಯರು, ಔಷಧೋಪಚಾರ ಎನ್ನುವುದು ಅಷ್ಟಾಗಿ ತಿಳಿದಿರಲಿಲ್ಲ. ಹೀಗಾಗಿ ನಾನೇ ಏನಾದರೂ ಪರಿಹಾರ ಕಂಡುಕೊಳ್ಳುತ್ತಿದ್ದೆ.

ಬಹಳ ವರ್ಷಗಳ ಹಿಂದಿನ ಕಥೆ. ಆಗ ನಾನು ಕೈಲಾಶ್‌ ಯಾತ್ರೆ ಕೈಗೊಂಡಿದ್ದೆ. ಸುಮಾರು 1000 ಕಿಲೋಮೀಟರ್‌ಗಳ ಪಾದಯಾತ್ರೆಯದು. ನನ್ನ ಜೊತೆಗೆ ಇನ್ನೂ ಅನೇಕ ಯಾತ್ರಾರ್ಥಿಗಳೂ ಇದ್ದರು. ವಿಪರೀತ ಚಳಿಯ ಸಮಯ. ಅವರೆಲ್ಲ ಮುಖ ಮುಚ್ಚಿಕೊಂಡಿದ್ದರು, ಕೈಗವಸು ಧರಿಸಿದ್ದರು, ಕೋಟು ತೊಟ್ಟಿದ್ದರು. ನನ್ನ ಬಳಿ ಚಿಕ್ಕದೊಂದು ಜೋಳಿಗೆ, ಒಂದಿಷ್ಟು ಬಟ್ಟೆ , ಅದರೊಳಗೆ ಸಾಸಿವೆ ಎಣ್ಣೆ…ಬಿಟ್ಟರೆ ಬೇರೇನೂ ಇರಲಿಲ್ಲ. ಅದೂ ಕಂಪನಿಯ ಸಾಸಿವೆ ಎಣ್ಣೆಯಲ್ಲ, ಕಚ್ಚಾ ಎಣ್ಣೆ. ಕಚ್ಚಾ ಸಾಸಿವೆ ಎಣ್ಣೆಯ ವಾಸನೆ ತುಂಬಾ ಕೆಟ್ಟದಾಗಿರುತ್ತದೆ. ನಾನು ಅದನ್ನೇ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದೆ….
ಮೂರ್ನಾಲ್ಕು ದಿನಗಳಾದ ನಂತರ, ನನ್ನ ಜೊತೆಗಿದ್ದವರಿಗೆ ಮುಖ ತೊಳೆದುಕೊಳ್ಳುವುದಕ್ಕೂ ಆಗಲಿಲ್ಲ. ಏಕೆಂದರೆ ಚಳಿಗೆ ಅವರ ಮುಖವೆಲ್ಲ ಒಡೆದು ಹೋಗಿತ್ತು, ಆದರೆ ನನಗೆ ಮಾತ್ರ ಏನೂ ಆಗಿರಲಿಲ್ಲ(ನಗುತ್ತಾ), ಅವರೆಲ್ಲ ಬಂದು “ನಿನಗ್ಯಾಕೆ ಏನೂ ಆಗಿಲ್ಲ’ ಎಂದಾಗ, “ಇದನ್ನಷ್ಟೇ ಹಚ್ಚಿಕೊಳ್ಳು ತ್ತೇನೆ’ ಎಂದು ಹೇಳಿದೆ. ಆಮೇಲೆ ಅವರೆಲ್ಲ ರಾತ್ರಿ ನನ್ನ ಬಳಿ ಬಂದು ಸಾಸಿವೆ ಎಣ್ಣೆ ತೆಗೆದುಕೊಂಡು ತಾವೂ ಮುಖಕ್ಕೆ ಹಚ್ಚಿಕೊಳ್ಳಲಾರಂಭಿಸಿದರು!

