CONNECT WITH US  

ವಿನಯ್‌ ಚಂದ್ರ ಸಂಗೀತ ಯಾನ

ರೂಪತಾರಾ

ಅವರು ಹೇಳಿ ಕೇಳಿ ಟೆಕ್ಕಿ. ಕೆಲಸ ಅರಸಿ, ಸಾಗರದಾಚೆ ಹೋದವರು. ಎಲ್ಲೋ ಒಂದು ದೇಸೀತನ ಬೇಕೆನಿಸಿತು. ಕನ್ನಡಾಭಿಮಾನ ತುಂಬಿ ಬಂತು. ಸಂಗೀತದ ಮೇಲೆ ಇನ್ನಿಲ್ಲದ ಸೆಳೆತವೂ ಇತ್ತು. ದೇಶದ ಆಚೆ ಇದ್ದ ಆ ಟೆಕ್ಕಿಗೆ ಒಂದು ಕನಸು ಚಿಗುರೊಡೆಯಿತು. ಚಿತ್ರರಂಗದಲ್ಲಿ ಸಂಗೀತ ಪಯಣ ಶುರು ಮಾಡುವ ಆಸೆ ಹೆಚ್ಚಾಯಿತು. ಹಾಗೆ ಆಗಿದ್ದೇ ತಡ, ಯು ಟರ್ನ್ ತೆಗೆದುಕೊಂಡು ಗಾಂಧಿನಗರದ ಅಂಗಳಕ್ಕೆ ಜಿಗಿದರು. ಅಲ್ಲಿಂದ ತಮ್ಮ ಸಂಗೀತ ಯಾನ ಶುರುವಿಟ್ಟುಕೊಂಡರು.

ಬೆರಳೆಣಿಕೆಯಷ್ಟು ಚಿತ್ರಗಳಿಗೆ ಸಂಗೀತ ಕೊಟ್ಟರು. ತೃಪ್ತಿ ಸಿಗಲಿಲ್ಲ. ಬೇರೆ ಏನನ್ನೋ ಮಾಡುವ ತುಡಿತ ಇನ್ನಷ್ಟು ಹೆಚ್ಚಾಯ್ತು. ಒಂದಷ್ಟು ಸಮಾನ ಮನಸ್ಕರ ಜತೆ ಸೇರಿ ಒಂದು ಸಂಸ್ಥೆ ಹುಟ್ಟುಹಾಕಿದರು. ಆ ಮೂಲಕ ಸಿನಿಮಾ ಮಾಡುವ ಮನಸ್ಸು ಮಾಡಿದರು. ಆ ಸಂಸ್ಥೆಯ ಮೊದಲ ಹೆಜ್ಜೆಯಲ್ಲಿ ಸಿಕ್ಕಿದ್ದು "ಜವ'. ಇದು ಯುವ ಸಂಗೀತ ನಿರ್ದೇಶಕ ವಿನಯ್‌ ಚಂದ್ರ ಅವರ ಸಿನಿಮಾ ಜರ್ನಿಯ ಆರಂಭ. ಆ ಬಗ್ಗೆ ವಿನಯ್‌ ಜೊತೆ ಒಂಚೂರು ಮಾತುಕತೆ.

ಲೈಫ್ ರೀ ಸ್ಟಾರ್ಟ್‌: ವಿನಯ್‌ ಚಂದ್ರ ಅವರು ವಿದೇಶದಲ್ಲಿ ಟೆಕ್ಕಿಯಾಗಿದ್ದವರು. ಅವರಿಗೆ ಸಿನಿಮಾ ಮೇಲೆ ಒಲವು ಮೂಡಿತು. ಸಂಗೀತದ ಮೇಲೆ ಪ್ರೀತಿ ಹೆಚ್ಚಾಯಿತು. ಅಲ್ಲಿಂದ ಬಂದವರಿಗೆ ಮೊದಲು ಸಿಕ್ಕ ಅವಕಾಶ, "ನಾ ರಾಣಿ ನೀ ಮಹಾರಾಣಿ' ಚಿತ್ರಕ್ಕೆ ಸಂಗೀತ ನೀಡುವ ಜವಾಬ್ದಾರಿ. ಬಿ.ರಾಮಮೂರ್ತಿ ನಿರ್ದೇಶನದ ಚಿತ್ರದ ಮೂಲಕ ವಿನಯ್‌ ಚಂದ್ರ ಅವರ ಸಂಗೀತದ ಕೆಲಸ ಶುರುವಾಯ್ತು. ಆ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ವಿನಯ್‌ ಚಂದ್ರ, "ಮೊದಲ ಚಿತ್ರದ ನಂತರ, ನಾನು ಜಗ್ಗೇಶ್‌ ಅವರೊಂದಿಗೆ ಬ್ಯಾಕ್‌ ಟು ಬ್ಯಾಕ್‌ ಮೂರು ಚಿತ್ರಗಳಲ್ಲಿ ಕೆಲಸ ಮಾಡಿದೆ.

