ಭಾರಿ ದುಬಾರಿ!

ಆ್ಯಪಲ್‌ ಉತ್ಪನ್ನ ಯಾಕೆ ದುಬಾರಿ?

Team Udayavani, Nov 4, 2019, 4:07 AM IST

ಒಮ್ಮೆ ಆ್ಯಪಲ್‌ ಉತ್ಪನ್ನವನ್ನು ಬಳಸಿದವರು ಜಗತ್ತಿನ ಯಾವುದೇ ಉಪಕರಣವನ್ನು ಬಳಸಲು ಇಚ್ಛಿಸಲಾರರು ಎನ್ನುತ್ತಿದ್ದ ಕಾಲವೊಂದಿತ್ತು. ಆರಂಭದಿಂದಲೂ ಆ್ಯಪಲ್‌ ಕಂಪನಿಯ ಉತ್ಪನ್ನಗಳಿಗೆ ದುಬಾರಿ ಬೆಲೆ ನಿಗದಿಪಡಿಸುತ್ತಿದ್ದರು. ಅದರ ಹಿಂದಿರುವ ನಾನಾ ಲೆಕ್ಕಾಚಾರಗಳು ಯಾವುವು ಗೊತ್ತಾ?

ಆ್ಯಪಲ್‌ ಎಂದರೆ ಸೇಬು. ಆದರೆ, ಅದರ ಅರ್ಥವನ್ನೇ ಮರೆಯಿಸಿ ಎಲೆಕ್ಟ್ರಾನಿಕ್‌ ಉಪಕರಣಗಳ ನೆನಪು ತರಿಸಿದ್ದರ ಖ್ಯಾತಿ ಜಗತ್ತಿನ ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆ “ಆ್ಯಪಲ್‌’ನದು. ಆ್ಯಪಲ್‌ ಎಂದರೆ ಪಕ್ಕನೆ ನೆನಪಾಗುವ ವ್ಯಕ್ತಿ, ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸ್ಟೀವ್‌ ಜಾಬ್ಸ್. ಜನರು ಬಳಸುವ ಉಪಕರಣವನ್ನು ಕೊಡುವುದಷ್ಟೇ ಅಲ್ಲ, ಅವರು ದೀರ್ಘ‌ ಕಾಲ ಹೆಮ್ಮೆಯಿಂದ ಆಭರಣದಂತೆ ಜತನದಿಂದ ಕಾಪಾಡಿಕೊಳ್ಳಬಹುದಾದ ಉತ್ಪನ್ನವನ್ನು ಒದಗಿಸಬೇಕು ಎನ್ನುವುದು ಆತನ ನಿಲುವಾಗಿತ್ತು.

ಅದನ್ನೇ ಧ್ಯೇಯ ವಾಕ್ಯದಂತೆ ಸಂಸ್ಥೆ ಪಾಲಿಸಿಕೊಂಡು ಬಂದಿದೆ. ಆ್ಯಪಲ್‌ ಮೇಲಿರುವ ಒಂದೇ ಒಂದು ಮುಖ್ಯವಾದ ದೂರು ಎಂದರೆ, ಅದರ ದುಬಾರಿ ಬೆಲೆ. ಹೀಗಾಗಿ, ಜನಸಾಮಾನ್ಯರು ಆ್ಯಪಲ್‌ ಉತ್ಪನ್ನವನ್ನು ಖರೀದಿಸುವುದೆಂದರೆ ಅದೊಂದು ಬಲುದೊಡ್ಡ ಸಂಗತಿ. ಅದಕ್ಕಾಗಿ ಒಂದು ಪೂರ್ವ ತಯಾರಿಯನ್ನೇ ಮಾಡಿಕೊಳ್ಳಬೇಕು. ಈಗೀಗ ಆ್ಯಪಲ್‌ನ ಐಫೋನ್‌ಗಳು ಜನರಿಗೆ ಹಿಂದಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆಯಾದರೂ ಪ್ರೀಮಿಯಂ (ಹೈ ಎಂಡ್‌) ಉತ್ಪನ್ನಗಳು ಈಗಲೂ ದುಬಾರಿಯೇ.