ಅಕ್ಷಯ್‌ ಕುಮಾರ್‌: ನಿಮ್ಮ ಫ್ಯಾಷನ್‌ ಸೆನ್ಸ್‌ ತುಂಬಾ ಚೆನ್ನಾಗಿದೆ. ನೀಟಾಗಿ ದಾಡಿ ಮಾಡಿಕೊಳ್ಳುತ್ತೀರಿ ಇದನ್ನು ನೀವಾಗೇ ಕಲಿತದ್ದಾ, ಯಾರಾದರೂ ಕಲಿಸಿದರಾ?
ಮೋದಿ: ಒಳ್ಳೆಯ ಪ್ರಶ್ನೆ ಕೇಳಿದಿರಿ. ನನ್ನ ಬಟ್ಟೆಯ ಬಗ್ಗೆಯಂತೂ ತುಂಬಾ ಮಾತನಾಡಲಾಗುತ್ತದೆ. ಸತ್ಯವೇನೆಂದರೆ ನೀಟಾಗಿ ಇರುವುದು ನನ್ನ ಸ್ವಭಾವ. ಇದಕ್ಕೆ ಒಂದು ಕಾರಣವೆಂದರೆ, ಬಡತನದಿಂದಾಗಿ ನನಗೆ ಚಿಕ್ಕವನಿದ್ದಾಗ ಜನರ ನಡುವೆ ಇರಲು ತುಂಬಾ ಕೀಳರಿಮೆ ಕಾಡುತ್ತಿತ್ತು. ಆ ಕೀಳರಿಮೆಯಿಂದ ಹೊರಬರುವ ಕಾರಣಕ್ಕೋ ಏನೋ ನೀಟಾಗಿ ಇರಲು ಆರಂಭಿಸಿದೆ ಎನಿಸುತ್ತದೆ. ಆಗೆಲ್ಲ ನಮ್ಮ ಮನೆಯಲ್ಲಿ ಇಸ್ತ್ರಿ ಪೆಟ್ಟಿಗೆಯೇನೂ ಇರಲಿಲ್ಲ. ಹೀಗಾಗಿ ತಂಬಿಗೆಯಲ್ಲೇ ಇದ್ದಲು ಹಾಕಿ ಬಟ್ಟೆ ಇಸ್ತ್ರಿ ಮಾಡಿಕೊಳ್ಳುತ್ತಿದ್ದೆ. ಆಗ ನನ್ನ ಬಳಿ ಚಪ್ಪಲಿ ಅಥವಾ ಬೂಟೂ ಇರಲಿಲ್ಲ. ಒಮ್ಮೆ ನಮ್ಮ
ಮಾವ ಮನೆಗೆ ಬಂದಾಗ ನನಗೆ ಕ್ಯಾನ್ವಾಸ್‌ನ ಬಿಳಿ ಬೂಟು ಕೊಡಿಸಿಬಿಟ್ಟರು.
ಆ ಕಾಲದಲ್ಲಿ ಅದಕ್ಕೆ 8-10 ರೂಪಾಯಿ ಇತ್ತು ಎನಿಸುತ್ತದೆ. ಬಿಳಿ ಬೂಟು ಕೆಲವೇ ದಿನಗಳಲ್ಲಿ ಹೊಲಸಾಗಿಬಿಡುತ್ತಿದ್ದವು. ಅದಕ್ಕೇ ನಾನೇನು ಮಾಡುತ್ತಿದ್ದೆ ಅಂದರೆ, ಎಲ್ಲಾ ಮಕ್ಕಳೂ ಶಾಲೆಯಿಂದ ಹೊರಗೆ ಹೋದರೂ ಕ್ಲಾಸ್‌ರೂಮ್‌ನಲ್ಲಿ ಇದ್ದು, ಟೀಚರ್‌ ಕೆಳಕ್ಕೆ ಎಸೆದುಹೋಗಿದ್ದ ಚಾಕ್‌ಪೀಸಿನ ತುಂಡುಗಳನ್ನೆಲ್ಲ ಆರಿಸಿಕೊಂಡು ಮನೆಗೆ ತರುತ್ತಿದ್ದೆ. ಅವುಗಳಿಂದಲೇ ನಿತ್ಯ ಪಾಲಿಶ್‌ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದೆ.

