CONNECT WITH US  

ಸೀತಾರಾಂ ಅಪ್‌ಡೇಟೆಡ್‌

ರೂಪತಾರಾ

ಹೇಗೆ ನೋಡಿದರೂ ಸೀತಾರಾಂ ಅವರಿಗೊಂದು ದೊಡ್ಡ ಸವಾಲು ಎಂದರೆ ತಪ್ಪಿಲ್ಲ. ಏಕೆಂದರೆ, ಅವರು ಸಕ್ರಿಯವಾಗಿ ಧಾರಾವಾಹಿಗಳನ್ನು ಮಾಡುತ್ತಿದ್ದ ದಿನಗಳಲ್ಲಿದ್ದ ಪ್ರೇಕ್ಷಕರು, ಅವರ ಮನಸ್ಥಿತಿ, ಪರಿಸ್ಥಿತಿ ಎಲ್ಲವೂ ಈಗ ಬದಲಾಗಿದೆ. ಹಾಗಾಗಿ ಇಂದಿನ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ತರಹದ ಧಾರಾವಾಹಿ ಮಾಡುವುದು ಅಷ್ಟು ಸುಲಭವೇನಲ್ಲ.

ಈಗ್ಯಾಕೆ ಈ ಮಾತು ಎಂದರೆ, ಸುಮಾರು ನಾಲ್ಕು ವರ್ಷಗಳ ಕಾಲ ಕಿರುತೆರೆಯಿಂದ ದೂರವಿದ್ದ ಹಿರಿಯ ನಿರ್ದೇಶಕ ಟಿ.ಎನ್‌. ಸೀತಾರಾಂ, ಈಗ ವಾಪಸ್ಸು ಬಂದಿದ್ದಾರೆ. ಕಲರ್ಸ್‌ ಕನ್ನಡ ಚಾನಲ್‌ಗಾಗಿ ಅವರು "ಮಗಳು ಜಾನಕಿ' ಎಂಬ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಚಿತ್ರೀಕರಣ ಶುರುವಾಗಿದ್ದು, ಜುಲೈನಿಂದ ಪ್ರಸಾರ ಕಾಣಲಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮಾತನಾಡಿಸಿದಾಗ, ಅವರ ಮುಂದಿರುವ ಸವಾಲುಗಳ ಕುರಿತಾಗಿ ಅವರು ವಿವರವಾಗಿ ಮಾತನಾಡಿದ್ದಾರೆ.

"ಟೆನ್ಶನ್‌ ಖಂಡಿತಾ ಇದೆ ...': ಕೂತಿದ್ದ ಚೇರ್‌ಗೆ ಒರಗಿ ಮಾತು ಶುರು ಮಾಡಿದರು ಟಿ.ಎನ್‌. ಸೀತಾರಾಂ. "ಟೆನ್ಶನ್‌ ಖಂಡಿತಾ ಇದೆ. ಏಕೆಂದರೆ, ನಾನು ಓಡಬೇಕಾಗಿರುವುದು ಇವತ್ತಿನ ಹುಡುಗರ ಜೊತೆಗೆ. ಓಡಿ ಓಡಿ ನನ್ನ ಕಾಲು ದಣಿದಿದೆ. ಹಾಗಾಗಿ ಇವತ್ತಿನ ಹುಡುಗರ ಜೊತೆಗೆ ಮತ್ತೆ ಓಡಬೇಕಾಗಿ ಬಂದಿರುವುದು ನಿಜಕ್ಕೂ ಸವಾಲಿನ ವಿಷಯ. ನಾ ನೋಡಿದ ಪ್ರಪಂಚ ಬೇರೆ. ಈಗಿನವರ ಪ್ರಪಂಚ ಬೇರೆ.

ಅವರ ಪ್ರಪಂಚವನ್ನ ಉದ್ದೇಶಿಸಿ ಧಾರವಾಹಿ ಮಾಡಬೇಕು. ಅದಕ್ಕಾಗಿಯೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಒಂದಿಷ್ಟು ಅಪ್‌ಡೇಟ್‌ ಆಗಿದ್ದೀನಿ. ಕೈಯಲ್ಲಿ ಮೊಬೈಲ್‌ ಇದ್ದರೆ ತಾನಾಗಿ ಅಪ್‌ಡೇಟ್‌ ಆಗುತ್ತದೆ. ಈ ಹಿಂದೆ "ಗಾನ್‌ ವಿಥ್‌ ದಿ ವಿಂಡ್‌' ಕಾದಂಬರಿ ಆಗಿನ ಕಾಲಕ್ಕೆ ಬೆಸ್ಟ್‌ ಸೆಲ್ಲರ್‌ ಆಗಿತ್ತು. ಆದರೆ, ಅದು ಈಗಿನ ಕಾಲಕ್ಕೆ ಬಹಳ ನಿಧಾನ ಎನಿಸಬಹುದು. ಅದನ್ನೇ ಇಂದಿನ ಸ್ಪೀಡ್‌ಗೆ ಮಾಡಿದರೆ? ನನ್ನ ಮುಂದಿರುವ ಸವಾಲುಗಳು ಸಹ ಅಂಥದ್ದೇ ...'