"ಬಾಡಿಗಾರ್ಡ್‌', "ಮಂಜುನಾಥ ಎಲ್‌ಎಲ್‌ಬಿ' ಮತ್ತು "ಗುರು' ಚಿತ್ರಕ್ಕೆ ನಾನು ಸಂಗೀತ ನಿರ್ದೇಶನ ಮಾಡಿದೆ. ಅದರ ಜತೆಯಲ್ಲೇ ಕೆ.ವಿ.ರಾಜು ಅವರು "ಜಟಾಯು' ಎಂಬ ಚಿತ್ರ ಶುರು ಮಾಡಿ ಹಿಂದೆ ಸರಿದರು. ಆ ಚಿತ್ರಕ್ಕೂ ಸಂಗೀತ ಕೆಲಸ ಮಾಡಿದೆ. ಅದಾದ ಮೇಲೆ ನಾನು ಕೈ ಬಿಟ್ಟ ಚಿತ್ರಗಳ ಸಂಖ್ಯೆ ಬರೋಬ್ಬರಿ ಏಳು. ಹೌದು, ನಾನು ಹುಡುಕಿ ಬಂದ ಏಳು ಚಿತ್ರಗಳನ್ನು ಕೈ ಬಿಟ್ಟೆ. ಅದಕ್ಕೆ ಕಾರಣ, ನನ್ನ ಕೆರಿಯರ್‌ ಅನ್ನು ರೀಸ್ಟಾರ್ಟ್‌ ಮಾಡಬೇಕು ಎಂಬ ಉದ್ದೇಶವಷ್ಟೇ' ಎಂದು ಹೊಸ ನಿರ್ಧಾರ ತೆಗೆದುಕೊಂಡ ಕುರಿತು ಹೇಳಿಕೊಳ್ಳುತ್ತಾರೆ ವಿನಯ್‌ ಚಂದ್ರ.

ನನ್ನ ಸಹೋದರ ಅಭಯ್‌ ಚಂದ್ರಗೆ ನಂದಕಿಶೋರ್‌ ನಿರ್ದೇಶನದ "ಅಧ್ಯಕ್ಷ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇತ್ತು. ತಮ್ಮನೊಂದಿಗೆ ಚರ್ಚೆ ಮಾಡಿದೆ. ನಾವೇ ಒಂದು ಸಂಸ್ಥೆಯನ್ನು ಹುಟ್ಟುಹಾಕಿ, ಆ ಮೂಲಕ ಹೊಸಬಗೆಯ ಚಿತ್ರಗಳನ್ನು ಮಾಡೋಣ ಎಂಬ ಕುರಿತು ಮಾತನಾಡಿದ ಬಳಿಕ ಅವನಿಂದಲೂ ಪಾಸಿಟಿವ್‌ ರೆಸ್ಪಾನ್ಸ್‌ ಬಂತು.

ಅಲ್ಲಿಂದು ನಾವು "ಬು ಆಬ್ರಿ ಎಂಟರ್‌ಟೈನ್‌ಮೆಂಟ್‌' ಹೆಸರಿನಡಿ ಒಂದು ಪ್ರವೈಟ್‌ ಸಂಸ್ಥೆಯನ್ನು ಹುಟ್ಟುಹಾಕಿದೆವು. ಆ ಮೂಲಕ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನವಾಯಿತು. ನಮ್ಮೊಂದಿಗೆ ವಚನ್‌ ಶೆಟ್ಟಿ, ವೀರೇಂದ್ರ, ದೀಪಕ್‌ ಎಂಬ ಗೆಳೆಯರು ಕೈ ಜೋಡಿಸಿದರು. ಯುಎನ್‌ಜಿ ಎಂಬ ಆಡಿಯೋ ಸಂಸ್ಥೆ ಕೂಡ ಶುರುಮಾಡಿ, ಆ ಮೂಲಕವೂ ಹೊಸ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುವ ಬಗ್ಗೆ ತೀರ್ಮಾನಿಸಿದೆವು.

