CONNECT WITH US  

ಅಲಸ್ಟೇರ್‌ ಕುಕ್‌ 263; ಇಂಗ್ಲೆಂಡಿಗೆ ಮೊದಲ ಇನ್ನಿಂಗ್ಸ್‌ ಮುನ್ನಡೆ

ಅಬುಧಾಬಿ: ಆರಂಭಿಕ ಆಟಗಾರ ಅಲಸ್ಟೇರ್‌ ಕುಕ್‌ ಅವರ ಅಮೋಘ ದ್ವಿಶತಕದಿಂದಾಗಿ ಇಂಗ್ಲೆಂಡ್‌ ತಂಡವು ಪಾಕಿಸ್ಥಾನ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬಹುತೇಕ ದಿನಪೂರ್ತಿ ಆಡಿದ ಕುಕ್‌ ಅವರು ಇತರ ಆಟಗಾರರ ಉಪಯುಕ್ತ ನೆರವಿನಿಂದ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. 3 ವಿಕೆಟಿಗೆ 290 ರನ್ನಿನಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ತಂಡವು ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 569 ರನ್‌ ಪೇರಿಸಿದೆ. ಇಂಗ್ಲೆಂಡ್‌ ಈಗಾಗಲೇ 46 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದಿದೆ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ಪಂದ್ಯ ಡ್ರಾಗೊಳ್ಳುವುದು ಖಚಿತವಾಗಿದೆ.

ಪಾಕ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಕುಕ್‌ ಎರಡು ಉತ್ತಮ ಜತೆಯಾಟದಲ್ಲಿ ಪಾಲ್ಗೊಂಡು ತಂಡ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಲು ನೆರವಾದರು. ರೂಟ್‌ ಜತೆ ಐದನೇ ವಿಕೆಟಿಗೆ 141 ರನ್‌ ಪೇರಿಸಿದ ಕುಕ್‌ ಆಬಳಿಕ ಬೆನ್‌ ಸ್ಟೋಕ್ಸ್‌ ಜತೆ ಆರನೇ ವಿಕೆಟಿಗೆ 91 ರನ್‌  ಪೇರಿಸಿದರು. ರೂಟ್‌ 85 ಮತ್ತು ಸ್ಟೋಕ್ಸ್‌ 57 ರನ್‌ ಹೊಡೆದರು.

ಮಹೋನ್ನತ ಇನ್ನಿಂಗ್ಸ್‌ ಆಡಿದ ಕುಕ್‌ 528 ಎಸೆತ ಎದುರಿಸಿ 263 ರನ್‌ ಹೊಡೆದರು. 18 ಬೌಂಡರಿ ಬಾರಿಸಿದ್ದರು. 120ನೇ ಟೆಸ್ಟ್‌ ಆಡಿದ ಅವರು 27 ಶತಕ ಸಿಡಿಸಿದ್ದಾರೆ. 294 ರನ್‌ ಹೊಡೆದಿರುವುದು ಅವರ ಗರಿಷ್ಠ ಸಾಧನೆಯಾಗಿದೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ ಪ್ರಥಮ ಇನ್ನಿಂಗ್ಸ್‌ 8 ವಿಕೆಟಿಗೆ 523 ಡಿಕ್ಲೇರ್‌x; ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌ 8 ವಿಕೆಟಿಗೆ 569 (ಅಲಸ್ಟೇರ್‌ ಕುಕ್‌ 263, ಮೊಯಿನ್‌ ಅಲಿ 35, ಇಯಾನ್‌ ಬೆಲ್‌ 63, ಜೋ ರೂಟ್‌ 85, ಬೆನ್‌ ಸ್ಟೋಕ್ಸ್‌ 57, ಜೋ ಬಟ್ಲರ್‌ 23, ವಹಾಬ್‌ ರಿಯಾಜ್‌ 116ಕ್ಕೆ 3, ಶೋಯಿಬ್‌ ಮಲಿಕ್‌ 97ಕ್ಕೆ 2).

