CONNECT WITH US  

ಕಲಾ ವೈಭವಕ್ಕೆ ಧಾರಾನಗರಿ ಸಜ್ಜು

ಧಾರವಾಡ: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಧಾರವಾಡ ಜಿಲ್ಲಾ ಉತ್ಸವಕ್ಕೆ ಧಾರಾನಗರಿ ಮಧುವನಗಿತ್ತಿಯಂತೆ ಸಿಂಗಾರಗೊಂಡಿದ್ದು, ಸಂಜೆ 6:00ಗಂಟೆಗೆ ಅಧಿಕೃತವಾಗಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬಣ್ಣದ ದೀಪಗಳು ಕೆಸಿಡಿ ಮೈದಾನವನ್ನು ಆವರಿಸಿಕೊಂಡಿದ್ದು, 66*48 ಚದುರ ಅಡಿಯ ಭವ್ಯವಾದ ವೇದಿಕೆ ಸಜ್ಜಾಗಿದೆ. 25 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರು ಹಾಗೂ ಮಾಧ್ಯಮದವರಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಯಲ್ಲಿ ಹೈಓಲ್ಟೆಜ್‌ ಬಲ್ಬಗಳು ಭಾರಿ ಬೆಳಕು ಹೊರ ಸೂಸುತ್ತಿದ್ದು, 50ಕ್ಕೂ ಹೆಚ್ಚು ಧ್ವನಿವರ್ಧಕಗಳು ಮತ್ತು ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಖ್ಯಾತ ಕಲಾವಿದರ ಸಂಗೀತ ರಸಮಂಜರಿ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ವೇದಿಕೆಯನ್ನು ಹೈಟೆಕ್‌ ಆಗಿಯೇ ನಿರ್ಮಿಸಲಾಗಿದೆ.

ಕಲಾ ಕಾಲೇಜಿನ ಆವರಣವು ಸಂಪೂರ್ಣ ಝಗಮಗಿಸುವ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದು, ಅಲ್ಲಿಂದ ಜ್ಯುಬಿಲಿ ವೃತ್ತದ ವರೆಗೂ ದೀಪಾಲಂಕಾರ ಮತ್ತು ಗಣ್ಯರ ಕಟೌಟಗಳು ರಾರಾಜಿಸುತ್ತಿವೆ. ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಅವರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪ್ರಹ್ಲಾದ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ನಿಗಮ ಮಂಗಳಿಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ನಾಡೋಜ ಡಾ| ಪಾಟೀಲ ಪುಟ್ಟಪ್ಪ, ಹಿರಿಯ ಸಾಹಿತಿ ಡಾ| ಹೇಮಾ ಪಟ್ಟಣಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್‌ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಮಂಜುನಾಥ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಉತ್ಸವದ ಪೂರ್ವ ತಯಾರಿ ಮುಗಿದಿದ್ದು, ಕಲಾವಿದರ ಆಯ್ಕೆ, ಕಲಾ ತಂಡಗಳ ಆಯ್ಕೆ ಹಾಗೂ ಹೊರ ರಾಜ್ಯದ ಹೆಸರಾಂತ ಕಲಾವಿದರ ಆಯ್ಕೆ ನಡೆದು ಅವರಿಗೆಲ್ಲರಿಗೂ ಆಮಂತ್ರಣ ನೀಡಲಾಗಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದ್ದು, ಈ ಸಂಬಂಧ ಆಯಾ ಸಮಿತಿಗಳು ಅಂತಿಮಗೊಳಿಸಿದ ಕಲಾವಿದರನ್ನೆ ಆಯ್ಕೆ ಮಾಡಲಾಗಿದೆ.

500ಕ್ಕೂ ಹೆಚ್ಚು ಪೊಲೀಸ್‌: ನಿರೀಕ್ಷೆಯಂತೆ ಗೋಲ್ಡ್‌ಕಾರ್ಡ್‌, ಸಿಲ್ವರ್‌ ಹಾಗೂ ಪ್ಯಾಮಿಲಿ ಕಾರ್ಡ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಕಳೆದ ವರ್ಷದ ಧಾರವಾಡ ಉತ್ಸವದ ವೇಳೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಜನ ಸಮೂಹವನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ತಲಾ 30 ಜನ ಪೊಲೀಸರು ಇರುವ ಕೆಎಸ್‌ಆರ್‌ಪಿಯ 4 ತುಕುಡಿಗಳು, 250 ಜನ ಪೊಲೀಸರು, 50 ಜನ ಹೋಮ್‌ಗಾರ್ಡ್ಸ್‌ ಭದ್ರತೆಗೆ ಸಜ್ಜಾಗಿದ್ದಾರೆ.