ಅಕ್ಷಯ್‌ ಕುಮಾರ್‌: ಟ್ವಿಟರ್‌-ಫೇಸ್‌ಬುಕ್‌ನಲ್ಲಿ ನೀವು ತುಂಬಾ ಸಕ್ರಿಯರಾಗಿದ್ದೀರಿ. ಜನರು ನಿಮ್ಮ ಬಗ್ಗೆ ಆಡುವ ಮಾತುಗಳನ್ನು, ಕಮೆಂಟ್‌ಗಳನ್ನು ನೋಡುತ್ತಿರುತ್ತೀರಾ?
ಮೋದಿ: ಹಾಂ..ನೋಡುತ್ತೇನೆ. ಇದರಿಂದ ಹೊರಗಿನ ಅನೇಕ ಮಾಹಿತಿಗಳು ನನಗೆ ಸಿಗುತ್ತವೆ. ನಾನು ನಿಮ್ಮ ಟ್ವಿಟರ್‌ ಖಾತೆಯನ್ನೂ ನೋಡುತ್ತೇನೆ, ನಿಮ್ಮ ಮಡದಿ ಟ್ವಿಂಕಲ್‌ ಖನ್ನಾರ ಟ್ವೀಟ್‌ಗಳನ್ನೂ ನೋಡುತ್ತೇನೆ! ನನಗನ್ನಿಸುತ್ತದೆ, ಟ್ವಿಂಕಲ್‌ ಖನ್ನಾ ನನ್ನ ಮೇಲೆ ಟ್ವಿಟ್ಟರ್‌ನಲ್ಲಿ ತುಂಬಾ ಸಿಟ್ಟು ಮಾಡಿಕೊಳ್ಳುತ್ತಾರಲ್ಲ, ಇದರಿಂದಾಗಿ ನಿಮ್ಮ ಸಂಸಾರದಲ್ಲಿ ತುಂಬಾ ಶಾಂತಿ ಇರಬಹುದೇನೋ! (ನಗುತ್ತಾ)ಏಕೆಂದರೆ ಅವರ ಸಿಟ್ಟೆಲ್ಲ ನನ್ನ ಮೇಲೆಯೇ ಖರ್ಚಾಗಿ ಬಿಡುತ್ತದೆ! ಒಟ್ಟಲ್ಲಿ ನಾನು ನಿಮಗೆ ಮತ್ತು ಮುಖ್ಯವಾಗಿ ಟ್ವಿಂಕಲ್‌ಜೀಗೆ ಈ ರೀತಿ ಕೆಲಸಕ್ಕೆ ಬಂದೆ!

ಅಕ್ಷಯ್‌ ಕುಮಾರ್‌: ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಬಗ್ಗೆ ತಮಾಷೆಯ ಮೀಮ್‌ಗಳು, ಸಂದೇಶಗಳು ಹರಿದಾಡುತ್ತಿರುತ್ತವೆ. ಅವನ್ನೆಲ್ಲ ನೋಡುತ್ತೀರಾ?
ಮೋದಿ: ನಾನು ಅವನ್ನೆಲ್ಲ ಎಂಜಾಯ್‌ ಮಾಡುತ್ತೇನೆ. ಅದರಲ್ಲಿ ನಾನು ಮೋದಿಗಿಂತಲೂ, ಹೆಚ್ಚಾಗಿ ಕ್ರಿಯೇಟಿವಿಟಿಯನ್ನು ನೋಡುತ್ತೇನೆ. ನನ್ನ ವಿರುದ್ಧವಿರುವ ಮೀಮ್‌ಗಳೂ ಕ್ರಿಯೇಟಿವ್‌ ಆಗಿದ್ದರೆ ಅದನ್ನು ಮೆಚ್ಚುತ್ತೇನೆ.

