ಗೀತಪ್ರಿಯ ಎಂಬ ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕ

ಚಿತ್ರ: ಬೆಸುಗೆ
ಗೀತೆರಚನೆ: ಗೀತಪ್ರಿಯ
ಸಂಗೀತ: ವಿಜಯ ಭಾಸ್ಕರ್
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲಾ ಸುಂದರ ಬೆಸುಗೆ //ಪ//
ರಾಗದ ಜೊತೆ ತಾಳದ ಬೆಸುಗೆ
ರಾಗ ತಾಳಕೆ ಭಾವದ ಬೆಸುಗೆ
ಭಾವದ ಜೊತೆಗೆ ಗೀತೆಯ ಬೆಸುಗೆ
ಗೀತೆಯ ಜೊತೆ ಸಂಗೀತದ ಬೆಸುಗೆ //1//
ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಯೌವನದಲ್ಲಿ ಮೋಹದ ಬೆಸುಗೆ
ಮೈಮನದಲ್ಲಿ ಬಯಕೆಯ ಬೆಸುಗೆ //2//
ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಮಧುರ ಮಿಲನಕೆ ಪ್ರೀತಿಯ ಬೆಸುಗೆ
ಜನುಮಜನುಮಕೂ ಆತ್ಮದ ಬೆಸುಗೆ //3//
ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರು ಎಂದು ಹೇಳಲು ಹೊರಟಾಗಿ, ತಪ್ಪದೇ ನೆನಪಿಸಿಕೊಳ್ಳಬೇಕಾದ ಹೆಸರು ಗೀತಪ್ರಿಯ ಅವರದ್ದು. ನಿರ್ದೇಶಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಧೀಮಂತರು ಗೀತಪ್ರಿಯ. 27 ಕನ್ನಡ, 3 ತುಳು ಹಾಗೂ ಒಂದು ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದು ಅವರ ಹೆಚ್ಚುಗಾರಿಕೆ. ಈ ಎಲ್ಲಾ ಸಿನಿಮಾಗಳೂ ಕುಟುಂಬ ಸಮೇತ ನೋಡುವಂಥವಾಗಿದ್ದವು. ಶಾಂತಿ ಸಹಬಾಳ್ವೆಯೇ ಈ ಬದುಕಿನ ಅಂತಿಮ ಸತ್ಯ ಎಂಬ ಸಂದೇಶ ಹೊಂದಿದ್ದವು.
ಲಕ್ಷ್ಮಣರಾವ್ ಮೋಹಿತೆ-ಇದು ಗೀತಪ್ರಿಯರ ನಿಜ ನಾಮಧೇಯ. ಇವರ ತಂದೆ ರಾಮರಾವ್ ಮೋಹಿತೆ, ಮಿಲಿಟರಿಯಲ್ಲಿದ್ದವರು. ಒಂದನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದವರು. ಮನೆಯಲ್ಲಿ ಗೀತಪ್ರಿಯರೇ ಮೊದಲ ಸಂತಾನ. ಮಗನನ್ನು ಡಿಗ್ರಿ ಓದಿಸಿ ಆಫೀಸರ್ ಮಾಡಬೇಕೆಂದು ರಾಮರಾವ್ ಮೋಹಿತೆಯವರಿಗೆ ಆಸೆಯಿತ್ತು. ಮಗನಿಗೂ ಅದನ್ನು ಹೇಳಿದ್ದರು: "ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ನೀನು ಡಿಗ್ರಿ ಮುಗಿಸಿ ಆಫೀಸರ್ ಆಗಲೇಬೇಕು.
ಬೇರೆ ಯಾವ ವಿಚಾರವನ್ನೂ ತಲೇಲಿ ಇಟ್ಕೊಬೇಡ...' ಅದನ್ನೇ ನೆನಪಿಸಿಕೊಂಡು ಅದೊಮ್ಮೆ ಗೀತಪ್ರಿಯ ಹೇಳಿದ್ದರು: ಡಿಗ್ರಿ ಮಾಡಬೇಕು ಎಂಬ ಆಸೆಯಿಂದ ನಾನು ಸಿಕ್ಕಿದ್ದನ್ನೆಲ್ಲ ಓದುತ್ತಿದ್ದೆ. ನಮ್ಮ ತಂದೆ ಕೆಲಸ ಮಾಡುತ್ತಿದ್ದ ಮಿಲಿಟರಿ ಕ್ಯಾಂಪಿನಲ್ಲಿಯೇ ಹಿರಿಯ ಕವಿ ಪುತಿನ ಅವರೂ ಅಧಿಕಾರಿಯಾಗಿದ್ದರು.ಅವರು ಬರೆದಿದ್ದ "ತೊರೆ' ಎಂಬ ಶೀರ್ಷಿಕೆಯ "ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ...' ಎಂಬ ಪದ್ಯ, ಆ ದಿನಗಳಲ್ಲಿ ನಮಗೆ ಪಠ್ಯವಾಗಿತ್ತು.