ನಾವು ಹುಟ್ಟುಹಾಕಿದ ಸಂಸ್ಥೆ ಮೂಲಕ ತಯಾರಾದ ಮೊದಲ ಚಿತ್ರ "ಜವ'. ಈಗಾಗಲೇ ಆ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಅದೊಂದು ಹೊಸ ಪ್ರಯತ್ನ ಮತ್ತು ಪ್ರಯೋಗಾತ್ಮಕ ಚಿತ್ರವೆನ್ನಬಹುದು. ನಮ್ಮ ಸಂಸ್ಥೆಯಡಿ ತಯಾರಾಗಿರುವ ಮೊದಲ ಚಿತ್ರವಾಗಿರುವುದರಿಂದ ಸಹಜವಾಗಿಯೇ ನಮಗೆ ಒಂದು ಕಡೆ ಭಯ, ಖುಷಿ ಎರಡೂ ಇದೆ. ಕನ್ನಡಿಗರು ಒಳ್ಳೆಯ ಸಿನಿಮಾಗಳನ್ನು ಕೈ ಬಿಡುವುದಿಲ್ಲ ಎಂಬ ಅದಮ್ಯ ವಿಶ್ವಾಸವೂ ನಮಗಿದೆ' ಎಂದು ವಿವರ ಕೊಡುತ್ತಾರೆ ವಿನಯ್‌ ಚಂದ್ರ.

ನಮಗಿಷ್ಟದ ಸಿನ್ಮಾ ನಮ್ಮಿಷ್ಟ...: ಸಂಸ್ಥೆಯಡಿ "ಜವ' ಮೊದಲ ಚಿತ್ರವಾದರೆ, ಎರಡನೇ ಚಿತ್ರ ಶಿವರಾಜ್‌ಕುಮಾರ್‌ ಅಭಿನಯದಲ್ಲಿ ತಯಾರಾಗುತ್ತಿರುವುದು ವಿಶೇಷ. "ಬ್ಲಾಕ್‌ ಸಿ ನಂಬರ್‌ 135' ಎಂಬ ಆ್ಯಕ್ಷನ್‌-ಥ್ರಿಲ್ಲರ್‌ ಚಿತ್ರವೊಂದನ್ನು ಸಂಸ್ಥೆ ಮೂಲಕ ತಯಾರು ಮಾಡುತ್ತಿದ್ದೇವೆ. ಶಿವರಾಜ್‌ಕುಮಾರ್‌ ಆ ಚಿತ್ರದ ಕಥೆ ಒಪ್ಪಿಕೊಂಡು, ನಮಗೆ ಡೇಟ್ಸ್‌ ಕೊಟ್ಟಿದ್ದಾರೆ. ಶೇ.60 ರಷ್ಟು ಯುರೋಪ್‌ನಲ್ಲೇ ಚಿತ್ರೀಕರಣ ನಡೆಯಲಿದೆ. ಉಳಿದ ಭಾಗ ಬೆಂಗಳೂರು ಸೇರಿದಂತೆ ಇನ್ನಿತರೆಡೆ ಚಿತ್ರೀಕರಣವಾಗಲಿದೆ.

