CONNECT WITH US  

ವ್ಯಾಪಾರ, ಭದ್ರತೆಗೆ ಟಾನಿಕ್‌: ವಲಸಿಗರ ಕಷ್ಟವನ್ನೂ ಮೋದಿ ಕೇಳಬೇಕಿತ್ತು

ವಿದೇಶಗಳಿಗೆ ಹೋದಾಗ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅದ್ಭುತ ಭಾಷಣ ಮಾಡುವ ಹಾಗೂ ಆ ದೇಶದ ಜೊತೆಗಿನ ಸಂಬಂಧ ವೃದ್ಧಿಗೆ ಹೊಸ ದಿಕ್ಕು ನೀಡುವ ಪರಂಪರೆಯನ್ನು ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ದ ಭೇಟಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಮುಂದುವರೆಸಿದ್ದಾರೆ. 34 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಯುಎಇಗೆ ಭೇಟಿ ನೀಡಿದರು ಎಂಬುದಕ್ಕಷ್ಟೇ ಅಲ್ಲ, ಆ ದೇಶದ ಜೊತೆಗೆ ವ್ಯಾಪಾರ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಭಾರತ ಮಾಡಿಕೊಂಡ ಒಪ್ಪಂದಗಳಿಂದಾಗಿಯೂ ಈ ಭೇಟಿ ಬಹಳ ಮಹತ್ವದ್ದು.

ಯುಎಇ ಹಲವಾರು ವಿಷಯಗಳಿಗಾಗಿ ಭಾರತಕ್ಕೆ ಬಹಳ ಹತ್ತಿರದ ರಾಷ್ಟ್ರ. ನಮ್ಮ ದೇಶಕ್ಕೆ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಪ್ರತಿ ವರ್ಷ ಕಳುಹಿಸುವ ಹಣದಲ್ಲಿ ಅತ್ಯಂತ ದೊಡ್ಡ ಪಾಲು ಬರುವುದು ಯುಎಇನಿಂದ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ಕಚ್ಚಾತೈಲ ಈ ದೇಶದಿಂದ ಬರುತ್ತದೆ. ದೊಡ್ಡ ದೊಡ್ಡ ಡಿಗ್ರಿಗಳನ್ನು ಪಡೆಯದ ಭಾರತೀಯರಿಗೂ ಯುಎಇದಲ್ಲಿ ಸಾಕಷ್ಟು ಉದ್ಯೋಗಾವಕಾಶವಿದೆ.

ಮೋದಿ ಭೇಟಿಯ ವೇಳೆ ಉಭಯ ದೇಶಗಳ ನಡುವೆ ವ್ಯಾಪಾರ, ಇಂಧನ ಹಾಗೂ ಭದ್ರತೆಗೆ ಸಂಬಂಧಿಸಿದ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದ್ದರೂ, ಅದು ದ್ವಿಪಕ್ಷೀಯ ಸಂಬಂಧಕ್ಕಿಂತ ಹೆಚ್ಚಿನ ಮಹತ್ವವಿರುವ ವ್ಯೂಹಾತ್ಮಕ ಒಪ್ಪಂದದ ಮಾದರಿಯಲ್ಲಿದೆ. ಇಂತಹ ವ್ಯೂಹಾತ್ಮಕ ಒಪ್ಪಂದವನ್ನು ಅಮೆರಿಕ, ಫ್ರಾನ್ಸ್‌, ರಷ್ಯಾ, ಚೀನಾ ಮುಂತಾದ 20 ದೇಶಗಳ ಜೊತೆ ಮಾತ್ರ ಭಾರತ ಹೊಂದಿದೆ. ಈಗ ಈ ಪಟ್ಟಿಗೆ ಯುಎಇ ಕೂಡ ಸೇರಿದೆ ಎನ್ನಲಡ್ಡಿಯಿಲ್ಲ. ಏಕೆಂದರೆ ಇದರಲ್ಲಿ ಉಭಯ ದೇಶಗಳು ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವ ನಿರ್ಣಯವಿದೆ. ಹೀಗೆ ಹೋರಾಡಬೇಕು ಅಂದರೆ ಉಭಯ ದೇಶಗಳ ಮಿಲಿಟರಿಗಳೂ ಒಂದಲ್ಲಾ ಒಂದು ಹಂತದಲ್ಲಿ ಜೊತೆಯಾಗಲೇಬೇಕು.

ಮುಖ್ಯವಾಗಿ ಪಾಕಿಸ್ತಾನಕ್ಕೆ ಇದು ಕಠಿಣ ಸಂದೇಶ. ಯುಎಇ ಜತೆ ಪಾಕ್‌ ಕೂಡ ಒಳ್ಳೆಯ ಸಂಬಂಧವನ್ನೇ ಹೊಂದಿದೆಯಾದರೂ ಇತ್ತೀಚೆಗೆ ಅದು ಹಳಸುತ್ತಿದೆ. ಯೆಮನ್‌ ದಂಗೆಯನ್ನು ನಿಯಂತ್ರಿಸಲು ಪಾಕ್‌ನ ಸಹಭಾಗಿತ್ವವನ್ನು ದುಬೈ ಕೋರಿದಾಗ ಅದನ್ನು ಪಾಕ್‌ ತಿರಸ್ಕರಿಸಿತ್ತು. ಅಲ್ಲಿಂದ ಆ ಎರಡು ದೇಶಗಳ ಸಂಬಂಧ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಈ ಹಂತದಲ್ಲಿ ಮೋದಿ ಮಧ್ಯೆ ಪ್ರವೇಶಿಸಿ ದುಬೈ ಜತೆಗಿನ ಸ್ನೇಹ ವೃದ್ಧಿಸಿಕೊಳ್ಳುವ ಕೆಲಸ ಮಾಡಿರುವುದು ಚಾಣಾಕ್ಷ ನಡೆ.

