CONNECT WITH US  

ಶಿಕ್ಷಕರ ಕೊರತೆ ಕಾರಣ, ಶೈಕ್ಷಣಿಕ ಗುಣಮಟ್ಟ  ಕ್ಷೀಣ!

ಧಾರವಾಡ: ರಾಜ್ಯದ ಎಲ್ಲ ಜಿಲ್ಲೆಗಳನ್ನು ಕಾಡುತ್ತಿರುವ ಶಿಕ್ಷಕರ ಕೊರತೆ ವಿದ್ಯಾಕಾಶಿ ಖ್ಯಾತಿಯ ಧಾರವಾಡ ಜಿಲ್ಲೆಯನ್ನೂ ಬಿಟ್ಟಿಲ್ಲ. ಜಿಲ್ಲೆಗೆ ಮಂಜೂರಾದ ಶಿಕ್ಷಕರ ಹುದ್ದೆಗಳ ಪೈಕಿ ಸಾಕಷ್ಟು ಹುದ್ದೆಗಳು ಈವರೆಗೂ ಖಾಲಿ ಇದ್ದು, ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣವಾಗುತ್ತಿದೆ. ಹೌದು. ಜಿಲ್ಲೆಯಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 639 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 50 ಪ್ರೌಢಶಾಲಾ ಸಹ ಶಿಕ್ಷಕರ ಕೊರತೆ ಇದೆ. ಹೀಗಾಗಿ ಮಕ್ಕಳ ಶೈಕ್ಷಣಿಕ ಮಟ್ಟದಲ್ಲೂ ಹೊಡೆತ ಬೀಳುತ್ತಲಿದೆ. ಇದರಿಂದ ಕಳೆದ ಬಾರಿ 8 ಸ್ಥಾನ ಪಡೆದಿದ್ದ ಜಿಲ್ಲೆ ಈ ಸಲ 13ನೇ ಸ್ಥಾನಕ್ಕೆ ಮತ್ತೆ ಕುಸಿದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕಳೆದ ಬಾರಿಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿಯಲ್ಲಿ ಕಲಿಸುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 3,21,797 ಇದ್ದು, ಈ ಪೈಕಿ 1,66,861 ಗಂಡು ಹಾಗೂ 1,54,936 ಹೆಣ್ಣು ಮಕ್ಕಳಿದ್ದಾರೆ. ಈ ಸಂಖ್ಯೆ ಈ ಸಲ ಹೆಚ್ಚಳವಾಗಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತ ಸಾಗಿದೆ. 

ಪ್ರಾಥಮಿಕ ಶಾಲೆಗಳ ಸ್ಥಿತಿ: ಜಿಲ್ಲೆಯಲ್ಲಿ ಒಟ್ಟು 1251 ಪ್ರಾಥಮಿಕ ಶಾಲೆಗಳಿದ್ದು, ಈ ಪೈಕಿ 763 ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಈ ಸರಕಾರಿ ಶಾಲೆಗಳಿಗಾಗಿ ಜಿಲ್ಲೆಗೆ 5066 ಶಿಕ್ಷಕರ ಹುದ್ದೆ ಮಂಜೂರಾತಿ ಇದ್ದು, ಈ ಪೈಕಿ 4589 ಹುದ್ದೆಗಳಷ್ಟೇ ತುಂಬಲಾಗಿವೆ. ಉಳಿದಂತೆ 639 ಹುದ್ದೆಗಳು ಖಾಲಿ ಇವೆ.

ಈವರೆಗೆ 162 ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಕೆಲಸ ಇಲಾಖೆ ಮಾಡಲಾಗಿದ್ದು, ಈ ಶಿಕ್ಷಕರನ್ನೇ ಖಾಲಿ ಇರುವ ಸ್ಥಾನಗಳಿಗೆ ತುಂಬುವ ಕಾರ್ಯ ಪ್ರಗತಿಯಲ್ಲಿ ಇಟ್ಟುಕೊಂಡಿದೆ. ಹೆಚ್ಚುವರಿ ಶಿಕ್ಷಕರಿಂದ ಈ ಸ್ಥಾನಗಳನ್ನು ತುಂಬಿದರೂ ಇನ್ನೂ 477 ಶಿಕ್ಷಕರ ಕೊರತೆ ಇರಲಿದೆ.