ನಿನ್ನ ಜತೆಗಿದ್ದು ಏನು ಮಾಡಲಿ ಅಂತಾಳೆ ಅಮ್ಮ

ಅಕ್ಷಯ್‌ ಕುಮಾರ್‌: ನೀವೊಬ್ಬರೇ ಇಷ್ಟು ದೊಡ್ಡ ಮನೆಯಲ್ಲಿದ್ದೀರಿ. ಅಮ್ಮನೊಂದಿಗೆ, ಸಹೋದರರೊಂದಿಗೆ ಜೊತೆಯಾಗಿ ವಾಸಿಸಬೇಕು ಅಂತ ನಿಮಗೆ ಅನಿಸುವುದಿಲ್ಲವಾ?
ಮೋದಿ: ನಾನು ಪ್ರಧಾನಮಂತ್ರಿಯಾದ ಮೇಲೆ ಹುಟ್ಟೂರನ್ನು ತೊರೆದಿದ್ದನೆಂದರೆ ಹಾಗೆ ಅನಿಸುವುದು ಸ್ವಾಭಾವಿಕವಾಗಿತ್ತು. ಆದರೆ ನಾನು ನನ್ನ ಜೀವನದಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ತೊರೆದವನು. ನನಗೀಗ ಹೀಗೆ ಬದುಕುವುದೇ ಅಭ್ಯಾಸವಾಗಿಬಿಟ್ಟಿದೆ. ಆದರೂ ಕೆಲವೊಮ್ಮೆ ಅವರೊಂದಿಗೆ ಸಮಯ ಕಳೆಯಬೇಕು ಅನಿಸುತ್ತದೆ. ಅದಕ್ಕೇ ಕೆಲವೊಮ್ಮೆ ನಾನು ಅಮ್ಮನನ್ನೂ ನನ್ನ ಬಳಿ ಕರೆಸಿಕೊಂಡಿದ್ದೇನೆ. ಆದರೆ, ಅಮ್ಮ ಇಲ್ಲಿಗೆ ಬಂದಾಗ ಅಂದಿದ್ದಳು, “ಯಾಕೆ ನನಗಾಗಿ ನಿನ್ನ ಸಮಯ ಹಾಳು ಮಾಡ್ತೀ. ನಾನು ಊರಿಗೆ ಹೋಗಿಬಿಡುತ್ತೇನೆ, ಅಲ್ಲಿದ್ದರೆ ಅಕ್ಕಪಕ್ಕದ ಜನರು, ಸ್ನೇಹಿತರು ಮಾತನಾಡಿಸಲು ಬರುತ್ತಾರೆ. ಇಲ್ಲಿದ್ದು ನಿನ್ನ ಜೊತೆ ನಾನು ಏನು ಮಾತಾಡಲಿ, ಏನು ಮಾಡಲಿ?’ ಅನ್ನುತ್ತಾಳೆ. ಇನ್ನು ನನಗೂ ಕೂಡ ಯಾರಿಗೂ ಅಷ್ಟೊಂದು ಸಮಯ ಕೊಡಲೂ ಆಗುವುದಿಲ್ಲ. ಇಲ್ಲಿ ಅಮ್ಮ ಬಂದು ಇರುವಾಗೆಲ್ಲ ನಾನು ಕೆಲಸದಲ್ಲಿ ಬ್ಯುಸಿ ಇರುತ್ತಿದ್ದೆ, ರಾತ್ರಿ ನಾನು ಮನೆಗೆ ಬರುವಷ್ಟರಲ್ಲೇ ಹನ್ನೆರಡಾಗಿರುತ್ತಿತ್ತು. ಇದರಿಂದಾಗಿ, ಅಮ್ಮನಿಗೆ ಸಮಯ ಕೊಡಲಾಗುತ್ತಿಲ್ಲ ಎಂದು ಬೇಸರವಾಗುತ್ತದೆ.

ನನಗೊಂದು ಸ್ವಭಾವವಿದೆ. ಚಿಕ್ಕವನಿದ್ದಾಗ ಅಪ್ಪ ಸ್ವಲ್ಪ ದುಸುಮುಸು ಮಾಡಿದರು ಎಂದರೆ ಅರ್ಧ ನಿಮಿಷದಲ್ಲಿ ಎಲ್ಲರನ್ನೂ ನಕ್ಕುನಗಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿಬಿಡುತ್ತಿದ್ದೆ. ಈಗಲೂ ನಾನು ಹಾಗೆಯೇ ಇದ್ದೇನೆ. ಆದರೆ ಈಗೆಲ್ಲ ಏನಾಗಿದೆಯೆಂದರೆ, ಪ್ರತಿಯೊಂದು ಮಾತಿಗೂ ಅನೇಕ ಅರ್ಥಗಳನ್ನು ಕಲ್ಪಿಸಲಾಗುತ್ತದೆ.

ಕಚ್ಚಾ ಸಾಸಿವೆ ಎಣ್ಣೆಯ ವಾಸನೆ ತುಂಬಾ ಕೆಟ್ಟದಾಗಿರುತ್ತದೆ. ನಾನು ಅದನ್ನೇ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದೆ…. ಮೂರ್ನಾಲ್ಕು ದಿನಗಳಾದ ನಂತರ, ನನ್ನ ಜೊತೆಗಿದ್ದವರಿಗೆ ಮುಖ ತೊಳೆದುಕೊಳ್ಳುವುದಕ್ಕೂ ಆಗಲಿಲ್ಲ. ಏಕೆಂದರೆ ಚಳಿಗೆ ಅವರ ಮುಖವೆಲ್ಲ ಒಡೆದು ಹೋಗಿತ್ತು, ಆದರೆ ನನಗೆ ಮಾತ್ರ ಏನೂ ಆಗಿರಲಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