CONNECT WITH US  

ಪೆರುವೊಡಿಯವರಿಗೆ ದೋಗ್ರ ಪೂಜಾರಿ ಪ್ರಶಸ್ತಿ

ಯಕ್ಷಗಾನದಲ್ಲಿ ರಾಜ ಹಾಸ್ಯಗಾರರೆಂದೇ ಖ್ಯಾತರಾದ ಪೆರುವೊಡಿ ನಾರಾಯಣ ಭಟ್ಟರಿಗೆ ಈ ವರ್ಷದ ದೋಗ್ರ ಪೂಜಾರಿ ಪ್ರಶಸ್ತಿ.
ಯಕ್ಷಗಾನ ಸಂಘಟಕ, ಮೇಳಗಳ ವ್ಯವಸ್ಥಾಪಕರಾಗಿದ್ದ ಕೀರ್ತಿಶೇಷ ಕಲಾಗ್ರಣಿ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪಾತ್ರರ ಆಯ್ಕೆ ಪ್ರತಿ ವರ್ಷ ಮಹತ್ವದಿಂದ ಕೂಡಿರುತ್ತದೆ. 36ನೇ ವರ್ಷದ ಈ ಪುರಸ್ಕಾರಕ್ಕೆ ಹಿರಿಯ ಸಾಹಿತಿ ಡಾ| ಅಮೃತ ಸೋಮೇಶ್ವರರ ನೇತೃತ್ವದ ಸಮಿತಿ ಸೂಕ್ತ ವ್ಯಕ್ತಿಯೊಬ್ಬರನ್ನು ಹೆಸರಿಸಿದ್ದು ಆ ನಿಟ್ಟಿನಲ್ಲಿ ಕಲಾಭಿಮಾನಿಗಳಿಗೆ ಪರಿಚಿತರಾದ ನಾರಾಯಣ ಭಟ್ಟರ ಸಾಧನೆಯ ಮುಖ್ಯಾಂಶ ಇಲ್ಲಿದೆ.

ಪದ್ಯಾಣ ಭೀಮ ಭಟ್‌ ಮತ್ತು ಗುಣವತಿ ಅಮ್ಮ ಅವರ ಮಗನಾಗಿ 28-5-1927ರಲ್ಲಿ ಪದ್ಯಾಣದಲ್ಲಿ ಜನನ. ಬಾಲ್ಯದಲ್ಲಿ ಅಜ್ಜನ ಮನೆ ಪೆರುವೊಡಿಯಲ್ಲಿ ಬೆಳೆದ ಕಾರಣ ಪೆರುವೊಡಿ ನಾರಾಯಣ ಭಟ್ಟ ಎಂದು ಹೆಸರು ಬಂತು. 6ನೇ ತರಗತಿಯವರೆಗೆ ವಿದ್ಯಾಭ್ಯಾಸ. ಎಳವೆಯಲ್ಲಿ ಕಲಾಸಕ್ತಿ ಮೂಡಿ ಕುರಿಯ ವಿಠಲ ಶಾಸಿŒಗಳಿಂದ ಯಕ್ಷಗಾನ ಪಾಠ. ಕುಂಬಳೆ ರಾಮಚಂದ್ರ, ಕರ್ಗಲ್ಲು ಸುಬ್ಬಣ್ಣ ಭಟ್ಟರಿಂದಲೂ ನಾಟ್ಯಾಭ್ಯಾಸ ಮಾಡಿದ ನಾರಾಯಣ ಭಟ್ಟರು 17ನೇ ವಯಸ್ಸಿಗೆ ಯಕ್ಷಗಾನ ವೃತ್ತಿಗೆ ತೊಡಗಿದರು. ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್‌, ನಂದಾವರ, ಕುಂಬಳೆ, ಕದ್ರಿ, ಅಳದಂಗಡಿ ಇತ್ಯಾದಿ ಮೇಳಗಳಲ್ಲಿ 50 ವರ್ಷಗಳ ಕಾಲ ಯಕ್ಷಗಾನ ಕಲಾವಿದನಾಗಿ ಸೇವೆ. 

ದಮಯಂತಿ ಪುನಃ ಸ್ವಯಂವರದ ಬಾಹುಕ, ಕಂಸವಧೆಯ ಅಗಸ, ಶ್ರೀಕೃಷ್ಣಲೀಲೆಯ ಪಂಡಿತ, ವಿಜಯ, ಅತಿಕಾಯ ದೂತ, ಗಿರಿಜಾ ಕಲ್ಯಾಣದ ಭೈರಾಗಿ, ದಕ್ಷಯಜ್ಞದ ಬ್ರಾಹ್ಮಣ, ದೇವಿ ಮಹಾತ್ಮೆಯ ಸುಗ್ರೀವ ಇತ್ಯಾದಿ ವೇಷಗಳ ನಿರ್ವಹಣೆಯಲ್ಲಿ ನಿಸ್ಸೀಮರಾಗಿ ಪೆರುವೊಡಿ ಯವರು ಗುರುತಿಸಲ್ಪಟ್ಟರು. ಗುಣಸುಂದರಿ ಪಾಪಣ್ಣ ವಿಜಯದ ಪಾಪಣ್ಣ ಇವರಿಗೆ ಖ್ಯಾತಿಯ ಉತ್ತುಂಗವನ್ನು ತಂದುಕೊಟ್ಟಿತು. ಶನಿಗ್ರಹಚಾರದ ಫ‌ಲವಾಗಿ ಕಂಗೆಟ್ಟ ನಳನ ಪಾತ್ರವನ್ನು ಬಾಹುಕನ ವೇಷಕ್ಕೆ ತಂದು ಕೊಡುವಾಗ ಒಳ್ಳೆಯ ಮುಖ ವರ್ಣಿಕೆಯನ್ನು ಪ್ರಕಟಿಸಿದರು. ಬಡಗುತಿಟ್ಟಿನ ಅಮೃತೇಶ್ವರಿ ಮೇಳದಲ್ಲಿಯೂ ತಿರುಗಾಟ ಮಾಡಿದ ಇವರದು ವೈವಿಧ್ಯಮಯ ಹಾಸ್ಯ. 

