CONNECT WITH US  

ಎಚ್‌ಐವಿ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಅಗತ್ಯ

ಭಾರತೀನಗರ: ಗ್ರಾಮೀಣ ಪ್ರದೇಶದ ಯುವಕ-ಯುವತಿಯರು ಎಚ್‌ಐವಿ ಸೋಂಕಿನ ಬಗ್ಗೆ ತಿಳಿದುಕೊಂಡು ತಮ್ಮ ವ್ಯಾಪ್ತಿಯ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ್‌ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌ ಮತ್ತು ಆರೋಗ್ಯ ಇಲಾಖೆ
ಜಂಟಿಯಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎಚ್‌ಐವಿ ಸೋಂಕು ಜಾಗೃತಿ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಎಚ್‌ಐವಿ ಸೋಂಕಿನ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ತಿಳಿದುಕೊಳ್ಳುವುದು ಅಗತ್ಯ. ಅಸುರಕ್ಷಿತ ಲೈಂಗಿಕತೆ, ರಕ್ತದಾನ ಸೇರಿದಂತೆ ವಿವಿಧ ಮೂಲಗಳಿಂದ ರೋಗ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ. ಎಚ್‌ಐವಿ ಸೋಂಕು ಮುಂದೆ ಏಡ್ಸ್‌ ರೋಗವಾಗಿ ಪರಿವರ್ತನೆಯಾಗಲಿದೆ ಎಂದು ಮಾಹಿತಿ ನೀಡಿದರು. ಎಚ್‌ಐವಿ ಹರಡುವ ವಿಧಾನಗಳನ್ನು ಮನಗಂಡು ಅನಕ್ಷರಸ್ಥ ಗ್ರಾಮೀಣ ಜನರಿಗೆ ತಿಳಿವಳಿಕೆ ಮೂಡಿಸಬೇಕು. ಇದರಿಂದ ಎಚ್‌ಐವಿ ಸೋಂಕು ಹರಡದಂತೆ ತಡೆಯುವುದಕ್ಕೆ ಸಾಧ್ಯವಾಗಲಿದೆ ಎಂದರು.

ಪರೀಕ್ಷೆ ಕಡ್ಡಾಯ:
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಗುಪ್ತರೋಗಗಳ ಬಗ್ಗೆ ಮಾಹಿತಿ ನೀಡಿ ಅವುಗಳ ಬಗೆಗೆ ಮುಕ್ತವಾಗಿ ವೈದ್ಯರಿಗೆ ತಿಳಿಸಿ, ಚಿಕಿತ್ಸೆ ಪಡೆಯಬೇಕು. ಅಸುರಕ್ಷತ ರಕ್ತದಾನದಿಂದಲೂ ಹೆಚ್‌ಐವಿ ಸೋಂಕು ಹರಡುತ್ತದೆ. ಆದ ಕಾರಣ ಒಬ್ಬರಿಂದ ಮತ್ತೂಬ್ಬರಿಗೆ ರಕ್ತ ಕೊಡುವ ವೇಳೆ ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಂತರವೇ ರಕ್ತದಾನಕ್ಕೆ ಅವಕಾಶ ನೀಡಬೇಕು. ಇದರಿಂದ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬಹುದು ಎಂದರು.

ಚಿಕತ್ಸೆ ಲಭ್ಯ:
ಎಚ್‌ಐವಿ ಸೋಂಕಿತರು ಜೀವನದಲ್ಲಿ ಜಿಗುಪ್ಸೆ ಹೊಂದದೆ ಧೈರ್ಯದಿಂದ ಸಹಜ ಜೀವನ ನಡೆಸಬೇಕು. ಪ್ರತಿಯೊಂದು ಆರೋಗ್ಯ ಕೇಂದ್ರದಲ್ಲಿಯೂ ಎಚ್‌ಐವಿ ಸೋಂಕಿಗೆ ಚಿಕಿತ್ಸೆ ಕೊಡಲಾಗುತ್ತದೆ ಎಂದರು.

ಕೆ.ಎಂ.ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಚ್‌ಐವಿ ಸಮಾಲೋಚಕಿ ಆಶಾ ಮಾತನಾಡಿ, ಮಹಿಳೆಯರಿಗೆ ಬಾಧಿಸುವ ವಿವಿಧ ರೋಗಗಳ ಬಗೆಗೆ ವಿವರಿಸಿ, ಎಚ್‌ಐವಿಯಿಂದ ರೋಗ ನಿರೋಧಕ ಶಕ್ತಿ ವ್ಯಕ್ತಿಯಲ್ಲಿ ಕಡಿಮೆಯಾಗುತ್ತದೆ ಎಂದರು. ಪ್ರಾಂಶುಪಾಲ ಬಸವರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೆಡ್‌ ರಿಬ್ಬನ್‌ ಕ್ಲಬ್‌ನ ಸಂಚಾಲಕ ಜಿ.ಸಿ.ವರದರಾಜೇಗೌಡ, ಪ್ರೇಮ್‌ಸಿಂಗ್‌ ಇತರರಿದ್ದರು.


Trending videos

Back to Top