CONNECT WITH US  

ಜಿಲ್ಲೆಯಲ್ಲಿ ಎಂಟು ಹೆಸರು ಖರೀದಿ ಕೇಂದ್ರ

ಧಾರವಾಡ: ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಹೆಸರುಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ 6,975 ರೂ.ನಂತೆ ಜಿಲ್ಲೆಯ ರೈತರಿಂದ ಖರೀದಿಸಲು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 8 ಖರೀದಿ ಕೇಂದ್ರ ತೆರೆಯಲಾಗಿದೆ. ಸೆ. 9ರ ವರೆಗೆ ರೈತರ ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಣ್ಣಿಗೇರಿ ಎಪಿಎಂಸಿ, ನವಲಗುಂದ ಹಾಗೂ ಮೊರಬ ಉಪಮಾರುಕಟ್ಟೆ ಪ್ರಾಂಗಣಗಳು, ಹುಬ್ಬಳ್ಳಿ ಎಪಿಎಂಸಿಯ ಅಮರಗೋಳ ಮುಖ್ಯ ಮಾರುಕಟ್ಟೆ ಪ್ರಾಂಗಣ, ಬ್ಯಾಹಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಾಂಗಣ, ಧಾರವಾಡ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ, ಕುಂದಗೋಳ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ಯರಗುಪ್ಪಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, 2018-19ನೇ ಸಾಲಿನ ಪಹಣಿ ಪತ್ರ, ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರಿಂದ ಪಡೆದ ಹೆಸರುಕಾಳು ಬೆಳೆದ ಬಗ್ಗೆ ದೃಢೀಕರಣ ಪತ್ರ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್‌ ಖಾತೆ ಪಾಸ್‌ ಪುಸ್ತಕದ ನಕಲು ಪ್ರತಿಗಳೊಂದಿಗೆ ರೈತರು ನೋಂದಣಿ ಮಾಡಿಸಬೇಕು ಎಂದು ದೀಪಾ ಹೇಳಿದ್ದಾರೆ.

ಸ್ವಚ್ಛ ಹೆಸರಿಗೆ ಆದ್ಯತೆ: ಎಫ್‌ಎಕ್ಯೂ ಗುಣಮಟ್ಟ ಅಂದರೆ ಚೆನ್ನಾಗಿ ಒಣಗಿರುವ, ತೇವಾಂಶ ಶೇ. 12ಕ್ಕಿಂತ ಕಡಿಮೆ ಇರುವ ಹೆಸರುಕಾಳು ಉತ್ತಮ ಗುಣಮಟ್ಟ, ಗಾತ್ರ, ಬಣ್ಣ ಹಾಗೂ ಆಕಾರ ಹೊಂದಿರಬೇಕು. ಗಟ್ಟಿಯಾಗಿರಬೇಕು. ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ನೀಡಿದ ಗೋಣಿ ಚೀಲದಲ್ಲಿ 50 ಕೆಜಿ ಪ್ರಮಾಣದಲ್ಲಿ ತುಂಬಬೇಕು. ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ, ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್‌ ಪ್ರಮಾಣದ ಎಫ್‌ಎಕ್ಯೂ ಗುಣಮಟ್ಟದ ಹೆಸರುಕಾಳು ಉತ್ಪನ್ನ ಖರೀದಿಸಲಾಗುವುದು. ಸಮಸ್ಯೆಗಳಿದ್ದಲ್ಲಿ ದೂ:0836-2374837 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದೀಪಾ ತಿಳಿಸಿದ್ದಾರೆ.

Trending videos

Back to Top