CONNECT WITH US  

ತೊಂದರೆಯಾಗದಂತೆ ನಿಗಾ ವಹಿಸಿ

ಸಿರುಗುಪ್ಪ: ಪ್ರವಾಹ ಪೀಡಿತ ಪ್ರದೇಶಗಳಿಗೆ ನ್ಯಾಯಾಧೀಶರಾದ ಧನೇಶ್‌ ಶಿವಪ್ಪ ಎಂ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈದುಂಬಿ ಹರಿಯುತ್ತಿರುವ ನದಿಯ ಹೊರ ಹರಿವಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಪರಿಸ್ಥಿತಿಯ ಅವಲೋಕನ ನಡೆಸಿದರು.

ಬಳಿಕ ಮಾತನಾಡಿದ ನ್ಯಾಯಾಧೀಶರು, ತಾಲೂಕಿನ ನದಿ ದಂಡೆಯಲ್ಲಿ ಒಟ್ಟು 16 ಗ್ರಾಮಗಳು ಬರಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೂ ಯಾವುದೇ ತೊಂದರೆಯಾಗದಂತೆ ನಿಗಾವಹಿಸಲು ಸೂಚಿಸಲಾಗಿದೆ. ಜತೆಗೆ ಅಗತ್ಯವಿರುವ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳ ಆರಂಭಕ್ಕೆ ಅಗತ್ಯ ಸಿದ್ಧತೆಯನ್ನು ತಾಲೂಕು ಆಡಳಿತ ಮಾಡಿಕೊಂಡಿದೆ. ಆದರೆ, ಕಳೆದ ಎರಡು ದಿನಗಳಿಂದ ಹೊರ ಹರಿವಿನ ಪ್ರಮಾಣ ಕಡಿಮೆಯಾಗಿದ್ದರಿಂದ ಅಲ್ಪ ಪ್ರಮಾಣದ ಬೆಳೆ ನಷ್ಟ ಬಿಟ್ಟರೆ ಬೇರೆ ಯಾವುದೇ ನಷ್ಟದ ಬಗ್ಗೆ ವರದಿಯಾಗಿಲ್ಲ ಎಂದರು. 

ತಾಲೂಕಿನಲ್ಲಿ ಯಾವುದೇ ಸಂದರ್ಭದಲ್ಲಿ ನೆರೆ ಹಾವಳಿ ಉಂಟಾದಲ್ಲಿ ಹಾಗೂ ಗ್ರಾಮದಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಹಾಯವಾಣಿ ಆರಂಭಿಸಲಾಗಿದೆ ಎಂದರು.

ಕೆಂಚನಗುಡ್ಡ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ನ್ಯಾಯಾಧೀಶರು ಭೇಟಿ ನೀಡಿ, ಜಿಲ್ಲಾ ಸದಸ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ವಸತಿ ನಿಲಯಗಳ ಸ್ಥಿತಿ ಗತಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆಗಳು ಮತ್ತು ಸೌಲಭ್ಯಗಳ ಬಗ್ಗೆ ತಿಳಿಯಲು ಭೇಟಿ ನೀಡಿರುವುದಾಗಿ ಹೇಳಿದರು. ಊಟೋಪಚಾರ, ವಸತಿ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ್ದು, ಈ ಬಗ್ಗೆ ಸದಸ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಲಾಗುವುದು. ಇಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯಿದ್ದಲ್ಲಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ನ್ಯಾಯಾಧೀಶರು ವಸತಿ ನಿಲಯಗಳಲ್ಲಿ ಊಟದ ಕೊಠಡಿ, ಶೌಚಾಲಯ, ಅಡುಗೆ ಕೋಣೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದರು. ನಂತರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿ ಅವರಿಂದ ಮಾಹಿತಿ ಪಡೆದರು. ಗ್ರಾಮದ ಪಕ್ಕದಲ್ಲಿಯೇ ನದಿ ಹರಿಯುತ್ತಿದ್ದರೂ ಸಮರ್ಪಕ ವಿದ್ಯುತ್‌ ಸರಬರಾಜು ಇಲ್ಲದೆ ಇಂದಿಗೂ ನಾಟಿ ಮಾಡಿಲ್ಲ, ನದಿ ಪಕ್ಕದಲ್ಲಿನ ಜಮೀನಿನಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ನಾಟಿ ಮಾಡಿದ್ದ ಭತ್ತಕ್ಕೆ ನದಿ ನೀರು ನುಗ್ಗಿ ಹಾಳಾಗಿದೆ. ತಾಲೂಕು ಆಡಳಿತ ಯಾವುದೇ ಸಮೀಕ್ಷೆಗೆ ಮುಂದಾಗಿಲ್ಲ ಎಂದು ಹೊನ್ನರಳ್ಳಿ ರೈತರು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡರು. ಹೊನ್ನರಳ್ಳಿ ಗ್ರಾಮದ ಸಿದ್ದನಗೌಡ ಮಾತನಾಡಿದರು. ಪೆನಲ್‌ ಅಡ್ವೊಕೇಟ್‌ಗಳಾದ ಪಿ. ಮಹಾದೇವಪ್ಪ, ಎಚ್‌.ಮಹೇಶ, ವಕೀಲ ಪಂಪಾಪತಿ, ಹೊನ್ನಾರಳ್ಳಿ ಗ್ರಾಮಸ್ಥರಾದ ಪಂಪಾಪತಿ, ದೇವೇಂದ್ರಗೌಡ, ವೀರಣ್ಣ ಇದ್ದರು.

Trending videos

Back to Top