ಮಾಲಾಕಾಳಿ ಕನಸಿನ ರಾಣಿಯ ರೌದ್ರಾವತಾರ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾಲಾಶ್ರೀಯ "ಮಹಾಕಾಳಿ' ಚಿತ್ರ ಯಾವತ್ತೋ ತೆರೆಕಾಣಬೇಕಿತ್ತು. ಆದರೆ, ಚಿತ್ರ ಈಗ ತೆರೆಕಾಣುವ ಹಂತಕ್ಕೆ ಬಂದಿದೆ. ಈ ವಾರ "ಮಹಾಕಾಳಿ'ಯ ಅಬ್ಬರ ಶುರುವಾಗಲಿದೆ. ಅಷ್ಟಕ್ಕೂ ತಡ ಯಾಕೆ ಎಂದರೆ ಏನೋ ಒಂದು ನೆಗೆಟಿವ್ ಎನರ್ಜಿ ಎಂಬ ಉತ್ತರ ಚಿತ್ರತಂಡದಿಂದ ಬರುತ್ತದೆ.
"ಮಹಾಕಾಳಿ' ಎಂಬ ಟೈಟಲ್ ಇಟ್ಟ ದಿನದಿಂದಲೂ ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದ್ದವಂತೆ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿದ್ದೂ ಏನೋ ಒಂದು ಮಿಸ್ ಆಗುತ್ತಿತ್ತಂತೆ. ಅದೊಂದು ದಿನ ಮಾಲಾಶ್ರೀಯವರು, "ನಾನು ಶೂಟಿಂಗ್ಗೆ ಹೋಗಲ್ಲ' ಎಂದು ಕುಳಿತಿದ್ದರಂತೆ. "ಸಿನಿಮಾ ಆರಂಭವಾದ ದಿನದಿಂದಲೂ ಅನೇಕ ತೊಂದರೆಗಳು ಎದುರಾಗುತ್ತಿದ್ದವು. ಏನೋ ಒಂದು ನೆಗೆಟಿವ್ ಎನರ್ಜಿ ನಮ್ಮನ್ನು ಕಾಡಿದಂತೆ ಆಗುತ್ತಿತ್ತು. ಶೂಟಿಂಗ್ ಪ್ಯಾಕಪ್ ಆದರೆ ಮತ್ತೆ ಆರಂಭವಾಗುತ್ತಲೇ ಇರಲಿಲ್ಲ. ಹಾಗಾಗಿ ನಮಗೆ ಪ್ಯಾಕಪ್ ಹೇಳಲು ಭಯವಾಗುತ್ತಿತ್ತು. ಈ ರೀತಿಯ ಸಮಸ್ಯೆಯಿಂದಾಗಿ ತಂಡದ ಎಲ್ಲರೂ ಬೇಸತ್ತಿದ್ದರು. ಹಾಗಾಗಿ ನಾವು ಚಿತ್ರೀಕರಣ ಸುಗಮವಾಗಿ ಸಾಗಿದರೆ ಹೋಮ ಮಾಡಿಸುವುದಾಗಿ ಹರಕೆ ಹೊತ್ತುಕೊಂಡಿದ್ದೆವು. ಆ ನಂತರ ಎಲ್ಲವೂ ಸುಗಮವಾಗಿ ಸಾಗಿತು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏ.24ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಹಾಗಾಗಿ, ಶನಿವಾರ ರಾತ್ರಿ ಕಾಳಿ ದೇವಸ್ಥಾನದಲ್ಲಿ ಹೋಮ ನಡೆಸಿದ್ದೇವೆ. ಚಿತ್ರತಂಡದ ಪ್ರತಿಯೊಬ್ಬರು ಭಾಗವಹಿಸಿದ್ದೆವು' ಎಂದು ಹೋಮ ನಡೆಸಿದ ಬಗ್ಗೆ ಹೇಳುತ್ತಾರೆ.