ಪುತಿನ ಅವರನ್ನು ನೋಡಿದಾಗಲೆಲ್ಲಾ ಅಪ್ಪ ಛಕ್ಕನೆ ನೆನಪಿಸ್ತಿದ್ರು: "ಮುಂದೆ ನೀನೂ ಅವರ ಥರಾನೇ ಆಫೀಸರ್ ಆಗ್ಬೇಕು. ಒಳ್ಳೆ ಹೆಸರು ತಗೋಬೇಕು....' ನಾವು ಅಂದೊಳ್ಳೋದೇ ಒಂದು, ಆಗೋದೇ ಇನ್ನೊಂದು-ಬದುಕಲ್ಲಿ ನಮಗೆ ಮತ್ತೆ ಮತ್ತೆ ಕಾಣಸಿಗುವ ನಿಷ್ಠುರ ಸತ್ಯವಿದು. ಗೀತಪ್ರಿಯರ ವಿಷಯದಲ್ಲೂ ಹೀಗೇ ಆಯಿತು. ಕುಟುಂಬದ ಆಧಾರ ಸ್ತಂಭವಾಗಿದ್ದ ರಾಮರಾವ್ ಮೋಹಿತೆ, ದಿಢೀರನೆ ತೀರಿಕೊಂಡರು.
ಆಗ ಪಿಯುಸಿ ಓದುತ್ತಿದ್ದ ಲಕ್ಷ್ಮಣರಾವ್ ಮೋಹಿತೆಯ ಮೇಲೆ ಕುಟುಂಬವನ್ನು ಸಾಕಬೇಕಾದ ಜವಾಬ್ದಾರಿ ಬಿತ್ತು. ಅದುವರೆಗೂ ಕಥೆ, ಕವನ, ನಾಟಕ, ಕಾದಂಬರಿ ಬರೆದುಕೊಂಡು ಆಫೀಸರ್ ಆಗುವ ಕನಸು ಕಾಣುತ್ತಿದ್ದ ಮೋಹಿತೆ, ಪರಿಸ್ಥಿತಿಯ ಶಿಶುವಾಗಿ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಬೇಕಾಯಿತು. ಕುಟುಂಬ ನಿರ್ವಹಣೆಯ ಸಲುವಾಗಿ ಬಾರ್ನಲ್ಲಿ ಲೆಕ್ಕ ಬರೆಯುವ ಕೆಲಸವನ್ನು ಮಾಡಬೇಕಾಯಿತು.
ಅದು ದಿನಕ್ಕೆ 11 ಗಂಟೆಗಳ ಕೆಲಸ. ಮನೆಯಿಂದ ಆ ಬಾರ್ ನಾಲ್ಕು ಕಿ.ಮೀ ದೂರದಲ್ಲಿತ್ತು. ಇದೆಲ್ಲಾ 60ರ ದಶಕದ ಮಾತು. ಆಗ ಬಸ್ ಸೌಕರ್ಯವಿರಲಿಲ್ಲ, ಹಾಗಾಗಿ, ಎರಡೂ ಕಡೆಯಿಂದ ನಡೆದುಕೊಂಡೇ ಹೋಗಬೇಕಿತ್ತು. ಈ ಸಮಯದಲ್ಲಿಯೇ ಆಕಸ್ಮಿಕವಾಗಿ ಸಂಗೀತ ನಿರ್ದೇಶಕ ವಿಜಯ್ ಭಾಸ್ಕರ್ರವರ ಪರಿಚಯವಾಗಿದೆ. "ಹೊಟ್ಟೆಪಾಡಿನ ಕಾರಣಕ್ಕೆ ಈ ಕೆಲಸ ಮಾಡ್ತಿದ್ದೀನಿ ಸಾರ್, ನನಗೆ ಚಿತ್ರನಟ ಆಗಬೇಕು ಅಥವಾ ನಿರ್ದೇಶಕ ಆಗಬೇಕೆಂದೆಲ್ಲ ಆಸೆ ಇದೆಎಂದು ಹೇಳಿಕೊಂಡಿದ್ದಾರೆ ಲಕ್ಷ್ಮಣರಾವ್ ಮೋಹಿತೆ.
