CONNECT WITH US  

ವಲಸಿಗರಿಗೆ ಇಲ್ಲ ಬೆಂಗಳೂರು ಭಾಗ್ಯ! ಟ್ರಂಪ್‌ ನೀತಿಗೆ ಮುಂದಾದ ಸಿಎಂ

ಬೆಂಗಳೂರು: ರಾಜಧಾನಿಯಲ್ಲಿ ಜನಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ವಲಸಿಗರ ಬೆಂಗಳೂರು ಪ್ರವೇಶಕ್ಕೆ ನಿಷೇಧ ಹೇರುವ ಮಹತ್ವದ ಆದೇಶ ಹೊರಡಿಸಿದ್ದಾರೆ! ಶುಕ್ರವಾರ ಮಧ್ಯರಾತ್ರಿ ಈ ಆದೇಶ ಹೊರಬಿದ್ದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾದರಿಯಲ್ಲಿ ಹೆಜ್ಜೆ ಹಾಕುವ ಸುಳಿವನ್ನು ಸಿದ್ದರಾಮಯ್ಯ ನೀಡಿದ್ದಾರೆ. ರಾಜಧಾನಿಯಲ್ಲಿ ವಾಸವಿರುವ ಮೈಸೂರನ್ನು ಹೊರತುಪಡಿಸಿ ಬೆಂಗಳೂರೇತರ ಜಿಲ್ಲೆ, ಹೊರರಾಜ್ಯ ಮತ್ತು ಹೊರದೇಶ ಪ್ರಜೆಗಳಿಗೆ ಈ ಆದೇಶದ ಬಿಸಿ ತಟ್ಟಲಿದೆ. ಅಲ್ಲದೆ, ಬೆಂಗಳೂರಿನಿಂದ ಜಾಗ ಖಾಲಿ ಮಾಡಲು ಒಂದು ತಿಂಗಳ ಗಡುವು ನೀಡಲಾಗಿದೆ. ರಾಜ್ಯವೊಂದು ವಲಸೆ ವಿರೋಧಿ ನೀತಿಯನ್ನು ಪ್ರಕಟಿಸಿದ್ದು ವಿಶ್ವದಲ್ಲಿ ಇದೇ ಮೊದಲು. ಈ ಹಿಂದೆ ಮೈಸೂರು ರಾಜ್ಯ ಹೆಸರಿದ್ದ ಹಿನ್ನೆಲೆಯಲ್ಲಿ, ಸಿಎಂ ತವರೂರು ಮೈಸೂರಾದ ಕಾರಣ ಆ ಜಿಲ್ಲೆಗೆ ವಿನಾಯಿತಿ ನೀಡಲಾಗಿದ್ದು, ಬೆಂಗಳೂರಲ್ಲಿ ವಾಸಿಸುವ ಬೇರೆಲ್ಲ ಜಿಲ್ಲೆಯ ಪ್ರಜೆಗಳೂ ವಲಸೆ ನೀತಿ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

 ವಲಸೆ ನೀತಿಗೆ ನಾಲ್ಕು ಕಾರಣ
1 ಪ್ರತಿನಿತ್ಯ ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್‌ ನೀರನ್ನು ಬಿಡುತ್ತಿರುವುದರಿಂದ ಕುಡಿವ ನೀರಿನ ಸಮಸ್ಯೆ ಉದ್ಭವಿಸಿದೆ. ಸದ್ಯದ ಪ್ರಕಾರ, ಮೇ ತಿಂಗಳಿನಲ್ಲಿ 35 ಲಕ್ಷ ಮಂದಿಗಷ್ಟೇ ಕುಡಿವ ನೀರು ಲಭ್ಯವಾಗಲಿದೆ. ಆದರೆ, ಬೆಂಗಳೂರಿನ ಒಟ್ಟು ಜನಸಂಖ್ಯೆ 1.5 ಕೋಟಿ ಇದ್ದು, ಮೂಲ ನಿವಾಸಿಗಳನ್ನಷ್ಟೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ.

2.ಬೆಂಗಳೂರಿನಲ್ಲಿ ಒಟ್ಟಾರೆ 70 ಲಕ್ಷ ವಾಹನಗಳಿದ್ದು, ಟ್ರಾಫಿಕ್‌ ಸಮಸ್ಯೆ ತಪ್ಪಿಸಲು ಸಿಎಂ ಗಂಭೀರವಾಗಿ ಚಿಂತಿಸಿದ್ದಾರೆ.

