ರೆಡ್‌ ಮಿ ನೋಟ್‌ 7 ಪ್ರೊಗೆ ಬಂತು ಎದುರಾಳಿ

ಮೊಬೈಲು ಸೀಮೆ

Team Udayavani, Apr 29, 2019, 6:00 AM IST

ರೆಡ್‌ಮಿ ನೋಟ್‌ 7 ಪ್ರೊ ಮೊಬೈಲ್‌ಗೆ ಪೈಪೋಟಿ ನೀಡಲು ಇಂದು ಮಾರುಕಟ್ಟೆಗೆ ಬರಲಿದೆ ರಿಯಲ್‌ ಮಿ 3 ಪ್ರೊ. ಹೆಚ್ಚು ಕಡಿಮೆ ರೆಡ್‌ಮಿ ನೋಟ್‌ 7 ಪ್ರೊ ಗೆ ಹೋಲಿಕೆಯಿರುವಂಥ ತಾಂತ್ರಿಕ ಅಂಶಗಳನ್ನೇ ರಿಯಲ್‌ ಮಿ 3 ಪ್ರೊ ಗೂ ಹಾಕಿ ಬಿಡುಗಡೆ ಮಾಡಲಾಗಿದೆ. ರೆಡ್‌ ಮಿ ನೋಟ್‌ 7 ಪ್ರೊ ಫ್ಲಾಶ್‌ ಸೇಲ್‌ ನಲ್ಲಿ ದೊರಕುತ್ತಿಲ್ಲ ಎಂದು ದೂರುವವರು ಇದರತ್ತ ಒಮ್ಮೆ ದೃಷ್ಟಿ ಹಾಯಿಸಬಹುದು. ಎರಡೂ ಮಾಡೆಲ್‌ಗ‌ಳ ನಡುವೆ ಪೈಪೋಟಿ ಏರ್ಪಡುವುದರಲ್ಲಿ ಸಂದೇಹವಿಲ್ಲ.

ರೆಡ್‌ ಮಿ ನೋಟ್‌ 7 ಪ್ರೊ ಮೊಬೈಲ್‌ ಮಾರುಕಟ್ಟೆಗೆ ಬಿಡುಗಡೆಯಾಗಿ ನಾಲ್ಕು ವಾರಗಳೇ ಆದವು. ಆದರೆ ಶಿಯೋಮಿ ಕಂಪೆನಿಯ ಫ್ಲಾಶ್‌ ಸೇಲ್‌ ತಂತ್ರದಿಂದಾಗಿ ಇದು ಬಹುತೇಕ ಗ್ರಾಹಕರಿಗೆ ದೊರಕುತ್ತಿಲ್ಲ. ಪ್ರತಿ ಬುಧವಾರ ಮಧ್ಯಾಹ್ನ 12ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಾಶ್‌ ಸೇಲ್‌ ಇರುತ್ತದೆ. ಈ ಮೊಬೈಲ್‌ ಕೊಳ್ಳಲು ಆಸಕ್ತಿಯಿರುವ ಅನೇಕರಿಗೆ ಇದುವರೆಗೂ ದೊರೆತಿಲ್ಲ. ರೆಡ್‌ಮಿಗೆ ಪೈಪೋಟಿ ನೀಡಲು ರಿಯಲ್‌ ಮಿ ಕಂಪೆನಿ ಸದಾ ಸಿದ್ಧವಾಗಿ ನಿಂತಿರುತ್ತದೆ. ರೆಡ್‌ಮಿ ನೋಟ್‌ 7 ಪ್ರೊ ಅನ್ನೇ ಗುರಿಯಾಗಿಟ್ಟುಕೊಂಡು ರಿಯಲ್‌ ಮಿ ಕಂಪೆನಿ ರಿಯಲ್‌ ಮಿ 3 ಪ್ರೊ ಎಂಬ ಹೊಸ ಮೊಬೈಲನ್ನು ಇದೀಗ ತಾನೇ ಮಾರುಕಟ್ಟೆಗೆ ತಂದಿದೆ. ಇದರ ಮಾರಾಟ ಇಂದಿನಿಂದ ಅಂದರೆ ಏ. 29ರಿಂದ ಫ್ಲಿಪ್ ಕಾರ್ಟ್‌ನಲ್ಲಿ ಆರಂಭವಾಗಲಿದೆ.