ಕುಕ್‌ ಸಾಧನೆಯ ಝಲಕ್‌
* ಅಲಸ್ಟೇರ್‌ ಕುಕ್‌ ಈವರೆಗೆ ಆಡಿದ ಎಲ್ಲ 9 ದೇಶಗಳಲ್ಲಿ ಶತಕ ಹೊಡೆದ ವಿಶ್ವದ ದ್ವಿತೀಯ ಕ್ರಿಕೆಟಿಗನೆನಿಸಿದರು. ಮೊದಲಿಗ ರಾಹುಲ್‌ ದ್ರಾವಿಡ್‌.

* ಕುಕ್‌ 9 ಸಲ 150 ಪ್ಲಸ್‌ ರನ್‌ ಹೊಡೆದ 4ನೇ ಆರಂಭಿಕ ಬ್ಯಾಟ್ಸ್‌ಮನ್‌. ಉಳಿದವರೆಂದರೆ ಸೆಹವಾಗ್‌ (14), ಗಾವಸ್ಕರ್‌ (11), ಲೆನ್‌ ಹಟನ್‌ (10) ಮತ್ತು ಗ್ರೇಮ್‌ ಸ್ಮಿತ್‌ (9). ಇನ್ನೊಂದು 150 ಪ್ಲಸ್‌ ರನ್‌ ಹೊಡೆದರೆ ಲೆನ್‌ ಹಟನ್‌ ಅವರ ಇಂಗ್ಲೆಂಡ್‌ ದಾಖಲೆಯನ್ನು (10) ಕುಕ್‌ ಸರಿದೂಗಿಸಲಿದ್ದಾರೆ.

* ಕುಕ್‌ ಏಶ್ಯಾದಲ್ಲಿ ಅತೀ ಹೆಚ್ಚು 8 ಶತಕ ಹೊಡೆದ ಏಶ್ಯಾದಾಚೆಯ ಆಟಗಾರನೆಂಬ ಜಾಕ್‌ ಕ್ಯಾಲಿಸ್‌ ದಾಖಲೆಯ್ನು ಸರಿದೂಗಿಸಿದರು.

* ಕುಕ್‌ ಏಶ್ಯಾದಲ್ಲಿ ಅತೀ ಹೆಚ್ಚು ರನ್‌ ಹೊಡೆದ ಹೊರಗಿನ ಆಟಗಾರರ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ (1,970). ಕ್ಯಾಲಿಸ್‌ಗೆ ಅಗ್ರಸ್ಥಾನ (2,058). ಈ ದ್ವಿಶತಕದ ವೇಳೆ ಚಂದರ್‌ಪಾಲ್‌ (1,889) ಹಾಗೂ ಪಾಂಟಿಂಗ್‌ (1,850) ದಾಖಲೆಯನ್ನು ಕುಕ್‌ ಮುರಿದರು.

* ಕುಕ್‌ ಏಶ್ಯಾದಲ್ಲಿ ಅತೀ ಹೆಚ್ಚು 4 ಸಲ 150 ಪ್ಲಸ್‌ ರನ್‌ ಬಾರಿಸಿದ ಹೊರಗಿನ ಬ್ಯಾಟ್ಸ್‌ಮನ್‌ ಎನಿಸಿದರು. 

ಬೋರ್ಡರ್‌, ಲಾಯ್ಡ, ಲಾರಾ, ಫ್ಲೆಮಿಂಗ್‌, ಡಿ ವಿಲಿಯರ್ ತಲಾ 3 ಸಲ 150 ಪ್ಲಸ್‌ ರನ್‌ ಬಾರಿಸಿದ್ದಾರೆ.

* ಕುಕ್‌ 2015ರಲ್ಲಿ ಸರ್ವಾಧಿಕ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು (1,170). ಈ ವರ್ಷ ಟೆಸ್ಟ್‌ನಲ್ಲಿ ಸಾವಿರ ರನ್‌ ಪೂರೈಸಿದ ಬ್ಯಾಟ್ಸ್‌ಮನ್‌ ಇಂಗ್ಲೆಂಡಿನವರೇ ಆದ ಜೋ ರೂಟ್‌ (1,086).

Trending videos

Back to Top