ನಂತರ ತಾವು ಬರೆದಿದ್ದ ಕವಿತೆಗಳನ್ನು ತೋರಿಸಿದ್ದಾರೆ. "ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು' ಎಂಬ ತತ್ವದಲ್ಲಿ ನನಗೆ ಪೂರ್ತಿ ನಂಬಿಕೆ ಇದೆ. ಆದರೆ, ಈ ಸಮಾಜದಲ್ಲಿ ಅಂಥ ಜೀವನ ಸಾಧ್ಯವೇ ಇಲ್ಲವಲ್ಲ ಸಾರ್, ಎಂದು ನೋವಿನಿಂದ ಕೇಳಿದ್ದಾರೆ. "ಚಿಂತಿಸಬೇಡಿ. ಇವತ್ತಲ್ಲ ನಾಳೆ ನಿಮಗೂ ಒಳ್ಳೆಯದಾಗುತ್ತೆ. ಈಗಿರುವ ಕೆಲಸವನ್ನು ಬಿಡಬೇಡಿ, ಬರೆಯುವುದನ್ನು ನಿಲ್ಲಿಸಬೇಡಿ' ಎಂದು ಧೈರ್ಯ ಹೇಳಿದ್ದರಂತೆ ವಿಜಯ ಭಾಸ್ಕರ್.
ಐದಾರು ವರ್ಷ ತಾಳ್ಮೆಯಿಂದ ಕಾಯ್ದರು ಲಕ್ಷ್ಮಣರಾವ್ ಮೋಹಿತೆ. ಕಡೆಗೊಮ್ಮೆ "ಭಾಗ್ಯಚಕ್ರ' ಎಂಬ ಸಿನಿಮಾಕ್ಕೆ ಹಾಡು ಬರೆಯಲು ಅವಕಾಶ ಸಿಕ್ಕಿತು. ಈವರೆಗಿನ ಬದುಕಲ್ಲಿ ಎಷ್ಟೆಲ್ಲಾ ಕಷ್ಟ ಅನುಭವಿಸಿದರೂ ದೇವರು ನೆರವಿಗೆ ಬರಲಿಲ್ಲ ಎಂಬ ನೋವು ಎದೆಯೊಳಗೆ ಉಳಿದಿತ್ತು.ಅದನ್ನೇ ಹಾಡಿನಲ್ಲೂ ತಂದ ಮೋಹಿತೆ-"ದೇವ ನಿನ್ನ ರಾಜ್ಯದ ನ್ಯಾಯವಿದೇನಾ?' ಎಂಬ ಗೀತೆ ಬರೆದರು. ಹಾಡು ಹಿಟ್ ಆಯಿತು.
ಆದರೆ ಮೋಹಿತೆಯವರಿಗೆ ದೊಡ್ಡದೊಂದು ಬ್ರೇಕ್ ಸಿಗಲಿಲ್ಲ. ಆಗ ಮತ್ತೂಮ್ಮೆ "ತಾಳಿದವನು ಬಾಳಿಯಾನು' ಎಂಬ ಕಿವಿಮಾತು ಹೇಳಿದರು ವಿಜಯ ಭಾಸ್ಕರ್. ಐದಾರೂ ವರ್ಷಗಳ ನಂತರ ಶ್ರೀರಾಮಾಂಜನೇಯ ಯುದ್ಧ ಸಿನಿಮಾಗೆ ಹಾಡು ಬರೆಯಲು ಅವಕಾಶ ಸಿಕ್ಕಿತು. ಹಾಗೆ ಸಿದ್ಧವಾದದ್ದೇ "ಹನುಮನ ಪ್ರಾಣ ಪ್ರಭೋ ರಘುರಾಮ/ ಇನಕುಲ ಸೋಮ ಕೋದಂಡರಾಮ' ಎಂಬ ಗೀತೆ. ಸಿನಿಮಾ ಮತ್ತು ಹಾಡು ಹಿಟ್ಆದವು.