ಮೂಲ್ಕಿ ಮೇಳ ನಡೆಸುತ್ತಿದ್ದ ಇವರ ಅಣ್ಣ ಪದ್ಯಾಣ ಕೃಷ್ಣ ಭಟ್ಟರ ಜತೆಗೆ ನಾರಾಯಣ ಭಟ್ಟರೂ ವ್ಯವಸ್ಥಾಪಕತ್ವಕ್ಕೆ ಕೈ ಜೋಡಿಸಿದರು. 
ಕಡತೋಕ ಮಂಜುನಾಥ ಭಾಗವತರನ್ನು ತೆಂಕುತಿಟ್ಟಿಗೆ ಮೂಲ್ಕಿ ಮೇಳದ ಮುಖೇನ ಪರಿಚಯಿಸಿದರು. ಮುಂದೆ ಧರ್ಮಸ್ಥಳ ಮೇಳ ಸೇರಿದ ಕಡತೋಕ ಭಾಗವತರ ಭಾಗವತಿಕೆಯನ್ನು ಪೆರುವೊಡಿಯವರು ಚೆನ್ನಾಗಿ ಮೆಚ್ಚಿಕೊಳ್ಳುತ್ತಾರೆ. ತಮ್ಮ ತಾರುಣ್ಯದಲ್ಲಿ ಧರ್ಮಸ್ಥಳ ಮೇಳದ ಕಲಾವಿದರಾಗಿದ್ದಾಗಿನ ಕಲಾ ಚಟುವಟಿಕೆಗಳನ್ನು ನೆನಪಿಸಿಕೊಳ್ಳುತ್ತಾರೆ.  ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆ, ನೆಡ್ಲೆ ನರಸಿಂಹ ಭಟ್ಟ ಮತ್ತು ಮಳಿ ಜಿ. ಶ್ಯಾಮ ಭಟ್ಟರ ಚೆಂಡೆ ಮದ್ದಳೆ ಹಿಮ್ಮೇಳ ವಾದನವನ್ನೂ ಜ್ಞಾಪಿಸಿಕೊಳ್ಳುತ್ತಾರೆ. ಹಿರಿಯ ಭಾಗವತ ಉಪ್ಪೂರು ನಾರಾಯಣ ಭಾಗವತ, ಹಿರಿಯ ಬಲಿಪ ಭಾಗವತರು, ಶೇಣಿ-ಸಾಮಗ, ಪಾತಾಳ ವೆಂಕಟರಮಣ ಭಟ್‌, ಪುತ್ತೂರು ನಾರಾಯಣ ಹೆಗ್ಡೆ, ಕುಂಬಳೆ ಸುಂದರ ರಾವ್‌ ಇವರನ್ನೆಲ್ಲ ಉಲ್ಲೇಖೀಸುತ್ತಾರೆ.

ಪೆರುವೊಡಿ ಅವರಿಗೆ ದೊರೆತ ಸಮ್ಮಾನಗಳು ಹಲವಾರು. ಇದೀಗ ಪ್ರತಿಷ್ಠಿತ ದೋಗ್ರ ಪೂಜಾರಿ ಪ್ರಶಸ್ತಿ ದೊರೆಯುತ್ತಿದೆ. ಪುತ್ತೂರಿನ ಬಪ್ಪಳಿಕೆಯ ನೂಜಿಯಲ್ಲಿ ವಾಸ್ತವ್ಯ. ಪತ್ನಿ ಸಾವಿತ್ರಿ, ಮೂವರು ಪುತ್ರಿಯರ ಸಂಸಾರ ಇವರದು. ಸಾತ್ವಿಕ ಸ್ವಭಾವದ ಹಿರಿಯ ಯಕ್ಷಗಾನ ಕಲಾವಿದ 89ರ ಹರೆಯದ ಪೆರುವೊಡಿ ನಾರಾಯಣ ಭಟ್ಟರಿಗೆ ದೋಗ್ರ ಪೂಜಾರಿ ಪ್ರಶಸ್ತಿ ಅರ್ಹ ಪುರಸ್ಕಾರ.

ಎಲ್‌. ಎನ್‌. ಭಟ್ಟ ಮಳಿ

Trending videos

Back to Top