CONNECT WITH US  

ಮೀಸಲಾತಿ ಬದಲಾವಣೆ ಬಿಜೆಪಿ ಅಧಿಕಾರದ ಕನಸಿಗೆ ಕೈ ಹೊಡೆತ?

ಚಿತ್ರದುರ್ಗ: ಇಲ್ಲಿನ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾಗಿದ್ದು, ಪಕ್ಷಗಳ ಲೆಕ್ಕಾಚಾರ ತಲೆಕಳಗಾಗುವ ಲಕ್ಷಣಗಳಿವೆ. ಮೀಸಲಾತಿ ಬದಲಾವಣೆಯಿಂದ ಪಕ್ಷೇತರ ಸದಸ್ಯರಿಗೆ ಮಾತ್ರ "ಭಾರಿ ಬೆಲೆ' ಬಂದಿದೆ.

ಈ ಹಿಂದಿನ ಮೀಸಲಾತಿ ಪ್ರಕಾರ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಮಹಿಳೆ), ಉಪಾಧ್ಯಕ್ಷ ಸ್ಥಾನ ಬಿಸಿಎಂ
(ಬಿ)ಗೆ ಮೀಸಲಾಗಿತ್ತು. ಆದರೆ ದಿಢೀರ್‌ ಬೆಳವಣಿಗೆಯಲ್ಲಿ ಹೊಸ ಮೀಸಲಾತಿ ಪ್ರಕಟಿಸಲಾಗಿದ್ದು, ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ನಿಗದಿ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಚಿತ್ರದುರ್ಗ ನಗರಸಭೆ 35 ವಾರ್ಡ್‌ಗಳಲ್ಲಿ ಬಿಜೆಪಿ-17, ಜೆಡಿಎಸ್‌- 6, ಕಾಂಗ್ರೆಸ್‌-5, ಪಕ್ಷೇತರರು-7 ಕಡೆ ಗೆಲುವು ಸಾಧಿಸಿದ್ದಾರೆ. ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲು 18 ಸ್ಥಾನಗಳ ಅಗತ್ಯ ಇದ್ದು, ಸದ್ಯ ಬಿಜೆಪಿ 17 ಸ್ಥಾನ ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಬಿಜೆಪಿಗೆ ಒಂದು ಸ್ಥಾನದ ಕೊರತೆ ಇದೆ. ಇನ್ನೊಂದೆಡೆ
ಜೆಡಿಎಸ್‌, ಕಾಂಗ್ರೆಸ್‌ ಮತ್ತು ಪಕ್ಷೇತರರು ಸೇರಿದರೆ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್‌ ಸಂಖ್ಯೆ 18 ಆಗಲಿದ್ದು ಬಹುಮತ ಸಾಬೀತುಪಡಿಸಬಹುದು. ಇದಲ್ಲದೆ ಸಂಸದ ಬಿ.ಎನ್‌. ಚಂದ್ರಪ್ಪನವರ ಒಂದು ಮತ ಕೂಡ ಇದ್ದು ಒಟ್ಟು 19 ಮತಗಳಾಗಲಿದೆ.

ಹೀಗಾಗಿ ಸುಲಭವಾಗಿ ಅಧಿಕಾರ ಹಿಡಿಯಲು ಜೆಡಿಎಸ್‌-ಕಾಂಗ್ರೆಸ್‌ ಪಕ್ಷದ ಮುಖಂಡರು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಜೆಡಿಎಸ್‌, ಕಾಂಗ್ರೆಸ್‌ ಮತ್ತು ಪಕ್ಷೇತರರು ಒಗ್ಗೂಡಿ ನಗರಸಭೆ ಅಧಿಕಾರ ಹಿಡಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅಧಿಕಾರ ಹಿಡಿಯುವ ಉದ್ದೇಶದಿಂದಲೇ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾಯಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಮೀಸಲಾತಿ ಬದಲಾಗಿದ್ದರಿಂದ ಪಕ್ಷೇತರ ಸದಸ್ಯರೇ ನಿರ್ಣಾಯಕರಾಗಿದ್ದು ಇವರ ಬೆಂಬಲ ಪಡೆಯಲು ಕಸರತ್ತು ಆರಂಭವಾಗಿದೆ.

