CONNECT WITH US  

ರಸ್ತೆ ಸರಿಯಿಲ್ಲ , ಬಸ್‌ ಬರುತ್ತಿಲ್ಲ, ದಾರಿ ದೀಪವೂ ಇಲ್ಲ!

 ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ: ಅಬ್ಬೆಟ್ಟು ಗ್ರಾಮಸ್ಥರ ಆರೋಪ 

ಬಂಟ್ವಾಳ : ಭೌಗೋಳಿಕವಾಗಿ ಮೇರಮಜಲು ಗ್ರಾಮದ ಅಬ್ಬೆಟ್ಟು ಗ್ರಾಮ ಬಂಟ್ವಾಳ ತಾಲೂಕಿನಲ್ಲಿದೆ. ಆದರೆ, ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ. ಅಭಿವೃದ್ಧಿ ವಿಚಾರ ಬಂದಾಗ ಎರಡೂ ಕಡೆ ನಿರ್ಲಕ್ಷ್ಯಕ್ಕೆ ಒಳಗಾ ಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮೂಲಸೌಕರ್ಯಗಳಲ್ಲಿ ಒಂದಾಗಿರುವ ರಸ್ತೆ ಸಂಪರ್ಕವೇ ಇಲ್ಲಿನ ದೊಡ್ಡ ಸಮಸ್ಯೆ. ಸಾರ್ವಜನಿಕ ಬಸ್‌ ಸಂಪರ್ಕ, ರಸ್ತೆಗೆ ದಾರಿದೀಪ - ಇವೆಲ್ಲ ಇಲ್ಲಿ ಮರೀಚಿಕೆಯಾಗಿವೆ. ಊರಿಗೆ ಬರುವ ಹೊಸಬರು ಮತ್ತೆ ಇತ್ತ ಕಡೆ ತಲೆ ಹಾಕುವುದೇ ಇಲ್ಲ. ಊರಿನವರಿಗೆ ದಿನಂಪ್ರತಿ ಸಮಸ್ಯೆ ಅನುಭವಿಸದೆ ವಿಧಿಯಿಲ್ಲ.

ಅಬ್ಬೆಟ್ಟು ಎಂಬ ಊರು ಫರಂಗಿ ಪೇಟೆ - ಅರ್ಕುಳ ರಾ. ಹೆ.ಯಿಂದ 5 ಕಿ.ಮೀ. ಒಳಗಿದೆ. ಇಲ್ಲಿ 400ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿವೆ. ಹತ್ತಿರದ ಏಳೆಂಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ರಸ್ತೆಗೆ ಸರಿಯಾದ ಡಾಮರೂ ಇಲ್ಲ.

ಸ್ಥಳೀಯರು ಪೊಳಲಿ, ಕಟೀಲು ಕ್ಷೇತ್ರಗಳಿಗೆ ಸಂಪರ್ಕವನ್ನು ಹೊಂದಿದ್ದಾರೆ. ಸುಮಾರು ಎಂಟು ವರ್ಷಗಳ ಹಿಂದೆ ಡಾಮರು ಕಂಡ ಈ ರಸ್ತೆ ಮತ್ತೊಮ್ಮೆ ಸುಧಾರಣೆ ಕಂಡಿಲ್ಲ. ಅಂಥ ಪ್ರಯತ್ನ ಆಗಿಲ್ಲ ಎನ್ನುವುದು ಇಲ್ಲಿನವರ ಅಳಲು.

2 ಖಾಸಗಿ ಬಸ್‌ಗಳು ಇದೇ ರಸ್ತೆ ಮೂಲಕ ಫರಂಗಿಪೇಟೆಯಿಂದ ಬಡಕ ಬೈಲು - ಪೊಳಲಿ ಮಾರ್ಗವಾಗಿ ಕಟೀಲು -ಕಿನ್ನಿಗೋಳಿಗೆ ಸಂಚರಿಸುತ್ತಿದ್ದವು. ಈ ರಸ್ತೆಯ ದುರವಸ್ಥೆಯಿಂದಾಗಿ ಅವುಗಳ ಸಂಚಾರ ಕಡಿಮೆಯಾಗಿದೆ. ಒಂದು ಸರಕಾರಿ ಬಸ್ಸಿದ್ದರೂ ನಿಗದಿತ ಸಮಯಕ್ಕೆ ಬರುವುದಿಲ್ಲ. ಹೀಗಾಗಿ, ಕಾರ್ಯ ನಿಮಿತ್ತ ಮಂಗಳೂರಿಗೆ ಹೋಗುವವರು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ರಿಕ್ಷಾದಲ್ಲಿ ಹೋಗು ವುದು ದುಬಾರಿ. ರಸ್ತೆ ಕಾರಣಕ್ಕೆ ಅವರೂ ಬರಲು ಒಪ್ಪುವುದಿಲ್ಲ. ಹೀಗಾಗಿ, ನಿತ್ಯ 2-3 ಕಿ.ಮೀ. ನಡೆದೇ ಹೋಗುವ ಪರಿಸ್ಥಿತಿ ಇಲ್ಲಿನವರಿಗಿದೆ. 

ಸಮಸ್ಯೆಗಳಿಂದ ಮುಕ್ತಗೊಳಿಸಿ
ನಮ್ಮ ಊರಿನಲ್ಲಿ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಜನರು, ಶಾಲಾ ಮಕ್ಕಳು ಕಷ್ಟಪಡುವಂತಹ ಪರಿಸ್ಥಿತಿ ಬಂದಿದೆ. ಸರಿಯಾದ ದಾರಿದೀಪದ ವ್ಯವಸ್ಥೆಯೂ ಇಲ್ಲ. ಉದಯ ಯುವಕ ಮಂಡಲ, ವಿದ್ಯಾ ಯುವಕ ಮಂಡಲ ಹಾಗೂ ಸ್ಥಳೀಯರು ಸೇರಿಕೊಂಡು ದುರವಸ್ಥೆಯಲ್ಲಿದ್ದ ರಸ್ತೆಯನ್ನು ಶ್ರಮದಾನದ ಮೂಲಕ ಸರಿ ಮಾಡುತ್ತಿದ್ದಾರೆ. ಶಾಸಕರು, ಸಂಸದರು ಇತ್ತ ಕಡೆ ಗಮನ ಹರಿಸಿ ಅಬ್ಬೆಟ್ಟು ಊರನ್ನು ಸಮಸ್ಯೆಗಳಿಂದ ಮುಕ್ತಗೊಳಿಸಬೇಕು.
 - ಗೋಪಿನಾಥ ಶೆಟ್ಟಿ
    ಸ್ಥಳೀಯ ನಿವಾಸಿ

ಅಧಿಕಾರಿಗಳು ಸಹಕರಿಸಲಿ
ಕೆಲವು ವರ್ಷಗಳಿಂದ ನಾನು ಮೇರಮಜಲು ಗ್ರಾಮ ಪಂಚಾಯತ್‌ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಬಸ್‌ ವ್ಯವಸ್ಥೆ ಹಾಗೂ ರಸ್ತೆ ಸಮಸ್ಯೆ ಪರಿಹಾರ ಒದಗಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇವೆ. ಅಧಿಕಾರಿಗಳು ಊರಿನ ಅಭಿವೃದ್ಧಿಗೆ ಸಹಕರಿಸಬೇಕು.
- ರವಿ ಅಬ್ಬೆಟ್ಟು ಗ್ರಾ.ಪಂ. ಸದಸ್ಯರು

Trending videos

Back to Top