ಹಿಂದೆಲ್ಲಾ ಜೀವನದಲ್ಲಿ ಒಮ್ಮೆಯಾದರೂ ಆ್ಯಪಲ್‌ ಉತ್ಪನ್ನವನ್ನು ಖರೀದಿಸಬೇಕು ಎನ್ನುವುದು ಬಹುಜನರ, ಅದರಲ್ಲೂ ಗ್ಯಾಜೆಟ್‌ ಗೀಳು ಹತ್ತಿಸಿಕೊಂಡ ಕಾಲೇಜು ಹುಡುಗರ ಬಯಕೆಯಾಗಿರುತ್ತಿತ್ತು. ಈಗ ಹಿಂದಿನಷ್ಟು ಕ್ರೇಝ್ ಇಲ್ಲ ಎನ್ನುವುದೇನೋ ನಿಜ. ಆದರೂ ಅದರ ಉತ್ಪನ್ನಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ತನ್ನ ಉತ್ಪನ್ನಗಳ ತಯಾರಿಯ ಖರ್ಚಿಗಿಂತ ಎರಡರಷ್ಟು ಹೆಚ್ಚಿನ ಬೆಲೆಯನ್ನು ಆ್ಯಪಲ್‌ ನಿಗದಿಪಡಿಸುತ್ತದೆ ಎಂದು ಮಾರುಕಟ್ಟೆಯ ಪರಿಣತರು ಅಭಿಪ್ರಾಯಪಡುತ್ತಾರೆ. ಅಷ್ಟು ಹೆಚ್ಚಿಗೆ ಬೆಲೆ ನಿಗದಿಪಡಿಸುವುದರ ಹಿಂದೆ ನಾನಾ ಕಾರಣಗಳಿವೆ.

ಸುದೀರ್ಘ‌ ಪ್ರಾಡಕ್ಟ್ ಸಪೋರ್ಟ್‌: ಅನೇಕ ಉಪಕರಣಗಳು ವರ್ಷಗಳು ಉರುಳುತ್ತಿದ್ದಂತೆ ಹಳತಾಗಿ ತನ್ನ ಮೌಲ್ಯವನ್ನು ಕಳೆದುಕೊಂಡುಬಿಡುತ್ತವೆ. ಆದರೆ ಆ್ಯಪಲ್‌, ತನ್ನ ಯಾವ ಉಪಕರಣಗಳಿಗೂ ಆ ಸ್ಥಿತಿ ಒದಗಲು ಬಿಡುವುದಿಲ್ಲ. ಹೀಗಾಗಿಯೇ ವರ್ಷಗಳ ಬಳಕೆಯ ನಂತರವೂ ಆ್ಯಪಲ್‌ ತನ್ನ ಉತ್ಪನ್ನಕ್ಕೆ ಪ್ರಾಡಕ್ಟ್ ಸಪೋರ್ಟ್‌ ಒದಗಿಸುತ್ತದೆ. ಅಷ್ಟೇ ಅಲ್ಲದೆ, ಆ ಹಳೆಯ ಉತ್ಪನ್ನವನ್ನು ಅಪ್‌ಗ್ರೇಡ್‌ ಮಾಡುವ (ಉನ್ನತ ದರ್ಜೆಗೆ ಏರಿಸುವ) ಸವಲತ್ತನ್ನು ಒದಗಿಸುತ್ತಿರುತ್ತದೆ.

ಉದಾಹರಣೆಗೆ, ಮ್ಯಾಕ್‌ಬುಕ್‌ ಏರ್‌ ಲ್ಯಾಪ್‌ಟಾಪ್‌ನ ಬೆಲೆ 71,000 ರೂ. ಆಸುಪಾಸಿನಲ್ಲಿದೆ. ಹಳೆಯ ಈ ಮಾಡೆಲ್‌ಗೆ ಕೆಲ ವರ್ಷಗಳ ಹಿಂದಷ್ಟೇ ಹೊಸ ರೂಪ ನೀಡಿ,ಪರದೆ, ಪ್ರಾಸೆಸರ್‌, ಫಿಂಗರ್‌ಪ್ರಿಂಟ್‌ ಸವಲತ್ತನ್ನು ಒದಗಿಸಿ ಮತ್ತೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಬೆಲೆ ಹಿಂದಿನದಕ್ಕಿಂತ ಶೇ. 20ರಷ್ಟು ಜಾಸ್ತಿ ಇತ್ತು!

