CONNECT WITH US  

ಭಾವಾನುಬಂಧ ಬೆಸೆದ ರಕ್ಷಾಬಂಧನ

ಬೀದರ: ಸಹೋದರ-ಸಹೋದರಿಯರ ಭಾವಾನುಬಂಧ ಬೆಸೆಯುವ ರಕ್ಷಾಬಂಧನ ಹಬ್ಬವನ್ನು ರವಿವಾರ ನಗರದ ಹಲವೆಡೆ ಸಂಭ್ರಮದಿಂದ ಆಚರಿಸಲಾಯಿತು. ಕೆಲ ಸಂಘ ಸಂಸ್ಥೆಗಳು ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸುವ ಜತೆಗೆ, ಅದರ ಮಹತ್ವ ತಿಳಿಸುವ ಕಾರ್ಯಕ್ರಮಗಳನ್ನು ಸಹ ನಡೆಸಿದವು. ವಸತಿ ಶಾಲಾ, ಕಾಲೇಜುಗಳಲ್ಲಿಯೂ ಹಬ್ಬ ಆಚರಣೆಯ ಸಂಭ್ರಮ ಕಂಡುಬಂತು. ವಿದ್ಯಾರ್ಥಿನಿಯರು ಹಿರಿಯ ವಿದ್ಯಾರ್ಥಿಗಳಿಗೆ ರಾಖೀ ಕಟ್ಟ ಸಿಹಿ ಹಂಚಿ ಸಂಭ್ರಮಿಸಿದರು.

ವಂದೇ ಮಾತರಂ ಶಾಲೆ: ನಗರದ ವಂದೇ ಮಾತರಂ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆಯಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾರ್ವತಿ ಸಹೋದರಿ ಮಾತನಾಡಿ, ರಕ್ಷಾ ಬಂಧನ ಹಬ್ಬವು ಭಾರತೀಯರಿಗೆ ಶ್ರೇಷ್ಠ ಹಬ್ಬವಾಗಿದೆ. ಭಾರತವು ಹಲವು ಜಾತಿ, ಮತ, ಪಂಥ, ಪಂಗಡ ಮತ್ತು ಧರ್ಮಗಳ ತವರು ಮನೆಯಾಗಿದೆ. ಸಾವಿರಾರು ಭಾಷೆಗಳು, ಹಬ್ಬ ಹರಿದಿನಗಳು ಆಚಾರಣೆಗಳು, ಸಂಪ್ರದಾಯಗಳು, ಉತ್ಸವಗಳ ದೇಶವಾಗಿದೆ. ಒಂದೊಂದು ಹಬ್ಬವು ಒಂದು ವೈಶಿಷ್ಯಪೂರ್ಣವಾಗಿದ್ದು, ಅರ್ಥಪೂರ್ಣವಾಗಿವೆ. ಹಬ್ಬಗಳು, ಉತ್ಸವಗಳು, ಜನರನ್ನು ಒಂದುಗೂಡಿಸಿ ನಾವೆಲ್ಲ ಒಂದೇ ಎಂಬ ಸಂದೇಶ ನೀಡುತ್ತವೆ.

ರಕ್ಷಾಬಂಧನ ಹಬ್ಬವು ಭಾತೃತ್ವ ಸುರಕ್ಷತೆಯ ಸಂಕೇತವಾಗಿದೆ. ಮಹಾಭಾರತ, ರಾಮಾಯಣ, ಪುರಾಣಗಳಲ್ಲಿ ರಕ್ಷಾ ಬಂಧನದ ಹಬ್ಬದ ಮಹತ್ವ ಸಾರಲಾಗಿದೆ. ಶ್ರೀ ಕೃಷ್ಣನ ಬೆರಳಿಗೆ ಗಾಯವಾದಾಗ ದ್ರೋಪತಿ ತನ್ನ ಸೀರೆಯ ಅಂಚನ್ನು ಹರಿದು ಶ್ರೀಕೃಷ್ಣನ
ಬೆರಳಿಗೆ ಕಟ್ಟಿರುತ್ತಾಳೆ. ಮುಂದೆ ದುಶ್ಯಾಸನ ದ್ರೋಪತಿಯ ವಸ್ತ್ರಾಭರಣ ಮಾಡುವಾಗ ಶ್ರೀಕೃಷ್ಣ ಬಂದು ದ್ರೋಪತಿಯ ರಕ್ಷಣೆ ಮಾಡುತ್ತಾನೆ. ಹೀಗಾಗಿ ಸಹೋದರರು ಸಹೋದರಿಯರಿಗೆ ರಕ್ಷೆ ನೀಡುವ ಸಂಪ್ರದಾಯವಿದೆ. ಗಂಡು ಮಕ್ಕಳು ಹೆಣ್ಣುಮಕ್ಕಳಿಗೆ ಗೌರವ ನೀಡಿ ಪೂಜಿಸುವ ವಿಧಾನವಾಗಿದೆ ಎಂದು ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ಶಿವರಾಜ ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರತ್ನಮಾಲ ಪಾಟೀಲ, ಸಂತೋಷ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಜಿಲ್ಲಾಧಿಕಾರಿಗೆ ರಾಖೀ: ರವಿವಾರ  ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದ ಸಹೋದರಿಯರು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಅವರ ನಿವಾಸಕ್ಕೆ ತೆರಳಿ ರಾಖೀ ಕಟ್ಟಿ ಶುಭಾಷಯ ಕೋರಿದರು. ಬ್ರಹ್ಮಕುಮಾರಿ ಪಾವನಧಾಮ ಕೇಂದ್ರದ ಮಂಗಲಾ ಸಹೋದರಿ, ಜಿಲ್ಲಾಧಿಕಾರಿಗಳ ಪತ್ನಿ ಶುಭಾ ಮಹಾದೇವ, ಮಕ್ಕಳಾದ ಅಂಚಿತ್ಯ, ಅರಾಹಿ ಹಾಗೂ ಅಕ್ಷಯಣಿ ಅವರಿಗೂ
ಸಹೋದರಿಯರು ರಾಖೀ ಕಟ್ಟಿದರು. ವಿಜಯಲಕ್ಷ್ಮೀ ಸಹೋದರಿ, ರೇಣುಕಾ ಸಹೋದರಿ, ಸುವರ್ಣಾ ಸಹೋದರಿ ಸೇರಿದಂತೆ ಅನೇಕರು ಇದ್ದರು.


Trending videos

Back to Top