CONNECT WITH US  

ದಾವಣಗೆರೆ ವೀರೇಶಗೆ ಬೆಳ್ಳಿಗದೆ

ಶಿವಮೊಗ್ಗ: ಶ್ರೀ ಕೋಟೆ ಸೀತಾರಾಮಾಂಜನೇಯ ರಥೋತ್ಸವದ ಅಂಗವಾಗಿ ವಾಸವಿ ವಿದ್ಯಾಲಯದ ಆವರಣದಲ್ಲಿ ಕೊಲ್ಲೂರಯ್ಯ ಗರಡಿಮನೆ ಜೀರ್ಣೋದ್ಧಾರ ಸಮಿತಿ ಏರ್ಪಡಿಸಿದ್ದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯ ದೊಡ್ಡ ಕುಸ್ತಿಯಲ್ಲಿ ದಾವಣಗೆರೆ ವೀರೇಶ್‌ "ಶಿವಮೊಗ್ಗ ಕಂಠೀರವ' ಬಿರುದು ಹಾಗೂ ಬೆಳ್ಳಿಗದೆ ಪಡೆದರು. ಗದಗಿನ ಸೋಮಶೇಖರ್‌ ವಿರುದ್ಧ ನಡೆದ ಪಂದ್ಯದಲ್ಲಿ ದಾವಣಗೆರೆ ವೀರೇಶ್‌ ಜಯಗಳಿಸಿದರು. ಶಿವಮೊಗ್ಗದ ಆನಂದ್‌ ಬೆಳಗಾವಿಯ ಇಬ್ರಾಹಿಂ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ ಆನಂದ್‌ ವಿಜೇತರಾಗಿ "ಮೈಸೂರು ಟೈಗರ್‌ ಪೈಲ್ವಾನ್‌ ಕೆಂಚಪ್ಪ' ಬಿರುದು ಪಡೆದರು.

ಶಿವಮೊಗ್ಗದ ಕಿರಣ್‌ ಬೆಳಗಾವಿಯ ಬಸು ನಡುವಿನ ಪಂದ್ಯದಲ್ಲಿ ಕಿರಣ್‌ ವಿಜೇತರಾಗಿ ಬೆಳ್ಳಿಗದೆಯೊಂದಿಗೆ "ಶಿವಮೊಗ್ಗ ಕಿಶೋರ್‌' ಬಿರುದಿಗೆ ಪಾತ್ರರಾದರು. ಬಾಗಲಕೋಟೆ ಕೃಷ್ಣ ವಿರುದ್ಧ ನಡೆದ ಪಂದ್ಯದಲ್ಲಿ ಹೊಳೆಹೊನ್ನೂರು ಸಮೀಪದ ಕೂಡಲಿ ಶಿವು ಜಯದ ನಗೆ ಬೀರಿ ಬೆಳ್ಳಿಗದೆ ಪಡೆದರು. ದಾವಣಗೆರೆ ಪ್ರಭು ನಾಯ್ಕ ವಿರುದ್ಧ ಶಿವಮೊಗ್ಗದ ಕಡೇನಂದಿಹಳ್ಳಿಯ ಶ್ರೀನಿವಾಸ್‌ ಜಯಗಳಿಸಿ "ವೀರಮದಕರಿ ನಾಯಕ' ಬಿರುದಿನಿಂದ ಪುರಸ್ಕೃತರಾದರು. ಹರಪನಹಳ್ಳಿಯ ಅಬ್ದುಲ್‌ ರೆಹಮಾನ್‌ ವಿರುದ್ಧ ಹೊನ್ನಾಳಿಯ ಸೋಮಶೇಖರ್‌ ಬೆಳ್ಳಿಗದೆಯೊಂದಿಗೆ "ವೀರ ಶಿವಪ್ಪನಾಯಕ' ಬಿರುದು ಪಡೆದರು. ಬೀರೂರಿನ ಕೆಎಸ್‌ಆರ್‌ಪಿ ಕುಮಾರ್‌, ವಿಜಯಪುರದ ಸೈಫ‌ುಲ್ಲಾ, ಶಿವಮೊಗ್ಗದ ಕಾಂತರಾಜ್‌ (ವೀರ ಸಾವರ್ಕರ್‌ ಬಿರುದು), ಶಿವಮೊಗ್ಗದ ಕಾಂತ (ಸಂಗೊಳ್ಳಿ ರಾಯಣ್ಣ ಬಿರುದು) ಜಯ ಗಳಿಸಿದರೆ, ಶಿವಮೊಗ್ಗದ ಗುರು ಮತ್ತು ಬೆಳಗಾವಿಯ ಗೋಪಾಲ್‌ ಸಮಬಲ ಸಾಧಿಸಿದರು.

Trending videos

Back to Top