ಇನ್ನು, ಮಾಲಾಶ್ರೀಯವರಿಗೆ "ಮಹಾಕಾಳಿ' ಒಂದು ಹೊಸ ಬಗೆಯ ಚಿತ್ರವಂತೆ. ಚಿತ್ರದಲ್ಲಿ ಆ್ಯಕ್ಷನ್ ಇದ್ದರೂ ಲವ್ ಟ್ರ್ಯಾಕ್ಗೂ ಅವಕಾಶ ನೀಡಲಾಗಿದೆ. ""ದುರ್ಗಿ', "ಚಾಮುಂಡಿ', "ಶಕ್ತಿ' ಹೀಗೆ ಪವರ್ಫುಲ್ ಟೈಟಲ್ಗಳಲ್ಲೇ ಕಾಣಿಸಿಕೊಂಡಾಗಿದೆ. ಈಗ "ಮಹಾಕಾಳಿ' ಎಂಬ ಮತ್ತೂಂದು ಪವರ್ಫುಲ್ ಟೈಟಲ್. ಇನ್ಯಾವ ಟೈಟಲ್ ಕೊಡ್ತಾರೋ ಗೊತ್ತಿಲ್ಲ. ಚಿತ್ರದಲ್ಲಿ ಆ್ಯಕ್ಷನ್ ಜೊತೆ ಜೊತೆಗೆ ಲವ್, ಸೆಂಟಿಮೆಂಟ್ ಇದೆ. ಹಾಗಾಗಿ ಮಾಸ್ ಹಾಗೂ ಕ್ಲಾಸ್ಗೆ ಈ ಸಿನಿಮಾ ಇಷ್ಟವಾಗುತ್ತದೆ. ಮಹೇಂದರ್ ತುಂಬಾ ಕೂಲ್ ಡೈರೆಕ್ಟರ್. ಸಿನಿಮಾವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ' ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ.
ನಿರ್ದೇಶಕ ಮಹೇಂದರ್ ಮತ್ತೂಮ್ಮೆ ಮಾಲಾಶ್ರೀ ಜೊತೆ ಸಿನಿಮಾ ಮಾಡಿದ ಖುಷಿ ಹಂಚಿಕೊಂಡರು. ಜೊತೆಗೆ "ಮಹಾಕಾಳಿ' ಸಿನಿಮಾದಿಂದ ನಿರ್ಮಾಪಕರು ಕೂಡಾ ಖುಷಿಯಾಗಿದ್ದು, ಫೋನ್ ಮಾಡಿದಾಗಲ್ಲೆಲ್ಲ ಒಳ್ಳೆಯ ಸಿನಿಮಾ ಮಾಡಿದ್ದೀರಿ ನಿರ್ದೇಶಕರೇ ಎಂದು ಹೊಗಳುತ್ತಿದ್ದಾರೆ. ಇದೇ ಹೊಗಳಿಕೆ ಜನರಿಂದಲೂ ಸಿಕ್ಕರೆ ನಾವು ಮಾಡಿದ ಶ್ರಮ ಸಾರ್ಥಕವಾದಂತೆ ಎಂಬುದು ಮಹೇಂದರ್ ಮಾತು. ಚಿತ್ರದಲ್ಲಿ ಯುವ ಜೋಡಿಗಳಾಗಿ ಕಾಣಿಸಿಕೊಂಡ ಪೂಜಾಶ್ರೀ ಹಾಗೂ ದಿಲೀಪ್ ಕೂಡಾ ತಮ್ಮ ಅನುಭವ ಹಂಚಿಕೊಂಡರು.
ಮಾಲಾಶ್ರೀ ಸಿನಿಮಾದಲ್ಲಿ ಮಾಡಿದ ಖುಷಿ ಅವರದಾಗಿತ್ತು. ನಿರ್ಮಾಪಕ ರಮೇಶ್ ಕಶ್ಯಪ್, ಒಳ್ಳೆಯ ಸಿನಿಮಾ ಮಾಡಿದ್ದು ಜನ ಪ್ರೋತ್ಸಾಹ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು. ಛಾಯಾಗ್ರಾಹಕ ಸೆಲ್ವಂ, ಪ್ರಮುಖ ಪಾತ್ರ ಮಾಡಿದ ನರೇಶ್ ಕೂಡಾ ತಮ್ಮ ಅನುಭವ ಹಂಚಿಕೊಂಡರು.