ಮೋಹಿತೆಯವರ ಬದುಕು, ಅವರಿಗೆ ಇದ್ದ ಜವಾಬ್ದಾರಿಗಳು, ಹೆಜ್ಜೆ ಹೆಜ್ಜೆಗೂ ಜೊತೆಯಾಗುವ ಸವಾಲುಗಳು-ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದವರು ವಿಜಯ ಭಾಸ್ಕರ್. ನಿತ್ಯದ ಬದುಕಿನಲ್ಲಿ ಏನೇ ಕಷ್ಟವಿರಲಿ, ಒಂದು ಹಾಡು ಬರೆದುಕೊಡಪ್ಪಾ ಎಂದ ತಕ್ಷಣ ಅತ್ಯುತ್ಸಾಹದಿಂದಲೇ ಚಂದದ ಹಾಡು ಬರೆದುಕೊಡುತ್ತಿದ್ದರಂತೆ ಮೋಹಿತೆ.
ಅದನ್ನು ಗಮನಿಸಿದ ವಿಜಯ ಭಾಸ್ಕರ್, "ಏ ಮೋಹಿತೆ, ಇನ್ಮೆಲೆ ನಿನ್ನ ಹೆಸರನ್ನು "ಗೀತಪ್ರಿಯ' ಎಂದು ಬದಲಿಸಿಕೊಳ್ಳಿ ಎಲ್ಲಿರಿಗೂ ಪ್ರಿಯವಾಗುವಂಥ ಗೀತೆಗಳನ್ನು ಬಿರೀತೀರ ನೀವು, ಅದೇ ಕಾರಣದಿಂದ ನಿಮ್ಮ ಹೆಸರು ಗೀತಪ್ರಿಯ ಎಂದಾಗಲಿ ಅಂದರು, ಲಕ್ಷ್ಮಣರಾವ್ ಮೋಹಿತೆ ಎಂಬ ಯುವಕನೊಬ್ಬ ಗೀತಪ್ರಿಯ ಎಂದು ಬದಲಾದದ್ದು ಹೀಗೆ.
ಗೀತೆ ರಚನೆಕಾರನಾಗಿ ಚಿತ್ರರಂಗ ಪ್ರವೇಶಿಸಿ, ಹತ್ತು ವರ್ಷಕ್ಕೂ ಹೆಚ್ಚು ಕಾಲ ಸಹ ನಿರ್ದೇಶಕನಾಗಿ ಕೆಲಸ ಮಾಡಿ ಆನಂತರವೇ ನಿರ್ದೇಶಕರ ಕ್ಯಾಪ್ ತೊಟ್ಟರು ಗೀತಪ್ರಿಯ. ಹಾಗೆ ನಿರ್ದೇಶಿಸಿದ ಮೊದಲ ಚಿತ್ರ ಮಣ್ಣಿನ ಮಗ. ಮೊದಲ ಸಿನಿಮಾದಲ್ಲಿಯೇ ಅವತ್ತಿನ ಸೂಪರ್ಸ್ಟಾರ್ ಡಾ.ರಾಜ್ಕುಮಾರ್ ಅವರಿಗೆ ಆಕ್ಷನ್, ಕಟ್ ಹೇಳುವ ಸುಯೋಗ. ಆ ಸಿನಿಮಾ ಪ್ರಚಂಡ ಯಶಸ್ಸು ಗಳಿಸಿದ್ದು ಮಾತ್ರವಲ್ಲ; ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು.
ಕುಟುಂಬ ಸಮೇತ ನೋಡಬಹುದಾದ, ನೋಡಲೇ ಬೇಕಾದ ಚಿತ್ರ ಅನ್ನಿಸಿಕೊಂಡಿತು. ಹೀಗೆ, ನಿರ್ದೇಶನದ ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸುಗಳಿಸಿ, ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದವರು ಗೀತಪ್ರಿಯ. ನಂತರದ ದಿನಗಳಲ್ಲಿಯೂ ಅವರು ಕಾದಂಬರಿ ಆಧರಿಸಿದ, ಹಳ್ಳಿ ಗಾಡಿನ ಕಥೆಗಳಿದ್ದ, ಅವಿಭಕ್ತ ಕುಟುಂಬದ, ಕೂಡಿ ಬಾಳಿದರೆ ಸ್ವರ್ಗ ಎಂಬ ಸಂದೇಶದ ಕಥೆಗಳನ್ನು ಆಧರಿಸಿದ ಚಿತ್ರಗಳನ್ನೇ ತಯಾರಿಸಿದರು.
