CONNECT WITH US  

ರೈತರಿಗೆ ಹಣ ನೀಡಿದ ನಂತರವೇ ರಸ್ತೆ ಕಾಮಗಾರಿ

ಕಡೂರು: ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪಟ್ಟಣದಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪರ-ವಿರೋಧ ಅಭಿಪ್ರಾಯವ್ಯಕ್ತವಾಯಿತು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಶಾಸಕ ಬೆಳ್ಳಿಪ್ರಕಾಶ್‌ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರ ಉಪಸ್ಥಿತಿಯಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಮಾತನಾಡಿ, ಆರ್ಥಿಕ ಚಟುವಟಿಕೆ ಹೆಚ್ಚಿಸಿಕೊಳ್ಳುವ
ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಉತ್ತಮ ರಸ್ತೆ ನಿರ್ಮಾಣ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯಾಗಲಿದೆ
ಎಂಬ ಆಶಯದಿಂದ ಈ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದೆ ಎಂದರು.

ನೆಲ್ಯಾಡಿಯಿಂದ ಚಿತ್ರದುರ್ಗದವರೆಗಿನ 232ಕಿ.ಮೀ. ಉದ್ದದ ಈ ರಸ್ತೆ ಚಿಕ್ಕಮಗಳೂರು ತಾಲೂಕಿನಲ್ಲಿ 7 ಕಿ.ಮೀ,
ಕಡೂರು ತಾಲೂಕಿನಲ್ಲಿ 37.9 ಕಿ.ಮೀ ಹಾಗೂ ತರೀಕೆರೆ ತಾಲೂಕಿನಲ್ಲಿ 11.1 ಕಿ.ಮೀ ಸೇರಿದಂತೆ ಒಟ್ಟಾರೆ 56 ಕಿಮೀ
ರಸ್ತೆ ನಿರ್ಮಾಣವಾಗಲಿದ್ದು, ಪ್ರಮುಖ ಸೇತುವೆ, ಸಣ್ಣ ಸೇತುವೆ, ಜಾನುವಾರಿನ ಸಂಚಾರಕ್ಕೆ ತಳಮಟ್ಟಿನ ಮಾರ್ಗ, ಬಸ್‌ ತಂಗುದಾಣ ಮುಂತಾದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. 

ಚಿಕ್ಕಮಗಳೂರು ತಾಲೂಕಿನಿಂದ ಕಡೂರು ತಾಲೂಕಿಗೆ ಸಖರಾಯಪಟ್ಟಣ ಬಳಿ ಪ್ರವೇಶಿಸುವ ರಸ್ತೆ ಬೈಪಾಸ್‌ ಮೂಲಕ ಬ್ರಹ್ಮಸಮುದ್ರ, ಚಿಕ್ಕಬುಕ್ಕಸಾಗರ, ರಾಮನಹಳ್ಳಿ, ಚೆನ್ನಾಪುರ, ಸರಸ್ವತೀಪುರ, ಕಂಸಾಗರ, ಚಿಕ್ಕಪಟ್ಟಣಗೆರೆ ಮೂಲಕ ಆಯ್ದು ಕಡೂರು ಪಟ್ಟಣ ತಲುಪಲಿದೆ ಎಂದು ಮಾಹಿತಿ ನೀಡಿದರು. 

