ರೈಲು ಹಳಿತಪ್ಪದಂತೆ ತಡೆಯಲು ಹಳಿ ರಹಿತ ರೈಲು ಓಡಿಸಲು ಕ್ರಮ: ಪ್ರಭು

ನವದೆಹಲಿ: ಇತ್ತೀಚೆಗೆ ಪದೇ ಪದೇ ರೈಲುಗಳು ಹಳಿತಪ್ಪುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರೈಲು ಹಳಿತಪ್ಪದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮುಂದಾಗಿದ್ದಾರೆ. ಹಳಿಗಳೇ ಇಲ್ಲದೇ ರೈಲು ಓಡಿಸುವುದಕ್ಕೆ ಕ್ರಮ
ಕೈಗೊಳ್ಳಲಾಗುತ್ತಿದೆ. ಈ ಬಾರಿಯ ಬಜೆಟ್ನಲ್ಲಿಯೇ ಈ ಯೋಜನೆಯನ್ನು ಪ್ರಾಸ್ತಾಪಿಸಲಾಗುವುದು. ರೈಲುಗಳು ಹೆಚ್ಚು ಹಳಿತಪ್ಪುತ್ತಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲೆಲ್ಲಾ ಹಳಿಗಳನ್ನು ತೆಗೆಸಲು ಕ್ರಮ ಜರುಗಿಸಲಾಗುತ್ತಿದೆ. ಹಳಿಗಳಿಲ್ಲದೇ ರೈಲು ಓಡಿಸಬಲ್ಲ ತಂತ್ರಜ್ಞಾನ ಜಪಾನ್ ಬಳಿ ಇದ್ದು, ಅದನ್ನು ತಕ್ಷಣವೇ ಆಮದು ಮಾಡಿಕೊಳ್ಳಲಾಗುವುದು. ಹಂತ ಹಂತವಾಗಿ ದೇಶದ
ಎಲ್ಲಾ ರೈಲು ಮಾರ್ಗಗಳನ್ನು ಹಳಿ ರಹಿತ ಮಾಡಲು ಸುರೇಶ್ ಪ್ರಭು ಅವರು ಯೋಜನೆ ರೂಪಿಸಿದ್ದಾರೆ. ಈ ಕುರಿತಂತೆ ಮೋದಿ ಜತೆಗೂ ಚರ್ಚಿಸಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.