CONNECT WITH US  

ಖಾತೆ ಗೊಂದಲಗಳಿಗೆ ಶೀಘ್ರ ಪರಿಹಾರ

ದೊಡ್ಡಬಳ್ಳಾಪುರ: ಅಕ್ರಮ ಸಕ್ರಮದಡಿ ಖಾತೆಗಳಾಗದಿರುವ ಬಗ್ಗೆ ದೂರುಗಳು ಬಂದಿರುವ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದ್ದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ಶಾಸಕರ ಕಚೇರಿಯಲ್ಲಿ ನಾಗರಿಕರ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಅಕ್ರಮ ಸಕ್ರಮದಡಿ ಖಾತೆಗಳಾಗದಿರುವುದು ರಾಜ್ಯಾದ್ಯಂತ ಇರುವ ಸಮಸ್ಯೆಯಾಗಿದೆ ಎಂದರು. 

ನಗರಸಭೆಯಲ್ಲಿ ಇ-ಖಾತೆಗಳಾಗುತ್ತಿಲ್ಲ. ಈ ಹಿಂದಿನ ಖಾತೆ ಪ್ರಮಾಣಪತ್ರ ಪಡೆದವರು, ಬ್ಯಾಂಕ್‌ಗಳಲ್ಲಿ ಸಾಲ ಮೊದಲಾಗಿ ವಿವಿಧೆಡೆ ದಾಖಲೆ ನೀಡಿದ್ದಾರೆ. ಆದರೆ ಈಗ ಖಾತೆ ಪ್ರಮಾಣಪತ್ರ ಸಿಗದಿರುವುದರಿಂದ ಸಾಲ ನವೀಕರಣ ಮಾಡಲಾಗುತ್ತಿಲ್ಲ. ವಿವಿಧ ಉದ್ದೇಶಗಳಿಗೆ ಖಾತೆ ಪ್ರಮಾಣಪತ್ರ ಬೇಕಾಗಿರುವುದರಿಂದ ನಗರಸಭೆಯಲ್ಲಿ ಸಿಗದಂತಾಗಿ ನಾಗರಿಕರು ತುಂಬಾ ತೊಂದರೆ ಪಡುತ್ತಿದ್ದಾರೆ.

ಈ ಹಿಂದೆ ಅಧಿಕಾರಿಗಳು ಮಾಡಿರುವ ತಪ್ಪಿಗೆ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ನಾಮಿನಿ ಸದಸ್ಯ ಎಂ.ಜಿ.ಶ್ರೀನಿವಾಸ್‌ ಶಾಸಕರ ಗಮನಕ್ಕೆ ತಂದರು.

ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತ ಆರ್‌.ಮಂಜುನಾಥ್‌, ಅಕ್ರಮ ಸಕ್ರಮಕ್ಕೆ ಒಂದು ಬಾರಿ ನಾವು ಖಾತೆ ಮಾಡಿಕೊಟ್ಟರೆ, ಅವರು ನಗರಸಭೆ ಕಡೆ ಬರುವುದೇ ಇಲ್ಲ. ಹೀಗಾಗಿ, ದಂಡ ಕಟ್ಟಿಸಿಕೊಳ್ಳುವುದು ಸೇರಿ ಸರ್ಕಾರದ ನಿರ್ದೇಶನದಂತೆ ನಾವು ಕ್ರಮ ಕೈಗೊಳ್ಳಬೇಕಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಇಲ್ಲಿಯೂ ಅದನ್ನು ಅಳವಡಿಸಿಕೊಂಡು ಸಮಸ್ಯೆ ಬಗೆಹರಿಸಲಾಗುವುದು ಎಂದರು.

ನಗರದ ಹೊರವಲಯದ ರಾಜೀವ್‌ಗಾಂಧಿ ಬಡಾವಣೆಯಲ್ಲಿ ವಾಸ ಮಾಡಿಕೊಂಡಿರುವವರಿಗೆ ಹಕ್ಕು ಪತ್ರ ನೀಡದೇ ಬೇರೆಯವರಿಗೆ ನೀಡಿದ್ದು, ಅರ್ಜಿ ಸಲ್ಲಿಸಿರುವವರನ್ನು ನಿರ್ಲಕ್ಷಿಸಿ ಅಧಿಕಾರಿಗಳು ಬೇರೆಯವರಿಗೆ ಮನೆ ನೀಡಿದ್ದಾರೆ ಎಂದು  ನಾಗರಿಕರು ದೂರಿದರು.  ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಿಯಮಾನುಸಾರ ಅರ್ಜಿ ಸಲ್ಲಿಸಿರುವವರಿಗೆ ಆದ್ಯತೆ ಮೇರೆಗೆ ಮನೆ ನೀಡಲಾಗಿದೆ.

ಸಿದ್ದೇನಾಯಕನಹಳ್ಳಿಯ ಸರ್ವೆ ನಂ.20ರಲ್ಲಿ ಆಶ್ರಯ ಕಮಿಟಿಗೆ ನಿವೇಶನ ನೀಡಲಾಗಿದ್ದು, ಇಲ್ಲಿ ಗುಂಪು ಮನೆ ನಿರ್ಮಿಸಲಾಗುವುದು ಎಂದರು. ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರ ಕಾರ್ಯಾರಂಭ ಮಾಡಿದ ನಂತರ ಹೊಸ ಬಡಾವಣೆಗಳಲ್ಲಿನ ಪಿಐಡಿ ಸಂಖ್ಯೆ ಗೊಂದಲ, ಇ-ಖಾತೆ, ಕಟ್ಟಡ ಪರವಾನಗಿ ಸೇರಿ ನಿವೇಶನಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ನಗರದಲ್ಲಿ ವಾರ್ಡ್‌ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಶೀಘ್ರ ದಿನಾಂಕ ತಿಳಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಶಸ್ತ್ರಚಿಕೆತ್ಸೆಗೆ ಒಳಗಾಗಿದ್ದ ವೇಣುಗೋಪಾಲ್‌ ಎಂಬುವವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1ಲಕ್ಷ ರೂ.ನ ಚೆಕ್‌ ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌, ಉಪಾಧ್ಯಕ್ಷೆ ಜಯಲಕ್ಷಿ, ಕಾರ್ಯಪಾಲಕ ಎಂಜಿನಿಯರ್‌ ಷೇಕ್‌ ಫಿರೋಜ್‌ ಇದ್ದರು.


Trending videos

Back to Top