ಸದ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕಲಘಟಗಿ ತಾಲೂಕಿನಲ್ಲಿ 117 ಶಿಕ್ಷಕರು, ಧಾರವಾಡ ತಾಲೂಕಿನಲ್ಲಿ 149 ಶಿಕ್ಷಕರು, ಕುಂದಗೋಳ ತಾಲೂಕಿನಲ್ಲಿ 92, ಧಾರವಾಡ ಶಹರದಲ್ಲಿ 47, ಹುಬ್ಬಳ್ಳಿ ತಾಲೂಕಿನಲ್ಲಿ 75, ಹುಬ್ಬಳ್ಳಿ ಶಹರದಲ್ಲಿ 77, ನವಲಗುಂದದಲ್ಲಿ 82 ಶಿಕ್ಷಕರ ಕೊರತೆ ಇದೆ.

ಪ್ರೌಢಶಾಲೆಗಳ ಸ್ಥಿತಿ: ಜಿಲ್ಲೆಯಲ್ಲಿ ಇರುವ 442 ಪ್ರೌಢಶಾಲೆಗಳ ಪೈಕಿ 108 ಸರಕಾರಿ ಪ್ರೌಢಶಾಲೆಗಳಿವೆ. ಈ ಸರಕಾರಿ ಪ್ರೌಢ ಶಾಲೆಗಳಿಗೆ 922 ಸಹ ಶಿಕ್ಷಕರ ಮಂಜೂರಾತಿ ಇದ್ದು, ಪೈಕಿ 872 ಸಹ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಜಿಲ್ಲೆಯಲ್ಲಿ ಈವರೆಗೂ 50 ಸಹ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, 50 ಸಹ ಶಿಕ್ಷಕರ ಕೊರತೆ ಇದೆ. ಹೆಚ್ಚುವರಿ ಸಹ ಶಿಕ್ಷಕರ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ಪ್ರಕ್ರಿಯೆ ಮುಗಿದ ಮೇಲೆ ಹೆಚ್ಚುವರಿ ಸಹ ಶಿಕ್ಷಕರನ್ನೇ ಕೊರತೆ ಇರುವ ಖಾಲಿ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರನ್ನಾಗಿ ನೇಮಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ಶಿಕ್ಷಕರ ಮೇಲಿದೆ ಹೊಣೆ-ಹೊರೆ: ಶಿಕ್ಷಕರ ಕೊರತೆ ಕಾರಣದಿಂದ ಹೆಚ್ಚಿನ ಬೋಧನೆ ಹೊಣೆ ಹಾಗೂ ಹೊರೆ ಈಗ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ಬೀಳುತ್ತಲಿದೆ. ಅದರಲ್ಲೂ ನಿಗದಿತ ಸಮಯಕ್ಕೆ ಸಮವಸ್ತ್ರ, ಪಠ್ಯಪುಸ್ತಕ ಈ ಸಲ ಬಾರದೇ ಮಕ್ಕಳಿಗಿಂತ ಹೆಚ್ಚು ಶಿಕ್ಷಕರೇ ಸಾಕಷ್ಟು ಕಂಗಾಲಾಗುವಂತಾಗಿತ್ತು. ಮೇ ಅಂತ್ಯದೊಳಗೆ ಬರಬೇಕಿದ್ದ ಸಮವಸ್ತ್ರ ಈಗ ಬಂದಿದ್ದು, ಅದರ ವಿತರಣೆ ಕಾರ್ಯ ಸಾಗಿದೆ. ಇದಲ್ಲದೇ ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಈವರೆಗೂ ಬರದ ಕಾರಣ ಕಾಲ ಕಾಲಕ್ಕೆ ಬಂದಷ್ಟೇ ಪುಸ್ತಕ ತಂದು ಮಕ್ಕಳಿಗೆ ಕೈಗಿಟ್ಟು ಬೋಧಿಸುವ ಕೆಲಸ ಶಿಕ್ಷಕರ ಮೇಲಿದೆ. ಒಟ್ಟಿನಲ್ಲಿ ಒಂದೆಡೆ ಹೆಚ್ಚುವರಿ ಶಿಕ್ಷಕರಿದ್ದರೆ ಇನ್ನೊಂದೆಡೆ ಶಿಕ್ಷಕರ ಕೊರತೆ ಕಾಡುತ್ತಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಹೊಡೆತ ಬೀಳುತ್ತಲಿದೆ. ಇದಲ್ಲದೇ ಈ ಕೊರತೆಯಿಂದ ಈಗಿರುವ ಶಿಕ್ಷಕರ ಮೇಲೆಯೂ ಹೊಣೆ-ಹೊರೆ ಹೆಚ್ಚಿದ್ದು, ಈ ಕೊರತೆ ನೀಗಿಸುವ ಕೆಲಸ ಸಂಬಂಧಪಟ್ಟವರು ಮಾಡಬೇಕಿದೆ.

