CONNECT WITH US  

ಸುದೀಪ್ ಬಾಳಲ್ಲಿ ಬಿರುಕು;ವಿಚ್ಛೇದನಕ್ಕೆ ಕಾರಣರಾರು, ಸುದೀಪ್ ಟ್ವೀಟ್..

ಬೆಂಗಳೂರು: ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್ ದಾಂಪತ್ಯದಲ್ಲಿ 14 ವರ್ಷಗಳ ಬಳಿಕ ಬಿರುಕು ಮೂಡಿದ್ದು, ಪತ್ನಿ ಪ್ರಿಯಾ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಬಗ್ಗೆ ಸುದೀಪ್ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಸುದೀಪ್ ಸರಣಿ ಟ್ವೀಟ್ ಮೂಲಕ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

2001ರಲ್ಲಿ ಸುದೀಪ್ ಕೇರಳ ಮೂಲದ ನಾಯರ್ ಕುಟುಂಬದ ಪ್ರಿಯಾ ರಾಧಕೃಷ್ಣನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ವೈಯಕ್ತಿಕ ಕಾರಣಗಳಿಂದ ಸುದೀಪ್ ಮತ್ತು ಪ್ರಿಯಾ ಬೇರೆಯಾಗಲು ನಿರ್ಧರಿಸಿದ್ದಾರೆ. ಇಬ್ಬರಿಗೂ 11 ವರ್ಷದ ಪುತ್ರಿ ಇದ್ದು, ಆಕೆಯನ್ನು ಪತ್ನಿ ಪ್ರಿಯ ಸುಪರ್ದಿಗೆ ನೀಡಲು ಸುದೀಪ್ ಸಮ್ಮತಿಸಿದ್ದಾರೆ. ಅಲ್ಲದೇ ಪತ್ನಿ ಪ್ರಿಯಾ ಮತ್ತು ಪುತ್ರಿ ಸಾನ್ವಿ ಇಬ್ಬರ ಜೀವನಾಂಶಕ್ಕೆ 19 ಕೋಟಿ ನೀಡಲು ಕಿಚ್ಚ ಒಪ್ಪಿದ್ದರೆನ್ನಲಾಗಿದೆ. 

ಐದು ವರ್ಷಗಳಿಂದ ಪ್ರತ್ಯೇಕವಾಗಿದ್ದಾರಾ?
ಕೆಲವು ಆಪ್ತ ಮೂಲಗಳ ಪ್ರಕಾರ ಸುದೀಪ್ ಮತ್ತು ಪ್ರಿಯಾ ನಡುವೆ ಕೌಟುಂಬಿಕ ಕಾರಣಗಳಿಂದಾಗಿ ಹೊಂದಾಣಿಕೆ ಇರಲಿಲ್ಲ ಎನ್ನಲಾಗುತ್ತಿದೆ. ಸುಮಾರು ಐದು ವರ್ಷಗಳಿಂದ ಪತ್ನಿ ಪ್ರಿಯಾಗೆ ಪ್ರತ್ಯೇಕವಾಗಿಯೇ ಮನೆ ಮಾಡಿಕೊಟ್ಟಿದ್ದಾರೆನ್ನಲಾಗಿದೆ. ಆ ಸಂದರ್ಭದಲ್ಲೇ ಇಬ್ಬರು ಪ್ರತ್ಯೇಕವಾಗಲು ನಿರ್ಧರಿಸಿದಾಗ, ಸುದೀಪ್ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಈ ಗುಟ್ಟನ್ನು ರಹಸ್ಯವಾಗಿಡಲಾಗಿದೆ ಎಂಬ ಗುಸುಗುಸು ಹರಿದಾಡುತ್ತಿದೆ. ಏನೇ ಆದರು ತಮ್ಮ ನೆಚ್ಚಿನ ನಟ ಸುದೀಪ್ ಮತ್ತು ಪ್ರಿಯಾ ಮತ್ತೆ ಒಂದಾಗಿ ಜೀವನ ನಡೆಸಲಿ ಎಂದು ಹಾರೈಸುತ್ತಿದ್ದಾರೆ.

ಏತನ್ಮಧ್ಯೆ ಪತ್ನಿ ಪ್ರಿಯ ಆಗಲಿ, ಪ್ರಿಯ ಕುಟುಂಬದವರ ವಿರುದ್ಧ ಯಾರು ಮಾತನಾಡಿದರೂ ನಾನು ಸಹಿಸಿಕೊಳ್ಳೋದಿಲ್ಲ. ಇದು ನನ್ನ ವೈಯಕ್ತಿಕ ವಿಚಾರ, ನಾನು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಸುಮ್ಮನಿರಬಹುದಿತ್ತು. ಈ ವಿಚಾರದಲ್ಲಿ ಮಾಧ್ಯಮದಲ್ಲಿ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕಾಗಿಯೇ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ಸುದೀಪ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಚ್ಚೇದನದ ಬಗ್ಗೆ ಸುದೀಪ್ ಟ್ವೀಟ್ ಏನು?;
ನನ್ನ ಬಗ್ಗೆ ಇರುವ ಕಾಳಜಿ ಮತ್ತು ಕುತೂಹಲದ ಬಗ್ಗೆ ನನಗೆ ಅರ್ಥವಾಗುತ್ತದೆ. ನನ್ನ ಕುಟುಂಬಕ್ಕೆ ನಿಮ್ಮ ಪ್ರೀತಿಯ ಬೆಂಬಲದ ಅಗತ್ಯವಿದೆ. ದಾಂಪತ್ಯ ಜೀವನದ ಒಡಕಿನ ಬಗ್ಗೆ ಆದರೆ ನಾನು ಈ ವಿಚಾರ ಮುಚ್ಚಿಡುವ ಅಗತ್ಯವಿಲ್ಲ. ಅಥವಾ ಓಡಿಯೂ ಹೋಗೋದಿಲ್ಲ. ಈಗಾಗಲೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಇದು ನನ್ನ ವೈಯಕ್ತಿಕ ಜೀವನದ ವಿಷಯವಾಗಿದ್ದರಿಂದ ಹೆಚ್ಚೇನೂ ಹೇಳೋದಿಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ನನ್ನ ಇಂದಿನ ಈ ಸ್ಥಿತಿಗೆ ಯಾರು ಹೊಣೆಗಾರರೋ ಅವರಿಗೂ ನನ್ನ ಧನ್ಯವಾದಗಳು! ಸಂತೋಷ ಪಡಿ ಮತ್ತು ಆಶೀರ್ವಾದ ಮಾಡಿ.ಎಲ್ಲವೂ ಒಳ್ಳೆಯದಾಗಲಿ ಎಂದು ವಿಶ್ ಮಾಡುತ್ತೇನೆ  ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಹುಶ ಇವೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Trending videos

Back to Top