CONNECT WITH US  

ಬರ ಅಧ್ಯಯನ ತಂಡಕ್ಕೆ ಸಮೃದ್ಧ ಕೃಷಿಯ ದರ್ಶನ

ಮಂಡ್ಯ: ಬರಪೀಡಿತ ಪ್ರದೇಶಗಳ ಪರಿಸ್ಥಿತಿಯ ಅಧ್ಯಯನ ನಡೆಸಲು ಬುಧವಾರ ಜಿಲ್ಲೆಗೆ ಆಗಮಿಸಿದ್ದ ಕೇಂದ್ರದ ಅಧಿಕಾರಿಗಳ ತಂಡಕ್ಕೆ ಪ್ರವಾಸ ನಡೆಸಿದ ಮಾರ್ಗದಲ್ಲೆಲ್ಲ ಸಮೃದ್ಧ ಹಸಿರಿನಿಂದ ಕೂಡಿದ ಕೃಷಿ ಪ್ರದೇಶಗಳ ದರ್ಶನವಾಯಿತು.

ಜಿಲ್ಲೆಗೆ ಮಧ್ಯಾಹ್ನ 12.30ಕ್ಕೆ ಆಗಮಿಸಬೇಕಾಗಿದ್ದ ಕೇಂದ್ರದ ಅಧಿಕಾರಿಗಳ ತಂಡ ನಾಲ್ಕು ತಾಸು ತಡವಾಗಿ ಆಗಮಿಸಿತು. ಅಲ್ಲದೆ ಪೂರ್ವ ನಿಗದಿತ ಮಾರ್ಗದಲ್ಲಿ ಪ್ರವಾಸ ಮೊಟಕುಗೊಳಿಸಿ, ಕೊನೆಯ ಕ್ಷಣದಲ್ಲಿ ಮಂಡ್ಯ-ಕೆರಗೋಡು ಮಾರ್ಗವಾಗಿ ಬಸರಾಳು ಗ್ರಾಮದತ್ತ ಪ್ರವಾಸ ಬೆಳೆಸಿತು.

ಕೇಂದ್ರ ಜಲ ಆಯೋಗ ಮುಖ್ಯ ಎಂಜಿನಿಯರ್‌ ಪಿ.ಕೆ.ಸೆಕ್ಸೆನಾ, ಜಲ ಇಲಾಖೆ ಅಧೀನ ಕಾರ್ಯದರ್ಶಿ ಎ.ಕೆ.ಶ್ರೀವಾತ್ಸವ್‌, ರಾಜ್ಯ ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಪರಶಿವಮೂರ್ತಿ ಹಾಗೂ ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ.ಸೈಯದ್‌ ಅಹಮದ್‌ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ತರಾತುರಿಯಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಬರಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿಕೊಂಡರು.

ಭತ್ತ ನಾಟಿ:
ಮೊದಲು ತಂಡ ಮದ್ದೂರು ತಾಲೂಕಿನ ಆತಗೂರು ಮಾರ್ಗವಾಗಿ ಅಧ್ಯಯನ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಜಿಲ್ಲೆಗೆ ತಡವಾಗಿ ಆಗಮಿಸಿದ್ದಲ್ಲದೆ ಮಂಡ್ಯ ನಗರದಿಂದ ಕೇವಲ 25 ಕಿ.ಮೀ. ವ್ಯಾಪ್ತಿಯಲ್ಲಿ ತಂಡ ಬರ ಪರಿಸ್ಥಿತಿ ಅಧ್ಯಯನ ಪ್ರವಾಸ ನಡೆಸಿತು.
ತಂಡ ಸಂಚರಿಸಿದ ಮಾರ್ಗದಲ್ಲಿ ಭತ್ತ ನಾಟಿ ಮಾಡಿರುವುದು, ಹಸಿರಿನಿಂದ ಕೂಡಿದ ಕಬ್ಬು ಬೆಳೆ, ತುಂಬಿ ನಿಂತಿರುವ ಕೆರೆಗಳು ಸೇರಿದಂತೆ ಸಮೃದ್ಧವಾದ ಕೃಷಿ ಪ್ರದೇಶ ಕಂಡಿತೇ ಹೊರತು ಎಲ್ಲಿಯೂ ಬರದ ಛಾಯೆ ಆವರಿಸಿರುವುದು ಕಣ್ಣಿಗೆ ಬೀಳಲಿಲ್ಲ. ತಂಡದವರು ಕೆಲ ಭಾಗಗಳಲ್ಲಿ ಕಬ್ಬು, ಭತ್ತದ ಬೆಳೆ, ಬಿತ್ತನೆ ಚಟುವಟಿಕೆ ನಡೆಯದ ಕೃಷಿ ಜಮೀನುಗಳು, ನೀರಿಲ್ಲದೆ ಟಮೊಟೋ ಬೆಳೆ ಹಾಳಾಗಿರುವ ದೃಶ್ಯಗಳನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದುಕೊಂಡರು.

ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಅಲ್ಪಸ್ವಲ್ಪ ಉಳಿದಿರುವ ನೀರನ್ನು ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ಹರಿಸಿದ್ದನ್ನು ಬಳಕೆ ಮಾಡಿಕೊಂಡು ಈಗಷ್ಟೇ ರೈತರು ಭತ್ತ, ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ನಾಟಿ ಮಾಡಿದ್ದರು. ಇದನ್ನು ಅಧಿಕಾರಿಗಳು ತಂಡಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಮಂಡ್ಯ, ಚಿಕ್ಕಮಂಡ್ಯ, ಸಾತನೂರು, ಕೊಮ್ಮೇರಹಲಿÛ, ಹುಲಿವಾನ, ಎಸ್‌ .ಐ.ಕೋಡಿಹಳ್ಳಿ, ಕೆರಗೋಡು, ಕಲ್ಮಂಟಿದೊಡ್ಡಿ, ಆನಸೊಸಲು, ಹಲ್ಲೆಗೆರೆ, ಚಂದಗಾಲು ಮಾರ್ಗದಲ್ಲಿ ತಂಡದ ಅಧಿಕಾರಿಗಳು ಬರ ಅಧ್ಯಯನ ನಡೆಸಿದರು.ಸ್‌ .ಐ.ಕೋಡಿಹಳ್ಳಿ, ಚಂದಗಾಲು ಹಾಗೂ ಅರಿಸಿನಕೆರೆ ಗೇಟ್‌ ಬಳಿಯ ಜಮೀನುಗಳಲ್ಲಿ ಕೃಷಿ ಕಾರ್ಯ ವೀಕ್ಷಿಸಿದ ತಂಡ, ಮಾಯಣ್ಣನಕೊಪ್ಪಲು, ಬಸರಾಳು ಮಾರ್ಗವಾಗಿ ಕೆ.ಆರ್‌.ಪೇಟೆಯತ್ತ ಪ್ರವಾಸ ಮುಂದುವರೆಸಿತು.

ಅಜಗಜಾಂತರ ವ್ಯತ್ಯಾಸ:
ಪ್ರವಾಸಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಅಧಿಕಾರಿಗಳು ತಂಡಕ್ಕೆ ಒಣಗಿರುವ ಕಬ್ಬು, ಭತ್ತ ಹಾಗೂ ಟಮೊಟೋ ಬೆಳೆಗಳ ಚಿತ್ರಗಳನ್ನು ತೋರಿಸಿ ಬರದ ಭೀಕರತೆಯನ್ನು ವಿವರಿಸಿದ್ದರು. ಆದರೆ, ವಾಸ್ತವ ಚಿತ್ರಣಕ್ಕೂ, ಅಲ್ಲಿಗೂ ಅಜಗಜಾಂತರ ವ್ಯತ್ಯಾಸ ಇರುವುದು ತಂಡದ ಅರಿವಿಗೆ ಬಂದಿತು. ಆದರೆ, ಅಧ್ಯಯನ ತಂಡ ಕೆ.ಆರ್‌.ಪೇಟೆ, ನಾಗಮಂಗಲ ಹಾಗೂ ಮಳವಳ್ಳಿ ತಾಲೂಕಿನ ಬರ ಪೀಡಿತ ಪ್ರದೇಶಗಳ ಬದಲು ನಗರದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.

ತಂಡ ಪ್ರವಾಸ ನಡೆಸಿದಾಗ ಜಿಲ್ಲಾಧಿಕಾರಿ ಅಜಯ್‌ ನಾಗಭೂಷಣ್‌, ಜಿಪಂ ಉಪ ಕಾರ್ಯದರ್ಶಿ ಎನ್‌.ಡಿ.ಪ್ರಕಾಶ್‌, ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನಾ, ಕೆಆರ್‌ಎಸ್‌ ಮುಖ್ಯ ಎಂಜಿನಿಯರ್‌ ಬಸವರಾಜು, ಕಾವೇರಿ ನೀರಾವರಿ ನಿಗಮದ ಎಕ್ಸಿಕ್ಯುಟೀವ್‌ ಎಂಜಿನಿಯರ್‌ ಶಂಕರೇಗೌಡ, ತಹಸೀಲ್ದಾರ್‌ ಮಾರುತಿ ಪ್ರಸನ್ನ, ತಾಪಂ ಇಒ ಬಸವರಾಜು ಹಾಜರಿದ್ದರು.

Trending videos

Back to Top