ಎದುರಿಗಿದ್ದ ಟೀಯನ್ನು ಸ್ವಲ್ಪ ಹೀರಿ ಮಾತು ಮುಂದುವರೆಸಿದ ಸೀತಾರಾಂ, "ಅದೊಂದು ದಿನ ಕಲರ್ಸ್‌ ಕನ್ನಡದ ಪರಮೇಶ್ವರ್‌ ಗುಂಡ್ಕಲ್‌ ಕರೆದು ಈ ಧಾರಾವಾಹಿ ಮಾಡೋಕೆ ಹೇಳಿದರು. ಅವರು ಸಹ ಕಥೆಗೆ ಕೂತರು. ಅವರಿಗೆ ಇವತ್ತಿನ ಪ್ರೇಕ್ಷಕರ ಪಲ್ಸ್‌ ಗೊತ್ತಿದೆ. ನನ್ನ ವಯಸ್ಸು, ಅವರ ಯೌವ್ವನ, ನನ್ನ ಕಂಟೆಂಟ್‌, ಅವರ ಫಾಮ್ಯಾìಟ್‌, ನನ್ನ ಮೌಲ್ಯ, ಅವರ ವೇಗ ಇವೆಲ್ಲಾ ಸೇರಿಸಿ ಒಂದು ಕಥೆ ಮಾಡಿಕೊಂಡಿದ್ದೇವೆ. ಈ ಧಾರಾವಾಹಿಯ ಹೆಸರು "ಮಗಳು ಜಾನಕಿ' ಅಂತ. ಕಲರ್ಸ್‌ ಸೂಪರ್‌ನಲ್ಲಿ ಸದ್ಯದಲ್ಲೇ ಪ್ರಾರಂಭವಾಗಲಿದೆ' ಎನ್ನುತ್ತಾರೆ ಸೀತಾರಾಂ.

ಸೀತಾರಾಂ ಅವರು ಗಮನಿಸಿರುವಂತೆ ಜನ ಸಾಕಷ್ಟು ಬದಲಾಗಿದ್ದಾರಂತೆ. "ಜನ ಬದಲಾಗಿದ್ದಾರೆ. ಬಹಳ ಬುದ್ಧಿವಂತರಾಗಿದ್ದಾರೆ. ಏನು ಹೇಳುವುದಕ್ಕೆ ಹೊರಟಿದ್ದೇವೋ, ಅದನ್ನು ಬಹಳ ಬೇಗ ಕ್ಯಾಚ್‌ ಮಾಡಿಕೊಳ್ಳುತ್ತಾರೆ. ಹಾಗಾಗಿ ಹೇಳುವ ರೀತಿ ಬದಲಾವಣೆ ಆಗಬೇಕು. ಏಕತಾನತೆ ಇರಬಾರದು. ಏನೇ ಬದಲಾದರೂ ಮನುಷ್ಯನ ಹೃದಯ ಮತ್ತು ಮಾನವೀಯತೆ ಹಾಗೆಯೇ ಇದೆ. ಅದನ್ನು ಬೇರೆ ತರಹ ಹೇಳುವ ಪ್ರಯತ್ನವನ್ನು ಮಾಡಬೇಕು' ಎಂಬುದನ್ನು ಸೀತಾರಾಂ ಅರ್ಥ ಮಾಡಿಕೊಂಡಿದ್ದಾರೆ.