ರಿಯಲ್‌ ಮಿ 3 ಪ್ರೊ ಮೂರು ಆವೃತ್ತಿಗಳಲ್ಲಿ ಬಿಡುಗಡೆಯಾಗಿದೆ. 4ಜಿಬಿ ರ್ಯಾಮ್‌ 64 ಜಿಬಿ ಆಂತರಿಕ ಸಂಗ್ರಹ (ದರ 13,999 ರೂ.), 6 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹ (ದರ 15,999 ರೂ.) ಮತ್ತು 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ (ದರ 16,999 ರೂ.).

ಪ್ರೊಸೆಸರ್‌
ರೆಡ್‌ಮಿ ನೋಟ್‌ 7 ಪ್ರೊ ಗಿಂತ ಉನ್ನತವಾದ ಪ್ರೊಸೆಸರ್‌ ಅನ್ನು ಇದು ಒಳಗೊಂಡಿದೆ. ರೆಡ್‌ಮಿ ನೋಟ್‌ 7 ಪ್ರೊದಲ್ಲಿರುವುದು ಸ್ನಾಪ್‌ಡ್ರಾಗನ್‌ 675 ಪ್ರೊಸೆಸರ್‌. ರಿಯಲ್‌ ಮಿ 3 ಪ್ರೊದಲ್ಲಿರುವುದು ಸ್ನಾಪ್‌ಡ್ರಾಗನ್‌ 710 ಪ್ರೊಸೆಸರ್‌. ಎರಡೂ ಪ್ರೊಸೆಸರ್‌ಗಳಿಗೆ ಅಂಥ ಹೇಳಿಕೊಳ್ಳುವಂಥ ವ್ಯತ್ಯಾಸಗಳೇನಿಲ್ಲ. ಎರಡೂ 8 ಕೋರ್‌ ಪ್ರೊಸೆಸರ್‌ಗಳು. (ಒಂದು ಕೋರ್‌ ಅನ್ನು ಒಂದು ಮಿದುಳು ಎಂದು ಪರಿಗಣಿಸುವುದಾದರೆ ಅಂಥ 8 ಮಿದುಗಳುಗಳುಳ್ಳ ಪ್ರೊಸೆಸರ್‌. ಇಂಥ ಕೋರ್‌ಗಳ ಸಂಖ್ಯೆ ಹೆಚ್ಚಾದಷ್ಟೂ ಪ್ರೊಸೆಸರ್‌ಗಳು ವೇಗವಾಗಿ ಕೆಲಸ ಮಾಡುತ್ತವೆ.ಪ್ರೊಸೆಸರ್‌

ವೇಗವಾದಷ್ಟೂ ಮೊಬೈಲ್‌ ಫೋನ್‌ ಸಹ ವೇಗವಾಗಿ ಕೆಲಸ ಮಾಡುತ್ತದೆ) ರಿಯಲ್‌ಮಿ 3 ಪ್ರೊ ಮೊಬೈಲ್‌ನಲ್ಲಿರುವ 710 ಪ್ರೊಸೆಸರ್‌ನಲ್ಲಿ ಎರಡು ಕೋರ್‌ಗಳು 2.2 ಗಿಗಾಹಟ್ಜ್ ವೇಗವನ್ನೂ, ಇನ್ನು ಆರು ಕೋರ್‌ಗಳು 1.7 ಗಿ.ಹ. ವೇಗವನ್ನೂ ಹೊಂದಿವೆ. ರೆಡ್‌ಮಿ ನೋಟ್‌ 7 ಪ್ರೊ ದಲ್ಲಿರುವ 675 ಪ್ರೊಸೆಸರನ್‌ನಲ್ಲಿ 2 ಕೋರ್‌ಗಳು 2.0 ಗಿ.ಹ. ವೇಗವನ್ನೂ ಇನ್ನು ಆರು ಕೋರ್‌ಗಳು 1.8 ಗಿ.ಹ. ವೇಗವನ್ನೂ ಹೊಂದಿವೆ. ಗೇಮ್‌ ಹೊರತುಪಡಿಸಿದ ಮೊಬೈಲ್‌ ಬಳಕೆಗೆ ಈ ಎರಡೂ ಪ್ರೊಸೆಸರ್‌ ನಡುವೆ ಹೇಳಿಕೊಳ್ಳುವಂಥ ವ್ಯತ್ಯಾಸ ಇರುವುದಿಲ್ಲ.