ಗೀತಪ್ರಿಯ ನಿರ್ದೇಶನದ ಅತ್ಯುತ್ತಮ ಚಿತ್ರಗಳಲ್ಲಿ "ಬೆಸುಗೆ'ಯೂ ಒಂದು. ಲೇಖಕಿ ಅಶ್ವಿನಿಯವರ, ಅದೇ ಹೆಸರಿನ ಕಾದಂಬರಿ ಆಧರಿಸಿ ತೆಗೆದ ಚಿತ್ರ ಇದು. ಮನೋರೋಗದಂಥ ಸಮಸ್ಯೆ ಹೊಂದಿದ್ದ ಕಥೆಯನ್ನು ಆಯ್ಕೆ ಮಾಡಲು ಎಲ್ಲರೂ ಹಿಂಜರಿಯುತ್ತಿದ್ದಂಥ 1976ರ ಸಂದರ್ಭದಲ್ಲಿಯೇ ಅಂಥದೇ ಸಮಸ್ಯೆಯ ಕಥೆ ಹೊಂದಿದ್ದ ಬೆಸುಗೆ ಚಿತ್ರವನ್ನು ಧೈರ್ಯದಿಂದ ತೆರೆಗೆ ತಂದದ್ದು ಗೀತಪ್ರಿಯರ ಹೆಚ್ಚುಗಾರಿಕೆ.
ಮನುಸ್ಸು ತಟ್ಟುವಂಥ ಕಥೆ, ಕಥೆಗೆ ನ್ಯಾಯ ಒದಗಿಸುವಂಥ ಕಲಾವಿದರು, ಚೆಂದದ ಹಾಡು- ಸಂಭಾಷಣೆ, ಬಿಗಿಯಾದ ನಿರ್ದೇಶನವಿದ್ದರೆ ಖಂಡಿತ ಸಿನಿಮಾ ಹಿಟ್ ಆಗುತ್ತದೆ ಎನ್ನುತ್ತಿದ್ದ ಗೀತಪ್ರಿಯ, ಬೆಸುಗೆ ಚಿತ್ರದಲ್ಲೂ ಆ ಮಾತನ್ನು ನಿಜ ಮಾಡಿದರು. "ಬೆಸುಗೆ' ಆ ಕಾಲಕ್ಕೆ ಹೊಸದು ಮತ್ತು ವಿಶಿಷ್ಟವಾದುದು ಎಂಬಂಥ ಕಥೆಯಿಂದ ಮಾತ್ರವಲ್ಲ; ಸುಮಧುರ ಗೀತೆಗಳ ಕಾರಣದಿಂದಲೂ ಜನಮನಕ್ಕೆ ಹತ್ತಿರವಾಯಿತು.
ಅವತ್ತಿನ ಸಂದರ್ಭದ ಶ್ರೇಷ್ಠ ಗೀತರಚನೆಕಾರರಾದ ವಿಜಯನಾರಸಿಂಹ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್, ಶ್ಯಾಮ್ಸುಂದರ ಕುಲಕರ್ಣಿ- ತಲಾ ಒಂದೊಂದು ಹಾಡು ಬರೆದಿದ್ದರು. ಇದರೊಂದಿಗೆ, ಗೀತಪ್ರಿಯ ಬರೆದ ಟೈಟಲ್ ಸಾಂಗ್ "ಬೆಸುಗೆ ಬೆಸುಗೆ' ಕೂಡ ಇತ್ತು. ವಿಜಯನಾರಸಿಂಹ ಬರೆದ "ವಸಂತ ಬರೆದನು ಒಲವಿನ ಓಲೆ, ಚಿಗುರಿನ ಎಲೆ ಮೇಲೆ..' ಶ್ಯಾಮಸುಂದರ ಕುಲಕರ್ಣಿ ರಚನೆಯ "ಯಾವ ಹೂವು ಯಾರ ಮುಡಿಗೋ'... ಆರ್ಎನ್ಜೆ ಬರೆದ, ಇಂಗ್ಲಿಷ್ ಗೀತೆ "ಲೈಫ್ ಈಸ್ ಎ ಮೆರ್ರಿ ಮೆಲೋಡಿ..'