ಕೆಲವು ಕಡೆಗಳಲ್ಲಿ ಈ ಬಾರಿ 50ಕ್ಕೂ ಹೆಚ್ಚು ಜನ ಖಾಸಗಿ ಸೆಕ್ಯೂರಿಟ್‌ ಗಾರ್ಡ್‌ಗಳನ್ನು ನೇಮಿಸಲಾಗಿದೆ. ಆಯಕಟ್ಟಿನ ಸ್ಥಳದಲ್ಲಿ ಬಂದೋಬಸ್ತ್ಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ನಿಂತುಕೊಂಡೆ ಕಾರ್ಯಕ್ರಮ ವೀಕ್ಷಣೆ ಮಾಡುವುದಕ್ಕೂ ಸ್ಥಳಾವಕಾಶ ಮಾಡಲಾಗಿದೆ.
ಆಕರ್ಷಕ ಮೆರವಣಿಗೆ: ಧಾರವಾಡ ಉತ್ಸವದ ಅಂಗವಾಗಿ ಡಿ.26ರಂದು ಮಧ್ಯಾಹ್ನ 2:00ಗಂಟೆಗೆ ನಗರದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಿಂದ ಭವ್ಯ ಮೆರವಣಿಗೆ ಪ್ರಾರಂಭವಾಗಲಿದೆ. ಸುಮಾರು 60 ಕಲಾ ತಂಡಗಳು ಮತ್ತು 45 ಸ್ಥೂಲ ಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಆಲೂರು ವೆಂಕಟರಾವ್‌ (ಜ್ಯೂಬಿಲಿ ಸರ್ಕಲ್‌) ಮೂಲಕ, ಸುಭಾಸ ರಸ್ತೆ, ಗಾಂಧಿಧಿ ಚೌಕ್‌, ಕಾಮನಕಟ್ಟಿ, ಹೊಸಯಲ್ಲಾಪುರ ಮೂಲಕ ಕ್ರಮಿಸುವ ಮೆರವಣಿಗೆಯು ವನಿತಾ ಸೇವಾ ಸಮಾಜ, ಲೈನ್‌ ಬಜಾರ್‌, ಹನುಮಂತ ದೇವಸ್ಥಾನಗಳನ್ನು ತಲುಪಿ ಪುನಃ ಜ್ಯುಬಿಲಿ ಸರ್ಕಲ್‌ ಮೂಲಕ ಕರ್ನಾಟಕ ಕಾಲೇಜು ಮೈದಾನ ತಲುಪಲಿದೆ.

ಮೆರವಣಿಗೆಯಲ್ಲಿ ಕೃಷಿ ವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರ, ಬಿ.ಆರ್‌.ಟಿ.ಎಸ್‌. ಧರ್ಮಸ್ಥಳ ಇಂಜಿನಿಯರಿಂಗ್‌ ಕಾಲೇಜು, ರಂಗಾಯಣ, ಅಂಜುಮನ್‌, ಬಸವ ಕೇಂದ್ರಗಳು, ಅನುಭವ ಮಂಟಪ, ಹೆಬಿಕ್‌ ಮೆಮೋರಿಯಲ್‌ ಚರ್ಚ, ಅಂಬೇಡ್ಕರ್‌, ವಾಲ್ಮೀಕಿ, ಬಂಜಾರ್‌ ಅಭಿವೃದ್ಧಿ ನಿಗಮಗಳು ಸೇರಿದಂತೆ ಜೆ.ಎಸ್‌.ಎಸ್‌. ಕಾಲೇಜು, ಕನ್ನಡ ತೇರು ಪ್ರಮುಖ ಆಕರ್ಷಕ ಸ್ಥಬ್ಧ ಚಿತ್ರಗಳಾಗಿವೆ. ಪದವಿ ಪೂರ್ವ ಕಾಲೇಜು ಹಾಗೂ ಸಾರ್ವಜನಿಕ ಶಿಕ್ಷಣ ವಲಯದ ಸ್ಥಬ್ಧ ಚಿತ್ರಗಳೂ ಸಾಥ ನೀಡಲಿವೆ. ಆಕರ್ಷಕ ಡೊಳ್ಳು ಕುಣಿತ, ಜಗ್ಗಲಿಗೆ, ಹೆಜ್ಜೆಮೇಳ, ಪಟಗುಣಿತಗಳಲ್ಲದೇ ದಾಲರ ಪಟ್ಟಿಯಂತಹ ಯುದ್ಧ ವಿದ್ಯೆಯ ತಂಡಗಳೂ ರೋಮಾಂಚನ ಮೂಡಿಸಲಿವೆ. ನಾಡಿನ ಪ್ರಮುಖ ಕನ್ನಡ ಸಂಘಟಣೆಗಳು, ಸಾಹಿತಿಗಳು ಕಲಾವಿದರು ರೈತ ಸಂಘಟಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಉತ್ಸವದ ಮೆರವಣಿಗೆ ಸಮಿತಿ ತಿಳಿಸಿದೆ.