ನಂತರ ಬ್ಯಾಗಡೇಹಳ್ಳಿ, ಬಂಟಗನಹಳ್ಳಿ, ಕಾಮನಕೆರೆ, ಕೆ. ದಾಸರಹಳ್ಳಿ, ಹಿರೇನಲ್ಲೂರು, ಗಿರಿಯಾಪುರ, ಚಿಕ್ಕನಲ್ಲೂರು ಮೂಲಕ ಆಯ್ದು ತಮ್ಮಟದಹಳ್ಳಿ ಬಳಿ ತರೀಕೆರೆ ತಾಲೂಕನ್ನು ಪ್ರವೇಶಿಸುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಮುಗಿದು ಸಂಬಂಧಪಟ್ಟ ರೈತರಿಗೆ ಪರಿಹಾರ ಹಣ ವಿತರಣೆ ಆದ ಬಳಿಕವೇ ಕಾಮಗಾರಿ ಆರಂಭವಾಗಲಿದೆ. ನಗರ
ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಬರುವ ಊರಿನ ಜನರಿಗೆ ಒಂದಕ್ಕೆ ಎರಡು ಪಟ್ಟು ಮತ್ತು ಗ್ರಾಮಾಂತರ ಭಾಗದ
ರೈತರಿಗೆ ಒಂದಕ್ಕೆ ನಾಲ್ಕು ಪಟ್ಟು ಪರಿಹಾರ ನಿಗದಿಯಾಗಿದೆ ಎಂದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ಕೆ.ಜಿ. ಕೃಷ್ಣಮೂರ್ತಿ ಮಾತನಾಡಿ, ಭೂಮಿ ಕ್ರಯವಾಗಿ ಅದನ್ನು ಪರಭಾರೆ
ಮಾಡದಂತೆ ಇದ್ದ ಭೂಮಿಯನ್ನೂ ಸ್ವಾಧೀನಕ್ಕೆ ಪಡೆದುಕೊಳ್ಳಬಹುದೇ ಎಂದು ಪ್ರಶ್ನಿಸಿದರು. ವಿಜಯ್‌ಕುಮಾರ್‌ ಮಾತನಾಡಿ, ರೈತರಿಗೆ ಅನುಕೂಲವಾಗುವ ಈ ರಸ್ತೆಯ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಿ. ಕರಾವಳಿ ಪ್ರದೇಶಕ್ಕೆ ಸಂಪರ್ಕಿಸುವ ಚಾರ್ಮಾಡಿ, ಶಿರಾಡಿ ಮತ್ತು ಆಗುಂಬೆ ಗಾಟಿ ಪ್ರದೇಶದ ರಸ್ತೆ ವಾಹನದ ಸವಾರರಿಗೆ ಸದಾ ಕಿರಿಕಿರಿ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಮಾತನಾಡಿ, ಪರ್ಯಾಯ ಭೂಮಿ ನೀಡುವುದು ಅಥವಾ ಗ್ರಾಮಗಳನ್ನೇ ಸ್ಥಳಾಂತರಿಸುವ
ಸಾಧ್ಯತೆಗಳಿಲ್ಲ. ಭೂಮಿ ಕಳೆದುಕೊಂಡವರಿಗೆ ಪರಿಹಾರ ಒದಗಿಸಲಾಗುವುದು ಎಂದರು. 

 ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, ಭಾರತ ಸರಕಾರದಿಂದ ಕೈಗೆತ್ತಿಕೊಂಡಿರುವ ಈ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸಿಮೆಂಟ್‌ ಪ್ಯಾಕ್ಟರಿ ಸ್ಥಾಪಿಸಿರುವ ಆಸುಪಾಸಿನ ಜನರು ನರಳಿದರೆ ಅದರ ಸದುಪಯೋಗ
ಸಾವಿರಾರು ಜನರಿಗೆ ಆಗುತ್ತದೆ. ಅಭಿವೃದ್ಧಿ ಕೆಲಸ ಮಾಡುವಾಗ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಆದರೆ ಕೆಟ್ಟದ್ದು ಕಡಿಮೆ ಇರಬೇಕು ಅಷ್ಟೇ ಎಂದರು. 

ಎಂ. ಭಾಗ್ಯ, ಶಿರೀಶ್‌ಗಂಗಾಧರ್‌, ಮಲ್ಲಿಕಾರ್ಜುನ್‌, ವಲಯ ಅರಣ್ಯ ಅಧಿಕಾರಿ ಮೋಹನ್‌ ಮುಂತಾದವರು ಉಪಸ್ಥಿತರಿದ್ದರು. 


Trending videos

Back to Top