ಮೆಚ್ಚಿನ ಚಿತ್ರಗೀತೆಯಲ್ಲಿ ಖಾಯಂಸ್ಥಾನ ಗಿಟ್ಟಿಸಿಕೊಂಡವು. ಅವೆಲ್ಲವನ್ನೂ ಮೀರಿ, ಗೀತಪ್ರಿಯರು ಬರೆದ ಟೈಟಲ್ ಸಾಂಗ್ "ಬೆಸುಗೆ ಬೆಸುಗೆ' ಜನಪ್ರಿಯವಾಯಿತು. ಆರ್ಕೆಸ್ಟ್ರಾಗಳಲ್ಲಿ ಆ ಹಾಡನ್ನು ಮತ್ತೆ ಮತ್ತೆ ಹಾಡಬೇಕೆಂದು ಒತ್ತಾಯಿಸಿ ಒನ್ಸ್ಮೋರ್ ಕೂಗುತ್ತಿದ್ದರು. ಇಡೀ ಹಾಡಿನಲ್ಲಿ, ಬೆಸುಗೆ ಎಂಬ ಪದ ಎಷ್ಟು ಬಾರಿ ಬರುತ್ತದೆ ಎಂದು ಹೇಳಿದವರಿಗೆ ಬಹುಮಾನ ನೀಡುವಂಥ ಕ್ವಿಜ್ ಕಾರ್ಯಕ್ರಮಗಳೂ ಆ ದಿನಗಳಲ್ಲಿ ಲೆಕ್ಕವಿಲ್ಲದಷ್ಟು ನಡೆದವು.
"ಬೆಸುಗೆ ಬೆಸುಗೆ' ಹಾಡು ಸಿನಿಮಾದಲ್ಲಿ ಶುರುವಾಗುತ್ತದಲ್ಲ' ಅದೇ ಒಂದು ಮಾರ್ದವ ಘಳಿಗೆ. ಮುನಿಸಿಕೊಂಡಿದ್ದ ಆಪ್ತರಿಬ್ಬರು, ಠೂ ಬಿಟ್ಟಿದ್ದ ಪ್ರೇಮಿಗಳಿಬ್ಬರು ಮತ್ತೆ ರಾಜಿಯಾಗಿ ಖುಷಿ ಪಡುತ್ತಾರಲ್ಲ; ಅಂಥ ಸಂದರ್ಭಕ್ಕೆ ಸಾಕ್ಷಿಯಾಗಿ ಈ ಹಾಡು ಬರುತ್ತದೆ. ಶ್ರೀನಾಥ್- ಮಂಜುಳಾ ತಾರಾಜೋಡಿಯ "ಬೆಸುಗೆ' ಚಿತ್ರದ ಹೃದಯಂಗಮ ಸನ್ನಿವೇಶಗಳಲ್ಲಿ ಈ ಹಾಡಿನ ಹಿನ್ನೆಲೆ ದೃಶ್ಯವೂ ಒಂದಾಗಿರುವುದರಿಂದ ಅದನ್ನೂ ಇಲ್ಲಿ ಹೇಳಿಬಿಡಬೇಕು. ನಾಯಕಿ, (ಅವಳ ಹೆಸರು ಸುಮಾ)ಕಾಲೇಜಿನಿಂದ ಬರುತ್ತಿರುತ್ತಾಳೆ. ಆಗ, ಕಾರ್ನಲ್ಲಿ ಬರುವ ನಾಯಕ ಅವಳ ಮುಂದೆಯೇ ಕಾರ್ ನಿಲ್ಲಿಸುತ್ತಾನೆ. ಆ ನಂತರದಲ್ಲಿ ಅವರ ಮಧ್ಯೆ ನಡೆವ ಸಂಭಾಷಣೆ ಇದು.
ಶ್ರೀನಾಥ್: ಬಾ ಕೂತ್ಕೊ
ಮಂಜುಳಾ: ಬೇಡ, ನಾನು ನೆಲದ ಮೇಲೆ ಇರೋಳು!