ಇತ್ತೀಚೆಗಷ್ಟೇ ಇಂಗ್ಲೆಂಡಿನ ಪ್ರಸಿದ್ಧ ಪತ್ರಿಕೆ "ದಿ ಗಾರ್ಡಿಯನ್‌' ನಲ್ಲಿ ಬೆಂಗಳೂರಿನ ವಾಯುಮಾಲಿನ್ಯ ಕುರಿತು ವಿಶೇಷ ವರದಿ ಪ್ರಕಟವಾಗಿತ್ತು. "2025ರಲ್ಲಿ ಬೆಂಗಳೂರು ವಾಸಯೋಗ್ಯ ನಗರ ಆಗಿರುವುದಿಲ್ಲ' ಎಂದು ವರದಿಯಲ್ಲಿ ಹೇಳಲಾಗಿತ್ತು. ಈ ಬಗ್ಗೆ ಅಧ್ಯಯನ ನಡೆಸಲು ಸಿಎಂ ವಿಶೇಷ ಸಮಿತಿ ರಚಿಸಿದ್ದು, ಆತಂಕಕಾರಿ ಮಾಹಿತಿಗಳು ಹೊರಬಿದ್ದಿವೆ.

3.ಬೆಂಗಳೂರಿನಲ್ಲಿ ಲಕ್ಷಕ್ಕೂ ಅಧಿಕ ವಿದೇಶಿ ಪ್ರಜೆಗಳು ವಾಸವಿದ್ದು, ಎಲ್ಲರೂ ಸಾಫ್ಟ್ ವೇರ್‌ ಕ್ಷೇತ್ರವನ್ನೇ ನಂಬಿದ್ದಾರೆ. ಅಮೆರಿಕದಲ್ಲಿ ಟ್ರಂಪ್‌ ಸರ್ಕಾರ ಬೆಂಗಳೂರು ಮೂಲದ ಟೆಕ್ಕಿಗಳಿಗೆ ಎಚ್‌ಧಿ-1ಬಿ ವೀಸಾ ನಿರ್ಬಂಧ ಹೇರಿರುವುದರಿಂದ ಇದಕ್ಕೆ ಪ್ರತೀಕಾರವಾಗಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

4.ಕನ್ನಡದ ಹಿರಿಯ ಸಾಹಿತಿಗಳು, ಕನ್ನಡ ಕಡ್ಡಾಯ ನೀತಿಯನ್ನು ಸರ್ಕಾರ ಜಾರಿಗೆ ತರಲೇಬೇಕೆಂದು ಒತ್ತಾಯಿಸಿರುವ ಹಿನ್ನೆಲೆಯಲ್ಲಿ, ಪರರಾಜ್ಯ ಹಾಗೂ ವಿದೇಶಿ ಪ್ರಭಾವ ತಗ್ಗಿಸುವುದೂ ಒಂದು ಕಾರಣ.

ಸ್ಮಾರ್ಟ್‌ ಸಿಟಿ ಪ್ಲ್ರಾನ್‌ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಿನ ವರ್ಷವೇ ಬೆಂಗ ಳೂರನ್ನು ಸ್ಮಾರ್ಟ್‌ಸಿಟಿ ಮಾಡಲು ಉದ್ದೇಶಿಸಿರು ವುದರಿಂದಲೂ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಸುಮಾರು 70 ಲಕ್ಷ ಜನ ಬೆಂಗಳೂರನ್ನು ತೊರೆಯುವುದರಿಂದ ಹೊಸ ರಸ್ತೆ, ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎನ್ನುವ ಆಲೋಚನೆ ಸರ್ಕಾರದ್ದು.

 ಬೆಂಗ್ಳೂರೇತರರಿಗೆ ತಲಾಶ್‌ ಮೂಲ ಬೆಂಗಳೂರು ನಿವಾಸಿಗಳಲ್ಲದ ವ್ಯಕ್ತಿಗಳ ಹುಡುಕಾಟಕ್ಕೆ 1 ಸಾವಿರ ವಿಶೇಷ ಅಧಿಕಾರಿಗಳ ತಂಡ ರಚನೆಯಾಗಿದೆ. ಏ.3ರ ಸೋಮವಾರದಿಂದ ಮನೆ ಮನೆಗೆ ದಾಖಲೆ ಪರಿಶೀಲನೆಗೆ ತಂಡಗಳಲ್ಲಿ ಧಾವಿಸಲಿದ್ದಾರೆ. ಬೆಂಗಳೂರಿನಲ್ಲಿ ಪಡಿತರ ಚೀಟಿ (ಬೆಂ.ಗ್ರಾಮಾಂತರವೂ ಸೇರಿ) ಹೊಂದಿದವರಿಗಷ್ಟೇ ಇಲ್ಲಿ ನೆಲೆಸುವ ಅವಕಾಶ ಇರಲಿದೆ.

 2 ತಿಂಗಳ ಹಿಂದೆಯೇ ಪ್ಲ್ರಾನ್‌? ರಾಜ್ಯದ ವಲಸೆ ನೀತಿಗೆ 2 ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ವಿದ್ಯಾರ್ಥಿಗಳ ಪರೀಕ್ಷೆಗೆ ಅಡ್ಡಿ ಆಗುತ್ತದೆಂಬ ಕಾರಣಕ್ಕೆ ಮೇ ತಿಂಗಳಲ್ಲಿ ಇದನ್ನು ಜಾರಿ ಮಾಡಲಾಗುತ್ತಿದೆ ಎನ್ನಲಾಗಿದೆ.