ಆರಂಭದಲ್ಲಿ ನಾನು ಹೇಳಿದೆ. ನನ್ನನ್ನು ಹುಡುಕಿ ಬಂದ ಏಳು ಚಿತ್ರಗಳನ್ನು ನಾನು ಕೈ ಬಿಟ್ಟೆ ಅಂತ. ಆ ಚಿತ್ರಗಳನ್ನು ಕೈ ಬಿಡಲು ಕಾರಣ. ನನ್ನ ಕೆರಿಯರ್‌ ಅನ್ನು ರೀ ಸ್ಟಾರ್ಟ್‌ ಮಾಡಬೇಕೆನಿಸಿತು. ಯಾವುದೋ ಸಿನಿಮಾ ಒಪ್ಪಿಕೊಂಡು, ಅವರಿಗಿಷ್ಟವಾಗುವಂತೆ ಕೆಲಸ ಮಾಡುವ ಬದಲು, ನಮಗೆ ಇಷ್ಟವಾಗುವ ಚಿತ್ರಗಳನ್ನು ಮಾಡಿದರೆ, ಅಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿದೆ ಅಂತ, ಏಳು ಚಿತ್ರಗಳನ್ನು ನಾನು ಮಿಸ್‌ ಮಾಡಿಕೊಂಡೆ. ನಾನು ಬಿಟ್ಟ ಮೇಲೆ ಬೇರೆ ಸಂಗೀತ ನಿರ್ದೇಶಕರು ಆ ಚಿತ್ರಗಳಿಗೆ ಕೆಲಸ ಮಾಡಿದರು. ಕೆಲ ಚಿತ್ರಗಳು ಹಿಟ್‌ ಆದವು.

ನಾನು ಕೈ ಬಿಟ್ಟ ಸಿನಿಮಾಗಳು ಯಶಸ್ಸು ಕಂಡಾಗ ಎಲ್ಲೋ ಒಂದು ಕಡೆ ಬೇಸರವಾಯ್ತು. ಆದರೂ, ಏನೂ ಮಾಡೋಕ್ಕಾಗಲ್ಲ. ಎಲ್ಲದ್ದಕ್ಕೂ ಅದೃಷ್ಟ ಇರಬೇಕು ಅಂದುಕೊಂಡು, ನನಗೆ ಏನು ಬೇಕು, ಎಂತಹ ತಂಡ ಜತೆಗಿರಬೇಕು ಅಂತ ಯೋಚಿಸಿ, ಸಂಸ್ಥೆ ಹುಟ್ಟುಹಾಕಿ, ಆ ಮೂಲಕ ನಮ್ಮ ಇಷ್ಟದ ಸಿನಿಮಾಗಳನ್ನು ಮಾಡಲು ಮುಂದಾದೆ. ನಮ್ಮ ಸಂಸ್ಥೆಯ ಮೂಲಕ ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರ ಮಾಡುವ ಆಸೆ ಇಟ್ಟುಕೊಂಡಿದ್ದೇವೆ. ಏನೇ ಮಾಡಿದರೂ, ಒಂದು ವರ್ಷಕ್ಕೆ ಒಂದು ಸಿನಿಮಾ ಮಾಡುವುದೇ ದೊಡ್ಡ ಸಾಧನೆ.

ಈಗಾಗಲೇ "ಜವ' ಬಿಡುಗಡೆ ಬಳಿಕ ಶಿವಣ್ಣನ ಚಿತ್ರಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಕಳೆದ ಆರು ತಿಂಗಳ ಕಾಲ ಸ್ಕ್ರಿಪ್ಟ್ ಕೆಲಸ ಜೋರಾಗಿಯೇ ನಡೆದಿದೆ. ಅದೊಂದು ಬೇರೆ ರೀತಿಯ ಚಿತ್ರ ಆಗುತ್ತೆ ಎಂಬ ವಿಶ್ವಾಸ ನನಗಿದೆ. ಆ್ಯಕ್ಷನ್‌ ಥ್ರಿಲ್ಲರ್‌ ವಿಷಯದ ಜತೆಯಲ್ಲಿ ಸ್ವಲ್ಪ ಎಮೋಷನ್ಸ್‌ ಕೂಡ ಇದೆ. ಇನ್ನು, "ಜವ' ಚಿತ್ರ ನಾವು ಅಂದುಕೊಂಡಂತೆ ಮೂಡಿಬಂದಿದೆ. ಉಷಾ ಉತ್ತುಪ್‌ ಅವರೊಂದು ಹಾಡು ಹಾಡಿದ್ದಾರೆ. ನಮ್ಮ ಸಂಸ್ಥೆಯಡಿ, ಅಂತಹ ಗಾಯಕಿಯನ್ನು ಕರೆಸಿ ಹಾಡಿಸಿದ್ದು ಖುಷಿ ಹೆಚ್ಚಿಸಿದೆ ಎನ್ನುವ ವಿನಯ್‌ ಚಂದ್ರ, ತಮ್ಮ ಮನೆಯಲ್ಲಿ ನಿರ್ದೇಶಕರು, ಕಲಾವಿದರು, ಸಂಗೀತ ನಿರ್ದೇಶಕರಿದ್ದಾರೆ.

