CONNECT WITH US  

ರೈತರಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣ

ಕೊಳ್ಳೇಗಾಲ: ಕೃಷಿಯಲ್ಲಿ ಮಹತ್ವದ ಬದಲಾವಣೆ ತರುವ ಸಲುವಾಗಿ ರೈತರಿಗೆ ಕಡಿಮೆ ದರದಲ್ಲಿ ಕೃಷಿಯಂತ್ರಗಳನ್ನು ನೀಡುತ್ತಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ಮನವಿ ಮಾಡಿದರು.

ನಗರದ ಗುರುಭವನದಲ್ಲಿ ಕೃಷಿ ಇಲಾಖೆ ಸೋಮವಾರ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ 2018 ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದ್ದು, ಮೀನುಗಾರಿಕೆ, ರೇಷ್ಮೆ, ಪಶುಸಂಗೋಪನಾ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜು ಮಾತನಾಡಿ, ರೈತರಲ್ಲಿ ಕೃಷಿ ಅರಿವು ಮೂಡಿಸಲು ಕಳೆದ 3 ದಿನಗಳಿಂದ ಹೋಬಳಿ ಮಟ್ಟದಲ್ಲಿ ಕೃಷಿ ಅಭಿಯಾನ ಆಯೋಜಿಸಿದ್ದು, ಎಲ್ಲಾ ಇಲಾಖೆಯ ಮಾಹಿತಿ ಪಡೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕೆಂದು ಹೇಳಿದರು.

ಕೆರೆ ತುಂಬಿಸಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಅಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ಕಾವೇರಿ ಮತ್ತು ಕಬಿನಿ ಉಪ ವಿಭಾಗದ ಅಧಿಕಾರಿಗಳು ಕೆರೆ ಮತ್ತು ಕಾಲುವೆಗಳಲ್ಲಿ ಊಳು ತೆಗೆಸಿಲ್ಲ, ಗಿಡಗಂಟೆಗಳನ್ನು ತೆರವುಗೊಳಿಸಿಲ್ಲ. ಸಕಾಲದಲ್ಲಿ ಮಳೆ ಬಂದಿದ್ದರೂ ಸಹ ಕೆರೆಗಳಲ್ಲಿ ನೀರು ಭರ್ತಿ ಮಾಡುವಲ್ಲಿ ಸಂಪೂರ್ಣ ವಿಫ‌ಲರಾಗಿರುವ ಹಿನ್ನೆಲೆಯಲ್ಲಿ ರೈತರು ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಗೈರು: ಜನರ ಕಷ್ಟ ಕೇಳಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಆಲಿಸದೇ ಕಾರ್ಯಕ್ರಮಗಳಲ್ಲಿ ಗೈರಾಗುತ್ತಿರುವುದು ಸರಿಯಲ್ಲ ಎಂದರು. ಪ್ರಗತಿಪರ ರೈತ ಮುಖಂಡ ರೇಚಣ್ಣ, ರೈತರು ಸಿರಿಧಾನ್ಯ ಬೆಳೆ ಹಾಗೂ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ಲಾಭ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ನಾಗರಾಜು, ತಾಪಂ ಉಪಾಧ್ಯಕ್ಷೆ ಲತಾ, ತಾಪಂ ಸದಸ್ಯ ಕೃಷ್ಣಪ್ಪ, ಕೃಷಿ ಸಹಾಯಕ ಅಧಿಕಾರಿ ಮಹದೇವಯ್ಯ, ಪಶುಸಂಗೋಪನಾ ಇಲಾಖೆ ಅಧಿಕಾರಿ ಡಾ. ವೆಂಕಟರಾಮು, ತೋಟಗಾರಿಕೆ ಇಲಾಖೆ ಅಧಿಕಾರಿ ಶಶಿಧರ್‌, ಮೀನುಗಾರಿಕೆ ಇಲಾಖೆ ಅಧಿಕಾರಿ ಸ್ನೇಹ, ರೇಷ್ಮೆ ಇಲಾಖೆ ಅಧಿಕಾರಿ ಸರಿತಾ, ನಿವೃತ್ತ ಅಧಿಕಾರಿ ಡಾ. ಶಿವಪ್ಪ, ವಿಜ್ಞಾನಿ ಪಂಪನಗೌಡ, ಕೃಷಿ ಅಧಿಕಾರಿಗಳಾದ ಮನೋಹರ್‌, ರಮೇಶ್‌ಬಾಬು ಇತರರಿದ್ದರು. 

Trending videos

Back to Top