ಅಮೆರಿಕ, ಕೆನಡಾ, ಆಸ್ಟ್ರೇಲಿಯಾಗಳಲ್ಲಿನ ಭಾಷಣದಂತೆ ದುಬೈನಲ್ಲೂ ಮೋದಿ ಮಾಡಿದ ಭಾಷಣ ಅನಿವಾಸಿ ಭಾರತೀಯರ ಮನ ಗೆದ್ದಿದೆ. ಆದರೆ ದುಬೈನಲ್ಲಿರುವ ಭಾರತೀಯರ ಸ್ಥಿತಿ ಇತರ ದೇಶಗಳಲ್ಲಿರುವ ಎನ್ನಾರೈಗಳ ಸ್ಥಿತಿಗಿಂತ ಭಿನ್ನ. ಯುಎಇದಲ್ಲಿರುವ 22 ಲಕ್ಷ ಭಾರತೀಯರಲ್ಲಿ ಶೇ.80ರಷ್ಟು ಜನ ಒಂದಲ್ಲಾ ಒಂದು ರೀತಿಯ ಕಾರ್ಮಿಕರು. ಇವರಿಗೆ ಒಳ್ಳೆಯ ಸಂಬಳ ಸಿಗುತ್ತದೆ ಎಂಬುದರ ಹೊರತಾಗಿ ಸಾಕಷ್ಟು ಸಮಸ್ಯೆಗಳಿವೆ. ಕೆಲಸ ನೀಡಿದವರು ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳುವುದು, ಕಾರ್ಮಿಕ ಹಕ್ಕುಗಳನ್ನು ನೀಡದೆ ಇರುವುದು, "ಬಾಂಡೆಡ್‌ ಲೇಬರ್‌'ಗಳಂತೆ ದುಡಿಸಿಕೊಳ್ಳುವುದು, ಹೇಳದೆ ಕೇಳದೆ ಸಂಬಳ ಕಡಿತ ಮಾಡುವುದು ಅಥವಾ ಸಮಯಕ್ಕೆ ಸರಿಯಾಗಿ ಸಂಬಳ ನೀಡದೆ ಇರುವುದು, ಸ್ಥಳೀಯ ಉದ್ಯೋಗದಾತರ ಪರವಾಗಿಯೇ ಎಲ್ಲಾ ಕಾಯ್ದೆಗಳಿರುವುದು, ಕ್ಯಾಂಪ್‌ಗ್ಳಲ್ಲಿ ವಸತಿಗೆ ವ್ಯವಸ್ಥೆ ಮಾಡುವುದು ಮುಂತಾದ ಸಮಸ್ಯೆಗಳಿವೆ. ಯುಎಇ ಸರ್ಕಾರದ ಜೊತೆಗಿನ ಮಾತುಕತೆಯಲ್ಲಿ ಇವುಗಳನ್ನು ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ಯತ್ನವನ್ನು ಮೋದಿ ಮಾಡಬಹುದಿತ್ತು. ಭಾರತೀಯರಿಗೆ ಯುಎಇದಲ್ಲಿ ದೇವಸ್ಥಾನ ಹಾಗೂ ಶಾಲೆ ನಿರ್ಮಿಸುವುದರಿಂದ ಈ ಸಮಸ್ಯೆಗಳು ಬಗೆಹರಿಯುವುದಿಲ್ಲ.

ಅಬುಧಾಬಿ ಜೊತೆಗಿನ ಸಂಬಂಧ ವೃದ್ಧಿಸಿರುವುದರಿಂದ ಈ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಒಂದೊಂದಾಗಿ ಕೈಗೆತ್ತಿಕೊಂಡರೆ ದುಬೈನಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮೋದಿ ಮಾಡಿದ ಭಾಷಣ ಸಾರ್ಥಕವಾಗುತ್ತದೆ.

ಅಬುದಾಭಿ ಜತೆಗಿನ ಸಂಬಂಧ ವೃದ್ಧಿಸಿರುವುದರಿಂದ ಮುಂದಿನ ದಿನಗಳಲ್ಲಿ ಭಾರತೀಯ ವಲಸಿಗರ ಸಮಸ್ಯೆಗಳನ್ನು ಒಂದೊಂದಾಗಿ ಕೈಗೆತ್ತಿಕೊಂಡು ಪರಿಹರಿಸುವ ಕೆಲಸ ಮಾಡಿದರೆ ದುಬೈನಲ್ಲಿ ಎನ್ನಾರೈಗಳನ್ನುದ್ದೇಶಿಸಿ ಮೋದಿ ಮಾಡಿದ ಭಾಷಣ ಸಾರ್ಥಕ.


Trending videos

Back to Top