ಶ್ರೀನಾಥ್: ನಾನ್ ಕೂತಿರೋ ಕಾರ್ ಕೂಡ ನೆಲದ ಮೇಲೇ ಇರೋದು. ಅದಕ್ಕೇ ನಿನ್ನನ್ನ ಬಾ ಅಂದಿದ್ದು, ಬಾ ಸುಮಾ
ಮಂಜುಳಾ: (ಏನೂ ಉತ್ತರಿಸದೆ ಸುಮ್ಮನೆ ನಿಲ್ಲುತ್ತಾಳೆ)
ಶ್ರೀನಾಥ್: ನೋಡೂ, ನಿನ್ನ ಮನಸನ್ನು ತುಂಬಾ ನೋಯಿಸಿದ್ದೀನಿ ಯಾಕ್ ಗೊತ್ತ?ನಾವು ಯಾರನ್ನು ತುಂಬಾ ಪ್ರೀತಿಸ್ತೀವೋ ಅವರೆ¾àಲೇ ಕೋಪ ಬರೋದು, ಅದಕ್ಕೋಸ್ಕರಾನೇ ನಾನು ಇಷ್ಟು ದಿನ ಹೀಗ್ ಮಾಡಿದ್ದು.. ಬಾ ಸುಮ, ಕೂತ್ಕೊà..
ಮಂಜುಳಾ: ನಸುನಕ್ಕು, ಹೋಗಿ ಕೂತ್ಕೊàತಾಳೆ. ಆಗಲೇ ಈ ಸುಮಧುರ ಪ್ರೇಮ ಗೀತೆ ಶುರುವಾಗುತ್ತದೆ: ಬೆಸುಗೆ ಬೆಸುಗೆ...
ಬೆಸುಗೆ ಎಂಬ ಪದ ಬಳಸಬೇಡಿ!: ಗೀತಪ್ರಿಯ ಮೆಲುಮಾತಿನ ಸೌಜನ್ಯವಂತ. ಅವರೇ ಅತ್ಯುತ್ತಮ ಸಾಹಿತಿಯಾಗಿದ್ದರೂ, ಹಾಡುಗಳಲ್ಲಿ ವಿಭಿನ್ನತೆ ಇರಲಿ ಎಂದು ಎಲ್ಲರಿಂದಲೂ ಹಾಡು ಬರೆಸುತ್ತಿದ್ದರು. ಆ ದಿನಗಳಲ್ಲಿ, ಹಾಡು ಬರೆಯುವ ನೆಪದಲ್ಲಿ ಎಲ್ಲರೂ ಒಂದೆಡೆ ಸೇರಿ ಚರ್ಚಿಸಲು, ಕಷ್ಟ ಸುಖ ಹೇಳಿಕೊಳ್ಳಲು, ಒಟ್ಟಿಗೇ ಊಟ ಮಾಡಿ ಸಂಭ್ರಮಿಸಲು ಅವಕಾಶ ಸಿಗುತ್ತಿತ್ತು.
"ಬೆಸುಗೆ' ಸಿನಿಮಾಕ್ಕೆ ಹಾಡು ಬರೆಯುವ ಸಂದರ್ಭದಲ್ಲಿ ನಮ್ಮನ್ನೆಲ್ಲ ಕೂರಿಸಿಕೊಂಡು ಹಾಡುಗಳ ಸಂದರ್ಭ ವಿವರಿಸಿದ ಗೀತಪ್ರಿಯ, ನಂತರ ಖಡಕ್ ಧ್ವನಿಯಲ್ಲಿ ಹೇಳಿದರು. ಹಾಡುಗಳನ್ನು ಬೆರೆಯುವಾಗ ನೀವು ಯಾವ ಪದ ಬಳಸಿದರೂ ನನ್ನ ತಕರಾರಿಲ್ಲ. ಆದರೆ, ಯಾರೊಬ್ಬರೂ ಬೆಸುಗೆ ಎಂಬ ಪದ ಬಳಸುವಂತಿಲ್ಲ.
ಆ ಕ್ಷಣದಲ್ಲಿ, ಬೆಸುಗೆ ಎಂಬ ಪದದ ಬಗ್ಗೆ ಇವರಿಗೆ ಯಾಕಪ್ಪಾ ಇಷ್ಟೊಂದು ಮೋಹ ಅನಿಸಿತ್ತು. ಆದರೆ, "ಬೆಸುಗೆ ಬೆಸುಗೆ' ಹಾಡಿನ ಮೂಲಕ ಗೀತಪ್ರಿಯ ಎಲ್ಲರಿಗೂ ಸೈಡ್ ಹೊಡೆಯಬಹುದು ಎಂಬ ಅಂದಾಜು ಯಾರಿಗೂ ಇರಲಿಲ್ಲ..ಗೀತಪ್ರಿಯರ ಕುರಿತು ಹೀಗೆ ಅಭಿಮಾನದಿಂದ ಮಾತನಾಡಿದವರು ಶ್ಯಾಮ್ಸುಂದರ್ ಕುಲಕರ್ಣಿ.
