CONNECT WITH US  

ಅಪೂರ್ವ ಟ್ರಿಮ್‌ ಆಗಿದೆ -ರವಿಚಂದ್ರನ್‌

ರವಿಚಂದ್ರನ್‌ ಖುಷಿಯಾಗಿದ್ದಾರೆ. ರವಿಚಂದ್ರನ್‌ ಸಿಟ್ಟಾಗಿದ್ದಾರೆ. ಅವರಿಗೆ ಖುಷಿ ಕೊಟ್ಟಿರುವುದು ಪ್ರೇಕ್ಷಕ ಪ್ರಭುವಿನ ಪ್ರತಿಕ್ರಿಯೆ. ಮೊದಲ ಮೂರು ದಿನದ ಗಳಿಕೆ ಮತ್ತು ಅಭಿಪ್ರಾಯ ಚೆನ್ನಾಗಿದೆ. ಎಲ್ಲೆಲ್ಲಿ ಚಿತ್ರ ಪ್ರದರ್ಶನ ಕಂಡಿದೆಯೋ ಅಲ್ಲೆಲ್ಲ ಜನ ನೋಡಿ ಸಂತೋಷಪಡುತ್ತಿದ್ದಾರೆ. ಸೋಮವಾರದ ಹೊತ್ತಿಗೆ ಸಾಮಾನ್ಯವಾಗಿ ಕಲೆಕ್ಷನ್‌ ಬಿದ್ದು ಹೋಗುವುದುಂಟು. ಆದರೆ, ಅಪೂರ್ವದ ಗಳಿಕೆ ಸೋಮವಾರ 20,000 ಜಾಸ್ತಿಯಾಗಿದೆ ಅನ್ನುತ್ತಾರೆ ರವಿ.

ಅವರಿಗೆ ಸಿಟ್ಟು ಬರಿಸಿರುವುದು ಚಿತ್ರದ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿರುವ ತಂಡ. ಯಾರೋ ಕೆಲವರು ಗುಂಪು ಮಾಡಿಕೊಂಡು ಅಪಪ್ರಚಾರ ಮಾಡಲು ನೋಡುತ್ತಿದ್ದಾರೆ. ಅದು ನನ್ನ ಗಮನಕ್ಕೂ ಬಂದಿದೆ. ಅದರ ಬಗ್ಗೆ ನನಗೇನೂ ಚಿಂತೆಯಿಲ್ಲ. ಯಾಕೆಂದರೆ ಗಳಿಕೆ ಚೆನ್ನಾಗಿಯೇ ಇದೆ. ಆದರೆ ಹಿತಶತ್ರುಗಳು ಯಾರೆಂಬುದು ಅರ್ಥವಾಗಿದ್ದು ಸಂತೋಷ ಅನ್ನುವುದು ರವಿಚಂದ್ರನ್‌ ಪ್ರತಿಕ್ರಿಯೆ.

ಸಿನಿಮಾ ನಿಧಾನವಾಗಿ ಸಾಗುತ್ತದೆ ಅನ್ನುವ ಪ್ರೇಕ್ಷಕರ ಅಭಿಪ್ರಾಯವನ್ನು ಮನ್ನಿಸಿ, ರವಿಚಂದ್ರನ್‌ ಇದೀಗ ಸಿನಿಮಾವನ್ನು ಟ್ರಿಮ್‌ ಮಾಡಿದ್ದಾರೆ. ಆರಂಭದಲ್ಲಿ ಬರುವ ಬದುಕಿನ ಕುರಿತ ಇಂಗ್ಲಿಷ್‌ ಕೊಟೇಶನ್‌ಗಳು ಮತ್ತು ಜೀವನದ ಕುರಿತು ಆಡುವ ಮಾತುಗಳಿಗೆ ಕತ್ತರಿ ಬಿದ್ದಿದೆ. ಎರಡನೇ ಭಾಗದಲ್ಲೂ ಕೆಲವೊಂದು ಸನ್ನಿವೇಶಗಳನ್ನು ಟ್ರಿಮ್‌ ಮಾಡಲಾಗಿದೆ. ಈ ಹೊಸ ವರ್ಷನ್‌ ಸೋಮವಾರ 4 ಗಂಟೆಯಿಂದಲೇ ಎಲ್ಲ ಚಿತ್ರಮಂದಿರಗಳಲ್ಲೂ ಪ್ರದರ್ಶಿತಗೊಳ್ಳಲಿದೆ. "ಹೊಸದಾಗಿ ಏನೋ ಮಾಡೋದಕ್ಕೆ ಹೋದೆ. ಅದು ಸ್ಲೋ ಅನ್ನಿಸಿದರೆ ನಾನೇನು ಮಾಡಲಿ. ಆ ಭಾಗವನ್ನು ಕಿತ್ತು ಹಾಕಿದ್ದೇನೆ. ಈಗ ಆರಾಮಾಗಿ ಕತೆಯೊಂದಿಗೇ ಸಿನಿಮಾ ಶುರುವಾಗುತ್ತದೆ. ನಾನು ಪ್ರೀತಿಯಿಟ್ಟು ಒಂದೂವರೆ ವರ್ಷ ಯಾವುದಕ್ಕೋಸ್ಕರ ಒದ್ದಾಡಿದೆನೋ ಆ ಪೋರ್ಷನ್‌ ಈಗ ಸಿನಿಮಾದಲ್ಲಿ ಇಲ್ಲ ಅನ್ನೋದಷ್ಟೇ ಬೇಸರ. ಇದೀಗ ನೇರವಾದ, ಸರಳವಾದ, ಬೋರು ಮಾಡದ ಹೊಸ ವರ್ಷನ್‌ ನಿಮ್ಮ ಮುಂದಿದೆ' ಅನ್ನುತ್ತಾರೆ ರವಿ. ಈ ಹೊಸ ಅವತರಣಿಕೆಯನ್ನು ಪ್ರೇಕ್ಷಕರ ಕೈಯಲ್ಲಿಟ್ಟು ರವಿಚಂದ್ರನ್‌ ತಿರುಪತಿಗೆ ಹೊರಟಿದ್ದಾರೆ. ಅಲ್ಲಿ ಅವರ ಹುಟ್ಟುಹಬ್ಬದ ಸೆಕೆಂಡ್‌ ಹಾಫ್ ನೆರವೇರಲಿದೆ.

ಸಂಭ್ರಮದ ಹುಟ್ಟುಹಬ್ಬ
 ಸೋಮವಾರ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ. "ಅಪೂರ್ವ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಖುಷಿಯಲ್ಲಿರುವ ರವಿಚಂದ್ರನ್‌ ತಮ್ಮ ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ರವಿಚಂದ್ರನ್‌ ಅವರಿಗೆ ಶುಭಕೋರಲು ಬೆಳಗ್ಗೆಯಿಂದಲೇ ರಾಜಾಜಿನಗರದ ಅವರ ಮನೆಮುಂದೆ ಅಭಿಮಾನಿಗಳು ಸೇರಿದ್ದರು. ಅವರೆಲ್ಲರ ಜೊತೆ ಕೇಕ್‌ ಕತ್ತರಿಸಿ ರವಿಚಂದ್ರನ್‌ ಹುಟ್ಟುಹಬ್ಬ ಆಚರಿಸಿಕೊಂಡರು.

ಚಿತ್ರಗಳು: ಮನು

Trending videos

Back to Top