ಈ ಧಾರಾವಾಹಿ ಭಾವಪ್ರಧಾನವಾಗಿರಲಿದೆ ಎಂಬುದು ಅವರ ಅಭಿಪ್ರಾಯ. "ಇಲ್ಲೂ ಮನುಷ್ಯನ ಮೌಲ್ಯ ಮತ್ತು ಸಂಬಂಧಗಳ ಕುರಿತಾಗಿ ಹೇಳುತ್ತಿದ್ದೇನೆ. ಸಾಮಾನ್ಯವಾಗಿ ನನ್ನ ಧಾರಾವಾಹಿಗಳೆಂದರೆ ರಾಜಕೀಯ, ಕೋರ್ಟು ಎಲ್ಲವೂ ಇರುತ್ತದೆ. ಇದು ಭಾವಪ್ರಧಾನವಾದ ಧಾರಾವಾಹಿಯಾಗಲಿದೆ. ಇಲ್ಲಿ ಕೋರ್ಟು ಮುಂದೆ ಬರಬಹುದು. ಅಲ್ಲಿ ಕೋರ್ಟ್‌ಗಾಗಿ ಕೋರ್ಟು ಇರೋದು. ಇಲ್ಲಿ ಕಥೆಗಾಗಿ ಕೋರ್ಟು ಬರಬಹುದು.

ಧಾರಾವಾಹಿಯನ್ನು ನಿರ್ದೇಶಿಸುವುದರ ಜೊತೆಗೆ ನಾನೂ ಒಂದ ಪಾತ್ರ ಮಾಡುತ್ತಿದ್ದೇನೆ. ನಟನೆ ಬೇಡ ಅಂತಿದ್ದೆ. ಆದರೆ, ನೀವಿರಲೇಬೇಕು ಅಂತ ಎಲ್ಲರೂ ಹೇಳಿದರು. ಅದಕ್ಕೇ ಒಪ್ಪಿಕೊಂಡೆ. ಜೊತೆಗೆ ಸುಧಾ ಬೆಳವಾಡಿ, ಮಂಡ್ಯ ರವಿ, ಡಿ.ಸಿ. ಕಿಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಗಾನವಿ ಎಂಬ ಚಿಕ್ಕಮಗಳೂರಿನ ಹುಡುಗಿ ಈ ಧಾರಾವಾಹಿಯಲ್ಲಿ ಜಾನಕಿಯಾಗಿ ನಟಿಸುತ್ತಿದ್ದಾಳೆ ...' ಅಂತ ಮಾಹಿತಿ ಕೊಡುತ್ತಾ ಹೋದರು ಸೀತಾರಾಂ.

ಇನ್ನು ಸೀತಾರಾಂ ಅವರಿಗೆ ರಾತ್ರಿ 9.30ಯ ಸ್ಲಾಟ್‌ ಸಿಕ್ಕಿದೆ. ಈಗಾಗಲೇ ಸೀತಾರಾಂ ಅವರು ಹೊಸ ಧಾರಾವಾಹಿ ಮಾಡುತ್ತಿರುವುದನ್ನು ತಿಳಿದುಕೊಂಡವರು, ಧಾರಾವಾಹಿ ಯಾವಾಗ ಪ್ರಸಾರ ಆಗುತ್ತದೆ ಎಂದು ಕೇಳುತ್ತಿದ್ದಾರಂತೆ. "ನನ್ನದೇ ಒಂದು ಪ್ರೇಕ್ಷಕ ವರ್ಗ ಇದೆ. ಜೊತೆಗೆ ಚಾನಲ್‌ಗೆಂದೇ ಒಂದು ಪ್ರೇಕ್ಷಕವರ್ಗ ಇದೆ. ಇವೆಲ್ಲಾ ಸಹಾಯಕ್ಕೆ ಬರಬಹುದು.

ಚಿತ್ರೀಕರಣ ಶುರುವಾಗಿದೆ. ಸಂಗೀತದ ಕೆಲಸ ಪ್ರಾರಂಭವಾಗಬೇಕಿದೆ. ಮುಂಚೆಲ್ಲಾ ಅಶ್ವತ್ಥ್ ನನ್ನ ಧಾರಾವಾಹಿಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು. ಅಶ್ವತ್ಥ್ ಇಲ್ಲದೆ ಬಹಳ ಕಷ್ಟ. ಈ ಬಾರಿ ಪ್ರವೀಣ್‌ ಡಿ ರಾವ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಎಚ್‌.ಎಸ್‌. ವೆಂಕಟೇಶಮೂರ್ತಿ ಹಾಡು ಬರೆದಿದ್ದಾರೆ' ಎಂದು ಹೇಳಿ ಸೀತಾರಾಂ ಮೊದಲೇ ಫಿಕ್ಸ್‌ ಆಗಿದ್ದ ಒಂದು ಕಾರ್ಯಕ್ರಮಕ್ಕೆ ಹೊರಟರು.

ಬರಹ: ಶ್ರೀಪತಿ

Trending videos

Back to Top