ಆದರೆ, ಗೇಮಿಂಗ್‌ ವಿಷಯಕ್ಕೆ ಬಂದಾಗ, ಸ್ನಾಪ್‌ಡ್ರಾಗನ್‌ 675 ಅಡ್ರೆನೋ 612 ಜಿಪಿಯು (ಗ್ರಾಫಿಕ್‌ ಪ್ರೊಸೆಸಿಂಗ್‌ ಯೂನಿಟ್‌) ಹೊಂದಿದೆ. ಸ್ನಾಪ್‌ಡ್ರಾಗನ್‌ 710 ಅಡ್ರೆನೋ 616 ಜಿಪಿಯು ಹೊಂದಿದೆ. ಸ್ನಾಪ್‌ಡ್ರಾಗನ್‌ ಕಂಪೆನಿ ಹೇಳುವಂತೆ ಅಡ್ರೆನೋ 616 ಜಿಪಿಯು 612 ಗಿಂತ ಶೇ. 35ರಷ್ಟು ಹೆಚ್ಚು ಶಕ್ತಿಶಾಲಿ ಗ್ರಾಫಿಕ್‌ ರೆಂಡರಿಂಗ್‌ ಹೊಂದಿದೆ. ಹೀಗಾಗಿ ಹೆಚ್ಚು ಸಾಮರ್ಥ್ಯದ ಗೇಮ್‌ಗಳನ್ನಾಡಲು 710 ಪ್ರೊಸೆಸರ್‌ ಹೆಚ್ಚು ಸಮರ್ಥವಾಗಿದೆ. ಅಲ್ಲದೇ, 710 ಪ್ರೊಸೆಸರ್‌ ಫ‌ುಲ್‌ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಬೆಂಬಲಿಸಿದರೆ, 710 4ಕೆ ಡಿಸ್‌ಪ್ಲೇ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ. ಈ ಮೊಬೈಲ್‌ನಲ್ಲಿ ಅಂಡ್ರಾಯ್ಡ 9 ಪೈ, ಕಲರ್‌ ಓಎಸ್‌ 6.0 ಕಾರ್ಯಾಚರಣಾ ವ್ಯವಸ್ಥೆ ಇದೆ.

ಕ್ಯಾಮರಾ
ರಿಯಲ್‌ ಮಿ 3 ಪ್ರೊ 16 ಮತ್ತು 5 ಮೆಗಾಪಿಕ್ಸಲ್‌ ಹಿಂಬದಿ ಕ್ಯಾಮರಾವನ್ನು ಹೊಂದಿದೆ. 16 ಮೆ.ಪಿ. ಕ್ಯಾಮರಾ ಸೋನಿ ಐಎಂಎಕ್ಸ್‌ 519 ಸೆನ್ಸರ್‌ ಹೊಂದಿದೆ. 4ಕೆ ರೆಸ್ಯೂಲೇಷನ್‌ ವಿಡಿಯೋ ತೆಗೆಯಬಹುದಾಗಿದೆ. ಮತ್ತು 960 ಎಫ್ಪಿಎಸ್‌ ಸ್ಲೋ ಮೋಷನ್‌ ವಿಡಿಯೋಗಳನ್ನು ಚಿತ್ರೀಕರಿಸಬಹುದು, (ಮಕ್ಕಳು ಆಡುವ ಓಡುವ, ನೆಗೆಯುವ ದೃಶ್ಯಗಳನ್ನು ತೆಗೆದು ಪ್ಲೇ ಮಾಡಿದರೆ ನೋಡಲು ಚೆನ್ನಾಗಿರುತ್ತದೆ) ಸೆಲ್ಫೀ ಕ್ಯಾಮರಾ 25 ಮೆಗಾಪಿಕ್ಸಲ್‌ ಇದೆ. ಬ್ಯಾಟರಿ: ಬ್ಯಾಟರಿ ಜಾಸ್ತಿ ಬೇಕು ಎನ್ನುವವರಿಗೆ ರಿಯಲ್‌ ಮಿ 3 ಪ್ರೊ ಉತ್ತಮ ಅಂಶ ನೀಡಿದೆ. ಇದರಲ್ಲಿ 4045 ಎಂಎಎಚ್‌ ಬ್ಯಾಟರಿ ಇದೆ. ಹಾಂ, ಇಷ್ಟೇ ಅಲ್ಲ ವೇಗದ 5 ವಿ, 4 ಎ ಚಾರ್ಚರ್‌ ಕೂಡ ನೀಡಲಾಗಿದೆ.

