CONNECT WITH US  

ಟೆನಾಸಿಟಿ ತಂಡದ ಮುಡಿಗೆ ಡಾ. ವಿಷ್ಣುವರ್ಧನ್‌ ಕಪ್‌

ಬೆಂಗಳೂರು: "ಸ್ನೇಹಲೋಕ' ವತಿಯಿಂದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಟೆನಾಸಿಟಿ ತಂಡವು "ಡಾ. ವಿಷ್ಣುವರ್ಧನ್‌ ಕಪ್‌'  ಮುಡಿಗೇರಿಸಿಕೊಂಡಿದೆ.

ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಪ್ರಾಯೋಜಕತ್ವದಲ್ಲಿ ಆಗಸ್ಟ್‌ 16 ರಂದು ಚಾಲನೆಗೊಂಡ ಪಂದ್ಯಾವಳಿಯಲ್ಲಿ ಪ್ರತಿ ಭಾನುವಾರ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಒಟ್ಟು 16 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಅಂತಿಮ ಹಂತಕ್ಕೆ ಪ್ರವೇಶಿಸಿದ್ದ ಎಸ್‌ಎಲ್‌ವಿ ಗ್ರೂಪ್‌ ಹಾಗೂ ಟೆನಾಸಿಟಿ ನಡುವೆ ಅ. 11 ಭಾನುವಾರ ಫೈನಲ್‌ ಪಂದ್ಯ ನಡೆಯಿತು.

30 ರನ್‌ಗಳ ಜಯ: 
ಫೈನಲ್‌ ಪಂದ್ಯದಲ್ಲಿ ಟೆನಾಸಿಟಿ ತಂಡವು 30 ರನ್‌ಗಳ ಜಯ ಸಾಧಿಸಿದೆ. ಟಾಸ್‌ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಟೆನಾಸಿಟಿ 16 ಓವರ್‌ಗಳಲ್ಲಿ 111 ರನ್‌ ಗಳಿಸುವಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಕಠಿಣ ಮೊತ್ತದ ಬೆನ್ನತ್ತಿದ ಎಸ್‌ಎಲ್‌ವಿ ಗ್ರೂಪ್‌ ಯಾವ ಹಂತದಲ್ಲೂ ಟೆನಾಸಿಟಿಗೆ ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ 14 ಓವರ್‌ಗಳಲ್ಲಿ 71 ರನ್‌ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕೈ ಚೆಲ್ಲಿತು. ಟೆನಾಸಿಟಿ ಪರ ಉತ್ತಮ ಪ್ರದರ್ಶನ ನೀಡಿದ ಸಾಗರ್‌ ಪಂದ್ಯಶ್ರೇಷ್ಠ ಬಹುಮಾನ ಪಡೆದರು.

ಮಿಂಚಿದ ಭಾರತಿ ವಿಷ್ಣುವರ್ಧನ್‌:
ಡಾ. ವಿಷ್ಣುವರ್ಧನ್‌ ಅವರು ಜೀವಂತವಾಗಿದ್ದಾಗ "ಸ್ನೇಹಲೋಕ' ಎಂಬ ತಂಡ ಕಟ್ಟಿಕೊಂಡು ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕ್ರಿಕೇಟ್‌ ಆಡುತ್ತಿದ್ದರು. ಅವರ ನೆನಪು ಹಾಗೂ ಅವರ ಕ್ರಿಕೆಟ್‌ ಪ್ರೀತಿಯಿಂದಾಗಿ ಪಂದ್ಯಾವಳಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಈ ವರ್ಷ ಎಸ್‌ಬಿಐ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕಿ ರಜನಿ ಮಿಶ್ರಾ ಅವರು ಪ್ರಾಯೋಜಕತ್ವ ನೀಡಿದ್ದಾರೆ ಎಂದು ಭಾರತಿ ವಿಷ್ಣುವರ್ಧನ್‌ ಹೇಳಿದರು.

ಇದೇ ವೇಳೆ ಭಾರತಿ ವಿಷ್ಣುವರ್ಧನ್‌ ಅವರು ಕ್ರಿಕೆಟ್‌ ಆಟಗಾರರ ಉಡುಗೆಯಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಮಿಂಚಿದರು. ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ವೈ. ವಿಜಯಕುಮಾರ್‌ ವಿಜೇತ ತಂಡಕ್ಕೆ ಟ್ರೋಫಿ ಹಸ್ತಾಂತರಿಸಿದರು.  ಮಾಜಿ ಕ್ರಿಕೆಟಿಗ ಸೈಯದ್‌ ಕಿರ್ಮಾನಿ ಮತ್ತಿತರರು ಹಾಜರಿದ್ದರು.

Trending videos

Back to Top