ಅಪ್ಪ ಸುರೇಶ್ಚಂದ್ರ ಅಭಿನಯಿಸಿದರೆ, ತಮ್ಮ ಅಭಯ್‌ಚಂದ್ರ ನಿರ್ದೇಶಕರು. ನಾನು ಸಂಗೀತ ಮಾಡ್ತೀನಿ. ಒಂದು ಮನೆಯಲ್ಲಿ ಒಬ್ಬ ನಿರ್ದೇಶಕ, ಸಂಗೀತ ನಿರ್ದೇಶಕರಿದ್ದರೆ, ಒಳ್ಳೆಯ ಡೀಲ್‌ ಆಗುತ್ತೆ. ತಮ್ಮನಿಗೂ ಸಂಗೀತ ಗೊತ್ತು. ಅವನಿಗೆ ಹೇಳಿಬಿಟ್ಟಿದ್ದೇನೆ. ನೀನು ನನ್ನ ಕೆಲಸ ಮಾಡಬೇಡ, ನಾನು ನಿನ್ನ ಕೆಲಸ ಮಾಡಲ್ಲ ಅಂದಿದ್ದೇನೆ. ಒಬ್ಬ ನಿರ್ಮಾಪಕ ಮನೆಗೆ ಬಂದರೆ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಇಬ್ಬರೂ ಸಿಗ್ತಾರೆ. ಕಲಾವಿದರೂ ಸಿಗುತ್ತಾರೆ ಅಂತ ಜೋರು ನಗು ಬೀರುತ್ತಾರೆ ವಿನಯ್‌.

ಸಂಸ್ಥೆಯಡಿ ಪಕ್ಕಾ ಪ್ಲಾನ್‌: ನನಗೆ ಸಾಕಷ್ಟು ಕನಸುಗಳಿವೆ. ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಠವಿದೆ. ತಮ್ಮನಿಗೆ ಹಾಲಿವುಡ್‌ ಸಿನಿಮಾಗಳೆಂದರೆ ತುಂಬಾ ಇಷ್ಟ. ಎಷ್ಟೋ ಚಿತ್ರಗಳನ್ನು ನೋಡಿ, ನಮ್ಮಲ್ಲೂ ಯಾಕೆ ಈ ರೀತಿಯ ಕಥೆ ಪ್ರಯತ್ನಿಸಬಾರದು ಅಂದುಕೊಳ್ಳುತ್ತಾನೆ. ಹಾಲಿವುಡ್‌ ನಿರ್ದೇಶಕ ಜೇಮ್ಸ್‌ವ್ಯಾನ್‌ ಮಿಸ್ಟ್ರಿ-ಥ್ರಿಲ್ಲರ್‌ ಚಿತ್ರಗಳ ಪಂಟ. ಅಷ್ಟೇ ಅಲ್ಲ, ಎಲ್ಲಾ ರೀತಿಯ ಚಿತ್ರಗಳನ್ನೂ ನಿರ್ದೇಶಿಸಿಕೊಂಡು ಬಂದವನು.

