CONNECT WITH US  

ಮೆಟ್ರೋ,ಉಪನಗರ,ಮೆಡಿಕಲ್‌ ಕಾಲೇಜು ನಿರೀಕೆ

ದೇವನಹಳ್ಳಿ: ಜಿಲ್ಲಾ ಸಂಕೀರ್ಣ ನಿರ್ಮಾಣ, ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ, ರೇಷ್ಮೆ, ಹಾಲು, ಹಣ್ಣು ತರಕಾರಿ ಬೆಳೆದುಕೊಡುವ ತಾಲೂಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಹಲವಾರು ನಿರೀಕ್ಷೆಗಳನ್ನು ಜನ ಇಟ್ಟುಕೊಂಡಿದ್ದಾರೆ.

ಈ ಬಾರಿ ಬಜೆಟ್‌ನಲ್ಲಿ ವಿಜಯಪುರ ತಾಲೂಕು, ಕೈಗಾರಿಕಾ ಪ್ರದೇಶ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿರುವ ಕಾವೇರಿ ನೀರು ನಗರಕ್ಕೆ ವಿಸ್ತರಣೆ, ಮೆಟ್ರೋ ರೈಲು ಯೋಜನೆ, ಮೆಡಿಕಲ್‌ ಕಾಲೇಜು, ಐಟಿಐಆರ್‌ ನೆನಗುದಿಗೆ ಬಿದ್ದಿರುವುದರ ಕಡೆ ಗಮನ, ಹೈಟೆಕ್‌ ಬಸ್‌ ನಿಲ್ದಾಣ, ಚಕ್ಕೋತ ಮಾರುಕಟ್ಟೆ ವ್ಯವಸ್ಥೆ, ದ್ರಾಕ್ಷಿ ಹಣ್ಣಿನ ಸಂಸ್ಕರಣಾ ಘಟಕ, ಅನುದಾನ ನೀಡದೆ ನೆನಗುದಿಗೆ ಬಿದ್ದಿರುವ ನೂರು ಹಾಸಿಗೆಗಳ ಆಸ್ಪತ್ರೆಗೆ ಮುಕ್ತಿ, ಶಾಶ್ವತ ನೀರಾವರಿಗೆ ಹೆಚ್ಚಿನ ಅನುದಾನ, ಬೂದಿಗೆರೆ ಗ್ರಾಮ ಹೆಚ್ಚಿನ ಜನಸಂಖ್ಯೆ ಹೊಂದಿರುವುದರಿಂದ ಹೋಬಳಿ ಮತ್ತು ಪಟ್ಟಣ ಪಂಚಾಯಿತಿ, ಕೃಷಿ ಉತ್ಪನ್ನ ಮಾರುಕಟ್ಟೆ, ಉಪನಗರಗಳ ನಿರ್ಮಾಣ ಸೇರಿದಂತೆ ಹಲವಾರು ನಿರೀಕ್ಷೆಗಳನ್ನು ಜನ ಇಟ್ಟುಕೊಂಡು ಆಸೆ ಈಡೆರುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ. 

ರಾಜ್ಯ ಕಾಂಗ್ರೆಸ್‌ ಸರ್ಕಾರದ ಕೊನೆ ಬಜೆಟ್‌ ಮಂಡನೆಗೆ ದಿನಗಣನೆ ಶುರುವಾಗಿದೆ. ಕನಿಷ್ಠ ಈ ಬಜೆಟ್‌ನಲ್ಲಾದರೂ ತಾಲೂಕಿನ ದುಡಿಯುವ ಜನತೆಗೆ ಉದ್ಯೋಗ ಒದಗಿಸುವುದರ ಜೊತೆಗೆ ಸ್ಥಳೀಯವಾಗಿ ಬೆಳೆಯುವ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಪೂರಕವಾಗಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಒತ್ತು ಕೊಡಲಿ ಎಂದು ರೈತಾಪಿ ಕೃಷಿ ಕೂಲಿ ಕಾರ್ಮಿಕರಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ತನ್ನ ಔದಾರ್ಯ ತೋರುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.