ಪ್ರತಿಷ್ಠೆಗೂ ಚಾರ್ಜ್‌ ಆಗುತ್ತೆ: ಐಫೋನ್‌ ಒಂದರ ಬೆಲೆ 70,000 ರೂ. ಅಂತಿಟ್ಟುಕೊಳ್ಳೋಣ. ಅದರ ತಯಾರಿಗೆ ತಗುಲಿರುವ ವೆಚ್ಚ ಎಷ್ಟು ಕಡಿಮೆಯಂದರೆ 28,000 ರೂ! ಇದು ಎಂಜಿನಿಯರ್‌ಗಳು ಐಫೋನ್‌ಅನ್ನು ಬೇಧಿಸಿ, ಬಿಚ್ಚಿ ಹೊರತೆಗೆದು, ಹೊರಹಾಕಿರುವ ಲೆಕ್ಕಾಚಾರ. ಇದು ಅಧಿಕೃತವಲ್ಲದಿದ್ದರೂ ನಂಬಲರ್ಹ ಮೂಲದಿಂದ ಸಿಕ್ಕ ಮಾಹಿತಿ. ಆ್ಯಪಲ್‌ ಉತ್ಪನ್ನಗಳ ಬೆಲೆ ಹೆಚ್ಚುವುದಕ್ಕೆ ಇನ್ನೊಂದು ಕಾರಣವೆಂದರೆ ಅದರ ಬ್ರ್ಯಾಂಡ್‌ ಮೌಲ್ಯ.

ಆ್ಯಪಲ್‌ ಸಂಸ್ಥೆಯ ಲೋಗೋಗಳನ್ನು ನೀವು ಕಾರು, ಬೈಕು, ಕಂಪ್ಯೂಟರ್‌, ಶರ್ಟುಗಳ ಮೇಲೆಲ್ಲಾ ನೋಡಿರಬಹುದು. ಆ್ಯಪಲ್‌ ಉತ್ಪನ್ನವನ್ನು ಹೊಂದುವುದೆಂದರೆ ಅದು ಪ್ರತಿಷ್ಟಿತ ವಿಷಯ. ಇದೇ ಕಾರಣಕ್ಕೆ ಸ್ಟೇಟಸ್‌ ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಸಂಸ್ಥೆಯ ಉತ್ಪನ್ನಗಳನ್ನು ಕೊಳ್ಳುವವರಿದ್ದಾರೆ. ಈ ಪ್ರತಿಷ್ಠೆಗೂ ಸಂಸ್ಥೆ ಶುಲ್ಕ ಚಾರ್ಜ್‌ ಮಾಡುತ್ತದೆ. ಅದನ್ನು ಬೆಲೆಯಲ್ಲಿಯೇ ಸೇರಿಸಿಬಿಡುತ್ತದೆ.

ಸಂಶೋಧನೆ ಮತ್ತು ಅಭಿವೃದ್ಧಿ: ಆ್ಯಪಲ್‌ನ ಯಶಸ್ಸಿನ ಗುಟ್ಟು ಅಡಗಿರುವುದೇ ಇಲ್ಲಿ. ರೀಸರ್ಚ್‌ ಅ್ಯಂಡ್‌ ಡೆವೆಲಪ್‌ಮೆಂಟ್‌ (ಆರ್‌ ಅ್ಯಂಡ್‌ ಡಿ) ವಿಭಾಗವೇ ಸಂಸ್ಥೆಯ ಶಕ್ತಿಶಾಲಿ ಅಂಗ. ಮಿಕ್ಕ ಸಂಸ್ಥೆಗಳು ಒಂದೆರಡು ವರ್ಷಗಳಲ್ಲಿ ಅಳಿದುಹೋಗುವ ತಂತ್ರಜ್ಞಾನವನ್ನು ನೀಡುತ್ತದೆ. ಕೆಲ ಸಂಸ್ಥೆಗಳಲ್ಲಿ “ಆರ್‌ ಅ್ಯಂಡ್‌ ಡಿ’ ವಿಭಾಗವೇ ಇರುವುದಿಲ್ಲ. ಅಂಥ ಸಂಸ್ಥೆಗಳು ಇತರೆ ಸಂಸ್ಥೆಗಳಿಂದ ತಂತ್ರಜ್ಞಾನವನ್ನು ದುಡ್ಡು ಕೊಟ್ಟ ಖರೀದಿಸುತ್ತವೆ.

