ವಿಶ್ವ ಗುಬ್ಬಿ ದಿನ 2021 : ಈ ದಿನದ ಹಿನ್ನೆಲೆ ಗೊತ್ತಾ?
Team Udayavani, Mar 20, 2021, 1:44 PM IST
ನವದೆಹಲಿ : ಪ್ರತೀ ವರ್ಷ ಮಾರ್ಚ್ 20 ವಿಶ್ವ ಗುಬ್ಬಿ ದಿನವನ್ನಾಗಿ ಪ್ರಪಂಚಂದಾದ್ಯಂತ ಆಚರಿಸಲಾಗುತ್ತದೆ. ಇದರ ಮೂಲ ಉದ್ದೇಶ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಗುಬ್ಬಚ್ಚಿಯು ಮನೆ ಚಪ್ಪರದಲ್ಲಿ ಗೂಡು ಕಟ್ಟಿಕೊಂಡು ಸ್ವತಂತ್ರವಾಗಿ ಬದುಕುತ್ತಿತ್ತು. ಕೆಲವು ಬಾರಿ ಮನೆಯ ಒಳಗಡೆ ಬಂದು ಸದ್ದು ಮಾಡುತ್ತ ಬದುಕುತ್ತಿತ್ತು. ಆದ್ರೆ ದಿನಗಳೆದಂತೆ ಶಬ್ದ ಮಾಲೀನ್ಯ ಹೆಚ್ಚಾಗಿದ್ದು, ಗುಬ್ಬಿಯ ಸಂತತಿ ಕ್ಷೀಣಿಸಿದೆ.
ವಿಶ್ವ ಗುಬ್ಬಚ್ಚಿ ದಿನವನ್ನು ಭಾರತದ ನೇಚರ್ ಫಾರೆವರ್ ಸೊಸೈಟಿ, ಇಕೋ-ಸಿಸ್ ಆಕ್ಷನ್ ಫೌಂಡೇಶನ್ (ಫ್ರಾನ್ಸ್) ಮತ್ತು ಪ್ರಪಂಚದಾದ್ಯಂತದ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಗುಬ್ಬಚ್ಚಿ ಮತ್ತು ಇತರ ಪಕ್ಷಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಾರಂಭಿಸಲಾಗಿದೆ.
ಗುಬ್ಬಚ್ಚಿ ದಿನದ ಇತಿಹಾಸ : ಮೊಟ್ಟ ಮೊದಲ ಬಾರಿಗೆ 2010 ಮಾರ್ಚ್ 20 ರಂದು ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ಇದಾದ ಮೇಲೆ ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲಿ ಪ್ರತೀ ವರ್ಷ ಮಾರ್ಚ್ 20 ರಂದು ಗುಬ್ಬಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದ ನೇಚರ್ ಫಾರೆವರ್ ಸೊಸೈಟಿಯನ್ನು ಭಾರತೀಯ ಸಂರಕ್ಷಣಾವಾದಿ ಮೊಹಮ್ಮದ್ ದಿಲವಾರ್ ಸ್ಥಾಪನೆ ಮಾಡುತ್ತಾರೆ. ಅವರು ಮನೆ ಗುಬ್ಬಚ್ಚಿಯ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ.
2021ರ ಗುಬ್ಬಚ್ಚಿ ದಿನದ ಥೀಮ್ I love Sparrows. ಇದೇ ಹಿನ್ನೆಲೆಯಲ್ಲಿ ಗುಬ್ಬಿಗಳ ಸಂತತಿಯನ್ನು ರಕ್ಷಣೆ ಮಾಡುವುದರ ಜೊತೆ ಜೀವ ವೈವಿದ್ಯತೆಯನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗುವುದೇ ಈ ವರ್ಷದ ಗುಬ್ಬಿ ದಿನದ ಧ್ಯೇಯವಾಗಿದೆ. ಮಾನವ ಮತ್ತು ಗುಬ್ಬಿಗಳ ನಡುವಿನ ಬಾಂಧವ್ಯ ಸುಮಾರು 10,000 ವರ್ಷಗಳಿಂದ ಇದೆ.
ಈ ಮೂಲಕ ನಾವುಗಳು ಗೂಡುಗಳನ್ನು ನಿರ್ಮಿಸಿ, ಬೇಸಿಗೆಯಲ್ಲಿ ಗುಬ್ಬಚ್ಚಿಗಳಿಗೆ ನೀರು ಹಾಕುವುದು, ಪಕ್ಷಿಯನ್ನು ರಕ್ಷಿಸಲು ಉದ್ಯಾನ ಸಿದ್ದ ಮಾಡುವುದು. ಅಲ್ಲದೆ ಮನೆಗಳ ಚಾವಣಿ ಮೇಲೆ ಪಕ್ಷಿಗಳು ವಾಸಿಸಲು ಅನುವು ಮಾಡುಕೊಡುವುದೇ ವಿಶ್ವ ಗುಬ್ಬಿ ದಿನಕ್ಕೆ ನಾವು ಸಲ್ಲಸುವ ಗೌರವ.