CONNECT WITH US  

ಹಿಂದೂ ಯುವಕರ ರಕ್ತ ಮೋಜಿನಲ್ಲಿ ವ್ಯರ್ಥ: ಸಂಗಮನಾಥ ಶ್ರೀ

ವಾಡಿ: ಧರ್ಮ ಸಂಸ್ಕೃತಿ ರಕ್ಷಣೆಗೆ ಬಳಕೆಯಾಗಬೇಕಿದ್ದ ಹಿಂದೂ ಯುವಕರ ಬಿಸಿರಕ್ತ ಈಗ ಮೋಜು ಮಸ್ತಿಯಲ್ಲಿ ವ್ಯರ್ಥವಾಗುತ್ತಿದೆ ಎಂದು ಅಳ್ಳೊಳ್ಳಿ ಸಾವಿರ ಮಠದ ಶ್ರೀ ಸಂಗಮನಾಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಭಜರಂಗ ದಳ ಸಂಘಟನೆ ವತಿಯಿಂದ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಯುಗಾದಿ ಉತ್ಸವ ಸಮಾರಂಭ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಪಾಶ್ಚಿಮಾತ್ಯ ಸಂಪ್ರದಾಯಕ್ಕೆ ಮಾರುಹೋಗುತ್ತಿರುವ ಯುವಕರು, ಬ್ರಿಟಿಷರು ಬಿಟ್ಟು ಹೋದ ಹೊಸ ವರ್ಷಾಚರಣೆ ಹೆಸರಿನಲ್ಲಿ ಮದ್ಯ ವ್ಯಸನಿಗಳಾಗಿ ಮೋಜು ಮಸ್ತಿಯಲ್ಲಿ ತೊಡಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಭಾರತಿಯರಿಗೆ ಯುಗಾದಿಯೇ ಹೊಸ ವರ್ಷವಾಗಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕೊಂಚೂರ ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಯುಗಾದಿ ರೈತರ ಸಾಂಸ್ಕೃತಿಕ ಹಬ್ಬವಾಗಿದೆ. ಭಾರತದಲ್ಲಿ ಮಾತ್ರ ಹಿಂದು-ಮುಸ್ಲಿಮರು ಸೌಹಾರ್ದದಿಂದ ಬದುಕಲು ಸಾಧ್ಯವಿದೆ. ಇಲ್ಲಿನ ಹಬ್ಬಗಳು ಭಾವೈಕ್ಯತೆಗೆ ಹೆಸರಾಗಿವೆ ಎಂದು ನುಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ವಾಲ್ಮೀಕಿ ನಾಯಕ, ಹಿಂದೂಗಳಾದ ನಾವು ನಮ್ಮ ಸಾಂಪ್ರದಾಯಿಕ ಹಬ್ಬಗಳನ್ನು ಗೌರವ ಮತ್ತು ಸ್ವಾಭಿಮಾನದಿಂದ ಆಚರಿಸಲು ಭಯಪಡಬಾರದು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರಭಾಕರ ಕಾಳೆ ಮಾತನಾಡಿದರು. ಪಂಡಿತ್‌ ಮುಖೇಶ ಲೋಹಾರಿಯಾ ಪ್ರವಚನ ನೀಡಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಭಜರಂಗದಳದ ಅಧ್ಯಕ್ಷ ಜಗತ್‌ಸಿಂಗ್‌ ರಾಠೊಡ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ನಿವೇದಿತಾ ದಹಿಹಂಡೆ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಎಸಿಸಿಯ ಜೆ.ಜೆ.ಪವಾರ, ಮುಖಂಡರಾದ ರಮೇಶ ಕಾರಬಾರಿ, ಶಿವರಾಮ ಪವಾರ, ಅಶೋಕ ಪವಾರ, ಹರಿ ಗಲಾಂಡೆ, ಶಂಕರಸಿಂಗ ರಾಠೊಡ, ಬಾಲಾಜಿ ಬುರಬುರೆ, ಟೋಪಸಿಂಗ್‌ ರಾಠೊಡ, ಅಣ್ಣಪ್ಪ ಹಡಪದ ಪಾಲ್ಗೊಂಡಿದ್ದರು. ವೀರಣ್ಣ ಯಾರಿ ನಿರೂಪಿಸಿದರು. ಕಲಬುರಗಿಯ ಕಲಾಕಾರ ಸಂಗೀತ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಗಾಯಕರಾದ ಚಾಂದ್‌ ಜಾಕ್ಸನ್‌, ವಾಲ್ಮೀಕ ಕಾಂಬಳೆ, ಪಾರ್ವತಿ, ರಾಜಕುಮಾರ ರಾಯಚೂರ, ವಾಡಿಯ ಬಸವರಾಜ ಯಲಗಟ್ಟಿ ಪ್ರೇಕ್ಷರನ್ನು ರಂಜಿಸಿದರು.


Trending videos

Back to Top