ಆದರೆ, ಆ್ಯಪಲ್‌ ದಶಕಗಳ ಕಾಲ ಉಳಿಯುವಂಥ, ದೀರ್ಘ‌ ಕಾಲ ಬಾಳಿಕೆ ಬರುವಂಥ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಅದರಿಂದ ಪ್ರೇರಣೆ ಪಡೆದ ಇತರೆ ಕಂಪನಿಗಳು ಆ್ಯಪಲ್‌ ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತವೆ. ಆರ್‌ ಅ್ಯಂಡ್‌ ಡಿ ವಿಬಾಗ ಎಂದರೆ ಅಲ್ಲಿ ಕೇವಲ ತಾಂತ್ರಿಕ ಪರಿಣತರಷ್ಟೇ ಅಲ್ಲ, ವಿಜ್ಞಾನಿಗಳೂ ಇರುತ್ತಾರೆ. ಅವರು ಸದಾ ಭವಿಷ್ಯದ ತಂತ್ರಜ್ಞಾನಗಳ ನ್ನು ಅಭಿವೃದ್ದಿಪಡಿಸುವುದರಲ್ಲೇ ಮುಳುಗಿರುತ್ತಾರೆ. ಅದಕ್ಕೆ ತಗುಲುವ ವೆಚ್ಚವೂ ಭಾರಿಯಾದುದು. ಆ್ಯಪಲ್‌ ಉತ್ಪನ್ನಗಳೇ ಬೆಲೆ ಹೆಚ್ಚುವುದಕ್ಕೆ ಇದೇ ಪ್ರಮುಖ ಕಾರಣ.

ಸ್ವಂತ ಸಾಫ್ಟ್ವೇರ್‌ಗಳು!: ಆ್ಯಪಲ್‌ ಉತ್ಪನ್ನ ಖರೀದಿಸುವವರು ಕೇವಲ ಉತ್ಕೃಷ್ಟ ಗುಣಮಟ್ಟದ ಯಂತ್ರೋಪಕರಣವನ್ನಷ್ಟೇ ಒಯ್ಯುವುದಿಲ್ಲ. ಭದ್ರತೆಗೆ ಹೆಸರಾದ ಆಪರೇಟಿಂಗ್‌ ಸಿಸ್ಟಮ್‌, ಐ ಕ್ಲೌಡ್‌(ಇಂಟರ್ನೆಟ್‌ನಲ್ಲಿ ಡಾಟಾ ಸಂಗ್ರಹಿಸುವ ತಾಣ), ಆ್ಯಪ್‌ ಸ್ಟೋರ್‌, ಐ ಮೆಸೇಜ್‌ ಮುಂತಾದ ಸವಲಕತ್ತುಗಳನ್ನೂ ಅದರೊಡನೆ ಒಯ್ಯುತ್ತಾರೆ. ಮಿಕ್ಕ ಲ್ಯಾಪ್‌ಟಾಪ್‌ ಸಂಸ್ಥೆಗಳು ಪ್ರತಿಯೊಂದು ಸಾಫ್ಟ್ವೇರನ್ನೂ ಬೇರೆಡೆಗಳಿಂದ ಖರೀದಿಸಿ ಅಳವಡಿಸುತ್ತಾರೆ.

ಆದರೆ ಆ್ಯಪಲ್‌, ಆಪರೇಟಿಂಗ್‌ ಸಿಸ್ಟಮ್‌ನಿಂದ ಹಿಡಿದು ಪ್ರತಿ ಸಾಫ್ಟ್ವೇರನ್ನೂ ತಾನೇ ಸಿದ್ಧಪಡಿಸುತ್ತದೆ. ಇದರಿಂದಾಗಿಯೇ ಆ್ಯಪಲ್‌ ಉಪಕರಣಗಳು ಹೆಚ್ಚು ಸುರಕ್ಷಿತ ಹಾಗೂ ಭದ್ರ. ಅಂದರೆ, ವಿಂಡೋಸ್‌ ಉಪಕರಣಗಳನ್ನು ಹ್ಯಾಕ್‌ ಮಾಡುವಷ್ಟು ಸುಲಭವಾಗಿ ಆ್ಯಪಲ್‌ನ ಉತ್ಪನ್ನಗಳನ್ನು ಹ್ಯಾಕ್‌ ಮಾಡಲಾಗದು. ಅಲ್ಲದೆ ವೈರಸ್‌ಗಳ ಕಾಟವೂ ಹೆಚ್ಚಿರುವುದಿಲ್ಲ. ಬೆಲೆ ಹೆಚ್ಚಳವಾಗುವುದಕ್ಕೆ ಅದೂ ಒಂದು ಕಾರಣ.

* ಹವನ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