ಈ ಮೊದಲಿದ್ದ ಎಸ್ಟಿ ಮಹಿಳೆ ಮೀಸಲಾತಿಯಡಿ ಬಿಜೆಪಿಗೆ ಅಧಿಕಾರ ದಕ್ಕುತ್ತಿತ್ತು. ಪರಿಶಿಷ್ಟ ಪಂಗಡ ಮಹಿಳಾ
ಮೀಸಲಾತಿಯಡಿ ಆಯ್ಕೆಯಾಗಿದ್ದ 1ನೇ ವಾರ್ಡ್‌ನ ನಾಗಮ್ಮ, 19ನೇ ವಾರ್ಡ್‌ನ ತಿಪ್ಪಮ್ಮ ವೆಂಕಟೇಶ್‌ ಅಧ್ಯಕ್ಷ ಹುದ್ದೆ
ರೇಸ್‌ನಲ್ಲಿದ್ದರು. ಆದರೆ ಈಗ ಮೀಸಲಾತಿ ಬದಲಾಗಿದ್ದು, ವಾಲ್ಮೀಕಿ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ದಕ್ಕುವುದು ಅನುಮಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಬಿಜೆಪಿಗಿಲ್ಲ ತೊಂದರೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರ ರಾಜಕೀಯ ತಂತ್ರಗಳಿಂದ ನಗರಸಭೆಯಲ್ಲಿ ಬಿಜೆಪಿ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿದೆ. ಈಗ ಮೀಸಲಾತಿ ಬದಲಾದರೂ ಸಹ 7 ಜನ ಪಕ್ಷೇತರ ಸದಸ್ಯರಲ್ಲಿ ಮೂರು ಮಂದಿ ಬಿಜೆಪಿ ಪರವಾಗಿದ್ದು, ಈಗಾಗಲೇ ಗುರುತಿಸಿಕೊಂಡಿದ್ದಾರೆ. 6ನೇ ವಾರ್ಡ್‌ ಕೆ. ಮಂಜುಳಾ, 20ನೇ ವಾರ್ಡ್‌ ಅನಿತಾ ರಮೇಶ್‌, 24ನೇ ವಾರ್ಡ್‌ ಮಹಮ್ಮದ್‌ ದಾವೊದ್‌, ಶಾಸಕರ ಒಂದು ಮತ ಸೇರಿ ಒಟ್ಟು
21 ಮತಗಳಾಗಲಿದೆ.

ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿರುವ 3ನೇ ವಾರ್ಡ್‌ನ ಗೀತಾ ವೆಂಕಟೇಶ್‌ ಬಿಜೆಪಿಗೆ ಬೆಂಬಲ ನೀಡಲಿದ್ದು, ಬಿಜೆಪಿ ಬಲ 22ಕ್ಕೆ ಏರಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿಯಲ್ಲಿದೆ.
ಹೀಗಾಗಿ ಬಿಜೆಪಿಯಿಂದ ಅ ಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಆದರೆ ಅತೀ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಗದ್ದುಗೆ ಏರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಾಮಾನ್ಯ ವರ್ಗದ ಮೀಸಲಿನಲ್ಲಿ ಯಾರೂ ಬೇಕಾದರೂ ಸ್ಪರ್ಧೆ ಮಾಡಬಹುದಾಗಿದ್ದು, ಸದಸ್ಯರೆಲ್ಲರೂ ಒಟ್ಟಿಗೆ ಕೂತು ತೀರ್ಮಾನ ಮಾಡಲಿದ್ದಾರೆ.
 ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕರು. 

ನಗರಸಭೆ ರಾಜಕಾರಣಕ್ಕೂ, ಮೀಸಲಾತಿ ಬದಲಾವಣೆಗೂ ನನಗೂ ಸಂಬಂಧವಿಲ್ಲ. ಎಸ್ಟಿ ಮೀಸಲಾತಿಯಲ್ಲಿ ಯಾರನ್ನು
ಅಧ್ಯಕ್ಷರನ್ನಾಗಿ ಮಾಡಬೇಕೆಂದು ಬಿಜೆಪಿಯವರು ನಿರ್ಧರಿಸಿದ್ದರೋ ಸಾಮಾನ್ಯ ಮೀಸಲಿನಲ್ಲೂ ಮಾಡಬಹುದಾಗಿದೆ. ವಾಲ್ಮೀಕಿ ಜಾತಿ ಬಗ್ಗೆ ಅವರಿಗೆ ಅನುಕಂಪ ಇದ್ದರೆ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಿ.
 ಬಿ.ಕಾಂತರಾಜ್‌, ರಾಜ್ಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್‌.


Trending videos

Back to Top