ಹಳೆ ಯೋಜನೆಗೆ ಗಮನ ಹರಿಸಬೇಕು: ಶಾಸಕ ಪಿಳ್ಳಮುನಿಶಾಮಪ್ಪ ತಮ್ಮ ಬಜೆಟ್‌ನಲ್ಲಿ ಈ ಬಾರಿ ತಾಲೂಕಿಗೆ ಯಾವ ರೀತಿ ಅನುದಾನಗಳು, ಯೋಜನೆಗಳು ಬರುತ್ತದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದಾಗ ದೇವನಹಳ್ಳಿ ನಗರಕ್ಕೆ ಕಾವೇರಿ ನೀರು, ಮೆಟ್ರೋ ರೈಲು, ಈಗಾಗಲೇ ಸರ್ಕಾರ ಜಿಲ್ಲೆಗೆ ಒಂದು ಮೆಡಿಕಲ್‌ ಕಾಲೇಜು ಎಂದು ಘೋಷಣೆ ಮಾಡಿರುವುದರಿಂದ ನಾಲ್ಕು ತಾಲೂಕುಗಳಲ್ಲಿ ಒಂದು ತಾಲೂಕಿಗೆ ಮೆಡಿಕಲ್‌ ಕಾಲೇಜು ಮಂಜೂರಾತಿ ಮಾಡಬೇಕು. ಕಳೆದ ಬಾರಿ ಕೇವಲ ಒಂದೇ ಒಂದು ಯೋಜನೆ ಮಾತ್ರ ನೀಡಿದ್ದರು. ಇನ್ನುಳಿದಂತೆ ಯಾವುದೂ ನೀಡಿಲ್ಲ. ಸರ್ಕಾರ 2009ರಲ್ಲಿ ಐಟಿಐಆರ್‌ ಯೋಜನೆ ಜಾರಿಗೆ ತಂದಿತ್ತು. ಅದು ನೆನಗುದಿಗೆ ಬಿದ್ದಿರುವುದರಿಂದ ಬಜೆಟ್‌ನಲ್ಲಿ ಇದರ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ಇನ್ನೂ ಬಾರದ ಅನುದಾನ: ದೇವನಹಳ್ಳಿ ತಾಲೂಕಿನಲ್ಲಿ ತರಕಾರಿ ಮತ್ತು ಹೂವು ಹಣ್ಣು ಹೆಚ್ಚು ಬೆಳೆಯುವ ರೈತರಿದ್ದು, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಇರುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ಇಲ್ಲ. ಅದಕ್ಕಾಗಿ ಈ ಬಜೆಟ್‌ನಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದೇವೆ. 2007ರಲ್ಲಿ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆಗಳ ಆಸ್ಪತ್ರೆ ಎಂದು ಘೋಷಣೆಯಾದರೂ ಇದುವರೆಗೂ ಅನುದಾನ ಬಂದಿಲ್ಲ. ಅದು ನೆನಗುದಿಗೆ ಬಿದ್ದಿರುವುದರಿಂದ ಈ ಬಜೆಟ್‌ನಲ್ಲಾದರೂ ಅದಕ್ಕೆ ಅನುದಾನ ನೀಡುತ್ತಾರೆ ಎಂಬ ಆಶಾಭಾವನೆ ಇದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಹೇಳುತ್ತಾರೆ.

ಪಟ್ಟಣ ಪಂಚಾಯ್ತಿ ಆಗುತ್ತಾ: ಬೂದಿಗೆರೆ ಗ್ರಾಮವು ಸುಮಾರು 13ಸಾವಿರ ಜನಸಂಖ್ಯೆ ಹೊಂದಿರುವು ದರಿಂದ ಹೋಬಳಿ ಮತ್ತು ಪಟ್ಟಣ ಪಂಚಾಯಿತಿ ಯನ್ನಾಗಿ ಮಾಡಲು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕಂದಾಯ ಸಚಿವರಿಗೆ, ಸಂಸದರಿಗೆ, ಶಾಸಕರಿಗೆ ಮನವಿ ಸಲ್ಲಿಸಿ, ಇದಕ್ಕೆ ಸಂಬಂಧಿಸಿದಂತೆ ಗಮನಕ್ಕೆ ತಂದಿದ್ದೇವೆ. ಆದರೆ ಈ ಬಜೆಟ್‌ನಲ್ಲಿ ಮಂಜೂರಾದರೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸ ಗೌಡ ಹೇಳುತ್ತಾರೆ. 

