CONNECT WITH US  

ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರ ಇದೆ: ಶಾ

ಅಹ್ಮದಾಬಾದ್‌: ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಹಿಂದು ಧರ್ಮದಲ್ಲಿ ಪರಿಹಾರವಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಹಿಂದು ಧರ್ಮದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ನಾನು ಹೇಳುತ್ತೇನೆ. ನಾನು ಹಿಂದು ಧರ್ಮದಲ್ಲಿ ಹುಟ್ಟಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ ಎಂದು ಭಾವಿಸಬೇಕಾಗಿಲ್ಲ ಎಂದು ಅಮಿತ್‌ ಶಾ ಅವರು ಗುಜರಾತ್‌ ವಿಶ್ವವಿದ್ಯಾಲಯದ ಕನ್‌ವೆನ್‌ಶನ್‌ ಸೆಂಟರ್‌ನಲ್ಲಿ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್‌ ಕಲಾಂ ಅವರ "ಟ್ರಾನ್ಸೆಂಡೆನ್ಸ್‌: ಮೈ ಸ್ಪಿರಿಚುವಲ್‌ ಎಕ್ಸ್‌ಪೀರಿಯನ್ಸಸ್‌ ವಿತ್‌ ಪ್ರಮುಖ್‌ ಸ್ವಾಮೀಜಿ' ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಹೇಳಿದರು.

ನನಗೆ ಬದುಕಿನಲ್ಲಿ ಕಷ್ಟಕಾಲ ಎದುರಾಗಿದ್ದ ಎರಡು ವರ್ಷಗಳ ಅವಧಿಯಲ್ಲಿ ನಾನು ದೇಶದ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿದ್ದೇನೆ. ಭಾರತದಲ್ಲಿನ ಎಲ್ಲ ಜ್ಯೋತಿರ್ಲಿಂಗಗಳನ್ನು ಶಕ್ತಿಪೀಠಗಳನ್ನು ಸಂದರ್ಶಿಸಿದ್ದೇನೆ. ಆದರೆ ಗುಜರಾತ್‌ನಲ್ಲಿನ ಸೋಮನಾಥ ದೇವಾಲಯಕ್ಕೆ ಮಾತ್ರವೇ ಭೇಟಿ ನೀಡಲಾಗಿಲ್ಲ. ಕಾರಣ ಸೊಹರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಕೇಸಿಗೆ ಸಂಬಂಧಪಟ್ಟ ಹಾಗೆ ನಾನು ಗುಜರಾತ್‌ ಪ್ರವೇಶಿಸುವಂತಿರಲಿಲ್ಲ ಎಂದು ಅಮಿತ್‌ ಶಾ ಹೇಳಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಷ್ಟೇ ಅಮಿತ್‌ ಶಾ ಅವರು ಸೊಹರಾಬುದ್ದೀನ್‌ ಕೇಸಿನಿಂದ ಖುಲಾಸೆಗೊಂಡಿದ್ದರು.

ಹಿಂದು ಧರ್ಮಕ್ಕೆ ಶಂಕರಾಚಾರ್ಯರು ಆಖಾಡದ ಪರಂಪರೆಯನ್ನು ನೀಡುವ ಮೂಲಕ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಅಂತೆಯೇ ಸ್ವಾಮಿ ನಾರಾಯಣ ಪಂಥದ ಧಾರ್ಮಿಕ ನಾಯಕರಾದ ಪ್ರಮುಖ ಸ್ವಾಮೀ ಅವರು ಕೂಡ ಹಿಂದು ಧರ್ಮದ ಏಳಿಗೆಗೆ ಒಳ್ಳೆಯ ಯೋಗದಾನ ನೀಡಿದ್ದಾರೆ ಎಂದು ಅಮಿತ್‌ ಶಾ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ವಜೂಭಾಯಿ ವಾಲಾ ಅವರು ಸರಕಾರಕ್ಕಿಂತ ಧರ್ಮವೇ ಹೆಚ್ಚು ಮುಖ್ಯವಾಗುತ್ತದೆ ಎಂದು ಹೇಳಿದರು. ರಾಜದಂಡಕ್ಕಿಂತ ಧರ್ಮದಂಡವೇ ಹೆಚ್ಚು ಪರಿಣಾಮಕಾರಿಯಾಗಿದ್ದು ಜನರು ಅದರಿಂದಲೇ ಹೆಚ್ಚು ಸಂತೋಷದಿಂದ, ನೆಮ್ಮದಿಯಿಂದ ಬದುಕಬಲ್ಲರು ಎಂದು ಹೇಳಿದರು.
 


Trending videos

Back to Top