ತಮ್ಮನಿಗೂ ಅದೇ ರೀತಿ ಎಲ್ಲಾ ರೀತಿಯ ಚಿತ್ರಗಳನ್ನು ನಿರ್ದೇಶಿಸುವ ಆಸೆ ಇದೆ. ಇನ್ನು, ನಾನೊಬ್ಬ ತಂತ್ರಜ್ಞ. ನನಗೂ ಆ ರೀತಿಯ ಪ್ರಯೋಗ ಇಷ್ಟ. ಆದರೆ, ಏನ್ಮಾಡೋದು, ಅದಕ್ಕೆ ದೊಡ್ಡ ಕ್ಯಾನ್ವಾಸ್‌ ಬೇಕು. ಕೆಲವರಿಗಷ್ಟೇ ದೊಡ್ಡ ಬ್ಯಾನರ್‌, ದೊಡ್ಡ ನಟರ ಬಳಿ ಕೆಲಸ ಮಾಡುವ ಅದೃಷ್ಟ ಸಿಗುತ್ತೆ. ದೊಡ್ಡ ನಟರ ಜತೆಗೆ ಕೆಲಸ ಮಾಡಿದರೆ ರೀಚ್‌ ಜಾಸ್ತಿ ಇರುತ್ತೆ. ಇದು ನಿಜ, ಆದರೆ, ನನ್ನ ಪ್ರಕಾರ, ಕನ್ನಡಿಗರು ಒಳ್ಳೆಯ ಚಿತ್ರಗಳನ್ನು ಯಾವತ್ತಿಗೂ ಕೈ ಬಿಟ್ಟಿಲ್ಲ.

ಅದೇ ನಂಬಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ  ಮುಂದಿನ ಹೆಜ್ಜೆ ದೊಡ್ಡದ್ದಾಗಿರುತ್ತೆ. ಶಿವರಾಜ್‌ಕುಮಾರ್‌ ಅಭಿನಯದ ಚಿತ್ರದ ಬಜೆಟ್‌ ಸುಮಾರು 10 ಕೋಟಿ. ಅದಕ್ಕೆ ಅದರದೇ ಆದ ಕ್ಯಾನ್ವಾಸ್‌ ಇದೆ. ಹಾಲಿವುಡ್‌ನ‌ಲ್ಲಿ ಡಬ್‌ಸ್ಟೆಪ್‌ ಮ್ಯೂಸಿಕ್‌ ಫಾರ್ಮೆಟ್‌ ಟ್ರೆಂಡ್‌ ಆಗಿದೆ. ಶಿವರಾಜ್‌ಕುಮಾರ್‌ ಚಿತ್ರಕ್ಕೆ ಅದನ್ನು ಬಳಸಲಾಗುವುದು. ಬಹುಶಃ ಕ್ಲೈಮ್ಯಾಕ್ಸ್‌ನಲ್ಲಿ ಅದನ್ನು ಬಳಸುವ ಪ್ಲಾನಿಂಗ್‌ ಇದೆ. ಅದಾದ ಬಳಿಕ ಎರಡು ರೊಮ್ಯಾಂಟಿಕ್‌ ಸಬೆjಕ್ಟ್ ಇದೆ.

ಎರಡು ಚಿತ್ರಗಳನ್ನು ನಿರ್ಮಿಸುವ ಯೋಚನೆ ಇದೆ. ಮುಂದಿನ ಎರಡು ವರ್ಷದಲ್ಲಿ ಸಂಸ್ಥೆ ಮೂಲಕ ಏನೇನು ಮಾಡಬೇಕು ಎಂಬ ಕುರಿತ ಪ್ಲಾನಿಂಗ್‌ ಆಗಿದೆ. ನನ್ನ ಆಡಿಯೋ ಕಂಪೆನಿ ಮೂಲಕ ಕನ್ನಡ ಅಷ್ಟೇ ಅಲ್ಲ, ಎಲ್ಲಾ ಭಾಷೆಯ ಹಾಡುಗಳನ್ನೂ ಪ್ರಮೋಟ್‌ ಮಾಡುತ್ತೇನೆ. ಪಂಜಾಬ್‌, ಚೆನ್ನೈ, ಮುಂಬೈನಲ್ಲಿ ನನ್ನ ಗೆಳೆಯರಿದ್ದಾರೆ. ಅವರಿಗೂ ಸಂಗೀತಕ್ಕೂ ನಂಟಿದೆ. ಇದರೊಂದಿಗೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡೊಂದನ್ನು ಎಲ್ಲಾ ಭಾಷೆಯಲ್ಲೂ ಹಾಡಿಸಿ, ರಿಲೀಸ್‌ ಮಾಡುವ ಐಡಿಯಾ ಕೂಡ ಇದೆ. ಆ ಕುರಿತು ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ವಿನಯ್‌.

Trending videos

Back to Top