3 ತಿಂಗಳು ಸಂಬಳ ಪ್ರಸ್ತುತ ಬೆಂಗಳೂರಿನ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಸುಮಾರು 55 ಲಕ್ಷಕ್ಕೂ ಅಧಿಕ ಹೊರ ಪ್ರದೇಶದ ಉದ್ಯೋಗಿಗಳಿಗೆ 3 ತಿಂಗಳ ಸಂಬಳ ನೀಡಲು ಕಂಪನಿಗಳಿಗೆ ಸೂಚನೆ ನೀಡಲಾಗಿದೆ. "ಸಾಧ್ಯವಾದಷ್ಟು ಕಂಪನಿಗಳನ್ನು ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಕಲಬುರಗಿಗೆ ಸ್ಥಳಾಂತರಿಸಲೂ ಯೋಜನೆ ರೂಪಿಸಲಾಗಿದೆ' ಎಂದು ಉನ್ನತ ಮೂಲಗಳು ತಿಳಿಸಿವೆ. ಈ ವಲಸೆ ನೀತಿ ಕುರಿತು ಚರ್ಚೆಗೆ ಸಿಎಂ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ 10ಕ್ಕೆ ತಮ್ಮ ಗೃಹಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ ಎಂದು ಗೊತ್ತಾಗಿದೆ. 

ಪ್ರವೇಶ ಬೇಕಾದ್ರೆ ಮೇಯರ್‌ ಒಪ್ಪಿಗೆ ಬೇಕು!

ಹೊರರಾಜ್ಯ, ಹೊರದೇಶದ ಉದ್ಯಮಿಗಳ ಪರ ಸಾಫ್ಟ್ ನಿಲುವನ್ನು ತಾಳಿರುವ ರಾಜ್ಯ ಸರ್ಕಾರ, ಇಲ್ಲಿ ಕಂಪನಿ ಹೊಂದುವ ನಿರ್ಧಾರವನ್ನು ಮೇಯರ್‌ಗೆ ಬಿಟ್ಟಿದೆ. ಉದ್ಯಮಿಗಳು ಬೆಂಗಳೂರು ವಹಿವಾಟು ಹೊಂದಲು ಬೃಹತ್‌ ಬೆಂಗಳೂರು ಪಾಲಿಕೆಗೆ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ, ಒಪ್ಪಿಗೆ ಸಿಕ್ಕರಷ್ಟೇ ಅವರಿಗೆ ಬೆಂಗಳೂರು ಭಾಗ್ಯ ಸಿಗಲಿದೆ. ಅಲ್ಲದೆ, ಇಂಥ ಕಂಪನಿಗಳಲ್ಲಿ ಮೂಲ ಬೆಂಗಳೂರಿಗರಿಗೆ ಶೇ.95 ಉದ್ಯೋಗಾವಕಾಶ ನೀಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ತಿಳಿದುಬಂದಿದೆ.

ಇದು ರಾಜ್ಯ ಸರ್ಕಾರದ ಅತ್ಯಂತ ಮೂರ್ಖ ನಿರ್ಧಾರ. ವಿಶ್ವ ಮಟ್ಟದಲ್ಲಿ ಗಿಮಿಕ್‌ ಮಾಡಿ ಹೆಸರು ಗಳಿಸಲು ಸಿದ್ದರಾಮಯ್ಯ ಸ್ಕೆಚ್‌ ಹಾಕಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ,ಮಾಜಿ ಸಿಎಂ

ಟ್ರಂಪ್‌ರನ್ನು ಸಿದ್ದರಾಮಯ್ಯ ನಕಲು ಮಾಡುತ್ತಿದ್ದಾರೆ. ಮೈಸೂರಿಗಷ್ಟೇ ವಿನಾಯಿತಿ ನೀಡಿ ರಾಮನಗರಕ್ಕೆ ದ್ರೋಹ ಬಗೆದಿದ್ದು ಸರಿಯಲ್ಲ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಮಾಡುವೆ.
ಎಚ್‌.ಡಿ. ಕುಮಾರಸ್ವಾಮಿ,ಮಾಜಿ ಸಿಎಂ

ಏಪ್ರಿಲ್‌ ಫ‌ೂಲ್‌
 "ವಲಸಿಗರಿಗಿಲ್ಲ ಬೆಂಗಳೂರು ಭಾಗ್ಯ' ಏಪ್ರಿಲ್‌ ಫ‌ೂಲ್‌ ಸುದ್ದಿ ಆಗಿದ್ದು,ಸುದ್ದಿ ಹಾಗೂ ಅಲ್ಲಿನ ಹೇಳಿಕೆಗಳು ಕೇವಲ ಕಾಲ್ಪನಿಕ.


Trending videos

Back to Top