ಚನ್ನರಾಯಪಟ್ಟಣ ಹೋಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವುದರಿಂದ ಹಸಿರು ವಲಯವನ್ನಾಗಿ ಮಾಡಿರುವುದರಿಂದ ಸರ್ಕಾರ ಹೆಚ್ಚಿನ ನೀರಾವರಿ ಸೌಲಭ್ಯಗಳನ್ನು ನೀಡಿದರೆ ಹೆಚ್ಚು ಕೃಷಿ ಮಾಡಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ರೈತರು ಗುಳೆ ಹೋಗುವ ಪರಿಸ್ಥಿತಿ ಬಂದೊದಗುತ್ತದೆ. ಬಜೆಟ್‌ನಲ್ಲಿ ಇದಕ್ಕೆ ಆದ್ಯತೆ ನೀಡಬೇಕು ಎಂದು ನಲ್ಲೂರು ಗ್ರಾಮಸ್ಥ ಎನ್‌.ಮಂಜುನಾಥ್‌ ತಿಳಿಸಿದರು. 

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ನಗರವು ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು, ಹಲವಾರು ಜಿಲ್ಲೆ ಮತ್ತು ರಾಜ್ಯಗಳಿಂದ ಸಾಕಷ್ಟು ಜನರು ಬಂದು ಹೋಗುತ್ತಿರುವುದರಿಂದ ಸೂಕ್ತ ಜಾಗ ಗುರುತಿಸಿ, ಒಂದು ಸುಸಜ್ಜಿತವಾದ ಹೈಟೆಕ್‌ ಬಸ್‌ ನಿಲ್ದಾಣ ವಾದರೆ ಹೆಚ್ಚಿನ ಅನುಕೂಲವಾಗುತ್ತದೆ. ಸರ್ಕಾರ ಈ ಬಜೆಟ್‌ನಲ್ಲಿ ಅನುದಾನ ಒದಗಿಸಿಕೊಟ್ಟು ಕಾರ್ಯರೂಪಕ್ಕೆ ಬರುವಂತೆ ಆಗಬೇಕು ಎಂದು ಜಿಲ್ಲಾ ಡಿಎಸ್‌ಎಸ್‌ ಕಾರ್ಯಕಾರಿ ಸಮಿತಿ ಸದಸ್ಯ ಉಚ್‌.ಕೆ.ವೆಂಕಟೇಶಪ್ಪ ಅಭಿಪ್ರಾಯಪಟ್ಟರು.

ಒಂದೂ ಕೈಗಾರಿಕೆ ಇಲ್ಲ
ದೇವನಹಳ್ಳಿ ತಾಲೂಕಿನಲ್ಲಿ ಯಾವುದೇ ಒಂದು ಕೈಗಾರಿಕೆಗಳಿಲ್ಲ. ಎಷ್ಟೇ ವಿದ್ಯಾಭ್ಯಾಸ ಮಾಡಿದರೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೈಗಾರಿಕೆ ಪ್ರದೇಶಗಳಿದ್ದು, ಅದರೆ ಇದುವರೆಗೂ ತಾಲೂಕಿನಲ್ಲಿ ಒಂದು
ಕೈಗಾರಿಕೆ ಬಂದಿಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆದಮೇಲೆ ಸಾಕಷ್ಟು ಅಭಿವೃದ್ಧಿಯಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಬೆಂಗಳೂರಿಗೆ ಹತ್ತಿರವಿದ್ದರೂ ಕೈಗಾರಿಕೆಗಳು ಬರುವಲ್ಲಿ ವಿಫ‌ಲವಾಗಿದೆ. ಹೈದರಾಬಾದ್‌ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರ ಕೈಗಾರಿಕಾ ಪ್ರದೇಶಗಳ ಮಂಜೂರಾತಿ ಮಾಡಿದರೆ ಹೆಚ್ಚು ಕೈಗಾರಿಕೆಗಳು ಬರುವಂತೆ ಆಗುತ್ತದೆ ಎಂಬುದು ವಿದ್ಯಾರ್ಥಿ ವಿ.ರಘು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು 

ಕಾವೇರಿ ನೀರು ನಗರಕ್ಕೆ ವಿಸ್ತರಣೆ, ಐಟಿಐಆರ್‌ ನೆನಗುದಿಗೆ ಬಿದ್ದಿರುವುದರ ಕಡೆ ಗಮನ ಹರಿಸುವುದು, ಶಾಶ್ವತ ನೀರಾವರಿಗೆ ಹೆಚ್ಚಿನ ಅನುದಾನ, ಬೂದಿಗೆರೆ ಗ್ರಾಮ ಹೋಬಳಿ, ಪಟ್ಟಣ ಪಂಚಾಯಿತಿ, ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ಹಲವಾರು ನಿರೀಕ್ಷೆ
ಎಸ್‌.ಮಹೇಶ್‌


Trending videos

Back to Top