ಪಾಕ್ ವಾಯುನೆಲೆ ಮೇಲೆ ಉಗ್ರರ ದಾಳಿ: 42 ಬಲಿ

ಪೇಶಾವರ: ಇಲ್ಲಿನ ಸೇನಾ ನೆಲೆ ಮತ್ತು ಅದರೊಳಗಿನ ಮಸೀದಿ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ 29 ಜನರನ್ನು ಹತ್ಯೆ ಮಾಡಿದ್ದಾರೆ. ಇದೇ ವೇಳೆ ಭದ್ರತಾ ಪಡೆ ನಡೆಸಿದ ಪ್ರತಿದಾಳಿಗೆ 13 ಉಗ್ರರು ಬಲಿಯಾಗಿದ್ಧಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು "ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್' ಸಂಘಟನೆ ಹೊತ್ತುಕೊಂಡಿದೆ.
ಶುಕ್ರವಾರ ಬೆಳಗ್ಗೆ ಎರಡು ತಂಡಗಳಲ್ಲಿ ಬಡಾಬೇರ್ ವಾಯುನೆಲೆಗೆ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದ ಉಗ್ರರು, ಮೊದಲು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದರು. ಬಳಿಕ ಒಳಗಿನ ಮಸೀದಿ ಮೇಲೆ ದಾಳಿ ಮಾಡಿ ಅಲ್ಲಿ ಪ್ರಾರ್ಥಿಸುತ್ತಿದ್ದವರ ಮೇಲೆ ಎರಗಿದರು. ಈ ವೇಳೆ ಸೇನಾ ಸಿಬ್ಬಂದಿ ಸೇರಿ 29 ಜನ ಸಾವನ್ನಪ್ಪಿದರು. ಉಗ್ರರು ಸೇನಾ ಸಮವಸ್ತ್ರದಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.