CONNECT WITH US  

ಖಾಸಗಿ ಶಾಲೆಗಳ ಸಮಸ್ಯೆ ಆಲಿಸಲು ಹಿಂದೇಟು

ಬೆಂಗಳೂರು: ರಾಜ್ಯದ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆ ಆಲಿಸಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಶಿಕ್ಷಣ ಕ್ಷೇತ್ರಕ್ಕಿಂತ ಸ್ವಕ್ಷೇತ್ರವೇ (ಕೊಳ್ಳೇಗಾಲ) ಮುಖ್ಯವಾಗಿದೆ ಎಂದು ಕರ್ನಾಟಕ ಖಾಸಗಿ ಶಾಲಾಡಳಿತ ಮಂಡಳಿಗಳ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ದೂರಿದರು.

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕೆಲವು ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿ, ಕೆಳ ಹಂತದಲ್ಲಿ ಬಹುತೇಕ ಎಲ್ಲ ಅಧಿಕಾರಿಗಳು ಕಡತ ವಿಲೇವಾರಿಗೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳಿಗೆ ಇನ್ನೂ ಸರಿಯಾಗಿ ಪಠ್ಯಪುಸ್ತಕ ವಿತರಣೆಯಾಗಿಲ್ಲ. ಆರ್‌ಟಿಇ ಶುಲ್ಕ ಮರುಪಾವತಿ ಹಣ ಬಂದಿಲ್ಲ.

ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ, ಅಧಿಕಾರಿಗಳ ಹಂತದಲ್ಲಿ ಅದು ಶಾಲೆಗಳಿಗೆ ವಿಲೇವಾರಿಯಾಗಿಲ್ಲ. ಹೀಗೆ ಹತ್ತಾರು ಸಮಸ್ಯೆಗಳನ್ನು ಖಾಸಗಿ ಶಾಲೆಗಳು ಎದುರಿಸುತ್ತಿವೆ. ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ಮಾಡಬೇಕು ಎಂದಿದ್ದೇವೆ. ಆದರೆ, ಅವರು ನಮಗೆ ಸಿಗುತ್ತಿಲ್ಲ. ಶಿಕ್ಷಣ ಕ್ಷೇತ್ರಕ್ಕಿಂತ ಅವರಿಗೆ ಸ್ವಕ್ಷೇತ್ರವೇ ಹೆಚ್ಚಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿದ್ಯಾರ್ಥಿಗಳ ಬ್ಯಾಗ್‌ ಬಾರ ಕಡಿಮೆ ಮಾಡುವ ಸಂಬಂಧ ಸರ್ಕಾರ ಕೆಲವು ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಯಾವುದೇ ಅಧ್ಯಯನವಿಲ್ಲದೇ, ಅವೈಜ್ಞಾನಿಕವಾಗಿ ತೆಗೆದುಕೊಳ್ಳುವ ಇಂತಹ ತೀರ್ಮಾನಕ್ಕೆ ನಾವು ಒಪ್ಪುವುದಿಲ್ಲ. ಎಲ್‌ಕೆಜಿಯಿಂದ ಎರಡನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಹೋಮ್‌ ವರ್ಕ್‌ ನೀಡಬಾರದು ಎಂಬ ನೀತಿಯೂ ಸರಿಯಲ್ಲ. ಕಲಿಕೆಯ ಆರಂಭದಲ್ಲಿಯೇ ಹೋಮ್‌ ವರ್ಕ್‌ ನೀಡದೇ ಇದ್ದರೆ ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪ್ರತಿ ಶಾಲೆಗೂ ಲಾಕರ್‌ ವ್ಯವಸ್ಥೆ ಇರಬೇಕು ಎಂಬ ಕಲ್ಪನೆಯೇ ಸರಿ ಇಲ್ಲ. ರಾಜ್ಯ ಪಠ್ಯಕ್ರಮದ 17 ಸಾವಿರ ಶಾಲೆಗಳು 10ರಿಂದ 30 ಸಾವಿರ ರೂ. ಶುಲ್ಕ ಪಡೆದು ಶಾಲೆ ನಡೆಸುತ್ತಿವೆ. ಆಡಳಿತ ಮಂಡಳಿಗಳು ಎಲ್ಲ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಲಾಕರ್‌ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಇದನ್ನು ಕಡ್ಡಾಯಗೊಳಿಸದೇ, ಶಾಲೆಗಳಿಗೆ ಶಿಫಾರಸಿನ ರೀತಿಯಲ್ಲಿ ನೀಡಬೇಕು.

ಬ್ಯಾಗ್‌ ರಹಿತ ದಿನ ಕಲ್ಪನೆ ಚೆನ್ನಾಗಿದೆ. ಅದರ ಜತೆಗೆ ತಿಂಗಳ ಎರಡನೇ ಶನಿವಾರ ಶಾಲೆಗೆ ರಜೆ ನೀಡಿ, ಇನ್ನೊಂದು ಶನಿವಾರ ದಿನಪೂರ್ತಿ ತರಗತಿ ನಡೆಸುವಂತೆ ಮಾಡಬೇಕು. ಕ್ರೀಡೆ ಸಹಿತವಾಗಿ ವಿವಿಧ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಬಳಸುವ ಪರಿಕರ ಮತ್ತು ವಸ್ತ್ರ ಶಾಲೆಯಲ್ಲೇ ಇಟ್ಟುಕೊಳ್ಳಬೇಕು ಎಂಬ ನೀತಿ ಸರಿಯಲ್ಲ ಎಂದು ಹೇಳಿದರು. ಸಂಘಟನೆಗಳ ಪದಾಧಿಕಾರಿಗಳಾದ ನಟೇಶ್‌, ಎಂ.ಶ್ರೀನಿವಾಸ್‌, ಪಿ.ಎಂ.ಸತ್ಯನಾರಾಯಣ ಮೊದಲಾದವರು ಇದ್ದರು.

ಶಾಲಾ ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿದ್ದೇವೆ. ದರಪಟ್ಟಿ ಶಾಲೆಗಳಲ್ಲಿ ಅಳವಡಿಸದಂತೆ ಕಳೆದ ವರ್ಷ ನಾವೇ ಸೂಚನೆ ನೀಡಿದ್ದೇವೆ. ಮುಂದಿನ ವರ್ಷದಲ್ಲಿ ಈ ಎಲ್ಲ ಸಮಸ್ಯೆ ಸರಿಯಾಗಲಿದೆ.
-ಡಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲಾಡಳಿತ ಮಂಡಳಿಗಳ ಸಂಘಟನೆ

Trending videos

Back to Top