CONNECT WITH US  

ಗಣೇಶೋತ್ಸವದಲ್ಲಿ ಶಾಂತಿ-ಸುವ್ಯವಸ್ಥೆ  ಕಾಪಾಡಿ

ನಿಯಮಾವಳಿ ಅನುಸಾರ ಅರ್ಜಿ ಸಲ್ಲಿಸಿದವರಿಗೆ ತ್ವರಿತ ಅನುಮತಿ ನೀಡಿ: ಡಾ| ವೆಂಕಟೇಶ್‌

ಹಾವೇರಿ: ಪರಿಸರಸ್ನೇಹಿ ಶಾಂತಿಯುತ ಗಣೇಶ ಉತ್ಸವಕ್ಕೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗಣೇಶ ಮೂರ್ತಿಗಳ ಸ್ಥಾಪನೆಗೆ ಅನುಮತಿ ಕೇಳುವ ಸಂಘ-ಸಂಸ್ಥೆಗಳಿಗೆ ತ್ವರಿತವಾಗಿ ಅನುಮತಿ ನೀಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ| ಎಂ.ವಿ.ವೆಂಕಟೇಶ್‌ ಸೂಚನೆ ನೀಡಿದ್ದಾರೆ.

ಗಣೇಶೋತ್ಸವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಉತ್ಸವದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕು. ಶಾಂತಿ, ಸುವ್ಯವಸ್ಥಿತವಾಗಿ ಗಣೇಶೋತ್ಸವ ಜರುಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಣೇಶ ಉತ್ಸವ ಆಚರಣೆ ಮಾಡುವವರ ಭಾವನೆಗಳಿಗೆ ತೊಂದರೆಯಾಗಬಾರದು. ಯಾವುದೇ ರೀತಿಯ ಕಿರಿಕಿರಿಗಳು ಉಂಟಾಗಬಾರದು. ಗಣೇಶ ಉತ್ಸವ ಆಚರಣೆಗೆ ನಿಯಮಾವಳಿ ಅನುಸಾರ ಅನುಮತಿ ಕೇಳಿ ಅರ್ಜಿ ಸಲ್ಲಿಸುವ ಸಂಘ ಸಂಸ್ಥೆಗಳ ಮನವಿ ಪರಿಶೀಲಿಸಿ ತ್ವರಿತ ಅನುಮತಿ ನೀಡಿ. ಅಪಾಯಕಾರಿ ವಿದ್ಯುತ್‌ ಸಂಪರ್ಕ, ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕ, ಸಾರ್ವಜನಿಕ ರಸ್ತೆಗಳಲ್ಲಿ ಮೂರ್ತಿ ಸ್ಥಾಪನೆ, ವಿಷಕಾರಿ ರಾಸಾಯನಿಕ ಲೋಹ ಲೇಪಿತ ಪಿಒಪಿ ಬಳಕೆಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ, ತಹಶೀಲ್ದಾರ್‌, ಪರಿಸರ ಅಧಿಕಾರಿ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಕಠಿಣ ಕ್ರಮ: ಈಗಾಗಲೇ ಮಣ್ಣಿನ ಗಣಪತಿ ಪರಿಸರ ಪೂರಕ ಮೂರ್ತಿಗಳನ್ನು ಸ್ಥಾಪಿಸಲು ಸೂಚನೆ ನೀಡಲಾಗಿದೆ. ಮೂರ್ತಿ ತಯಾರಕರಿಗೂ ಮುನ್ಸೂಚನೆ ನೀಡಲಾಗಿದೆ. ಇಷ್ಟಾಗಿಯೂ ಯಾರಾದರು ವಿಷಕಾರಿ ರಾಸಾಯನಿಕ ಲೋಹ ಲೇಪಿತ ಗಣೇಶ ಮೂರ್ತಿಗಳ ಮಾರಾಟ ಹಾಗೂ ಪ್ರತಿಷ್ಠಾಪನೆ ಮಾಡಿದರೆ ಮೂರ್ತಿಗಳನ್ನು ವಶಕ್ಕೆ ಪಡೆದು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕೃತಕ ಹೊಂಡ ನಿರ್ಮಾಣ: ಗಣೇಶ ಮೂರ್ತಿಗಳನ್ನು ಸಹಜವಾಗಿ ಮೂರುದಿನ, ಐದುದಿನ, ಒಂಭತ್ತುದಿನ ಹಾಗೂ 21 ದಿನಕ್ಕೆ ವಿಸರ್ಜನೆ ಮಾಡಲಾಗುತ್ತಿದೆ. ಗಣೇಶ ವಿಸರ್ಜನೆಗೆ ನಗರ ಸ್ಥಳೀಯ ಸಂಸ್ಥೆಗಳು ಕೃತಕ ಹೊಂಡಗಳನ್ನು ನಿರ್ಮಿಸಬೇಕು. ಅವರ ಮನೆ ಬಾಗಿಲುಗಳಲ್ಲೇ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಸಂಚಾರಿ ವಿಸರ್ಜನಾ ವ್ಯವಸ್ಥೆ ಕೈಗೊಳ್ಳಲು ಅಧಿ ಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ವಿಡಿಯೋ ಕಾನ್ಫ ರೆನ್ಸ್‌ ಮೂಲಕ ತಾಲೂಕು ಆಡಳಿತದೊಂದಿಗೆ ಸಂವಾದ ನಡೆಸಿ, ಎಲ್ಲ ತಾಲೂಕುಗಳಲ್ಲೂ ಪೊಲೀಸ್‌, ತಹಶೀಲ್ದಾರ್‌ ಹಾಗೂ ವಿವಿಧ ಇಲಾಖೆಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಕುರಿತಂತೆ ಸಮನ್ವಯ ಸಭೆ ನಡೆಸಿ ಶಾಂತಿಯುತ ಗಣೇಶ ಉತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಮಾತನಾಡಿ, ಶಾಂತಿಯುತ ಗಣೇಶ ಉತ್ಸವ ಆಚರಣೆಗೆ ಎಲ್ಲ ಇಲಾಖೆಗಳು ಸಮನ್ವಯತೆ ಸಹಕಾರ ಅವಶ್ಯವಾಗಿದೆ. ಕಳೆದ ವರ್ಷ ಎಲ್ಲರ ಸಹಕಾರದಿಂದ ಶಾಂತಿಯುತವಾಗಿ ಗಣೇಶ ಉತ್ಸವ ನಡೆಸಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ 1750ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳು ಸ್ಥಾಪನೆಗೊಳ್ಳುವ ಅಂದಾಜಿದೆ. ಸೆ. 13ರಿಂದ ಅಕ್ಟೋಬರ್‌ 3ರ ವರೆಗೆ ಗಣೇಶ ಉತ್ಸವ ನಡೆಯಲಿದೆ. ಈ ನಡುವೆ ಮೋಹರಂ ಸಹ ನಡೆಯಲಿದೆ. ಶಾಂತಿಯುತವಾದ ಉತ್ಸವಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ, ನಗರಾಭಿವೃದ್ಧಿ ಕೋಶದ ಯೋಜನಾ ಧಿಕಾರಿ ವಾಸಣ್ಣ, ಪರಿಸರ ಅಧಿಕಾರಿ ಮಹೇಶ್ವರಪ್ಪ, ಹೆಸ್ಕಾಂ, ಕಂದಾಯ ಹಾಗೂ ಪೊಲೀಸ್‌ ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.

ಶಾಂತಿ ಕದಡಿದರೆ ಗಡಿಪಾರು
ಗಣೇಶ ಹಬ್ಬ ನಿಮಿತ್ತವಾಗಿಟ್ಟುಕೊಂಡು ಸಮಾಜದಲ್ಲಿ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಲು ಜಿಲ್ಲಾಡಳಿತ ಹಿಂಜರಿಯುವುದಿಲ್ಲ. ಇಂತಹ ಶಕ್ತಿಗಳ ವಿರುದ್ಧ ತೀವ್ರ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

Trending videos

Back to Top