CONNECT WITH US  

ಸಾಮಾಜಿಕ ಅಸಮಾನತೆಯೇ ಕವಿಯಾಗಿಸಿತು: ಗಂಧರ್ವಸೇನಾ

ಬೀದರ: ಪತ್ರಿಕೆಯನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಳಸಿದರೂ ಸಾಹಿತ್ಯವೇ ನನ್ನ ಆಸಕ್ತಿಯ ಕ್ಷೇತ್ರವಾಗಿದ್ದು, ಸಾಮಾಜಿಕ ಅಸಮಾನತೆ, ಅವ್ಯವಸ್ಥೆಯ ಸಂವೇದನೆಗಳೇ ನನ್ನ ಕವಿಯಾಗಿಸಿತು ಎಂದು ಹಿರಿಯ ಸಾಹಿತಿ, ಪತ್ರಕರ್ತ ಗಂಧರ್ವಸೇನಾ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಘಟಕ ಆಯೋಜಿಸಿದ್ದ ಹಿರಿಯ ಸಾಹಿತಿ ಗಂಧರ್ವ ಸೇನಾ ಅವರ "ಮನೆಯಂಗಳದಲ್ಲಿ ಮಾತು' ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳು, ಹರೆಯದ ಹೋರಾಟದ ಹಾದಿಯ ವಿವರಗಳನ್ನು ನವಿರಾದ ಭಾವಾಭಿವ್ಯಕ್ತಿ ಮೂಲಕ ವಿವರಿಸಿದರು.

ಇಡೀ ಹಡಪದ ಸಮುದಾಯದಲ್ಲೇ ತಾವೊಬ್ಬ ಪ್ರತಿಭಾವಂತರಾಗಿ ಬೆಳೆದದ್ದು ಸಾಂಸ್ಕೃತಿಕವಾಗಿ ಮಹತ್ವದ ಸಂಗತಿಯಾಗಿದೆ. ಬೀದರನಲ್ಲಿ ಮೊದಲ ಪತ್ರಿಕೆ ಆರಂಭಿಸಿದ ನಾನು ಸಮಾಜದ ಎಲ್ಲಾ ರೀತಿಯ ಓರೆಕೋರೆಗಳನ್ನು ತಿದ್ದಲು ನೆರವಾಯಿತು. ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ ಆತ್ಮ ತೃಪ್ತಿ ತಮಗಿದೆ ಎಂದು ವಿವರಿಸಿದರು.

ಸಾಹಿತಿ ಪ್ರೊ| ವಿಜಯಲಕ್ಷ್ಮೀ ಗಡ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಂಧರ್ವಸೇನಾ ಅವರು ಬೀದರನಲ್ಲಿ ಒಂದು ಹೊಸ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದವರು. ಪತ್ರಿಕೆಯನ್ನು ಸಮಾಜದ ತುಡಿತಗಳನ್ನು
ಹೊರಹಾಕಲು ವೇದಿಕೆಯಾಗಿ ನಿರ್ಮಿಸಿದವರು. 

ಬಂಡಾಯ ಮನೋಭಾವದವರಾಗಿದ್ದರಿಂದ ಸದಾ ಸ್ವಾಭಿಮಾನಿಯಾಗಿದ್ದು, ಯಾವುದೇ ರಾಜಿಗೆ ಒಪ್ಪಂದ ಪರಾಧಿಧೀನವಾಗದ ವ್ಯಕ್ತಿತ್ವ ರೂಪಿಸಿಕೊಂಡವರಾಗಿದ್ದಾರೆ. ಆದ್ದರಿಂದಲೇ ಅವರಿಗೆ ಯಾವುದಕ್ಕೂ ಬಡತನ ಅಡ್ಡಿಯಾಗಲಿಲ್ಲ ಎಂದು ಹೇಳಿದರು. ಸಾಹಿತಿಗಳಾದ ಚಂದ್ರಕಾಂತ ಪಾಟೀಲ ಚಿಮಕೋಡ, ಪಾರ್ವತಿ ಸೋನಾರೆ, ಎಂ.ಜಿ. ದೇಶಪಾಂಡೆ ಅವರು ಹಲವಾರು ಜನಮುಖೀ ಪ್ರಶ್ನೆಗಳ ಮೂಲಕ ಸಂವಾದ ನಡೆಸಿಕೊಟ್ಟರು.

ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್‌. ಮನೋಹರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಸಾಹಿತಿಗಳಾದ ಚಂದ್ರಪ್ಪಾ ಹೆಬ್ಟಾಳಕರ, ಗುರುನಾಥ ಅಕ್ಕಣ್ಣ , ಡಾ| ಬಸವರಾಜ ಬಲ್ಲೂರ, ಹಂಸಕವಿ, ಸಂಜುಕುಮಾರ ಅತಿವಾಳೆ, ರಘುಶಂಖ ಭಾತಂಬ್ರಾ, ವಿಜಯಕುಮಾರ ಸೋನಾರೆ, ಎಂ.ಪಿ. ಮುದಾಳೆ, ಶ್ಯಾಮರಾವ್‌ ನೆಲವಾಡೆ ಇನ್ನಿತರರು ಇದ್ದರು. ಪ್ರೊ| ಜಗನ್ನಾಥ ಕಮಲಾಪುರೆ ಸ್ವಾಗತಿಸಿದರು. ಶಿಕ್ಷಕ ಶರಣಬಸವ ಲಂಗೋಟಿ ನಿರೂಪಿಸಿದರು. ಸಾಹಿತಿಗಳಾದ ಪ್ರೊ| ಶಿವಕುಮಾರೆ ಕಟ್ಟೆ ವಂದಿಸಿದರು.

Trending videos

Back to Top