ಕೊಳಲು ವಾದಕ ಪಂ| ಪ್ರವೀಣ ಗೊಡಿRಂಡಿ ಅವರ ವಾದ್ಯ ವೃಂದ, ಪ್ರಹ್ಲಾದ ಆಚಾರ್ಯ ಅವರ ಗೊಂಬೆಯಾಟ, ಕೇರಳ ಕಲಾ ತಂಡದಿಂದ ಸಮೂಹ ನೃತ್ಯ, ಅಜಯ ವಾರಿಯರ್‌ ತಂಡದಿಂದ ರಸಮಂಜರಿ, ದೆಹಲಿಯ ಇಂಡಿಯನ್‌ ಓಷನ್‌ ತಂಡದಿಂದ ವಾದ್ಯವೃಂದ ಮತ್ತು ಅಸ್ತಾಧಿಧೀಕ್‌ ತಂಡದಿಂದ ಕಥಕ ನೃತ್ಯ, ಮುಂಬಯಿಯ ಸುಖವಿಂದರ್‌ ಸಿಂಗ ತಂಡದ ರಸಮಂಜರಿ, ಬೆಂಗಳೂರಿನ ಡಾ| ನಿರುಪಮಾ ರಾಜೇಂದ್ರ ಮತ್ತು ತಂಡದಿಂದ ನೃತ್ಯ, ಚೆನ್ನೈನ ಶಿವಮಣಿ ಮತ್ತು ತಂಡದಿಂದ ಡ್ರಮ್‌ ಹಾಗೂ ಮುಂಬಯಿಯ ಮಮತಾ ಶರ್ಮಾ ತಂಡದಿಂದ ರಸಮಂಜರಿ ಜರುಗಲಿದೆ. ಇದಲ್ಲದೆ, ಜಿಲ್ಲೆ ಹಾಗೂ ರಾಜ್ಯದ ಖ್ಯಾತ ಕಲಾವಿದರಿಂದ ಮುಖ್ಯ ವೇದಿಕೆ ಹಾಗೂ ಇತರೆ ವೇದಿಕೆಗಳಲ್ಲಿ ಜಾನಪದ ಸಂಗೀತ, ದೊಡ್ಡಾಟ, ಪಣ್ಣಾಟ, ತತ್ವಪದ, ಕೋಲಾಟ, ಗೀಗೀ ಪದ, ಭಜನೆ, ಲಾವಣಿ, ಹಿಂದೂಸ್ಥಾನಿ ಗಾಯನ, ತಾಳವಾದ್ಯ, ಸಿತಾರ, ನಾಟಕ, ಖವ್ವಾಲಿ, ಮುಷಾಯಿರಾ, ಹಾಸ್ಯ, ತಬಲಾ, ಜುಗಲಬಂದಿ ಹೀಗೆ ಹಲವಾರು ಕಾರ್ಯಕ್ರಮ ವೈವಿಧ್ಯಗಳು ವಿವಿಧ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳಲಿದೆ.

 

Trending videos

Back to Top