ಹಾಗೇ ಇವೆ ಸಾಕಷ್ಟು ಸಮಸ್ಯೆಗಳು
ಶಿಕ್ಷಕರ ಕೊರತೆ ಮತ್ತು ಜಿಲ್ಲೆಯ ಪ್ರಾಥಮಿಕ ಶಾಲೆಗಳ ದುಃಸ್ಥಿತಿ ಸುಧಾರಿಸುವ ಕುರಿತು ಜಿಪಂನ ಪ್ರತಿ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗುತ್ತದೆ. ಜಿಪಂ ಅಧ್ಯಕ್ಷರಾದಿಯಾಗಿ ಎಲ್ಲರೂ ಚರ್ಚಿಸುತ್ತಾರೆ. ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡುತ್ತಾರೆ. ಆದರೆ ಈವರೆಗೂ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳು ಬೇರುಮಟ್ಟದಲ್ಲಿ ಹಾಗೇ ಇರುವುದು ವಿಷಾದನೀಯ.

ಹೆಚ್ಚಿದೆ ಶಿಕ್ಷಕರ ಮೇಲಿನ ಹೊಣೆ
ಮಕ್ಕಳ ದಾಖಲಾತಿ, ಹಾಜರಾತಿ, ಕಾಲರ್‌ಶಿಪ್‌ ಸೇರಿದಂತೆ ಇನ್ನಿತರ ಪ್ರಕ್ರಿಯೆಯ ದಾಖಲಾತಿ ಸಿದ್ಧಪಡಿಸುವ ಶಿಕ್ಷಕರಿಗೆ ಕಡತದೊಂದಿಗೆ ಆನ್‌ ಲೈನ್‌ನಲ್ಲೂ ದಾಖಲಿಸಲು ನೀಡಿರುವ ಹೊಣೆ ಅವರ ಹೊರೆ ಹೆಚ್ಚಿಸಿದೆ. ಹಾಳೆಯ ಕಡತ ಸಿದ್ಧಪಡಿಸುವುದರ ಜೊತೆಗೆ ಆನ್‌ಲೈನ್‌ ಮೂಲಕ ಇದೆಲ್ಲವೂ ದಾಖಲಿಸುವ ಹೊರೆ ಇರುವ ಶಿಕ್ಷಕರಿಗೆ ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್‌, ಇಂಟರ್‌ ನೆಟ್‌ನಂತಹ ಮೂಲಸೌಲಭ್ಯಗಳಿಲ್ಲದ ಕಾರಣ ಹೊರಗಡೆ ಹೋಗಿ ಇದೆಲ್ಲವನ್ನೂ ಮಾಡಬೇಕಾದ ಅನಿವಾರ್ಯತೆ ಇದೆ. ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಜಾರಿ ಮಾಡಿರುವ ನಲಿ-ಕಲಿ ಯೋಜನೆ ಅನ್ವಯ 1, 2, 3 ನೇ ತರಗತಿ ಮಕ್ಕಳನ್ನು ಒಂದುಗೂಡಿಸಿ ಪಾಠ ಮಾಡಲು ಬೇಕಾದ ನಲಿ-ಕಲಿಯ ಸಾಮಗ್ರಿಗಳೇ ಇನ್ನೂ ಶಿಕ್ಷಕರಿಗೆ ತಲುಪಿಲ್ಲ ಎಂಬುದೇ ಸೋಜಿಗದ ಸಂಗತಿ.

ಜಿಲ್ಲೆಯಲ್ಲಿರುವ ಶಿಕ್ಷಕರ ಕೊರತೆ ನೀಗಿಸಲು ಹೆಚ್ಚುವರಿ ಶಿಕ್ಷಕರ ಗುರುತಿಸುವ ಕಾರ್ಯ ನಡೆದಿದ್ದು, ಈ ಪಟ್ಟಿ ಸಿದ್ಧಗೊಂಡ ಬಳಿಕ ಈ ಶಿಕ್ಷಕರನ್ನು ಕೊರತೆ ಇರುವ ಸ್ಥಾನಗಳಲ್ಲಿ ನೇಮಿಸಲಾಗುವುದು. ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು.
. ಆರ್‌.ಎಸ್‌. ಮುಳ್ಳೂರ, ಡಿಡಿಪಿಐ, ಧಾರವಾಡ

Trending videos

Back to Top