CONNECT WITH US  

ಸೆಪ್ಟೆಂಬರ್‌ಗೆ ಕಡಿತಗೊಂಡ ಹಾಲಿನ ದರ ಏರಿಕೆ 

ಆನೇಕಲ್‌: ಕಡಿತಗೊಂಡಿರುವ ಹಾಲಿನ ದರವನ್ನು ಸೆಪ್ಟೆಂಬರ್‌ನಲ್ಲಿ ಏರಿಕೆ ಮಾಡಲಾಗುವುದು ಎಂದು ಬಮೂಲ್‌ ಅಧ್ಯಕ್ಷ ಬಿ.ಜೆ.ಆಂಜಿನಪ್ಪ ತಿಳಿಸಿದರು. ತಾಲೂಕಿನ ದಾಸನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು ಮಾರಾಟ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಲಿನ ದರ ಕಡಿತ ಗೊಳಿಸಲಾಗಿದ್ದು, ಕನಕಪುರದ ಶಿವನಹಳ್ಳಿ ಸಮೀಪದಲ್ಲಿ ಸುಮಾರು 515 ಕೋಟಿ ವೆಚ್ಚದಲ್ಲಿ ಬಮೂಲ್‌ ವತಿಯಿಂದ ಮೆಗಾಡೈರಿ ನಿರ್ಮಾಣವಾಗುತ್ತಿದೆ. ಒಂದೆರಡು ತಿಂಗಳಲ್ಲಿ ಡೇರಿ ಪ್ರಾರಂಭವಾಗಲಿದ್ದು ನಂತರ ರೈತರಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಲಾಭಾಂಶ ನೀಡಲು ಸಾಧ್ಯವಾಗುತ್ತದೆ ಎಂದರು.

ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಬಮೂಲ್‌  ಸಂಸ್ಥೆ ರಾಸುಗಳಿಗೆ ಮತ್ತು ಹಾಲು ಉತ್ಪಾದಕರಿಗೆ ವಿಮಾ ಯೋಜನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು  ರೈತರು ಎಲ್ಲಾ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ರಾಜ್ಯದಲ್ಲಿ ಬೇರೆ-ಬೇರೆ ರಾಜ್ಯದ ಹಾಲನ್ನು ಮಾರಾಟ ಮಾಡಲು ಸರ್ಕಾರ ನಿಷೇಧಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಂದಿನಿ ಉತ್ಪನ್ನಗಳು ಗುಣಮಟ್ಟದಾಗಿದ್ದು ಪ್ರತಿಯೊಬ್ಬರೂ  ಉತ್ಪನ್ನಗಳನ್ನು ಬಳಕೆ ಮಾಡಿ ಉತ್ತಮ ಆರೋಗ್ಯ ಹೊಂದಬೇಕೆಂದರು.

ಆನೇಕಲ್‌ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಮೋಹನ್‌ ಕುಮಾರ್‌, ದಾಸನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೈ.ನಾಗರಾಜ್‌, ಮುಖ್ಯ ಕಾರ್ಯ ನಿರ್ವಾಹಕ ಸಿ.ರಮೇಶ್‌, ನಿರ್ದೇಶಕರು, ಹಾಲು ಉತ್ಪಾದಕರು ಇದ್ದರು.


Trending videos

Back to Top