ಇನ್ಮುಂದೆ ಗ್ರಾಪಂಗಳಲ್ಲೇ ಆಧಾರ್ ತಿದ್ದುಪಡಿ

ದೊಡ್ಡಬಳ್ಳಾಪುರ: ದೇಶದಲ್ಲಿ ಇದೇ ಮೊದಲ ಬಾರಿ ರಾಜ್ಯದ 6022 ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಪಂಗಳಲ್ಲಿಯೇ ವಿವಿಧ ಆನ್ಲೈನ್ ಬುಕಿಂಗ್ ಸೌಲಭ್ಯಗಳನ್ನು ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳ ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ 2018ರ ಜನಸಂಖ್ಯೆಯಂತೆ ಶೇ.95ರಷ್ಟು ಆಧಾರ್ ನೋಂದಣಿಗಳಾಗಿವೆ. ಆದರೆ ಆಧಾರ್ ತಿದ್ದುಪಡಿಗಾಗಿ ಜನತೆ ಹೋಬಳಿ ಅಥವಾ ತಾಲೂಕು ಕೇಂದ್ರ ಬ್ಯಾಂಕ್ ಮತ್ತು ಅಂಚೆ ಕಚೇರಿ ಅವಲಂಬಿಸಬೇಕಿತ್ತು. ಈ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.
ಗ್ರಾಪಂಗಳಿಗೆ ವರ್ಗಾವಣೆ: ರಾಜ್ಯದ 6022 ಗ್ರಾಪಂಗಳಲ್ಲೂ ಆಧಾರ್ ತಿದ್ದುಪಡಿ ಕೇಂದ್ರ ಸ್ಥಾಪಿಸಲಾಗಿದ್ದು, ಸಾರ್ವಜನಿಕರ ಮನೆ ವಿಳಾಸ, ಮೊಬೈಲ್ ಸಂಖ್ಯೆ, ಪಿನ್ಕೋಡ್ ಹಾಗೂ ಇ-ಮೇಲ್ ಐಡಿಗಳನ್ನು ಆಧಾರ್ನಲ್ಲಿ ತಿದ್ದುಪಡಿ ಮಾಡಲಾಗುವುದು. ಈಗಾಗಲೇ ಜಾತಿ, ಆದಾಯ ಪ್ರಮಾಣ ಪತ್ರ ನೀಡಲಾಗುತ್ತಿದ್ದು ಹೋಬಳಿ ಕೇಂದ್ರಗಳಿಂದ ಗ್ರಾಪಂಗಳಿಗೆ ವರ್ಗಾವಣೆಯಾಗಿದೆ ಎಂದು ತಿಳಿಸಿದರು.
ಟಿಕೆಟ್ ಬುಕಿಂಗ್: ರೈಲ್ವೆ ಟಿಕೆಟ್ ಬುಕಿಂಗ್, ತಿರುಪತಿ ಮೊದಲಾದ ದೇವಾಲಯಗಳಿಗೆ ಆನ್ಲೈನ್ನಲ್ಲಿ ಬುಕಿಂಗ್ ಮಾಡುವುದು, ವಿದ್ಯುತ್ ಬಿಲ್ ಪಾವತಿ, ನೀರಿನ ಬಿಲ್ ಪಾವತಿ, ಕಂದಾಯ ಪಾವತಿ, ಬಸ್, ವಿಮಾನ, ರೈಲು ಪ್ರಮಾಣದ ಮುಂಗಡ ಬುಕ್ಕಿಂಗ್ ಸೇವೆ ಸೇರಿದಂತೆ ನಾನಾ ಸೇವೆಗಳನ್ನು ಗ್ರಾಪಂಗಳಲ್ಲಿ ಒದಗಿಸಲು ಯೋಜನೆ ರೂಪಿಸಲಾಗಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಗ್ರಾಪಂಳಲ್ಲಿ ಬೆಂಗಳೂರು-ಒನ್ ಮಾದರಿಯಲ್ಲೇ ಸೇವಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸರ್ವರ್ ಸಮಸ್ಯೆಗೆ ಪರಿಹಾರ: ತಾಲೂಕು ಕಚೇರಿ, ನಾಡ ಕಚೇರಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮೇಲಿನ ಕೆಲಸದ ಒತ್ತಡ ವನ್ನು ತಪ್ಪಿಸಲು ಗ್ರಾಪಂಗಳಲ್ಲಿ ಸೇವಾ ಕೇಂದ್ರಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಕೆ-ಸ್ವಾನ್ನಲ್ಲಿ ಸರ್ವರ್ ಸಮಸ್ಯೆ ಇರುವುದಿಂದ 500 ಕೋಟಿ ರೂ. ವೆಚ್ಚದಲ್ಲಿ ಕೆ-ಸ್ವಾನ್-2 ಎಂಬ ನೆಟ್ವರ್ಕ್ ಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದ್ದು, ಇನ್ನು 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಗ್ರಾಮ ಪಂಚಾಯ್ತಿಗಳಿಗೂ ಸಹ ನೇರ ಸಂಪರ್ಕ ಕಲ್ಪಿಸಿ, ಅಂತರ್ಜಾಲ ಸುಗಮವಾಗಿರುವಂತೆ ಮಾಡಲಾಗುವುದು ಎಂದು ತಿಳಿಸಿದರು.