ಲೇಡಿಗೋಶನ್ ಆಸ್ಪತ್ರೆ : ವೈದ್ಯರ ಹಾಗೂ ನರ್ಸ್ಗಳ ನೇಮಕಕ್ಕೆ ಕ್ರಮ

ಮಂಗಳೂರು : ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ನರ್ಸ್ಗಳ ನೇಮಕ ಕುರಿತು ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಲೇಡಿಗೋಷನ್ ಆಸ್ಪತ್ರೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಂಗಳವಾರ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.
ವೈದ್ಯರ ಕೊರತೆ ಇಲ್ಲ
ಲೇಡಿಗೋಶನ್ನಲ್ಲಿ ಪ್ರಸೂತಿ ವೈದ್ಯರ ಕೊರತೆ ಇಲ್ಲ. ಆದರೆ ವೈದ್ಯರ ಕೊರತೆ ಇದ್ದು, ಇದಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ನರ್ಸ್ಗಳ ಸಂಖ್ಯೆ 60 ಇದ್ದು, 120 ನರ್ಸ್ಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ವೆನ್ಲಾಕ್ನಲ್ಲಿ ಶಿಕ್ಷಣ ಮುಗಿಸಿ ತೆರಳುವ ನರ್ಸಿಂಗ್ ವಿದ್ಯಾರ್ಥಿಗಳನ್ನು ಲೇಡಿಗೋಶನ್ನಲ್ಲಿ ಬಳಸಿಕೊಳ್ಳುವ ಸಂಬಂಧ ಅವರಿಗೆ ಶಿಶುಕ್ಷು ವೇತನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಲೇಡಿಗೋಶನ್ನಲ್ಲಿ ಈ ವರ್ಷ ಒಟ್ಟು 8 ಮಕ್ಕಳ ಮರಣ ಸಂಭವಿಸಿದ್ದು, ಇತ್ತೀಚೆಗೆ ನಡೆದ ಘಟನೆ ಕುರಿತು ತನಿಖಾ ಸಮಿತಿ ನೇಮಕ ಮಾಡಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಲೇಡಿಗೋಶನ್ ಅಧೀಕ್ಷಕಿಯನ್ನು ಹುದ್ದೆಯಿಂದ ತೆರವುಗೊಳಿಸಿ ವರ್ಗ ಮಾಡಿರುವುದು ಆಡಳಿತಾತ್ಮಕ ಕೆಲಸವಾಗಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿ.ಪಂ. ಸಿಇಒ ಶ್ರೀವಿದ್ಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ, ವೈದ್ಯಾಧಿಕಾರಿಗಳಾದ ರಾಜೇಶ್ವರಿ, ಶಕುಂತಳಾ ಸಭೆಯಲ್ಲಿ ಉಪಸ್ಥಿತರಿದ್ದರು.
ಎಚ್ಡಿಕೆ ಉಳ್ಳಾಲಕ್ಕೆ ಬರುವುದಾದರೆ ಸ್ವಾಗತ
ಯು.ಟಿ. ಖಾದರ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಉಳ್ಳಾಲಕ್ಕೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸುವುದಾಗಿ ಜೆಡಿಎಸ್ ಜಿಲ್ಲಾ ಪ್ರಮುಖರು ತಿಳಿಸಿದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯು.ಟಿ. ಖಾದರ್, ಇದು ಪ್ರಜಾಪ್ರಭುತ್ವ ರಾಷ್ಟ್ರ. ಯಾವುದೇ ಪ್ರದೇಶದಿಂದ ಎಲ್ಲಿಗೆ ಬೇಕಾದರೂ ಹೋಗಲು ಅವಕಾಶವಿದೆ. ಎಚ್ಡಿಕೆ ಅವರು ಉಳ್ಳಾಲಕ್ಕೆ ಬರುವುದಾದರೆ ಸ್ವಾಗತ. ನಾನು ಎಚ್ಡಿಕೆ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ ಎಂದರು.