CONNECT WITH US  

ಕನ್ನಡದ ಬದ್ಮಾಶ್ ಚಿತ್ರ ನೋಡ್ತಾರಂತೆ ಸಲ್ಮಾನ್ ಖಾನ್

"ಬದ್ಮಾಶ್‌' ಚಿತ್ರ ಹಿಂದಿಗೆ ರೀಮೇಕ್‌ ಆಗುತ್ತಾ? ರೀಮೇಕ್‌ನಲ್ಲಿ ಸಲ್ಮಾನ್‌ ಖಾನ್‌ ನಟಿಸುತ್ತಾರಾ? ಹೀಗೊಂದು ಪ್ರಶ್ನೆಯಂತೂ ಈಗ ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ "ಬದ್ಮಾಶ್‌' ಚಿತ್ರವನ್ನು ಸಲ್ಮಾನ್‌ ಖಾನ್‌ ರೀಮೇಕ್‌ ಮಾಡುತ್ತಾರೆಂಬ ಸುದ್ದಿ. ಯಾವ "ಬದ್ಮಾಶ್‌' ಎಂದರೆ ಧನಂಜಯ್‌ ನಾಯಕರಾಗಿ ನಟಿಸುತ್ತಿರುವ ಚಿತ್ರ. ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಫೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಚಿತ್ರತಂಡ ಬಿಝಿಯಾಗಿದೆ.

ಆದರೆ, ಚಿತ್ರದ ಕೆಲವು ತುಣುಕುಗಳನ್ನು ನೋಡಿ ಖುಷಿಯಾದ ಸಲ್ಮಾನ್‌ ಖಾನ್‌ ಈ ಸಿನಿಮಾವನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಸಲ್ಮಾನ್‌ ಖಾನ್‌ "ಬದ್ಮಾಶ್‌' ನೋಡುವ ಬಗ್ಗೆ ಮಾತನಾಡುವ ನಿರ್ದೇಶಕ ಆಕಾಶ್‌ ಶ್ರೀವತ್ಸ "ಇತ್ತೀಚೆಗೆ ನಮ್ಮ ನಿರ್ಮಾಪಕ ರವಿ ಕಶ್ಯಪ್‌ ಅವರು
ಮುಂಬೈನಲ್ಲಿದ್ದಾಗ ಅವರ ಸ್ನೇಹಿತರೊಬ್ಬರು ಸಲ್ಮಾನ್‌ ಖಾನ್‌ಗೆ ನಮ್ಮ ಚಿತ್ರದ ಟೀಸರ್‌ ತೋರಿಸಿದರು.

ಟೀಸರ್‌ನಲ್ಲಿರುವ ಕೆಲವು ದೃಶ್ಯಗಳನ್ನು ನೋಡಿ ಖುಷಿಯಾದ ಸಲ್ಮಾನ್‌, ನಮ್ಮ ನಿರ್ಮಾಪಕರನ್ನು ಭೇಟಿ ಮಾಡಿಸುವಂತೆ ಹೇಳಿದರು. ಅದರಂತೆ ರವಿ ಕಶ್ಯಪ್‌, ಸಲ್ಮಾನ್‌ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಸಿನಿಮಾ ಬಗ್ಗೆ ಆಸಕ್ತಿಯಿಂದ ಮಾತನಾಡಿದ ಸಲ್ಮಾನ್‌ ಸಿನಿಮಾ ಮುಗಿಸಿ ಫ‌ಸ್ಟ್‌ ಕಾಪಿಯನ್ನು ತೋರಿಸುವಂತೆ ಹೇಳಿದ್ದಾರೆ. ಹಿಂದಿಗೆ ರೀಮೇಕ್‌ ಮಾಡುವ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ. ಇಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಬಾಲಿವುಡ್‌ ಮಂದಿಗಾಗಿ ಚಿತ್ರದ ಪ್ರೀಮಿಯರ್‌ ಆಯೋಜಿಸುವ ಉದ್ದೇಶ ಕೂಡಾ ನಮಗಿದೆ. "ಬದ್ಮಾಶ್‌' ಸಲ್ಮಾನ್‌ ಅವರಿಂದ ಮೆಚ್ಚುಗೆ ಪಡೆದಿದ್ದು ಖುಷಿ ತಂದಿದೆ' ಎನ್ನುತ್ತಾರೆ.

ಮುಂದಿನ ತಿಂಗಳು ಸಲ್ಮಾನ್‌ ಖಾನ್‌ಗೆ ಚಿತ್ರ ತೋರಿಸಬೇಕೆಂಬ ಕಾರಣಕ್ಕೆ ಚಿತ್ರದ ಕೆಲಸಗಳು ಕೂಡಾ 
ಸಿಕ್ಕಾಪಟ್ಟೆ ಸ್ಪೀಡಾಗಿ ನಡೆಯುತ್ತಿವೆ. ಚಿತ್ರ ಮೇನಲ್ಲಿ ಬಿಡುಗಡೆಯಾಗಲಿದೆ. ಧನಂಜಯ್‌ಗೆ ಸಂಚಿತಾ
ನಾಯಕಿಯಾಗಿ ನಟಿಸಿದ್ದಾರೆ.

Trending videos

Back to Top