ಅಣ್ಣಾ ದುಡ್ಡೇ ಕೊಟ್ಟಿಲ್ಲ ಕಣೋ...: ಪ್ರೇಮಿಗಳು ಅಂತೇನಾದ್ರೂ ಇದ್ರೆ-ತೆರೆಯ ಮೇಲೆ ಶ್ರೀನಾಥ್ -ಮಂಜುಳಾ ಇರ್ತಾರಲ್ಲ, ಹಾಗಿರಬೇಕು. ಜಗಳ ಆಡಿದ್ರೂ ರಾಜಿಯಾದ್ರೂ ಅದೆಲ್ಲವನ್ನೂ ಶ್ರೀನಾಥ್-ಮಂಜುಳಾ ಜೋಡಿಯ ಥರಾನೇ ಮಾಡಬೇಕು ಎಂದು ಯುವ ಸಮೂಹ ಯೋಚಿಸುತ್ತಿದ್ದ ಕಾಲವೊಂದಿತ್ತು. ಈ ವಿಷಯ ಹೇಳಿದಾಗ ನಸುನಗುತ್ತಾ ಶ್ರೀನಾಥ್ ಹೀಗೆಂದರು: "ತೆರೆಯ ಮೇಲೆ ನನಗೆ ಮಂಜುಳಾ ನಾಯಕಿಯಾಗಿದ್ದುದು ನಿಜ.
ಆದರೆ, ನಿಜ ಬದುಕಿನಲ್ಲಿ ಆಕೆ ನನ್ನ ತಂಗಿಯಂತೆ, ನನ್ನ ಮನೆಯ ಸದಸ್ಯೆಯಂತೆ ಇದ್ದಳು. ನನ್ನನ್ನ ಅಣ್ಣ ಎಂದೇ ಕರೆಯುತ್ತಿದ್ದಳು. ಎಷ್ಟೋ ಬಾರಿ ಪ್ರಣಯದ ಸನ್ನಿವೇಶಗಳಲ್ಲಿ "ಕ್ಲೋಸಪ್ ಶಾಟ್' ಎಂದು ನಿರ್ದೇಶಕರು ಹೇಳಿರುತ್ತಿದ್ದರು. ಅವರು ಆಕ್ಷನ್ ಎನ್ನುತ್ತಿದ್ದಂತೆ -ಅಣ್ಣಾ, ಈ ಸಿನಿಮಾದ ಪ್ರೊಡ್ನೂಸರ್ ತುಂಬಾ ಕಂಜೂಸ್ ಕಣೋ, ಇನ್ನೂ ಅಡ್ವಾನ್ಸ್ ಕೊಟ್ಟಿಲ್ಲ. ಈಗ ಏನ್ ಮಾಡೋದೋ?ಅಂದುಬಿಡುತ್ತಿದ್ದಳು.
ಅವಳ ಮಾತು ಕೇಳುತ್ತಿದ್ದಂತೆ ನನಗೂ ನಗು ಬರಿತ್ತು. ಈಗ ಒಳ್ಳೆ ಪೀಕಲಾಟ ಆಯ್ತಲ್ಲಮ್ಮ ಏನ್ಮಾಡೋದು ಈಗ ಎಂದು ಅವಳ ಮಾತನ್ನೇ ತಿರುಗಿಸಿ ಹೇಳುತ್ತಿದ್ದೆ. ಸಿನಿಮಾದ ಸನ್ನಿವೇಶ ಮತ್ತು ನಮ್ಮ ಪರಿಸ್ಥಿತಿ ನೆನೆದು ಇಬ್ಬರೂ ನಗುತ್ತಿದ್ದೆವು. ಸಿನಿಮಾ ನೋಡಿದವರಿಗೆ ಅದು ಅಪೂರ್ವ ಪ್ರಣಯದ ಸನ್ನಿವೇಶದಂತೆ ಕಾಣುತ್ತಿತ್ತು...'