ಒಪ್ಪೋ, ವಿವೋ, ರಿಯಲ್‌ ಮಿ ಕಂಪೆನಿಗಳಲ್ಲಿ ವೇಗದ ಜಾರ್ಜರ್‌ಗೆ ವೂಕ್‌ ಫ್ಲಾಶ್‌ ಚಾರ್ಜ್‌ ಎಂಬ ಹೆಸರಿಡಲಾಗಿದೆ. (ಒನ್‌ ಪ್ಲಸ್‌ ನಲ್ಲಿರುವ ವೇಗದ ಚಾರ್ಜರ್‌ ಅನ್ನು ಡ್ಯಾಶ್‌ ಚಾರ್ಜ್‌ ಎನ್ನಲಾಗುತ್ತದೆ.) ರಿಯಲ್‌ಮಿ 3 ಪ್ರೊ ದಲ್ಲಿರುವ ವೂಕ್‌ ಚಾರ್ಜರ್‌ 30 ನಿಮಿಷದಲ್ಲಿ ಶೇ. 50ರಷ್ಟು ಬ್ಯಾಟರಿ ಚಾರ್ಜ್‌ ಆಗುತ್ತದೆ ಎಂದು ಕಂಪೆನಿ ಹೇಳುತ್ತದೆ. ಆದರೆ ಇದರಲ್ಲಿ ಟೈಪ್‌ ಸಿ ಪೋರ್ಟ್‌ ಇಲ್ಲ, ಮೈಕ್ರೋ ಯುಎಸ್‌ಬಿ ಎಂಬುದು ನೆನಪಿರಲಿ. 10 ನಿಮಿಷ ಚಾರ್ಜ್‌ ಮಾಡಿದರೆ 71 ನಿಮಿಷಗಳ ಕಾಲ ಪಬ್‌ಜಿ ಗೇಮ್‌ ಆಡಬಹುದಂತೆ ಅಥವಾ 328 ನಿಮಿಷ ಕರೆ ಮಾಡಬಹುದಂತೆ. ಅಥವಾ 1294 ನಿಮಿಷ ಸಂಗೀತ ಆಲಿಸಬಹುದಂತೆ. ಅಥವಾ 100 ನಿಮಿಷಗಳ ಕಾಲ 1080ಪಿ ವಿಡಿಯೋಗಳನ್ನು ನೋಡಬಹುದಂತೆ!

ಡಿಸ್‌ಪ್ಲೇ
ಇದರಲ್ಲಿ 6.3 ಇಂಚು ಫ‌ುಲ್‌ ಎಚ್‌ ಡಿ ಪ್ಲಸ್‌ (2340 x 1080) ಡಿಸ್‌ಪ್ಲೇ ಇದೆ. ಈಗಿನ ಮೊಬೈಲ್‌ಗ‌ಳಲ್ಲಿರುವಂತೆ ನೀರಿನ ಹನಿಯಂಥ ಜಾಗ ಬಿಟ್ಟು ಪರದೆ ಪೂರ್ತಿ ಡಿಸ್‌ಪ್ಲೇ ಇರುತ್ತದೆ. ರಿಯಲ್‌ ಮಿ ಇದಕ್ಕೆ ಡ್ನೂ ಡ್ರಾಪ್‌ ಡಿಸ್‌ಪ್ಲೇ ಎನ್ನುತ್ತದೆ. ಪರದೆಗೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ರಕ್ಷಣೆ ಇದೆ. ಎರಡು ಸಿಮ್‌ ಹಾಕಿಕೊಂಡು ಜೊತೆಗೆ ಒಂದು ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಸೌಲಭ್ಯ ಇದರಲ್ಲಿದೆ. ಎರಡೂ ಸಿಮ್‌ ಸ್ಲಾಟ್‌ಗೂ 4 ಜಿ ವೋಲ್ಟ್ ಸಿಮ್‌ ಹಾಕಿಕೊಳ್ಳಬಹುದು. ನೀಲಿ ಮತ್ತು ಕಾರ್ಬನ್‌ ಗ್ರೇ ಬಣ್ಣಗಳಲ್ಲಿ ದೊರಕುತ್ತದೆ.

ಎಲ್ಲ ಜಾಣ ತುಸು ಕೋಣ ಎಂಬಂತೆ, ರಿಯಲ್‌ ಮಿ ಈ ಮೊಬೈಲ್‌ನ ದೇಹ ರಚನೆಯಲ್ಲಿ ಕಾಂಪ್ರೊಮೈಸ್‌ ಮಾಡಿಕೊಂಡಿದೆ. ಅಂದರೆ ಇದರಲ್ಲಿ ಲೋಹ ಅಥವಾ ಗಾಜಿನ ದೇಹ ಇಲ್ಲ. ಎಂದಿನಂತೆ ಪ್ಲಾಸ್ಟಿಕ್‌ ಕವಚ ಹೊಂದಿದೆ. ರೆಡ್‌ ಮಿ ನೋಟ್‌ 7 ಪ್ರೊ ಲೋಹದ ದೇಹ ಮತ್ತು ಪ್ಲಾಸ್ಟಿಕ್‌ ಫ್ರೆಮ್ ಹೊಂದಿದೆ. ಮಾರುಕಟ್ಟೆಯಲ್ಲಿ ರೆಡ್‌ ಮಿ ನೋಟ್‌ 7 ಪ್ರೊ ಮತ್ತು ರಿಯಲ್‌ ಮಿ 3 ಪ್ರೊ ನಡುವೆ ಪೈಪೋಟಿ ಏರ್ಪಡಲಿದೆ.

— ಕೆ.ಎಸ್‌. ಬನಶಂಕರ ಆರಾಧ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಾಬಲ್ಯ ಸಾಧಿಸಿರುವ ರೆಡ್‌ಮಿ ಮೊಬೈಲ್‌ ತನ್ನ ನೂತನ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ರೆಡ್‌ಮಿ ಕೆ 20 ಮತ್ತು ರೆಡ್‌ಮಿ ಕೆ 20...

  • ಎಲ್ಲ ವಾಹನಗಳಲ್ಲೂ ಏರ್‌ ಫಿಲ್ಟರ್‌ ಎಂಬ ಒಂದು ಸಾಧನವಿದೆ. ಇದು ಹೊರಗಿನ ಗಾಳಿಯನ್ನು ಫಿಲ್ಟರ್‌ ಮಾಡಿ ಇಂಧನ ದಹನಕ್ಕೆ ಸೂಕ್ತವಾದ ಗಾಳಿಯನ್ನು ಒದಗಿಸಿಕೊಡುತ್ತದೆ....

  • ಮಣಿಪಾಲ: ಹೊಸ ಟ್ರೆಂಡ್‌ಗಳು ರೂಪುಗೊಳ್ಳುತ್ತಾ ಹೋದಂತೆ ಯುವಜನತೆ ಅದಕ್ಕೆ ಬೇಗನೇ ಸ್ಪಂದಿಸುತ್ತಾರೆ. ಈ ಬದಲಾವಣೆ ಪರ್ವ ಇದೀಗ ವಾಹನಗಳ ಮೇಲೂ ನೆಟ್ಟಿದೆ. ವಿಶೇಷ...

  • ಆಂಗ್ಲ ಭಾಷೆಯಲ್ಲಿ "ಹೆಕ್ಟರ್‌' ಎಂಬ ಪದಕ್ಕೆ ಅಬ್ಬರಿಸುವುದು ಎಂಬ ಅರ್ಥವಿದೆ. ಅದೇ ಹೆಸರಿನ ಈ ಎಸ್‌.ಯು.ವಿ ಕಾರು, ಹೆಸರಿಗೆ ತಕ್ಕಂತೆ ಸದ್ದು ಮಾಡುತ್ತಲೇ ಮಾರುಕಟ್ಟೆಗೆ...

  • ಬೆಂಗಳೂರು: ಪರಿಸರ ಕಾಳಜಿಗೆ ಒತ್ತು ನೀಡುತ್ತಿರುವ ಭಾರತದ ಜನತೆಯ ಅಭಿರುಚಿ ಅರಿತಿರುವ ಹ್ಯುಂಡೈ ಸಂಸ್ಥೆ, ಮೊದಲ ಬಾರಿಗೆ ವಿದ್ಯುತ್‌ ಚಾಲಿತ "ಕೋನಾ ಎಲೆಕ್ಟ್ರಿಕ್‌'...

ಹೊಸ ಸೇರ್ಪಡೆ